ದುಬೈ: ಯುಎಇಯಲ್ಲಿರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತಾ ಬಂದಿರುವ ‘ಗಮ್ಮತ್ ಕಲಾವಿದೆರ್ ದುಬೈ’ ಯುಎಇ ತಂಡವು ಅಕ್ಟೋಬರ್ 11ರಂದು ಮತ್ತೊಮ್ಮೆ ಮನರಂಜನೆ ನೀಡಲು ತಯಾರಾಗಿ ನಿಂತಿದೆ.

ಅಕ್ಟೋಬರ್ 11ರಂದು ಸಂಜೆ 5 ಗಂಟೆಗೆ ನಗರದ ಎಮಿರೇಟ್ಸ್ ಥೀಯೇಟರ್ ಉಮ್ ಅಲ್ ಸೈಫ್ ನ ಸಭಾಂಗಣದಲ್ಲಿ “ಪೋನಗ ಕೊನೊಪರಾ..?” ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ನಾಟಕ ನಿರ್ದೇಶಕರಾದ ವಿಶ್ವನಾಥ ಶೆಟ್ಟಿಯವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ಖ್ಯಾತ ರಂಗ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ರಚನೆಯ “ಪೋನಗ ಕೊನೊಪರಾ” ಈ ನಾಟಕವು ವಿಶೇಷ ಶೈಲಿಯಲ್ಲಿ ಮೂಡಿಬಂದಿದೆ. ಈ ನಾಟಕವು ಯುಎಇಯ ನಾಟಕ ಅಭಿಮಾನಿಗಳಿಗೆ ಇಷ್ಟವಾಗಬಹುದು. ಯುಎಇಯಲ್ಲಿ ಇರುವ ತುಳುವರು ಈ ನಾಟಕವನ್ನು ನೋಡಲೇಬೇಕು ಎಂದು ವಿನಂತಿಸಿದ್ದರಲ್ಲದೆ, ಕಾರ್ಯಕ್ರಮಕ್ಕೆ ಊರಿಂದ ಮುಖ್ಯ ಅತಿಥಿಯಾಗಿ ಖ್ಯಾತ ಜ್ಯೋತಿಷ್ಯರು, ಮುಂಬಯಿ ಸೈನ್ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಎಂ.ಜೆ.ಪ್ರವೀಣ್ ಭಟ್, ಖ್ಯಾತ ಮುಳುಗು ತಜ್ಞ, ಸಮಾಜ ಸೇವಕರಾದ ಈಶ್ವರ್ ಮಲ್ಪೆ, ಪತ್ರಕರ್ತ ವಾಲ್ಟರ್ ನಂದಳಿಕೆಯವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.