ಅಜ್ಮಾನ್: ತುಂಬೆ ಗ್ರೂಪ್ ನ ಸ್ಥಾಪಕ ಅಧ್ಯಕ್ಷ ಮತ್ತು ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ನ ಪೋಷಕರಾದ ಡಾ.ತುಂಬೆ ಮೊಯ್ದಿನ್ ಅವರಿಗೆ ಬ್ಯಾರೀಸ್ ಕಲ್ಚರಲ್ ಫೋರಂ-ಯುಎಇ ವತಿಯಿಂದ “ಗ್ಲೋಬಲ್ ವಿಷನರಿ ಎನ್ ಆರ್ ಐ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಯುಎಇ ಅಜ್ಮಾನ್ ನ ತುಂಬೆ ಮೆಡಿಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಡಾ. ತುಂಬೆ ಮೊಯ್ದಿನ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಜಾಗತಿಕ ಆರೋಗ್ಯ ರಕ್ಷಣೆ, ಶಿಕ್ಷಣ, ಸಂಶೋಧನಾ ಕ್ಷೇತ್ರಕ್ಕೆ ಡಾ. ಮೊಯ್ದಿನ್ ಅವರ ಅಮೋಘ ಕೊಡುಗೆಗಳನ್ನು ಗುರುತಿಸಿ “ಗ್ಲೋಬಲ್ ವಿಷನರಿ ಎನ್ ಆರ್ ಐ ಪ್ರಶಸ್ತಿ” ಯನ್ನು ನೀಡಲಾಗಿದೆ. ಡಾ. ಮೊಯ್ದಿನ್ ಅವರು ತುಂಬೆ ಗ್ರೂಪ್ ಅನ್ನು ಜಾಗತಿಕ ಬ್ರ್ಯಾಂಡ್ ಆಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವದಾದ್ಯಂತ ಇರುವ ಅನಿವಾಸಿ ಭಾರತೀಯರಿಗೆ ಅವರು ಸ್ಫೂರ್ತಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ತುಂಬೆ ಮೆಡಿಸಿಟಿಯನ್ನು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಶ್ರೇಷ್ಠ ಕೇಂದ್ರವಾಗಿ ನಿರ್ಮಿಸುವಲ್ಲಿ ಡಾ.ಮೊಯ್ದಿನ್ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.
ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಡಾ. ತುಂಬೆ ಮೊಯ್ದಿನ್, ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಕ್ಕೆ ಬ್ಯಾರೀಸ್ ಕಲ್ಚರಲ್ ಫೋರಂ(BCF)ಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಸಂಶೋಧನೆ ಮತ್ತು ಸಮುದಾಯ ಕಲ್ಯಾಣವನ್ನು ಬೆಳೆಸುವಲ್ಲಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ನಾನು ಈ ಗೌರವವನ್ನು ನನ್ನ ಅದ್ಭುತ ತಂಡಕ್ಕೆ ಅರ್ಪಿಸುತ್ತೇನೆ, ಅವರ ಅಚಲ ಸಮರ್ಪಣೆ ನಮ್ಮ ಯಶಸ್ಸಿಗೆ ಮೂಲಾಧಾರವಾಗಿದೆ ಎಂದು ಹೇಳಿದ್ದಾರೆ.