ಆಲ್ಬನಿ: ನ್ಯೂಯಾರ್ಕ್ ರಾಜ್ಯದ ಗವರ್ನರ್ ಕ್ಯಾಥಿ ಹೋಕಲ್ ಅವರು ಮಂಗಳವಾರ ಆಲ್ಬನಿಯ ಹಿಂದೂ ಕಲ್ಚರಲ್ ಸೆಂಟರ್ನಲ್ಲಿ ಭಾರತೀಯ ಸಮುದಾಯದೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಸಂಜೆ 4ರಿಂದ 6 ಗಂಟೆಯವರೆಗೆ ನಡೆದ ಈ ವಿಶೇಷ ಸಮಾರಂಭದಲ್ಲಿ ಭಾರತೀಯ ಸಮುದಾಯದ ಮುಖಂಡರು, ನ್ಯಾಯಾಧೀಶರು, ಸ್ಥಳೀಯ ರಾಜಕೀಯ ನಾಯಕರು ಹಾಗೂ ವಿವಿಧ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ವಿಶೇಷ ಸಮಾರಂಭಕ್ಕೆ ಆಲ್ಬನಿ ಕನ್ನಡ ಕೂಟದ ಮುಖಂಡರಾದ ಬೆಂಕಿ ಬಸಣ್ಣ, ಜ್ಯೋತಿ ಮುರುಂಡಿ, ಮೈಥಿಲಿ ಹಾಗೂ ಸುಚಿತ್ರಾ ಅವರನ್ನು ಆಹ್ವಾನಿಸಲಾಗಿತ್ತು. ನಾಲ್ವರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಗವರ್ನರ್ ಅವರೊಂದಿಗೆ ದೀಪಾವಳಿ ಸಂಭ್ರಮವನ್ನು ಹಂಚಿಕೊಂಡರು.



ಭಾರತೀಯರೊಂದಿಗೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಸಮುದಾಯಗಳ ಮುಖಂಡರೂ ಭಾಗವಹಿಸಿದ್ದು ವಿಶೇಷವಾಗಿತ್ತು. ವಿವಿಧ ದೇಶಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಕಾರ್ಯಕ್ರಮ ಸಾಂಸ್ಕೃತಿಕ ಸಾಮರಸ್ಯ ಮತ್ತು ಸ್ನೇಹದ ಸಂದೇಶ ಸಾರಿತು.
ದೀಪಾವಳಿಯ ಮಹತ್ವವನ್ನು ವಿವರಿಸಿದ ಗವರ್ನರ್ ಕ್ಯಾಥಿ ಹೋಕಲ್, ಕತ್ತಲೆ ಮತ್ತು ಅಜ್ಞಾನದ ಮೇಲೆ ಬೆಳಕು ಹಾಗೂ ಆಶಾಭಾವನೆಯ ವಿಜಯವೇ ದೀಪಾವಳಿಯ ಸಂದೇಶ ಎಂದು ಬಣ್ಣಿಸಿದರು. ಎಷ್ಟೇ ಕತ್ತಲೆ ಆವರಿಸಿದರೂ ಕೊನೆಯಲ್ಲಿ ಬೆಳಕು ಮೂಡೇ ಮೂಡುತ್ತದೆ ಎಂದು ಹೇಳಿದ ಅವರು, ಕಳೆದ ವಾರವೂ ಸಾಕಷ್ಟು ಬೆಳಕು ಕಂಡುಬಂದಿದೆ ಎಂದು ಮಾರ್ಮಿಕವಾಗಿ ನುಡಿದರು. ನವೆಂಬರ್ 3ರ ಚುನಾವಣಾ ಫಲಿತಾಂಶಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರ ಮಾತುಗಳಲ್ಲಿ ರಾಜಕೀಯ ಚಾತುರ್ಯ ಎದ್ದುಕಾಣುತ್ತಿತ್ತು. ಯಾವುದೇ ರಾಜಕೀಯ ನಾಯಕರ ಹೆಸರನ್ನು ಪ್ರಸ್ತಾಪಿಸದೆ, ದೀಪಾವಳಿಯ ಬೆಳಕಿನ ಸಂದೇಶದ ಮೂಲಕ ತಮ್ಮ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ನ್ಯೂಯಾರ್ಕ್ ನಗರದ ಸಾರ್ವಜನಿಕ ಶಾಲೆಗಳಿಗೆ ದೀಪಾವಳಿಯಂದು ಅಧಿಕೃತ ರಜೆ ನೀಡುವ ಐತಿಹಾಸಿಕ ಮಸೂದೆಗೆ 2023ರ ನವೆಂಬರ್ 14ರಂದು ಸಹಿ ಹಾಕಿದ್ದ ಗವರ್ನರ್ ಕ್ಯಾಥಿ ಹೋಕಲ್, ಭಾರತೀಯರ ಸಾಂಸ್ಕೃತಿಕ ಪರಂಪರೆ ಹಾಗೂ ಅಮೇರಿಕದ ಅಭಿವೃದ್ಧಿಗೆ ಭಾರತೀಯ ಸಮುದಾಯ ನೀಡುತ್ತಿರುವ ಕೊಡುಗೆಗಳನ್ನು ಶ್ಲಾಘಿಸಿದರು.




ಹಿಂದೂ ಟೆಂಪಲ್ ಸೊಸೈಟಿಗೆ ವಿಶೇಷ ಗೌರವ
ಸಮಾರಂಭದ ವಿಶೇಷ ಆಕರ್ಷಣೆಯಾಗಿ, ಗವರ್ನರ್ ಕ್ಯಾಥಿ ಹೋಕಲ್ ಅವರ ಸಹಿಯುಳ್ಳ ನ್ಯೂಯಾರ್ಕ್ ರಾಜ್ಯದ ಅಧಿಕೃತ ಪ್ರಶಂಸಾಪತ್ರವನ್ನು (Citation) ಆಲ್ಬನಿಯ ಹಿಂದೂ ಟೆಂಪಲ್ ಸೊಸೈಟಿ ಆಫ್ ದಿ ಕ್ಯಾಪಿಟಲ್ ಡಿಸ್ಟ್ರಿಕ್ಟ್ ಸಂಸ್ಥೆಗೆ ಪ್ರದಾನ ಮಾಡಲಾಯಿತು. ಭಾರತೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಸ್ಥಳೀಯ ಸಮುದಾಯಕ್ಕೆ ಸಂಸ್ಥೆ ನೀಡುತ್ತಿರುವ ಕೊಡುಗೆಗಳಿಗೆ ಸಂದ ಗೌರವ ಇದಾಗಿದೆ.
ಎಂಪೈರ್ ಸ್ಟೇಟ್ ಪ್ಲಾಜಾದಲ್ಲಿ ಸಾವಿರಾರು ಜನರ ದೀಪಾವಳಿ ಸಂಭ್ರಮ
ಇದಕ್ಕೂ ಮುನ್ನ ನವೆಂಬರ್ 1ರಂದು ಆಲ್ಬನಿ ಡೌನ್ಟೌನ್ನ ಎಂಪೈರ್ ಸ್ಟೇಟ್ ಪ್ಲಾಜಾದಲ್ಲಿ ನ್ಯೂಯಾರ್ಕ್ ರಾಜ್ಯದ ಸಾಮಾನ್ಯ ಸೇವೆಗಳ ಇಲಾಖೆ (OGS) ವತಿಯಿಂದ ಬೃಹತ್ ದೀಪಾವಳಿ ಸಂಭ್ರಮವನ್ನು ಆಯೋಜಿಸಲಾಗಿತ್ತು.
ಸಾವಿರಾರು ಜನರು ಭಾಗವಹಿಸಿದ್ದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಭಾರತದಿಂದ ಆಗಮಿಸಿದ್ದ ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲಾ ಅವರ ಸಂಗೀತ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿತ್ತು. ಹಿಂದಿ ಹಾಗೂ ಕನ್ನಡ ಹಾಡುಗಳನ್ನು ಹಾಡಿ ಅವರು ಪ್ರೇಕ್ಷಕರನ್ನು ರಂಜಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವ್ಯಾಪಾರ ಮತ್ತು ಆಹಾರ ಮಳಿಗೆಗಳು ಹಾಗೂ ಹೊರಾಂಗಣದ ಆಕರ್ಷಕ ಪಟಾಕಿ ಪ್ರದರ್ಶನ ದೀಪಾವಳಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.
ನವೆಂಬರ್ 10ರ ಹಿಂದೂ ಕಲ್ಚರಲ್ ಸೆಂಟರ್ ಸಮಾರಂಭದಲ್ಲಿ ಗ್ರೇಟ್ ಇಂಡಿಯಾ ಕಿಚನ್ ಒದಗಿಸಿದ ರುಚಿಕರ ಭಾರತೀಯ ಭೋಜನ ಅತಿಥಿಗಳ ಮೆಚ್ಚುಗೆಗೆ ಪಾತ್ರವಾಯಿತು.
ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ನಡೆದ ಈ ಎರಡೂ ದೀಪಾವಳಿ ಆಚರಣೆಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ದೊರೆಯುತ್ತಿರುವ ಗೌರವಕ್ಕೆ ಸಾಕ್ಷಿಯಾದವು. ವಿವಿಧ ಸಮುದಾಯಗಳ ಜನರನ್ನು ಒಗ್ಗೂಡಿಸುವ ಮೂಲಕ ಬೆಳಕಿನ ಹಬ್ಬವು ಏಕತೆ, ಸ್ನೇಹ ಹಾಗೂ ಸಾಂಸ್ಕೃತಿಕ ಸಾಮರಸ್ಯದ ಸಂದೇಶ ಸಾರಿತು.
ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್

