ದುಬೈ: ಗುರುವಾರ ಮುಂಜಾನೆಯಿಂದ ಯುಎಇಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ-ಗಾಳಿಗೆ ಭಾರತೀಯ ಮೂಲದ ಯುವಕನೋರ್ವ ಮೃತಪಟ್ಟ ಘಟನೆ ರಾಸ್ ಅಲ್ ಖೈಮಾದಲ್ಲಿ ವರದಿಯಾಗಿದೆ.
ದುಬೈ, ಅಬುಧಾಬಿ, ಶಾರ್ಜಾ, ಅಜ್ಮಾನ್, ರಾಸ್ ಅಲ್ ಖೈಮಾ ಸೇರಿದಂತೆ ಹಲವೆಡೆ ಗುರುವಾರ ಮುಂಜಾನೆಯಿಂದ ಭಾರಿ ಮಳೆ, ಗಾಳಿ ಬೀಸುತ್ತಿದ್ದು, ರಾತ್ರಿ ಗುಡುಗು, ಮಿಂಚು ಸಹಿತ ಮಳೆ ಆರ್ಭಟ ಜೋರಾಗಿತ್ತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ರಾಸ್ ಅಲ್ ಖೈಮಾದಲ್ಲಿ ಸುರಿದ ಭಾರಿ ಮಳೆ-ಗಾಳಿಗೆ ಅಲ್ಲಿನ ಜನರು ತತ್ತರಿಸಿ ಹೋಗಿದ್ದು, ಭಾರತೀಯ ಮೂಲದ ಯುವಕನೋರ್ವ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಮಲಪ್ಪುರಂ ಜಿಲ್ಲೆಯ ಕೊಡಿಂಜಿ ನಿವಾಸಿ ಸಲ್ಮಾನ್ ಫಾರಿಸ್ (27) ಎಂದು ಗುರುತಿಸಲಾಗಿದೆ.
ರಾಸ್ ಅಲ್ ಖೈಮಾದ ಇಸ್ತಾಂಬುಲ್ ಶವರ್ಮಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾನ್, ಬಿರುಗಾಳಿಯಲ್ಲಿ ಕಟ್ಟಡದಿಂದ ಬಿದ್ದು ಬಂದ ಕಲ್ಲು ದೇಹಕ್ಕೆ ತಗುಲಿದ ಪರಿಣಾಮ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಅವರು ಮಲಪ್ಪುರಂ ನನ್ನಂಪುರ ತಾಲೂಕಿನ ತಲಕ್ಕೊಟ್ಟ ತೊಡಿಕ ನಿವಾಸಿಗಳಾದ ಸುಲೈಮಾನ್–ಅಸ್ಮಾಬಿ ದಂಪತಿಯ ಪುತ್ರರಾಗಿದ್ದಾನೆ.
ಮೃತ ಯುವಕ ಇತ್ತೀಚೆಗಷ್ಟೇ ವಿವಾಹವಾಗಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಯುಎಇಗೆ ಮರಳಿದ್ದನು. ಅಪಘಾತ ಸಂಭವಿಸಿದ ವೇಳೆ ಅವನು ಶಾವರ್ಮಾವನ್ನು ವಿತರಿಸಲು ಹೊರಟಿದ್ದ ಎನ್ನಲಾಗಿದೆ.
ಯುಎಇಯಾದ್ಯಂತ ಮಿಂಚು ಸಹಿತ ಜಿಟಿಪಿಟಿ ಮಳೆ ಮುಂದುವರಿದ್ದಿದ್ದು, ಶುಕ್ರವಾರ ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಉದ್ಯಾನವನಗಳು ಮತ್ತು ಕಡಲತೀರಗಳನ್ನು ಪ್ರವೇಶಿಸದಂತೆ ಎಚ್ಚರಿಕೆ ಕೂಡ ನೀಡಲಾಗಿದೆ. ಈ ನಡುವೆ, ಪೊಲೀಸ್ ಪಡೆ, ಆಂಬ್ಯುಲೆನ್ಸ್ ಹಾಗೂ ಸಿವಿಲ್ ಡಿಫೆನ್ಸ್ ವಿಭಾಗಗಳು ಸಂಪೂರ್ಣ ಸನ್ನದ್ಧತೆಯಿಂದ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

