ದುಬೈ: ಯುಎಇಯ ಕನ್ನಡಿಗರ ಕೂಟ ದುಬೈಯ ಮುಂದಿನ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಅಧ್ಯಕ್ಷ ಅರುಣ್ ಕುಮಾರ್ ಎಂಕೆ ನೇತೃತ್ವದಲ್ಲಿ ಇತ್ತೀಚಿಗೆ ಸಮಿತಿ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ 2025-26ರ ಸಾಲಿನ ಇತರ ಸಾಮಾಜಿಕ ಕಾರ್ಯಗಳನ್ನು ಅನುಸರಿಸಿ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಅಧಿಕೃತಗೊಳಿಸಲಾಯಿತು. ಮೇ 31ರಂದು ಸಂಗೀತ ಸೌರಭ ಮತ್ತು ನವೆಂಬರ್ 8ರಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸುವುದಾಗಿ ಸಭೆಯಲ್ಲಿ ಒಕ್ಕೊರಳಿನಿಂದ ನಿರ್ಧಾರ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಅಧ್ಯಕ್ಷ ಅರುಣ್ ಕುಮಾರ್ ಎಂಕೆ, ಮುಂಬರುವ ಕಾರ್ಯಕ್ರಮಗಳಿಗೆ ಎಲ್ಲರೂ ಕೈಜೋಡಿಸಬೇಕು. ಈ ಮಹತ್ವದ ಸಾಂಸ್ಕೃತಿಕ ಆಚರಣೆಗಳನ್ನು ದುಬೈನಲ್ಲಿರುವ ನಮ್ಮ ಸಮುದಾಯದ ಒಟ್ಟುಗೂಡಿಕೆಯ ಮೂಲಕ ಆಚರಿಸಬೇಕು. ಈ ಕಾರ್ಯಕ್ರಮಗಳು ನಮ್ಮ ಪರಂಪರೆಯನ್ನು ಪ್ರದರ್ಶಿಸುವುದು ಮಾತ್ರವಲ್ಲದೆ ನಮ್ಮ ಕನ್ನಡಿಗ ಕುಟುಂಬದೊಳಗಿನ ಬಾಂಧವ್ಯವನ್ನು ಬಲಪಡಿಸುತ್ತದೆ. ದುಬೈ ಮತ್ತು UAE ಯುಎಇಯಲ್ಲಿರುವ ಅನಿವಾಸಿ ಕನ್ನಡಿಗರ ಏಕತೆಯ ಶಕ್ತಿಯನ್ನು ತೋರಿಸಲು ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿದರು.
ಅಲ್ಲದೆ ರಕ್ತದಾನ ಶಿಬಿರ, ಯುಗಾದಿ ಆಚರಣೆ, ಇಫ್ತಾರ್ ಆಚರಣೆ, ದುಬೈನ ಕಾರ್ಮಿಕ ಶಿಬಿರದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ, ಉಚಿತ ಆರೋಗ್ಯ ತಪಾಸಣೆ, ಹುಟ್ಟೂರ ಸನ್ಮಾನ (ತವರು ಊರಿನಲ್ಲಿ ಸಾಧಕರನ್ನು ಸನ್ಮಾನಿಸುವುದು), ಕ್ರೀಡಾ ದಿನಾಚರಣೆಯಂತಹ ಇತರ ಸಾಮಾಜಿಕ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ವಿನೀತ್ ರಾಜ್, ಮುಖ್ಯ ಸಲಹೆಗಾರ ಸದನ್ ದಾಸ್, ಸಲಹೆಗಾರರಾದ ಉಮಾ ವಿದ್ಯಾಧರ್, ವೀರೇಂದ್ರ ಬಾಬು, ಇಬ್ರಾಹಿಂ ಖಲೀಲ್, ಛಾಯಾ ಕೃಷ್ಣ ಮೂರ್ತಿ, ಮಂಜುನಾಥ್ ರಾಜನ್, ಪ್ರಧಾನ ಕಾರ್ಯದರ್ಶಿ ಚೇತನ್ ಸುಬ್ರಹ್ಮಣ್ಯ, ಹಿರಿಯ ಸದಸ್ಯ ಮತ್ತು ಗಲ್ಫ್ ಮೂವೀಸ್ ಸಂಸ್ಥಾಪಕ ದೀಪಕ್ ಸೋಮಶೇಖರ್, ಸಮಿತಿಯ ಸದಸ್ಯರಾದ ಶ್ರೀನಿವಾಸ್ ಅರಸ್ ಮತ್ತು ವೆಂಕಟರಮಣ ಕಾಮತ್ ಉಪಸ್ಥಿತರಿದ್ದರು.