ದುಬೈ/ಯುಎಇ: ಕಳೆದ ಎಪ್ರಿಲ್‌ನಲ್ಲಿ ದಾಖಲೆಯ ಮಳೆ ಸುರಿದಿದ್ದು, ಸಾಕಷ್ಟು ನಾಶ-ನಷ್ಟಗಳು ಉಂಟಾದ ಹಿನ್ನೆಲೆಯಲ್ಲಿ ದುಬೈಯಲ್ಲಿ ಮೂಲ ಸೌಕರ್ಯ ಮತ್ತು ಮೆಟ್ರೊ ನಿಲ್ದಾಣಗಳನ್ನು ಶಾಶ್ವತ ಕ್ರಮಗಳನ್ನು ಕೈಗೊಂಡು ಪ್ರವಾಹ ನಿರೋಧಕವನ್ನಾಗಿ ಮಾಡಲಾಗಿದೆ ಎಂದು ರಸ್ತೆ ಮತ್ತು ಸಾರಿಗೆ ಪ್ರಾಧಿಕಾರದ ಉನ್ನತ ಅಧಿಕಾರಿ ತಿಳಿಸಿದ್ದಾರೆ.
ಸದ್ಯ ಅಸ್ತಿತ್ವದಲ್ಲಿರುವ ಕೆಂಪು ಮತ್ತು ಹಸಿರು ಮೆಟ್ರೊ ಮಾರ್ಗ ಹಾಗೂ 2029ರಲ್ಲಿ ಸೇವೆ ಪ್ರಾರಂಭಿಸಲಿರುವ ನೀಲಿ ಮಾರ್ಗದಲ್ಲಿ ಪ್ರವಾಹದ ಪರಿಣಾಮ ಮರುಕಳಿಸದಂತೆ ಮುಂದುವರಿದ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಬಾರಿ ಉಂಟಾದ ಪ್ರವಾಹ ಪರಿಣಾಮಗಳು ಮೆಟ್ರೊದ ಕಳಪೆ ಕಾಮಗಾರಿಗಳಿಂದ ಉಂಟಾದದ್ದಲ್ಲ. ನಾವು ಹಿಂದೆಂದೂ ಕಂಡಿರದ ರೀತಿಯಲ್ಲಿ ಮಳೆ ಸುರಿದಿದ್ದರಿಂದ ಪ್ರವಾಹ ಸೃಷ್ಟಿಯಾಗಿದೆ ಎಂದು ರಸ್ತೆ ಮತ್ತು ಸಾರಿಗೆ ಪ್ರಾಧಿಕಾರದ ಡೈರಕ್ಟರ್ ಜನರಲ್ ಮತ್ತು ಚೇರ್‌ಮೇನ್ ಮತಾರ್ ಅಲ್ ತಾಯರ್ ಹೇಳಿದ್ದಾರೆ.
ಕೆಲವೊಂದು ಮೆಟ್ರೊ ಸ್ಟೇಶನ್‌ಗಳು ತಗ್ಗು ಪ್ರದೇಶಗಳಲ್ಲಿರುವುದರಿಂದ ಪ್ರವಾಹದ ಸಂದರ್ಭದಲ್ಲಿ ಮುಳುಗಡೆಯಾಗಿತ್ತು. 20-30ವರ್ಷಗಳ ದೀರ್ಘಕಾಲದ ಯೋಜನೆಗಳನ್ನು ಹಮ್ಮಿಕೊಳ್ಳುವುದು ವೆಚ್ಚದಾಯಕವಾಗಿದೆ. ಆದರೂ ಪ್ರವಾಹ ಬಾಧಿತ ಪ್ರದೇಶಗಳ ಬಗ್ಗೆ ಈಗ ನಾವು ಎಚ್ಚರಿಕೆಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆಯಾದಲ್ಲಿ ಪ್ರವಾಹವನ್ನು ತಡೆಗಟ್ಟಬಹುದಾಗಿದೆ ಎಂದು ಅವರು ಹೇಳಿದ್ದಾರೆ.
20.5 ಬಿಲಿಯನ್ ದಿರ್ಹಮ್ ಬಿಡುಗಡೆ: ಹೊಸ ಸಾರಿಗೆ ಯೋಜನೆಗೆ ಹವಾಮಾನ ಬದಲಾವಣೆಯಿಂದ ಉಂಟಾಗುವ ಪರಿಣಾಮಗಳನ್ನು ಎದುರಿಸಲು 20.5 ಬಿಲಿಯನ್ ದಿರ್ಹಮ್ ಬಿಡುಗಡೆ ಮಾಡಲಾಗಿದ್ದು, ತೀವ್ರ ಮಳೆ, ಪ್ರವಾಹ ಮೊದಲಾದ ಸನ್ನಿವೇಶಗಳಲ್ಲಿ ಉಂಟಾಗುವ ನಷ್ಟಗಳಿಗೆ ಬಳಸಿಕೊಳ್ಳಬಹುದಾಗಿದೆ.
ನಿರಾತಂಕ ಸೇವೆಯನ್ನು ಮುಂದುವರಿಸಲು ಎಲ್ಲ ಮೆಟ್ರೋ ನಿಲ್ದಾಣಗಳು ಮತ್ತು ಅಲ್ಲಿನ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಅಲ್ಲದೇ ಹೆಚ್ಚುವರಿಯಾಗಿ ಎಲ್ಲ ನಿಲ್ದಾಣದ ಕಟ್ಟಡಗಳನ್ನು ‘ಲೀಡ್’ ಪ್ರಮಾಣೀಕೃತ ಹಸಿರು ಕಟ್ಟಡದ ಮಾನದಂಡಗಳಿಗೆ ಒಳಪಡಿಸಿದ್ದು, ಇದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲಿದೆ. ಅಲ್ಲದೇ ಶಕ್ತಿಯ ಸಮರ್ಪಕ ಬಳಕೆಯನ್ನು ಖಾತರಿಪಡಿಸಲಿದೆ. ‘ಲೀಡ್’ ಪ್ರಮಾಣ ಪತ್ರ ಪಡೆಯಲಿರುವ ಜಗತ್ತಿನ ಮೊದಲ ಮೆಟ್ರೋ ಸೇವೆ ಇದಾಗಲಿದ್ದು, ಇದು ಪರಿಸರಸ್ನೇಹಿ ಆಗಿದೆ ಎಂದು ಸಾರಿಗೆ ಮುಖ್ಯಸ್ಥರು ಹೇಳಿದ್ದಾರೆ.
ಇನ್ನು ಪ್ರವಾಹ ಪೀಡಿತ 14 ಸ್ಥಳಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಲು ದುಬೈ ಸರಕಾರವು ದುಬೈ ಪಾಲಿಕೆಗೆ ಹಾಗೂ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರಕ್ಕೆ 1.5 ಬಿಲಿಯನ್ ದಿರ್ಹಮ್ ಬಿಡುಗಡೆ ಮಾಡಿದೆ.
ಸರಕಾರ ಕೂಡಲೇ ಹಣ ಬಿಡುಗಡೆ ಮಾಡಿರುವುದರಿಂದ 90 ಶೇಕಡಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಪ್ರವಾಹಕ್ಕೆ ಶಾಶ್ವತ ಪರಿಹಾರ ಒದಗಿಸಿದೆ. ಸದ್ಯ ದುಬೈಯಲ್ಲಿ ರಸ್ತೆ, ಮೆಟ್ರೊ, ಸಾರ್ವಜನಿಕ ಸೌಲಭ್ಯಗಳು ಮತ್ತಷ್ಟು ಅಭಿವೃದ್ಧಿಗೊಂಡಿದ್ದು ಇಲ್ಲಿನ ನಾಗರಿಕರ ಮತ್ತು ಪ್ರವಾಸಿಗರ ಸುರಕ್ಷತೆ ಆದ್ಯತೆ ನೀಡಿದೆ ಎಂದು ಮತಾರ್ ಅಲ್ ತಾಯರ್ ಹೇಳಿದ್ದಾರೆ.