ಬಹರೈನ್ನಾನು ಕಂಡ ದ್ವೀಪ ರಾಷ್ಟ್ರ ಬಹರೈನ್! ಪ್ರವಾಸಿಗರ ಅಚ್ಚುಮೆಚ್ಚಿನ...

ನಾನು ಕಂಡ ದ್ವೀಪ ರಾಷ್ಟ್ರ ಬಹರೈನ್! ಪ್ರವಾಸಿಗರ ಅಚ್ಚುಮೆಚ್ಚಿನ ತಾಣ; ಈ ದೇಶದ ಬಗ್ಗೆ ತಿಳಿಯೋಣ….

ಅರಬ್ ರಾಷ್ಟ್ರಗಳಲ್ಲಿ ಅತ್ಯಂತ ಚಿಕ್ಕ ದೇಶ; ಇಲ್ಲಿನ 'ಬಹರೈನ್ ದಿನಾರ್' ಜಗತ್ತಿನಲ್ಲಿಯೇ ಎರಡನೇ ಅತೀ ದೊಡ್ಡ ಕರೆನ್ಸಿ

ದ್ವೀಪ ರಾಷ್ಟ್ರ ಬಹರೈನ್’ಗು ಭಾರತಕ್ಕೂ ಬಹಳ ಹತ್ತಿರದ ಭಾವನಾತ್ಮಕ ಸಂಬಂಧವಿದೆ. ಹಲವು ಮಂದಿ ಇಲ್ಲಿ ಉದ್ಯಮ ಕಟ್ಟಿದ್ದರೆ, ಇನ್ನೂ ಹೆಚ್ಚಿನ ಮಂದಿ ಉದ್ಯೋಗದಲ್ಲಿದ್ದಾರೆ. ಈ ದೇಶ ಏಷ್ಯಾದ ಅತೀ ಸುಂದರ ದೇಶಗಳಲ್ಲೊಂದು. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಇಲ್ಲಿ ಉದ್ಯಮ, ಉದ್ಯೋಗ ಕಟ್ಟಿಕೊಂಡಿರುವ ಭಾರತೀಯರಲ್ಲಿ ಕೇರಳಿಗರನ್ನು ಹೊರತುಪಡಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿರುವುದು ಕರ್ನಾಟಕದ ಕರಾವಳಿ ಭಾಗದವರು. ಇವರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಕನ್ನಡ, ತುಳು, ಬ್ಯಾರಿ, ಕೊಂಕಣಿ, ಉರ್ದು ಸಂಘಟನೆಗಳ ಜೊತೆ ಅವಿನಾಭಾವ ಸಂಬಂಧವಿಟ್ಟುಕೊಂಡವರು.

Photo: Bahrainevisa

ತೈಲ, ನೈಸರ್ಗಿಕ ಅನಿಲಗಳಿಗೆ ಹೆಸರುವಾಸಿಯಾಗಿರುವ ಈ ದೇಶ, ಜಗತ್ತಿನ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಅರಬ್ ರಾಷ್ಟ್ರಗಳಲ್ಲಿ ಅತ್ಯಂತ ಚಿಕ್ಕ ದೇಶವಾಗಿರುವ ಬಹರೈನ್, ಇಂದು ಆರ್ಥಿಕವಾಗಿ ಬೆಳೆಯುತ್ತಿರುವ ದೇಶಗಳ ಸಾಲಿನಲ್ಲಿದೆ. ಪ್ರಾಚೀನ ಕಾಲದಿಂದಲೂ ಈ ದೇಶ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು.

ಇಂದು ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಅತ್ಯಂತ ಚಿಕ್ಕದಾಗಿದ್ದರೂ, ಇಲ್ಲಿನ ಕರೆನ್ಸಿ ‘ಬಹರೈನ್ ದಿನಾರ್’ ಜಗತ್ತಿನಲ್ಲಿಯೇ ಎರಡನೇ ಅತೀ ದೊಡ್ಡ ಕರೆನ್ಸಿಯಾಗಿದೆ. ಈ ಕಾರಣದಿಂದಲೇ ಈ ದೇಶ ಜಗತ್ತಿನ ಗಮನ ಸೆಳೆಯುವ ಜೊತೆಗೆ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವಲ್ಲಿಯೂ ಯಶಸ್ಸು ಕಾಣುತ್ತಿದೆ.

Photo:Bahrain-Urban Planning & Development Authority

ಬಹರೈನ್’ನಲ್ಲಿ ಉದ್ಯೋಗ ಅರಸಿ ಬರುವವರಿಗೆ ಕಿವಿ ಮಾತು…!
ಯುಎಇ, ಒಮಾನ್ ಇನ್ನಿತರ ದೇಶಗಳಿಗೆ ಉದ್ಯೋಗ ಅರಸಿ ವಿಸಿಟ್ ವೀಸಾದಲ್ಲಿ ಹೋಗಿ ಕೆಲಸಗಿಟ್ಟಿಸಿಕೊಂಡಂತಲ್ಲ ಈ ದೇಶದಲ್ಲಿ ಕೆಲಸ ಹುಡುಕುವುದು. ಇಲ್ಲಿ ಕೆಲಸ ಅಷ್ಟು ಸುಲಭದಲ್ಲಿ ಸಿಗುವುದೂ ಇಲ್ಲ. ಇಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ ಆಯಾಯ ಕಂಪನಿಗಳು CPR(Central Population Registry) ಗುರುತಿನ ಚೀಟಿ ನೀಡುತ್ತದೆ. ಈ ಗುರುತಿನ ಚೀಟಿ ಇದ್ದರಷ್ಟೇ ನಿಮಗೆ ಈ ದೇಶದಲ್ಲಿ ಬೇರೆ ಕಡೆ ಉದ್ಯೋಗ ಸಿಗಬಹುದು. ಇಲ್ಲದಿದ್ದರೆ ಕೆಲಸ ಗಿಟ್ಟಿಸಿಕೊಳ್ಳುವುದು ಬಹಳ ಕಷ್ಟದ ವಿಷಯ. ವಿಸಿಟ್’ನಲ್ಲಿ ಉದ್ಯೋಗ ಅರಸಿ ಹೋಗುವವರು ಈ ವಿಷಯವನ್ನು ಅರಿತುಕೊಳ್ಳುವುದು ಉತ್ತಮ.

Photo:Facebook

ಬಹರೈನ್ ಹೆಸರು ಅರೆಬಿಕ್ ಪದ ಅಲ್-ಬಹರೈನ್’ನಿಂದ ಬಂದಿದ್ದು, ಇದರ ಅರ್ಥ “ಎರಡು ಸಮುದ್ರಗಳು” ಎಂದು. ಈ ಹಿನ್ನೆಲೆಯಲ್ಲಿಯೇ ಈ ದ್ವೀಪ ರಾಷ್ಟ್ರವನ್ನು ಬಹರೈನ್ ಎಂದು ಕರೆಯುತ್ತಾರೆ. ದೇಶದ ಅಧಿಕೃತ ಹೆಸರು ಕಿಂಗ್ಡಮ್ ಆಫ್ ಬಹರೈನ್.

ಇದರ ಹತ್ತಿರದ ನೆರೆಹೊರೆಯವರು ವಾಯುವ್ಯಕ್ಕೆ ಕುವೈತ್ ಮತ್ತು ಇರಾಕ್, ಉತ್ತರಕ್ಕೆ ಇರಾನ್, ಆಗ್ನೇಯಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕತಾರ್ ಮತ್ತು ದಕ್ಷಿಣ ಮತ್ತು ಪಶ್ಚಿಮಕ್ಕೆ ಸೌದಿ ಅರೇಬಿಯಾ ಇದೆ.

ಬಹರೈನ್’ನ ರಾಜಧಾನಿ ಮನಾಮ. ಇದು ದೇಶದ ಅತೀ ದೊಡ್ಡ ನಗರವು ಆಗಿದೆ. ಅರಬ್ ರಾಷ್ಟ್ರಗಳಲ್ಲಿ ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಬಹರೈನ್ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸೇರಲು ಬಹುಮುಖ್ಯ ಕಾರಣ ಇಲ್ಲಿ ಸಿಗುವ ತೈಲ ಹಾಗು ನೈಸರ್ಗಿಕ ಅನಿಲ. ಜೊತೆಗೆ ಈಗ ಮೀನುಗಳ ರಫ್ತು, ಪ್ರವಾಸೋದ್ಯಮ ಕೂಡ ಆರ್ಥಿಕ ಬೆಳವಣಿಗೆಗೆ ಸಾಥ್ ನೀಡುತ್ತಿದೆ.

2004ರಲ್ಲಿ ಬಹರೈನ್’ನಲ್ಲಿ 169.5 ಮೀಟರ್ ಉದ್ದ, 97.1 ಮೀಟರ್ ಅಗಲವನ್ನು ಹೊಂದಿರುವ ಅತೀ ದೊಡ್ಡ ಧ್ವಜವನ್ನು ನಿರ್ಮಾಣ ಮಾಡಿ ಹಾರಿಸುವ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ನಲ್ಲಿ ದಾಖಲು ಮಾಡಲಾಗಿದೆ.

ಬಹರೈನ್’ನಲ್ಲಿ ಅತೀ ಹೆಚ್ಚು ಶಿಯಾ ಮುಸ್ಲಿಮರಿದ್ದರೂ, ಆಳ್ವಿಕೆ ಸುನ್ನಿ ಮುಸ್ಲಿಮರದ್ದೇ. ಇಲ್ಲಿನ ನಿವಾಸಿಗಳನ್ನು ‘ಬಹ್ರೇನಿಗಳು’ ಎಂದು ಕರೆಯಲಾಗುತ್ತದೆ. ಇಲ್ಲಿ ಭಾರತ ಮೂಲದ ಜನರೂ ಕೂಡ ಪೊಲೀಸ್, ಸೇರಿದಂತೆ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತೈಲ ಕಂಡು ಹಿಡಿದ ಮೊದಲ ದೇಶ ಬಹರೈನ್
ಅರಬ್ ದೇಶಗಳಲ್ಲಿಯೇ ಮೊದಲು ತೈಲ ಪರಿಶೋಧನೆ ಮಾಡಿದ ಖ್ಯಾತಿಯು ಬಹರೈನಿಗೆ ಸಲ್ಲುತ್ತದೆ. ಇಲ್ಲಿ 1932ರಲ್ಲಿ ತೈಲ ನಿಕ್ಷೇಪಗಳನ್ನು ಕಂಡುಹಿಡಿಯಲಾಗಿದೆ. ಅನಂತರ ಇತರ ಅರಬ್ ದೇಶಗಳಲ್ಲಿ ತೈಲ ನಿಕ್ಷೇಪಗಳು ಪತ್ತೆಯಾದವು.

Photo:PTI

ದಾಖಲೆಯ ‘ಕಿಂಗ್ ಫಹದ್’ ಸೇತುವೆ
ಸೌದಿ ಅರೇಬಿಯಾವನ್ನು ಬಹರೈನ್’ನೊಂದಿಗೆ ಸಂಪರ್ಕಿಸುವ ಕಿಂಗ್ ಫಹದ್ ಕಾಸ್‌ವೇ(King Fahd Causeway) ಸೇತುವೆಯು 25 ಕಿಮೀ ಉದ್ದ ಮತ್ತು 23.3 ಮೀಟರ್ ಅಗಲವಿದೆ. ಇದನ್ನು 1987ರಲ್ಲಿ ನಿರ್ಮಿಸಲಾಗಿದೆ. ಈ ಸೇತುವೆಯು ಸಮುದ್ರದ ಮಧ್ಯೆ ನಿರ್ಮಿಸಲಾಗಿದ್ದು, ಎರಡು ದೇಶಗಳ ಸಂಪರ್ಕ ಸೇತುವೆಯಾಗಿದೆ. ಇದರಲ್ಲಿ ಪ್ರಯಾಣಿಸುವುದೇ ಒಂದು ಖುಷಿ.

Photo:zamzam

‘ಟ್ರೀ ಆಫ್ ಲೈಫ್’ ಎಂಬ ಅದ್ಭುತ ಮರ
ಮಳೆಯೇ ಇಲ್ಲದ ಈ ದೇಶದಲ್ಲಿ ‘ಟ್ರೀ ಆಫ್ ಲೈಫ್'(The Tree of Life) ಎನ್ನುವ 400 ವರ್ಷಗಳಿಗೂ ಹಳೆಯ ವಿಶಿಷ್ಟ ಮರವೊಂದು ಮರುಭೂಮಿಯ ಮಧ್ಯೆ ಇನ್ನೂ ಜೀವಂತವಾಗಿದೆ. ನೀರಿನ ಸೆಳೆಯೇ ಇಲ್ಲದ ಮರುಭೂಮಿಯಲ್ಲಿ ಈ ಮರ ಇನ್ನೂ ತನ್ನ ರಂಬೆ-ಕೊಂಬೆಗಳನ್ನು ವಿಸ್ತರಿಸುತ್ತಲೇ ಇರುವುದು ಒಂದು ದೊಡ್ಡ ವಿಸ್ಮಯವೇ ಸರಿ. ಈ ಮರವು ಮರುಭೂಮಿಯಿಂದಲೇ ಸುತ್ತುವರಿದಿರುವ ಜೆಬೆಲ್ ದುಖಾನ್ ಎಂಬ ಸ್ಥಳದಲ್ಲಿದೆ. ಈ ಮರವನ್ನು ಸ್ಥಳೀಯವಾಗಿ ಶಜರತ್-ಅಲ್-ಹಯಾತ್ ಎಂದು ಕರೆಯಲಾಗುತ್ತದೆ. ಇದನ್ನು ನೋಡಲೆಂದೇ ದಿನನಿತ್ಯ ಮರುಭೂಮಿಯ ಮಧ್ಯೆ ಪ್ರವಾಸಿಗರು ಸಾಲುಗಟ್ಟಿ ಬರುತ್ತಾರೆ. ಫೋಟೋ ಕ್ಲಿಕ್ಕಿಸುವ ಜೊತೆಗೆ ನೆನಪಿಗಾಗಿ ಮರದ ಎಲೆಗಳನ್ನು ಕೊಂಡೋಗುತ್ತಾರೆ.

Photo:Facebook

ಬಹರೈನ್ ವರ್ಲ್ಡ್ ಟ್ರೇಡ್ ಸೆಂಟರ್ ಗಗನ ಚುಂಬಿ ಕಟ್ಟಡ
ಬಹರೈನ್ ವರ್ಲ್ಡ್ ಟ್ರೇಡ್ ಸೆಂಟರ್ ತನ್ನ ವಿನ್ಯಾಸದಲ್ಲಿ ವಿಂಡ್ ಟರ್ಬೈನ್‌(ಪವನ ವಿದ್ಯುತ್ ಶಕ್ತಿ)ಗಳನ್ನು ಸಂಯೋಜಿಸಿರುವ ವಿಶ್ವದ ಮೊದಲ ಗಗನಚುಂಬಿ ಕಟ್ಟಡವಾಗಿದೆ. ಇದು ಮನಾಮ ನಗರದಲ್ಲಿದೆ. ಇದರ ಪ್ರತಿಯೊಂದು ಟರ್ಬೈನ್’ಗಳು ಕೂಡ 29 ಮೀಟರ್ ವ್ಯಾಸವನ್ನು ಹೊಂದಿದ್ದು, 675 ಕಿಲೋ ವ್ಯಾಟ್ ಗಾಳಿ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಇದು ಜನರ ಗಮನ ಸೆಳೆಯುತ್ತೆ.

Photo: Facebook

ಅಲ್ ಫತೇಹ್ ಭವ್ಯ ಮಸೀದಿ
ಮನಾಮದಲ್ಲಿರುವ ಅಲ್ ಫತೇಹ್ ಭವ್ಯ ಮಸೀದಿ (Al Fateh Grand Mosque) ಬಹರೈನ್’ನ ಅತೀ ದೊಡ್ಡ ಮಸೀದಿಯಾಗಿದ್ದು, ಜಗತ್ತಿನ ಹಲವು ಸುಂದರವಾದ ದೊಡ್ಡ ಮಸೀದಿಗಳಲ್ಲಿ ಒಂದಾಗಿದೆ. ಇದನ್ನು 1988ರಲ್ಲಿ ದಿವಂಗತ ಶೇಖ್ ಇಸಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರ ಆಶ್ರಯದಲ್ಲಿ ನಿರ್ಮಿಸಲಾಯಿತು. ಅಹ್ಮದ್ ಅಲ್ ಫತೇಹ್ ಅವರ ಹೆಸರನ್ನು ಈ ಮಸೀದಿಗೆ ಇಡಲಾಗಿದೆ.

Photo:Facebook

ಮಸೀದಿಯು 6,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಈ ಮಸೀದಿಯಲ್ಲಿ 7 ಸಾವಿರ ಮಂದಿಗೆ ನಮಾಜ್ ಪೂರೈಸಲು ಸ್ಥಳಾವಕಾಶವಿದೆ. ವಾರದ 6 ದಿನಗಳು ಪ್ರವಾಸಿಗಳಿಗಾಗಿ ತೆರೆದಿಡಲಾಗುತ್ತೆ. ಇಲ್ಲಿ ಯಾವುದೇ ಧರ್ಮೀಯರು ಕೂಡ ಮಸೀದಿಯನ್ನು ಸಂದರ್ಶಿಸಬಹುದಾಗಿದೆ. ಜೊತೆಗೆ ಬೇರೆ ಬೇರೆ ಭಾಷೆಗಳ ಮೂಲಕ ಈ ಮಸೀದಿ ಬಗ್ಗೆ ಪ್ರವಾಸಿಗಳಿಗೆ ಮಾಹಿತಿ ನೀಡುತ್ತಾರೆ ಇಲ್ಲಿನ ಗೈಡ್’ಗಳು.

ಭವ್ಯವಾದ ಬಹರೈನ್ ಕೋಟೆ
ಮನಾಮಾದ ಪಶ್ಚಿಮಕ್ಕೆ 10 ನಿಮಿಷಗಳ ಕಾಲ ವಾಹನದ ಮೂಲಕ ಪ್ರಯಾಣಿಸಿದರೆ ಅತೀ ಪುರಾತನ ಭವ್ಯವಾದ ಬಹರೈನ್ ಕೋಟೆ(Qalat al-Bahrain) ನಮ್ಮನ್ನು ದಿಟ್ಟಿಸಿ ನೋಡುತ್ತೆ.16 ನೇ ಶತಮಾನದಲ್ಲಿ ಪೋರ್ಚುಗೀಸರು ನಿರ್ಮಿಸಿದರೆನ್ನಲಾಗುವ ಈ ಕೋಟೆಯು ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಭಾಗವಾಗಿದೆ.

Photo:Facebook

‘ಡೈವ್ ಬಹ್ರೇನ್’ ವಿಶ್ವದಲ್ಲಿಯೇ ಅತೀ ದೊಡ್ಡ ನೀರೊಳಗಿನ ಥೀಮ್ ಪಾರ್ಕ್
ವಿಶ್ವದ ಅತಿ ದೊಡ್ಡ ನೀರೊಳಗಿನ ಥೀಮ್ ಪಾರ್ಕ್ ಎಂಬ ಖ್ಯಾತಿಗೆ ‘ಡೈವ್ ಬಹರೈನ್’ ಹೆಸರುವಾಸಿಯಾಗಿದೆ. ಡೈವ್ ಬಹರೈನ್ 1 ಲಕ್ಷ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ವಿಶ್ವದ ಅತಿದೊಡ್ಡ ನೀರೊಳಗಿನ ಥೀಮ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದರಲ್ಲಿ 70 ಮೀಟರ್ ಮುಳುಗಿರುವ ಬೋಯಿಂಗ್ 747 ವಿಮಾನವು ಸೇರಿಕೊಂಡಿದೆ. ಥೀಮ್ ಪಾರ್ಕ್ ನ ಉದ್ದೇಶದಿಂದಲೇ ಈ ವಿಮಾನವನ್ನು ನೀರಿನೊಳಗೆ ಮುಳುಗಿಸಲಾಗಿದೆ.

Photo:Dive-Bahrain-architecturaldigest

ಬಹರೈನ್ನಲ್ಲಿ ಹಲವು ಬೀಚ್’ಗಳಿವೆ. ಹೆಚ್ಚು ಜನ ಬೇಸಿಗೆಯ ಸಮಯದಲ್ಲಿ ಸಮುದ್ರದ ಕಿನಾರೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಇಲ್ಲಿಗೆ ಪ್ರವಾಸಕ್ಕೆಂದು ಬಂದರೆ ಈ ಬೀಚ್’ಗಳಿಗೆ ಭೇಟಿ ಕೊಡಲೇ ಬೇಕು. ವಿಶೇಷ ದ್ವೀಪ ಸಾಹಸಕ್ಕಾಗಿ ಮಾನವ ನಿರ್ಮಿತ ದ್ವೀಪಗಳ ಸಮೂಹವಾದ ‘ಅಂವಾಜ್ ದ್ವೀಪ’ಗಳಿಗೆ ಭೇಟಿ ನೀಡಬಹುದು.

Photo:Bahrainevisa

ಇತರ ಪ್ರವಾಸಿ ಕೇಂದ್ರಗಳು…
ಮನಾಮಾದಲ್ಲಿರುವ ‘ಬಹರೈನ್ ನ್ಯಾಷನಲ್ ಮ್ಯೂಸಿಯಂ’, ಹೂರಾದಲ್ಲಿರುವ ಅತ್ಯಂತ ಹಳೇಯ ಇಸ್ಲಾಮಿಕ್ ವಸ್ತುಸಂಗ್ರಹಾಲಯ ‘ಬೈತ್ ಅಲ್ ಕುರಾನ್’, ರಿಫಾ ಕೋಟೆ, ಬಾಬ್ ಅಲ್ ಬಹರೈನ್, ವಿವಿಧ ಬಗೆಯ ಪ್ರಾಣಿ-ಪಕ್ಷಿಗಳಿರುವ ಅಲ್ ಅರೀನ್ ವನ್ಯಜೀವಿ ಉದ್ಯಾನ, ದಿಲ್ಮುನ್ ವಾಟರ್ ಪಾರ್ಕ್, ಅರದ್ ಕೋಟೆ, ವಾದಿ ಅಲ್-ಸೈಲ್, ಶೇಖ್ ಈಸ ಬಿನ್ ಸಲ್ಮಾನ್ ಅಲ್ ಖಲೀಫಾ ಸೇತುವೆ, 2004ರಿಂದ ಫಾರ್ಮುಲಾ ಒನ್ ರೇಸ್‌ಗಳಿಗೆ ಹೆಸರುವಾಸಿಯಾದ ಬಹ್ರೇನ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್, ಮನಾಮದಲ್ಲಿರುವ ಹಲವು ಗಗನಚುಂಬಿ ಕಟ್ಟಡಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಇಲ್ಲಿ ಒಂಟೆಯ ಮಾಂಸದಿಂದ ಮಾಡಿದ ಬರ್ಗರ್ ತುಂಬಾನೇ ಪ್ರಸಿದ್ಧಿ. ಜೊತೆಗೆ ಇಲ್ಲಿನ ಪ್ರಾಚೀನ ಕಾಲದ ‘ಮುಹಮ್ಮರ್’ ಎಂಬ ಸಿಹಿ ತಿನಸು ನಾಲಗೆಗೆ ಒಳ್ಳೆಯ ರುಚಿ ಕೊಡುತ್ತೆ.

Hot this week

Prakash Godwin Pinto elected president of KCWA for 2025-27

Kuwait: The Kuwait Canara Welfare Association (KCWA) elected its...

AATA organize Tulu Script learning workshop in America

The All America Tulu Association (AATA), a nonprofit organization...

ಯುಎಇ, ಸೌದಿ, ಬಹರೈನ್, ಖತರ್, ಕುವೈತ್’ನಲ್ಲಿ ಸಂಭ್ರಮದ ಈದ್‌ ಉಲ್‌ ಫಿತ್ರ್ ಆಚರಣೆ

ದುಬೈ: ಯುಎಇ, ಸೌದಿ ಅರೇಬಿಯಾ, ಬಹರೈನ್, ಖತರ್, ಕುವೈತ್ ಸೇರಿದಂತೆ ಗಲ್ಫ್'ನಲ್ಲಿ...

ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ರವಿವಾರ ಈದ್‌ ಉಲ್‌ ಫಿತರ್‌ ಆಚರಣೆ

ರಿಯಾದ್‌ : ಸೌದಿ ಅರೇಬಿಯಾದಲ್ಲಿ ಶನಿವಾರ ಸಂಜೆ ಶವ್ವಾಲ್‌ ಚಂದ್ರ ದರ್ಶನವಾದ...

Related Articles

Popular Categories