ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಯುಎಇ ರಾಷ್ಟ್ರೀಯ ಸಮಿತಿ ಆಯೋಜಿಸುತ್ತಿರುವಂತಹ ಆರನೇ ಆವೃತಿಯ ನ್ಯಾಷನಲ್ ಪ್ರತಿಭೋತ್ಸವ ಫೆಬ್ರವರಿ 2 ರವಿವಾರ ಬೆಳಗ್ಗೆ 8ರಿಂದ ಹಲವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅಬುಧಾಬಿಯ ಅಲ್ ಶಮ್’ಖಹ್ ವೇಲ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ.
ಈ ಬಗ್ಗೆ ಕೆಸಿಎಫ್ ಯುಎಇ ನಾಯಕರು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಐದು ವೇದಿಕೆಗಳಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಯುಎಇ ಯ 8 ಝೋನ್ ಗಳಿಂದ ಆಯ್ಕೆಯಾದ 400ಕ್ಕೂ ಅಧಿಕ ಕನ್ನಡಿಗ ಪ್ರತಿಭೆಗಳು 88ರಷ್ಟು ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣೆ ಮಾಡಲಿದ್ದಾರೆ. ಕೆಸಿಎಫ್ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು 2000ದಷ್ಟು ಕುಟುಂಬಗಳು ಪಾಲ್ಗೊಳ್ಳಲಿವೆ ಎಂದಿದ್ದಾರೆ.
ಬೆಳಗ್ಗೆ 8 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪ್ರತಿಭೋತ್ಸವ ಸ್ವಾಗತ ಸಮಿತಿ ಚೇರ್ಮೆನ್ ಇಬ್ರಾಹಿಂ ಬ್ರೈಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ಕಾರ್ಯಕ್ರಮವನ್ನು ಉದ್ಘಾಟನೆಗೈಯ್ಯಲಿದ್ದಾರೆ. ಸ್ವಾಗತ ಸಮಿತಿ ಕನ್ವಿನರ್ ಹಕೀಂ ತುರ್ಕಳಿಕೆ ಸ್ವಾಗತ ಭಾಷಣ ಮಾಡಲಿದ್ದು, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ನಾಯಕರು ಉಪಸ್ಥಿತರಿರಲಿದ್ದಾರೆ.
ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಇಬ್ರಾಹಿಂ ಸಖಾಫಿ ಕೆದುಂಬಾಡಿರವರ ಅಧ್ಯಕ್ಷತೆಯಲ್ಲಿ ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭಾಗವಹಿಸಲಿದ್ದಾರೆ. ಕೆಸಿಎಫ್ ಯುಎಇ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಬ್ರೈಟ್ ಸ್ವಾಗತ ಭಾಷಣ ನಿರ್ವಹಿಸಲಿದ್ದಾರೆ. ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಪಿಎಂಹೆಚ್ ಅಬ್ದುಲ್ ಹಮೀದ್ ಈಶ್ವರಮಂಗಳ ಉದ್ಘಾಟನೆ ಗೈಯ್ಯಲಿದ್ದಾರೆ. ರಜಬ್ ಮುಹಮ್ಮದ್ ಉಚ್ಚಿಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಬನಿಯಾಸ್ ಸ್ಪೈಕ್ ಗ್ರೂಪ್ ಆಫ್ ಕಂಪನೀಸ್ ಇದರ ಮಾಲಕರಾದ ಅಬ್ದುಲ್ ರಹ್ಮಾನ್ ಹಾಜಿಯವರಿಗೆ ಕೆಸಿಎಫ್ ಯುಎಇ ಮೊದಲ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ ನ್ನು ಪ್ರದಾನಿಸಲಿದೆ.
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಅಬ್ದುಲ್ ರಹ್ಮಾನ್ ಹಾಜಿ ಬನಿಯಾಸ್ ಸ್ಪೈಕ್, ಅಬೂಬಕರ್ ಹಾಜಿ ಸೇಫ್ ಲೈನ್, ಅಬ್ದುಲ್ ಸಲಾಂ ಪಾಪಿನಿಶೇರಿ, ಕೆಸಿಎಫ್ ಯುಎಇ ಕೋಶಾಧಿಕಾರಿ ಝೈನುದ್ದೀನ್ ಹಾಜಿ ಬೆಳ್ಳಾರೆ ಸೇರಿದಂತೆ ಹಲವು ಖ್ಯಾತ ಉದ್ಯಮಿಗಳು, ಸಾಂಘಿಕ ನಾಯಕರುಗಳು, ಸಾಮಾಜಿಕ ನೇತಾರರುಗಳು ಭಾಗವಹಿಸಲಿದ್ದಾರೆ.