ದುಬೈ: ಯುಎಇಯ ನಗರದಲ್ಲಿ ಕಳೆದ ಮೂರು ದಶಕಗಳಿಂದ ಕರ್ನಾಟಕ ಪರ ಸಂಘಟನೆಗಳ ಕ್ರೀಡಾ ಕಾರ್ಯಕ್ರಮದ ನೇತೃತ್ವ ವಹಿಸುತ್ತಿರುವ ಉತ್ತಮ ಕ್ರೀಡಾ ಸಂಘಟಕರಾದ ನೊಯಲ್ ಡಿ.ಅಲ್ಮೆಡಾರವರಿಗೆ ಕನ್ನಡ ಸಂಘ ಅಲ್ ಐನ್ ವತಿಯಿಂದ ಇತ್ತೀಚೆಗೆ ‘ಗಲ್ಫ್ ಕ್ರೀಡಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಕಳೆದ ಎರಡು ದಶಕಗಳಿಂದ ಕನ್ನಡ ಪರ ಚಟುವಟಿಕೆಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದಿರುವ ಕರ್ನಾಟಕ ಪರ ಸಂಘಟನೆಗಳ ಸಾಲಿನಲ್ಲಿ ಕನ್ನಡ ಸಂಘ ಅಲ್ ಐನ್ ಕೂಡ ಒಂದು. ಇದರ 22 ನೇ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಅಲ್ ಐನ್’ನ ರಾಡಿಸ್ಸನ್ ಬ್ಲೂ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೊಯಲ್ ಡಿ.ಅಲ್ಮೆಡಾರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುಎಇಯ ಹಿರಿಯ ಉದ್ಯಮಿ ಡಾ.ಬಿ.ಆರ್.ಶೆಟ್ಟಿ, ಗೌರವ ಅತಿಥಿಗಳಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಅಲ್ ಐನ್ ಜೂನಿಯರ್ ಸ್ಕೂಲ್ ನ ಮುಖ್ಯಸ್ಥರಾದ ಅರ್ಶದ್ ಶರೀಫ್ ಹಾಗೂ ಬಿನ್ ಡಾರ್ವಿಶ್ ಗ್ರೂಪ್ ನ ಮುಖ್ಯಸ್ಥರಾದ ಮೊಹಮ್ಮದ್ ಇಬ್ರಾಹಿಂ, ಐ.ಎಸ್.ಸಿ. ಅಲ್ ಐನ್ ಅಧ್ಯಕ್ಷ ರಸ್ಸೆಲ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಂಘದ ಶಾರ್ಜಾದ ಅಧ್ಯಕ್ಷ ಸತೀಶ್ ಪೂಜಾರಿ ಹಾಗೂ ಪ್ರಧಾನ ಕಾರ್ಯದರ್ಶಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ದುಬೈ ಘಟಕದ ಸಲಹೆಗಾರರಾದ ಸುಂದರರಾಜ್ ಬೇಕಲ್, ಅಲ್ ಐನ್ ಕನ್ನಡ ಸಂಘದ ಮುಖ್ಯ ಸಂಘಟಕರಾಗಿರುವ ವಿಮಲ್ ಕುಮಾರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಮೇಶ್ ಕುಮಾರ್, ಡಾ.ಪ್ರದೀಪ್, ದೇವಿಪ್ರಸಾದ್ ಶೆಟ್ಟಿ, ವಿಕಾಸ್ ಶೆಟ್ಟಿ, ವಿನೋದ್ ಮಥಾಯಸ್, ನಿತೀನ್, ಶ್ರೀಧರ್, ದಿವ್ಯ ಶಶಿ, ಶಿಲ್ಪಾ ನಂಜುಂಡಸ್ವಾಮಿ, ಸಮೀನಾ ಫಾರುಕ್, ಡಾ.ದಿವ್ಯತಾ ಉಪಸ್ಥಿತರಿದ್ದರು.
ನೊಯಲ್ ಡಿ.ಅಲ್ಮೆಡಾರವರ ಕಿರುಪರಿಚಯ…
1986ನೇ ಇಸವಿಯಲ್ಲಿ ಉದ್ಯೋಗ ನಿಮಿತ್ತ ಯುಎಇ ನಗರಕ್ಕೆ ಬಂದ ನೊಯಲ್ ಡಿ.ಅಲ್ಮೆಡಾರವರು ತನ್ನ ವೃತ್ತಿಯೊಂದಿಗೆ ತನ್ನ ಪ್ರವೃತ್ತಿಯಾದ ಕ್ರೀಡಾ ಸಂಘಟನೆಯ ಮೂಲಕ ಹೆಸರುವಾಸಿಯಾದರು. ಯುಎಇಯಲ್ಲಿ ಹಲವಾರು ತುಳು, ಕನ್ನಡ, ಕೊಂಕಣಿ ಸಂಘ ಸಂಸ್ಥೆಗಳಲ್ಲಿ ದುಡಿದ ಇವರು ತುಳು ಕೂಟ ದುಬೈ, ಕರ್ನಾಟಕ ಸಂಘ ಶಾರ್ಜಾ, ಮಂಗಳೂರು ಕೊಂಕಣ್ಸ್, ಡೈಜಿ ರಂಗಮಂದಿರ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸ್ಥಾಪಕ ಸದಸ್ಯರು. ಯುಎಇಯ ಎಲ್ಲಾ ತುಳು, ಕನ್ನಡ ಸಂಘ ಸಂಸ್ಥೆಗಳ ಕಾರ್ಯಕ್ರಮದ ಯಶಸ್ವಿಗೆ ದುಡಿದ ಇವರು ಕರ್ನಾಟಕ ಸಂಘ ದುಬೈ, ಸಂಗಮ ಕಲಾವಿದರು ದುಬೈ ಸಂಘಟನೆಗಳ ಮೂಲಕ ಹಲವಾರು ಕಾರ್ಯವನ್ನು ನೀಡಿದ್ದಾರೆ. ಇಂಡಿಯನ್ ಕಬ್ಬಡಿ ಓರ್ಗನೈಸರ್ ಸಂಸ್ಥೆಯ 2023-24 ಸಾಲಿನಲ್ಲಿ ಎರಡು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ತವರೂರಿನ ನಾಟಕ ಸಂಸ್ಥೆಯಾದ ವಿಜಯ ಕುಮಾರ್ ಕೋಡಿಯಲ್ ಬೈಲ್ ರವರ ಕಲಾ ಸಂಗಮ ಕುಡ್ಲ ತಂಡದ ಇಪ್ಪತೈದಕ್ಕು ಅಧಿಕ ಕಲಾವಿದರನ್ನು ದುಬೈಗೆ ಕರೆಸಿ ಮದಿಮೆ ಎಂಬ ನಾಟಕವನ್ನು ಆಡಿಸಿದ ಹೆಮ್ಮೆ ಇವರಿಗಿದೆ. ಯುಎಇಯಲ್ಲಿ ತಮ್ಮದೆ ಆದ ನ್ಯೂ ಮಾರ್ಕ್ ಎಂಬ ಕಬ್ಬಡಿ ತಂಡವನ್ನು ಸ್ಥಾಪಿಸಿ ಹಲವಾರು ಕಬ್ಬಡಿ ಆಟಗಾರರಿಗೆ ಅವಕಾಶ ಒದಗಿಸಿದಲ್ಲದೆ ಈ ತಂಡವು ಯುಎಇಯಲ್ಲಿ ಹಲವಾರು ಬಹುಮಾನಗಳನ್ನು ಪಡೆದಿದೆ.
ಕರ್ನಾಟಕ ಸಂಘ ಶಾರ್ಜಾದ ಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೊಯಲ್ ಡಿ. ಅಲ್ಮೆಡಾರವರು ಯುಎಇಯಲ್ಲಿ ಕಳೆದ ಮೂರು ದಶಕಗಳಿಂದ ಮಹಿಳಾ ಥ್ರೋಬಾಲ್, ಪುರುಷರ ಥ್ರೋಬಾಲ್, ವಾಲಿಬಾಲ್, ಕಬ್ಬಡಿ, ಕ್ರಿಕೆಟ್ ಹಾಗೂ ಇನ್ನಿತರ ಕ್ರೀಡಾ ಕೂಟಗಳನ್ನು ಆಯೋಜಿಸುತ್ತ ಬಂದಿರುವ ಅಲ್ಮೆಡಾರವರಿಗೆ ಮರಳುಭೂಮಿಯ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಗಲ್ಫ್ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)