ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿಶೇಷ ಶಿಫಾರಸಿನ ಮೇರೆಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕನ್ನಡ ಸಂಘ ಬಹರೈನ್‌ಗೆ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಅಧಿಕೃತವಾಗಿ ಅನುಮೋದಿಸಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನ ಪರಿಷತ್ತಿನ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ, ಅನಿವಾಸಿ ಭಾರತೀಯ ಸಮಿತಿ – ಕರ್ನಾಟಕ ಇದರ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ಉಪಸ್ಥಿತಿಯಲ್ಲಿ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರು ಮುಖ್ಯಮಂತ್ರಿಗಳಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದರು.
ಶುಕ್ರವಾರ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರದ ಅನುದಾನ ನಿಧಿಯಿಂದ ಅನುದಾನವನ್ನು ಬಿಡುಗಡೆ ಮಾಡಲು ಅನುಮತಿ ನೀಡಿದ್ದಾರೆ.

ಇತ್ತೀಚೆಗೆ ಬಹರೈನ್ ಕನ್ನಡ ಸಂಘ ಕಟ್ಟಡ ಸಮುಚ್ಚಯ ‘ವಿದೇಶದಲ್ಲಿ ನಿರ್ಮಿತ ಪ್ರಥಮ ಕನ್ನಡ ಭವನ’ವನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಂಘದ ಮೂಲಭೂತ ಅಗತ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಧನಸಹಾಯ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದರು.
ಮುಖ್ಯಮಂತ್ರಿಗಳ ಈ ಅನುಮೋದನೆಯೊಂದಿಗೆ, ಕನ್ನಡ ಸಂಘ ಬಹರೈನ್ ತನ್ನ ಮೂಲಸೌಕರ್ಯ, ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಮಹತ್ವದ ನೆರವನ್ನು ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರು ವೈಯಕ್ತಿಕವಾಗಿ ಹಾಗೂ ಬಹರೈನ್ ಕನ್ನಡಿಗರ ಪರವಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.