ಸಿಡ್ನಿ: ಮಾಂಸ ತಿನ್ನುವ ಬ್ಯಾಕ್ಟೀರಿಯಾವೊಂದು ಆಸ್ಟ್ರೇಲಿಯಾದಲ್ಲಿ ಹರಡುತ್ತಿದ್ದು, ಆರೋಗ್ಯ ತಜ್ಞರು ಈ ಕುರಿತು ಜಾಗ್ರತೆ ವಹಿಸಬೇಕು ಎಂದು ಜನರಿಗೆ ಕರೆ ನೀಡಿದ್ದಾರೆ. ಇದು ವಿಕ್ಟೋರಿಯಾ ರಾಜ್ಯದಲ್ಲಿ ವೇಗವಾಗಿ ಹರಡುತ್ತಿದ್ದು, ಅಪಾಯವನ್ನು ಮನವರಿಕೆ ಮಾಡುವಂತೆ ತಜ್ಞರು ಹೇಳಿದ್ದಾರೆ. ಇದು ಸೊಳ್ಳೆಗಳಿಂದ ಮತ್ತು ಇಲಿಗಳಂತೆ ಕಾಣುವ ಪೊಸಮ್ ಪ್ರಾಣಿಗಳಿಂದ ಹರಡುತ್ತದೆ ಎಂದು ತಿಳಿದು ಬಂದಿದೆ.
ವಿಕ್ಟೋರಿಯಾದಲ್ಲಿನ ಆರೋಗ್ಯ ಇಲಾಖೆಯು ʼಬುರುಲಿ ಅಲ್ಸರ್ʼ, ಮೃದು ಅಂಗಾಂಶಗಳಿಗೆ ಹಾನಿ ಮಾಡುವ ಮತ್ತು ಗಂಭೀರವಾದ ವಿರೂಪಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ಚರ್ಮದ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
“ಇದು ಹೇಗೆ ಪ್ರಾರಂಭವಾಗುತ್ತದೆಂದರೆ ಮೊದಲು ಒಂದು ಗಾಯ ರಹಿತ ನೋವಿನ ಗುಳ್ಳೆಯಂತೆ ಕಂಡು ಬರುತ್ತದೆ. ಇದು ಯಾವುದೋ ಸೊಳ್ಳೆ ಕಚ್ಚಿದ್ದಿರಬಹುದೆಂದು ಜನರು ಅಸಡ್ಡೆ ಮಾಡುವ ಸಾಧ್ಯತೆಯಿದೆ” ವಿಕ್ಟೋರಿಯಾದ ಮುಖ್ಯ ಆರೋಗ್ಯ ಅಧಿಕಾರಿ ಪ್ರೊಫೆಸರ್ ಬೆನ್ ಕೌವೀ ಹೇಳಿದರು. ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ಈ ವರ್ಷ ಒಟ್ಟು ಪ್ರಕರಣಗಳು ಹೆಚ್ಚಾಗಿವೆ ಎಂದು ಅವರು ಹೇಳಿದ್ದಾರೆ.
ಮಾರ್ನಿಂಗ್‌ಟನ್ ಪೆನಿನ್ಸುಲಾ, ಈಸ್ಟ್ ಗಿಪ್ಸ್‌ಲ್ಯಾಂಡ್, ವೆಸ್ಟರ್ನ್‌ಪೋರ್ಟ್, ಬೆಲ್ಲರಿನ್ ಪೆನಿನ್ಸುಲಾ, ಮತ್ತು ಫ್ರಾಂಕ್‌ಸ್ಟನ್ ಮತ್ತು ಲ್ಯಾಂಗ್‌ವಾರಿನ್‌ನಂತಹ ಪ್ರದೇಶಗಳಲ್ಲಿ ಇದು ಪತ್ತೆಯಾಗಿದೆ. ಇವುಗಳಲ್ಲದೆ, ಆಗ್ನೇಯ ಬೇಸೈಡ್ ಉಪನಗರಗಳಲ್ಲಿ ಪ್ರಕರಣಗಳು ಬಂದಿವೆ, ಇದರಲ್ಲಿ ಬ್ರೀಮ್ಲಿಯಾ, ಟೋರ್ಕ್ವೇ, ಆಂಗ್ಲೀಸಿಯಾ ಮತ್ತು ಐರಿಸ್ ಇನ್ಲೆಟ್ ಪಟ್ಟಣಗಳು ಮತ್ತು ಗ್ರೇಟರ್ ಜಿಲಾಂಗ್‌ನ ಭಾಗಗಳು ಮತ್ತು ಒಳ-ಮೆಲ್ಬೋರ್ನ್ ಪ್ರದೇಶಗಳಾದ ಎಸ್ಸೆಂಡನ್, ಮೂನೀ ಪಾಂಡ್ಸ್ ಮತ್ತು ಬ್ರನ್ಸ್‌ವಿಕ್ ವೆಸ್ಟ್ ಸೇರಿವೆ.
ಎಲ್ಲರಲ್ಲೂ ಈ ರೋಗವು ಹರಡುವ ಸಾಧ್ಯತೆಯಿದೆ ಆದರೆ ಹೆಚ್ಚಾಗಿ ಅರುವತ್ತು ವರ್ಷಗಳ ನಂತರದವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ.