ಬಹರೈನ್: ಇಲ್ಲಿ ಸೋಮವಾರ ನಡೆದ ಜಾಗತಿಕ ಮಹಿಳಾ ಆರ್ಥಿಕ ವೇದಿಕೆ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಭಾಗವಹಿಸಿದ್ದರು.


ಈ ಕಾರ್ಯಕ್ರಮದಲ್ಲಿ ಅನೇಕ ಸಾಧಕ ಮಹಿಳೆಯರೊಂದಿಗೆ ಚರ್ಚಿಸಿ ಅವರ ಅನುಭವಗಳನ್ನು ಹಂಚಿಕೊಂಡಿದ್ದು, ಬಹರೈನ್‌ನಲ್ಲಿರುವ ವಿವಿಧ ಕನ್ನಡ ಕೂಟದ ಪದಾಧಿಕಾರಿಗಳೊಂದಿಗೆ ದೀರ್ಘ ಸಮಯದ ವಿಚಾರ ವಿನಿಮಯ ಮಾಡಿಕೊಂಡರು. ಕನ್ನಡ ನಾಡಿನ ಅನಿವಾಸಿ ಭಾರತಿಯರು ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಇನ್ನು ಹೆಚ್ಚಿನ ಸಾಧನೆಗಳನ್ನು ಮಾಡುವಂತೆ ಡಾ.ಆರತಿ ಕೃಷ್ಣ ಹಾರೈಸಿದರು.
ಜಾಗತೀಕ ಮಹಿಳಾ ಆರ್ಥಿಕ ವೇದಿಕೆಯು ಮಹಿಳಾ ಉದ್ಯಮಿಗಳು ಹಾಗೂ ವೃತ್ತಿಪರರಿಗೆ ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ಸೃಷ್ಟಿಸುವ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಇದರಿಂದಾಗಿ ವ್ಯಾಪಾರ ಕ್ಷೇತ್ರದಲ್ಲಿರುವ ಮಹಿಳೆಯರು ತಮ್ಮ ಉದ್ಯಮಶೀಲತೆಯ ಹಾಗೂ ಉನ್ನತ ತಂತ್ರಜ್ಞಾನದ ಆವಿಷ್ಕಾರಗಳನ್ನು ಪ್ರದರ್ಶಿಸಲು ಒಂದು ಅವಕಾಶವನ್ನು ನೀಡುತ್ತಿದೆ. ವ್ಯಾಪಾರ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರು ತಮ್ಮ ಯಶಸ್ಸಿನ ಕಥೆಗಳನ್ನು ಹಂಚಿಕೊಳ್ಳುವುದರ ಮೂಲಕ ಯುವ ಜನಾಂಗದವರಿಗೆ ಉದ್ಯಮಶೀಲತೆ ಹಾಗೂ ನಾಯಕತ್ವದ ಬೆಳವಣಿಗೆಯ ಪ್ರೇರೇಪಣೆ ನೀಡುವಂತಾಗಿದೆ. ಈ ವೇದಿಕೆಯಡಿ ಜರುಗುವ ವಿವಿಧ ಕಾರ್ಯಾಗಾರಗಳು, ಚರ್ಚೆಗಳು ಹಾಗೂ ಭಾಷಣಗಳು ವ್ಯಾಪಾರ ಕ್ಷೇತ್ರದಲ್ಲಿ ಕಾಲಿಡುತ್ತಿರುವ ಮಹಿಳಾ ಉದ್ಯಮಿಗಳಿಗೆ ನವೀನ ಕೌಶಲ್ಯ ಅಳವಡಿಕೆ, ಹಣಕಾಸು ನಿರ್ವಹಣೆ, ನೂತನ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನವನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿವೆ.
ಜಾಗತಿಕ ಮಟ್ಟದಲ್ಲಿ ಮಹಿಳಾ ಸಬಲೀಕರಣ ಹಾಗೂ ಉದ್ಯಮಶೀಲತೆಯ ಮೂಲಕ ಮಹಿಳಾ ಉದ್ಯಮಿಗಳು ಪುರುಷ ಪ್ರಧಾನ ವ್ಯಾಪಾರ ಕ್ಷೇತ್ರದಲ್ಲಿ ತಮ್ಮದೇ ಆದ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇದಲ್ಲದೇ ಸದರಿ ವೇದಿಕೆಯು ವಿಶ್ವದ ವಿವಿಧ ದೇಶಗಳಿಂದ ಮಹಿಳಾ ನೇತೃತ್ವದ ಉದ್ಯಮಗಳು ತಮ್ಮ ಉತ್ಪನ್ನಗಳು ಹಾಗೂ ಸೇವೆಗಳನ್ನು ಪ್ರದರ್ಶಿಸುತ್ತಿದೆ. ಇದರಿಂದಾಗಿ, ಅನೇಕ ಯುವ ಮಹಿಳೆಯರು ಕೂಡ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ.