ಬೆಂಗಳೂರು: ಹೊರದೇಶದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಅವರ ಸಮಸ್ಯೆ, ಅನಿಸಿಕೆಗಳನ್ನು ವ್ಯಕ್ತಪಡಿಸಲು, ಸಾಧನೆಗಳನ್ನು ಸರಕಾರಕ್ಕೆ ತಿಳಿಸಲು ‘globalkannadiga.com’ ವೇದಿಕೆಯಾಗಿದೆ ಎಂದು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಹೇಳಿದ್ದಾರೆ.
ವಾರ್ತಾ ಭಾರತಿ ಅನಿವಾಸಿ ಕನ್ನಡಿಗರಿಗಾಗಿ ರೂಪಿಸಿರುವ globalkannadiga.com ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ ಬಳಿಕ ‘ವಾರ್ತಾ ಭಾರತಿ’ ಚಾನಲ್ ಜೊತೆ ಮಾತನಾಡುತ್ತಿದ್ದ ಅವರು, ವಾರ್ತಾ ಭಾರತಿ ಅನಿವಾಸಿ ಕನ್ನಡಿಗರಿಗಾಗಿಯೇ ಒಂದು ಪ್ರತ್ಯೇಕ ವೆಬ್ ಸೈಟ್ ಆರಂಭಿಸಿರುವುದು ಒಳ್ಳೆಯ ವಿಷಯ. ಇದನ್ನು ಅನಿವಾಸಿ ಕನ್ನಡಿಗರು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ವೇದಿಕೆಯಾಗಿ ಬಳಸಬೇಕು ಎಂದರು.

ವಾರ್ತಾಭಾರತಿಯ ನಿರ್ದೇಶಕ ಯಾಸೀನ್ ಮಲ್ಪೆಯವರು ಡಾ.ಆರತಿ ಕೃಷ್ಣ ಅವರಿಗೆ ಸ್ಮರಣಿಕೆ ನೀಡಿದರು.
ಅನಿವಾಸಿ ಕನ್ನಡಿಗರಿಗೆ ಆಗುವ ಎಲ್ಲ ರೀತಿಯ ಸಮಸ್ಯೆ, ಕಷ್ಟಗಳನ್ನು ಸರಕಾರಕ್ಕೆ, ನಮ್ಮ ಇಲಾಖೆಗೆ ತಲುಪಿಸುವ ಕೆಲಸ globalkannadiga.com ಮೂಲಕ ಆಗಲಿ, ಆಗ ಸರಕಾರ ಕೂಡ ಎಚ್ಚೆತ್ತುಕೊಂಡು ಅದಕ್ಕೆ ಪರಿಹಾರ ಕಲ್ಪಿಸಲು, ಸ್ಪಂದಿಸಲು ಸಹಾಯ ಆಗುತ್ತೆ. ಅದೇ ರೀತಿ ಅನಿವಾಸಿ ಕನ್ನಡಿಗರು ಮಾಡುವ ಸಾಧನೆಗಳ ಮಾಹಿತಿ ಕೂಡ ನಮ್ಮ ಸರಕಾರ, ಇಲಾಖೆಗೆ ತಲುಪಿಸುವ ಕಾರ್ಯ ಕೂಡ ವೆಬ್ ಸೈಟ್ ಮೂಲಕ ನಡೆಯಲಿ. ಜೊತೆಗೆ ‘ಗ್ಲೋಬಲ್ ಕನ್ನಡಿಗ’ ಮೂಲಕ ನಮ್ಮ ಎನ್ನಾರೈ ಫೋರಂನ ವೆಬ್ ಸೈಟಿಗೆ ಲಿಂಕ್ ಮಾಡುವುದರೊಂದಿಗೆ ನಮ್ಮನ್ನು ಸಂಪರ್ಕಿಸಬಹುದು ಎಂದರು.
ಪ್ರಪಂಚದಲ್ಲಿರುವ ಅನಿವಾಸಿ ಕನ್ನಡಿಗರಿಗೆ ‘globalkannadiga.com’ ವೆಬ್ ಸೈಟ್ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿ. ‘ವಾರ್ತಾ ಭಾರತಿ’ಯನ್ನು ಜನ ಕಳೆದ 22 ವರ್ಷಗಳಿಂದ ಓದುತ್ತ ಬಂದಿದ್ದಾರೆ. ಅದರಲ್ಲಿ ಬರುವ ವಸ್ತುನಿಷ್ಠ ವರದಿಗಳು, ಸತ್ಯಾಸತ್ಯತೆಯನ್ನು ಬಯಲು ಮಾಡುತ್ತಾ ಬರುತ್ತಿದ್ದು, ಪ್ರಸಕ್ತ ಈ ಮಾಧ್ಯಮ ಸಂಸ್ಥೆ ಅನಿವಾಸಿಗಳ ಅಚ್ಚುಮೆಚ್ಚಿನ ಪತ್ರಿಕೆಯೂ ಆಗಿದೆ.
ನಾನು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆದ ಮೇಲೆ ಎನ್ನಾರೈ ಗಳ ಕುರಿತ ಹೆಚ್ಚಿನ ವರದಿ ಬರುವುದೇ ವಾರ್ತಾ ಭಾರತಿಯಲ್ಲಿ. ನಿರಂತರವಾಗಿ ಅದನ್ನು ನಾನು ಓದುತ್ತೇನೆ. ಪ್ರಪಂಚದ ನಾನಾ ಭಾಗದಲ್ಲಿರುವ ಅನಿವಾಸಿ ಕನ್ನಡಿಗರು ಈ ‘globalkannadiga.com’ ವೆಬ್ ಸೈಟ್’ನ್ನು ಓದುವಂತಾಗಬೇಕು. ಅದರಲ್ಲಿ ಅನಿವಾಸಿ ಕನ್ನಡಿಗರ ಸುದ್ದಿಯೇ ಇರುವುದರಿಂದ ಅದನ್ನು ಅನಿವಾಸಿ ಕನ್ನಡಿಗರಿಗೆ ತಲುಪಿಸಲು ನಮ್ಮ ಇಲಾಖೆಯ ಮೂಲಕ ಸಹಕಾರ ನೀಡಲಾಗುವುದು ಎಂದು ಆರತಿ ಕೃಷ್ಣ ಹೇಳಿದ್ದಾರೆ.