ಅಬುಧಾಬಿ: ಕೆಸಿಎಫ್ ಯುಎಇ ರಾಷ್ಟ್ರೀಯ ಮಟ್ಟದ 6ನೇ ಆವೃತಿಯ ಪ್ರತಿಭೋತ್ಸವ-2025 ಅಬುಧಾಬಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಭವ್ಯ ಸಂಭ್ರಮದಲ್ಲಿ ಯುಎಇಯ 8 ವಲಯಗಳಿಂದ ಒಟ್ಟು 300ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿ, 90ಕ್ಕೂ ಹೆಚ್ಚು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತೀವ್ರ ಪೈಪೋಟಿ ನಡೆಸಿದರು.
ಸ್ಪರ್ಧೆಯ ರೋಮಾಂಚಕ ಘಟ್ಟದಲ್ಲಿ ಅಬುಧಾಬಿ ವಲಯ ಮತ್ತೆ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ದುಬೈ ಸೌತ್ ವಲಯ ರನ್ನರ್-ಅಪ್ ಪಟ್ಟವನ್ನು ಗಳಿಸಿತು. ಭಾಗವಹಿಸಿದ ಎಲ್ಲ ಸ್ಪರ್ಧಿಗಳು ಕರ್ನಾಟಕದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಉತ್ಸಾಹದಿಂದ ಪ್ರದರ್ಶಿಸಿದರು.



ಈ ಪ್ರತಿಭೋತ್ಸವದಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ಅಡುಗೆ ಸ್ಪರ್ಧೆ ಹಾಗೂ ಅಪರೂಪದ ತ್ಯಾಜ್ಯದಿಂದ ತಯಾರಿಸಿದ ವಸ್ತುಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಪ್ರತಿಭೋತ್ಸವದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಹಲವು ಗಣ್ಯ ವ್ಯಕ್ತಿಗಳು, ಬುದ್ಧಿಜೀವಿಗಳು, ಉದ್ಯಮಿಗಳು ಮತ್ತು ಕೆಸಿಎಫ್ ಮುಖಂಡರು ಉಪಸ್ಥಿತರಿದ್ದರು. ಈ ಬಾರಿ ಕೆಸಿಎಫ್ ಯುಎಇ ಯ ಮೊದಲ “ಕೆಸಿಎಫ್ ಬಿಸಿನೆಸ್ ಎಕ್ಸೆಲೆನ್ಸಿ ಅವಾರ್ಡ್” ಅನ್ನು ಘೋಷಿಸಲಾಯಿತು. ಈ ಗೌರವಯುತ ಪ್ರಶಸ್ತಿಯನ್ನು ಭಾರತೀಯ ವಲಸಿಗ ಉದ್ಯಮಿ, ಬನಿಯಾಸ್ ಸ್ಪೈಕ್ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕುಟ್ಟೂರ್ ಅವರಿಗೆ ನೀಡಲಾಯಿತು. ಅವರು ಉದ್ಯಮದಲ್ಲಿ ಅಪಾರ ಯಶಸ್ಸು ಸಾಧಿಸುವ ಮೂಲಕ ಅನೇಕರು ಸ್ಫೂರ್ತಿ ಪಡೆಯುವಂತೆ ಮಾಡಿದ್ದಾರೆ.





ಡಾ. ಅಬುಬಕ್ಕರ್ (ಸೇಫ್ಲೈನ್ ಗ್ರೂಪ್ ಆಫ್ ಕಂಪನೀಸ್) ಮತ್ತು ಇಕ್ಬಾಲ್ ಸಿದ್ಧಕಟ್ಟೆ ಅವರನ್ನು ಸಾಂಸ್ಕೃತಿಕ ಮತ್ತು ವ್ಯವಹಾರಿಕ ಕಾರ್ಯಕ್ರಮಗಳಿಗೆ ನೀಡಿದ ನಿರಂತರ ಬೆಂಬಲಕ್ಕಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭವನ್ನು ಸಯ್ಯದ್ ತ್ವಾಹಾ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಗಿತ್ತು. ಬ್ರೈಟ್ ಇಬ್ರಾಹಿಂ ಸ್ವಾಗತ ಭಾಷಣ ಮಾಡಿದರು. ಇಬ್ರಾಹಿಂ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ರಫೀಕ್ ಬಾವಾ, ಎಂಜಿನಿಯರ್ ನೂರುದ್ದೀನ್, ಪಿಎಂಎಚ್ ಈಶ್ವರಮಂಗಳಂ, ಹಮೀದ್ ಸಅದಿ ಈಶ್ವರಮಂಗಳಂ, ಝೈನುದ್ದೀನ್, ಲತೀಫ್ ಕಕ್ಕಿಂಜೆ, ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಅಧ್ಯಕ್ಷ ಹಿದಾಯತ್ ಅಡ್ಡೂರು, ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸದಸ್ಯ ಅಶ್ರಫ್ ಷಾ ಮಾಂತೂರ್ ಸೇರಿದಂತೆ ಹಲವಾರು ಗಣ್ಯರು ಹಾಗೂ ಕೆಸಿಎಫ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಹಕೀಮ್ ತುರ್ಕಾಲಿಕೆ ವಂದಿಸಿದರು.






