ಅಮೆರಿಕದ ಮಿಚಿಗನ್ ರಾಜ್ಯದ ಡೆಟ್ರಾಯ್ಟ್ ಸಿಟಿಯಲ್ಲಿ ವಕೀಲ ವೃತ್ತಿ ಮಾಡಿಕೊಂಡಿರುವ ಡಾ.ಅಮರನಾಥ ಗೌಡ ಅವರು, ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮೊತಕ್ಕಪಲ್ಲಿಯವರು.
ಅಮೆರಿಕದಲ್ಲಿ ಹಲವಾರು ಕನ್ನಡಪರ ಸಂಘಟನೆಗಳ ಒಕ್ಕೂಟವಾಗಿರುವ ‘ಅಕ್ಕ’(Association of Kannada Kootas of America-ಅಮೆರಿಕ ಕನ್ನಡ ಸಂಘಟನೆಗಳ ಒಕ್ಕೂಟ)ದ ಚೇರ್‌ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೊರನಾಡಿನ ಅತಿ ದೊಡ್ಡ ಕನ್ನಡ ಸಂಘಟನೆ ಎಂಬ ಖ್ಯಾತಿಗೂ ‘ಅಕ್ಕ’ ಒಳಪಟ್ಟಿದೆ. ಡೆಟ್ರಾಯ್ಟ್‌ನಲ್ಲಿ ನಡೆದ ಪ್ರಥಮ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ’ ನಂತರ ನಿರಂತರವಾಗಿ ಎರಡು ವರ್ಷಕ್ಕೆ ಒಮ್ಮೆಯಂತೆ, ವಿಶ್ವವೇ ಅಚ್ಚರಿಪಡುವಷ್ಟು ಅಮೆರಿಕದ ಪ್ರಮುಖ ನಗರಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಒಟ್ಟು 12 ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಿರುವ ಕೀರ್ತಿಗೆ ‘ಅಕ್ಕ’ ಪಾತ್ರವಾಗಿದೆ. 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ 2024 ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್‌ಮಂಡ್ ನಗರದಲ್ಲಿ ಆ.30ರಿಂದ ಸೆ.1ರವರೆಗೆ ಅದ್ದೂರಿಯಾಗಿ ನಡೆದಿದೆ. ಡಾ.ಅಮರನಾಥ ಗೌಡ ಅವರ ಜೊತೆ ನಡೆಸಿದ ಸಂದರ್ಶನದ ಬರಹ ರೂಪ ಇಲ್ಲಿದೆ.
► ಸರ್, ಇವತ್ತು ‘ಅಕ್ಕ’ ಸಂಸ್ಥೆ ಕರ್ನಾಟಕ ಮತ್ತು ಅಮೆರಿಕ ನಡುವಿನ ರಾಯಭಾರಿಯಂತೆ ಕೆಲಸ ಮಾಡುತ್ತಿದೆ. ಈ ಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು? ಸ್ಥಾಪಿಸಲು ನಿರ್ಧರಿಸಿದ ಹಿನ್ನೆಲೆಯನ್ನು ಸ್ವಲ್ಪ ಹೇಳುತ್ತೀರಾ?
ಡಾ.ಅಮರನಾಥ ಗೌಡ: ಅಮೆರಿಕದಲ್ಲಿ ‘ಅಕ್ಕ’ ಸಂಸ್ಥೆಯನ್ನು 1998ರಲ್ಲಿ ಅರಿರೆನಾದ ಫೀನಿಕ್ಸ್ ಎಂಬಲ್ಲಿ ನೋಂದಣಿ ಮಾಡಲಾಯಿತು. ಅದಕ್ಕೂ ಮುಂಚೆ ಅಮೆರಿಕದಲ್ಲಿ ಹತ್ತು ಹಲವು ಕನ್ನಡ ಪರ ಸಂಘಗಳಿದ್ದವು. ಅವು ಬೇರೆ ಬೇರೆ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ನಮಗೊಂದು ಎಲ್ಲರನ್ನು ಒಟ್ಟು ಸೇರಿಸುವ ರಾಷ್ಟ್ರೀಯ ಕನ್ನಡ ಸಂಘ ಆಗಬೇಕೆಂಬ ಹಂಬಲವಿತ್ತು. ಅದಕ್ಕಾಗಿ ನಿರಂತರ ಶ್ರಮವಹಿಸಿ 1998ರಲ್ಲಿ Association of Kannada Kootas of America-ಅಮೆರಿಕ ಕನ್ನಡ ಸಂಘಟನೆಗಳ ಒಕ್ಕೂಟ ‘ಅಕ್ಕ’ವನ್ನು ಹುಟ್ಟು ಹಾಕಿದೆವು.
► ಅಕ್ಕ ಸ್ಥಾಪನೆ ಹಾಗೂ ಪ್ರಾರಂಭದ ದಿನಗಳನ್ನು ಸ್ವಲ್ಪ ನೆನಪಿಸಿಕೊಳ್ಳಬಹುದಾ, ಹೇಗೆ ಸಂಘಟನೆ ಶುರು ಮಾಡಿದಿರಿ?
ಡಾ.ಅಮರನಾಥ ಗೌಡ: ಅಮೆರಿಕದಲ್ಲಿ ವೃತ್ತಿ ಅರಸಿ ಮೊದಲು ಬಂದವರು ವೈದ್ಯಕೀಯ, ಇಂಜಿನಿಯರ್ ವೃತ್ತಿ ಮಾಡಿಕೊಂಡ ಕನ್ನಡಿಗರು. ಅವರೆಲ್ಲ ಉನ್ನತ ದರ್ಜೆಯ ಉದ್ಯೋಗಿಗಳು. ಅವರೆಲ್ಲ ಆಗಾಗ ಒಟ್ಟು ಸೇರಲು, ಕನ್ನಡ ಭಾಷೆ, ಸಂಸ್ಕೃತಿ ಬಗೆಗಿನ ಅವರಿಗಿದ್ದ ಒಲವು, ಇದೆಲ್ಲ ಅವರೆಲ್ಲರನ್ನು ಒಟ್ಟು ಸೇರಿಸುವುದಕ್ಕೆ ಕನ್ನಡಪರ ಸಂಘಟನೆಯ ಅನಿವಾರ್ಯತೆಯನ್ನು ಸೃಷ್ಟಿ ಮಾಡಿತು. ಆಗಲೇ ಅಮೆರಿಕದ ಒಂದೊಂದೇ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳ ಹುಟ್ಟಿಗೆ ಕಾರಣವಾಯಿತು.
ಕನ್ನಡವನ್ನು ಉಳಿಸಿ-ಬೆಳೆಸಬೇಕು ಎಂಬ ಕಾರಣಕ್ಕೆ ಅಮೆರಿಕದಲ್ಲಿ ಮೊದಲು ಡೆಟ್ರಾಯ್ಟ್‌ನಲ್ಲಿ ಆರಂಭವಾಗಿದ್ದೇ ‘ಪಂಪ ಕನ್ನಡ ಕೂಟ’. ಈ ಸಂಘಟನೆಗೆ ಇದೀಗ 50 ವರ್ಷ ತುಂಬಿದೆ. ಆನಂತರ ನ್ಯೂಯಾರ್ಕ್, ವಾಶಿಂಗ್ಟನ್ ಡಿಸಿ, ಚಿಕಾಗೋ ಸೇರಿದಂತೆ ಹಲವು ಕಡೆ ಕನ್ನಡ ಸಂಘಟನೆಗಳು ತಲೆ ಎತ್ತಿದವು. ಈ ಎಲ್ಲ ಸಂಘಟನೆಗಳು ಬಲುದೂರವಿದ್ದ ಕಾರಣ ಅವರನ್ನೆಲ್ಲ ಒಂದೇ ಸೂರಿನಡಿ ತಂದು ಒಟ್ಟು ಸೇರಿಸುವ ರಾಷ್ಟ್ರೀಯ ಕನ್ನಡ ಸಂಘದ ಅವಶ್ಯಕತೆ ಸೃಷ್ಟಿಯಾಯಿತು. ಈ ಬಹುದಿನಗಳ ಕನಸು ಈಡೇರಿದ್ದು 1998ರಲ್ಲಿ. ‘ಅಕ್ಕ’ ಎನ್ನುವ ಹೆಸರಿನೊಂದಿಗೆ ಎಲ್ಲ ಸಂಘಟನೆಗಳನ್ನು ಒಟ್ಟು ಸೇರಿಸಿ ಒಂದೇ ಹೆಸರಿನಲ್ಲಿ ನೋಂದಣಿ ಮಾಡಲಾಯಿತು.
► ಅಕ್ಕ ಸ್ಥಾಪನೆಯ ಹಿಂದಿರುವ ಧ್ಯೇಯೋದ್ದೇಶಗಳು ಏನೇನು?
ಡಾ.ಅಮರನಾಥ ಗೌಡ: ಕನ್ನಡ ಭಾಷಿಕರನ್ನು ಒಂದು ಸೂರಿನಡಿಯಲ್ಲಿ ಸೇರಿಸಿ ಕನ್ನಡ ಸಂಸ್ಕೃತಿ, ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಗೀತ ಹಿರಿಮೆ ಗರಿಮೆಗಳನ್ನು ಮನದಟ್ಟು ಮಾಡಿ, ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸಿ ಪೋಷಿಸುವ, ಸಂರಕ್ಷಿಸುವ ಉದಾತ್ತ ಧ್ಯೇಯವನ್ನು ಇಟ್ಟುಕೊಂಡು ಸ್ಥಾಪಿಸಲ್ಪಟ್ಟ ಸಂಸ್ಕೃತಿಯ ವೇದಿಕೆಯೇ ‘ಅಕ್ಕ’. ಈ ನಿಟ್ಟಿನಲ್ಲಿಯೇ ಇಂದು ಇದು ಕಾರ್ಯಾಚರಿಸುತ್ತಿದೆ.
► ಅಮೆರಿಕದಂತಹ ದೊಡ್ಡ ದೇಶದಲ್ಲಿ ಎಲ್ಲ ಕನ್ನಡಿಗರನ್ನು, ಕನ್ನಡ ಸಂಘಟನೆಗಳನ್ನು ಒಗ್ಗೂಡಿಸುವುದು ಬಹಳ ಸವಾಲಿನ ಕೆಲಸ. ಅದನ್ನು ಹೇಗೆ ಸಾಧಿಸಿದಿರಿ?
ಡಾ.ಅಮರನಾಥ ಗೌಡ: ಭಾರತದಲ್ಲೇ ಹೈದರಾಬಾದ್, ಗುಜರಾತ್, ಲಕ್ನೊ ಸೇರಿದಂತೆ ಹಲವು ಪ್ರದೇಶ, ರಾಜ್ಯಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿದ್ದರೂ ಅಲ್ಲಿ ಕನ್ನಡ ಸಂಘ-ಸಂಘಟನೆಗಳಿಲ್ಲ. ಭಾರತಕ್ಕಿಂತ ಮೂರು ಪಟ್ಟು ಭೂ ವಿಸ್ತೀರ್ಣ ಜಾಸ್ತಿ ಇರುವ ಅಮೆರಿಕದಲ್ಲಿ ಕನ್ನಡಪರ ಸಂಘ-ಕೂಟಗಳನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿನ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಬೇಕಾದರೆ ಹಲವು ಗಂಟೆಗಳು ಬೇಕು. ಜೊತೆಗೆ ಒಬ್ಬರನ್ನೊಬ್ಬರು ಸಂಪರ್ಕಿಸಬೇಕಾದರೆ ಆಗ ಮೊಬೈಲ್ ಕೂಡ ಇರಲಿಲ್ಲ. ಲ್ಯಾಂಡ್ ಲೈನ್ ಫೋನ್ ಮೂಲಕ ಸಂಪರ್ಕಿಸಬೇಕಾದಂತಹ ಸ್ಥಿತಿ. ಇಂಥ ಕಷ್ಟಕರ ಸನ್ನಿವೇಶದಲ್ಲಿಯೂ ಕನ್ನಡ ಭಾಷೆಯ ಮೇಲಿನ ಪ್ರೀತಿ ನಮ್ಮನ್ನೆಲ್ಲ ಒಟ್ಟು ಸೇರಿಸುವಂತೆ ಮಾಡಿತು. ಒಬ್ಬರಿಂದ ಒಬ್ಬರಿಗೆ ಬಾಯಿ ಮಾತಿನ ಮೂಲಕ ಸಂದೇಶಗಳು ರವಾನೆ ಆಗುತ್ತಿದ್ದವು. ಒಬ್ಬರು ಇನ್ನೊಬ್ಬರನ್ನು, ಮತ್ತೊಬ್ಬರನ್ನು ಕಾರ್ಯಕ್ರಮಕ್ಕೆ, ಸಭೆ, ಸಮಾರಂಭಕ್ಕೆ ಕರೆದುಕೊಂಡು ಬರುವ ಮೂಲಕ ನಮ್ಮ ಮಧ್ಯೆ ಸಂಬಂಧ, ಸಂಪರ್ಕಗಳು ಬೆಳೆದವು. ಇದು ಮುಂದೆ ನಮಗೆ ‘ಅಕ್ಕ’ವನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಲು ನೆರವಾಯಿತು.
► ಅಕ್ಕ ಸಂಸ್ಥೆಯನ್ನು ಅಮೆರಿಕ ಸರಕಾರದಲ್ಲಿ ನೋಂದಾವಣೆ ಮಾಡಿದ್ದೀರಾ? ಯಾವ ವಿಭಾಗದಲ್ಲಿ ನೋಂದಾವಣೆ ಮಾಡಲಾಗಿದೆ?
ಡಾ.ಅಮರನಾಥ ಗೌಡ: ಅಮೆರಿಕ ಸರಕಾರದಲ್ಲಿ ‘ಅಕ್ಕ’ 501(ಸಿ)(3) ನೋಂದಾಯಿತ ಶೈಕ್ಷಣಿಕ, ಭಾಷಾ ಮತ್ತು ಸಾಂಸ್ಕೃತಿಕ ಲಾಭರಹಿತ ಸಂಸ್ಥೆ ಆಗಿ 1998ರಲ್ಲಿ ನೋಂದಾವಣೆ ಆಗಿದೆ. ಉತ್ತರ ಅಮೆರಿಕದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು ಎಲ್ಲಾ ಕನ್ನಡಿಗರು ಮತ್ತು ಕನ್ನಡ ಕೂಟಗಳ ಚಟುವಟಿಕೆಗಳನ್ನು ಸಂಯೋಜಿಸಲು, ಒಂದುಗೂಡಿಸಲು ರೂಪುಗೊಂಡಿರುವ ವೇದಿಕೆಯಾಗಿದೆ ‘ಅಕ್ಕ’.
► ಅಕ್ಕದ ಸಂಘಟನಾ ರಚನೆ ಹೇಗಿದೆ? ಸ್ವಲ್ಪ ವಿವರಿಸಿ.
ಡಾ.ಅಮರನಾಥ ಗೌಡ: ‘ಅಕ್ಕ’ ಸಂಘಟನೆಯಲ್ಲಿ 21 ಮಂದಿ ನಿರ್ದೇಶಕರಿದ್ದಾರೆ. ಅದರಲ್ಲಿ 11 ಹಾಗೂ 10 ಮಂದಿ ನಿರ್ದೇಶಕರ ಆಯ್ಕೆಗಾಗಿ 2 ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಗೆದ್ದವರು 4 ವರ್ಷ ಅವಧಿಗೆ ನಿರ್ದೇಶಕರಾಗಿರುತ್ತಾರೆ. ಪ್ರತೀ 2 ವರ್ಷಕ್ಕೊಮ್ಮೆ 11 ಮಂದಿ ಗೆದ್ದರೆ, ಅದೇ ವೇಳೆ ಇನ್ನು 10 ಮಂದಿ ನಿವೃತ್ತಿ ಆಗುತ್ತಾರೆ. ಎಲ್ಲರಿಗೂ ಸಮಾನ ಅವಕಾಶ ಕೊಡಬೇಕೆಂಬ ಹಿನ್ನೆಲೆ ಯಲ್ಲಿ ಈ ರೀತಿ ಬೈಲಾ ಮಾಡಿಕೊಂಡು ಚುನಾವಣೆ ನಡೆಸುತ್ತೇವೆ.
ಪ್ರಸಕ್ತ ‘ಅಕ್ಕ’ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ರವಿ ಬೋರೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಮಾದೇಶ್ ಬಸವರಾಜು, ಕೋಶಾಧಿಕಾರಿಯಾಗಿ ನಾಗ್ ಶಂಕರ್ ಸೇವೆ ಸಲ್ಲಿಸುತ್ತಿದ್ದಾರೆ.
ಅಕ್ಕ ಸಂಘಟನೆಯ ವೇದಿಕೆಯಡಿ ಅಮೆರಿಕದ ಒಟ್ಟು ಎಷ್ಟು ಕನ್ನಡ ಸಂಘಟನೆಗಳಿವೆ?
ಡಾ.ಅಮರನಾಥ ಗೌಡ: ಅಕ್ಕ ಸಂಘಟನೆಯ ವೇದಿಕೆಯಡಿ ಒಟ್ಟು 42 ಕನ್ನಡಪರ ಸಂಘಟನೆಗಳು ನೋಂದಣಿ ಮಾಡಿಕೊಂಡಿವೆ. ಆರಂಭದ ‘ಪಂಪ ಕನ್ನಡ ಕೂಟ’, ‘ಕಸ್ತೂರಿ ಕನ್ನಡ ಸಂಘ’, ‘ಕಾವೇರಿ ಕನ್ನಡ ಅಸೋಸಿಯೇಷನ್’, ‘ಹೂಸ್ಟನ್ ಕನ್ನಡ ವೃಂದ’ ಸೇರಿದಂತೆ ಒಟ್ಟು 42 ಕನ್ನಡಪರ ಸಂಘಟನೆಗಳು ಅಮೆರಿಕದಾದ್ಯಂತ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿವೆ.
► ಅಮೆರಿಕದಲ್ಲಿರುವ ಒಟ್ಟು ಕನ್ನಡಿಗರು ಎಷ್ಟು? ಆ ಪೈಕಿ ಎಷ್ಟು ಕನ್ನಡಿಗರನ್ನು ಅಕ್ಕ ತಲುಪುತ್ತಿದೆ?
ಡಾ.ಅಮರನಾಥ ಗೌಡ: ಅಮೆರಿಕದಲ್ಲಿ ಒಟ್ಟು ಸುಮಾರು 1 ಲಕ್ಷಕ್ಕಿಂತಲೂ ಹೆಚ್ಚು ಜನ ಕನ್ನಡಿಗರಿದ್ದಾರೆ. ಅವರೆಲ್ಲರಿಗೂ ‘ಅಕ್ಕ’ ತಲುಪುವಂತೆ ನಾವು ಮಾಡಿದ್ದೇವೆ. ಏನೇ ಕಾರ್ಯಕ್ರಮವಿದ್ದರೂ ಇಮೇಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್ ಹಾಗೂ ಇನ್ನಿತರ ಸಾಮಾಜಿಕ ತಾಣಗಳ ಮೂಲಕ ಅವರಿಗೆ ಸಂದೇಶವನ್ನು ರವಾನಿಸುತ್ತೇವೆ. ಅವರೆಲ್ಲರೂ ಕನ್ನಡದ ಮೇಲಿನ ಅಭಿಮಾನದಿಂದ ನಮ್ಮ ಜೊತೆ ಸೇರುತ್ತಾರೆ.
ಅಮೆರಿಕದಲ್ಲಿ ಮೊದಲು ಭಾರತೀಯರಿಗೆ ಇಲ್ಲಿಗೆ ಕೆಲಸ ಅರಸಿಕೊಂಡು ಬರಲು ಹಲವು ರೀತಿಯ ನಿರ್ಬಂಧಗಳಿದ್ದವು. 1995-96ರ ನಂತರ ನಿರ್ಬಂಧ ಸಡಿಲಿಕೆಯಾದ ಮೇಲೆ ಕನ್ನಡಿಗರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಈಗಲೂ ಕನ್ನಡಿಗರು ಅಮೆರಿಕಕ್ಕೆ ವ್ಯಾಪಾರ, ಉದ್ದಿಮೆ, ವಿವಿಧ ಕೋರ್ಸ್‌ಗಳನ್ನು ಕಲಿಯುವುದಕ್ಕೆ ಬರುತ್ತಲೇ ಇದ್ದಾರೆ. ಇದರಿಂದ ಕನ್ನಡಿಗರ ಸಂಖ್ಯೆ ಹೆಚ್ಚುತ್ತಿದೆ.
► ಅಕ್ಕ ಸಂಘಟನೆಯಲ್ಲಿ ಯಾವ್ಯಾವ ವಿಭಾಗಗಳಿವೆ?
ಡಾ.ಅಮರನಾಥ ಗೌಡ: ಯೂಥ್ ವಿಂಗ್, ವುಮೆನ್ಸ್ ವಿಂಗ್, ಹಳೆ ವಿದ್ಯಾರ್ಥಿ ಸಂಘ ಸೇರಿದಂತೆ ಒಟ್ಟು 20 ವಿಭಾಗಗಳಿವೆ.
► ಅಕ್ಕ ಸಂಘಟನೆ ಮೂಲಕ ಏನೇನು ಪ್ರಮುಖ ಕಾರ್ಯಕ್ರಮಗಳು ಈವರೆಗೆ ನಡೆದಿವೆ?
ಡಾ.ಅಮರನಾಥ ಗೌಡ: ಅಕ್ಕ ಬಿಸಿನೆಸ್ ಫೋರಂನಲ್ಲಿ ಬಹಳಷ್ಟು ಜನರಿಗೆ ಉದ್ದಿಮೆ ನಡೆಸಲು ವೇದಿಕೆ ಕಲ್ಪಿಸಿದ್ದೇವೆ. ಅಮೆರಿಕ ಹಾಗೂ ಭಾರತದ ನಡುವೆ ವ್ಯಾಪಾರ ನಡೆಸುವವರಿಗೆ ನಾವು ನಮ್ಮ ‘ಅಕ್ಕ’ದಡಿ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೇವೆ. ಇದರಿಂದ 2 ದೇಶಗಳ ಮಧ್ಯೆ ಹೆಚ್ಚಿನ ವ್ಯಾಪಾರ, ವ್ಯವಹಾರ ನಡೆಯುತ್ತಿದೆ.
ಕನ್ನಡಿಗರಿಗೆ ಉದ್ಯಮಿಗಳೊಂದಿಗೆ ಸಂಪರ್ಕ ಸಾಧಿಸಲು, ಮಾರ್ಗದರ್ಶನ ಪಡೆಯಲು, ವ್ಯಾಪಾರ ನಾಯಕರನ್ನು ಸೃಷ್ಟಿಸಲು ಅವಕಾಶವನ್ನು ಒದಗಿಸಿವೆ. ಯುಎಸ್ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ಕರ್ನಾಟಕದಲ್ಲಿ ವ್ಯಾಪಾರದೊಂದಿಗೆ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಅನುವು ಮಾಡಿಕೊಟ್ಟಿವೆ. ಕರ್ನಾಟಕ ಸರಕಾರದ ಸಹಯೋಗದೊಂದಿಗೆ ‘ಅಕ್ಕ’ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಕರ್ನಾಟಕದಲ್ಲಿ ವ್ಯಾಪಾರವನ್ನು ಸ್ಥಾಪಿಸಲು ವಿವಿಧ ಯುಎಸ್ ನಗರಗಳಲ್ಲಿ ಯಶಸ್ವಿ ಜಾಗತಿಕ ಹೂಡಿಕೆದಾರರ ಸಭೆ, ರೋಡ್ ಶೋ ಅನ್ನು ನಡೆಸಿದೆ.
ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಕರ್ನಾಟಕದ ದೊಡ್ಡ ದೊಡ್ಡ ನಟರು, ಖ್ಯಾತ ಗಾಯಕರು, ಸಂಗೀತಕಾರರು ಸೇರಿದಂತೆ ಹಲವಾರು ಕಲಾವಿದರನ್ನು ಕರೆಸಿ ಕಾರ್ಯಕ್ರಮ ನಡೆಸಿದ್ದೇವೆ.
► ಅಕ್ಕದ ಅತ್ಯಂತ ಪ್ರಮುಖ ಸಾಧನೆಗಳು ಏನೇನು ಅಂತ ಸ್ವಲ್ಪ ಹೇಳುತ್ತೀರಾ?
ಡಾ.ಅಮರನಾಥ ಗೌಡ: ‘ಅಕ್ಕ’ ಕಳೆದ 15 ವರ್ಷಗಳಿಂದ ಕರ್ನಾಟಕದ ನಿರ್ಗತಿಕ ಶಾಲಾ ಮಕ್ಕಳಿಗೆ ಪುಸ್ತಕಗಳು, ಬಟ್ಟೆಗಳನ್ನು ಒದಗಿಸುವುದು ಸೇರಿದಂತೆ ವಿವಿಧ ದತ್ತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕೆಲವು ನಿಧಿಗಳು ಕರ್ನಾಟಕದಾದ್ಯಂತ ಪ್ರಾಥಮಿಕ ಶಾಲೆಗಳ ಕಟ್ಟಡ ಮೂಲಸೌಕರ್ಯಗಳನ್ನು ಸುಧಾರಿಸುವಲ್ಲಿ ಸಹಾಯ ಮಾಡಿವೆ. ಬೆಂಗಳೂರಿನ ಶಂಕರ ಐ ಫೌಂಡೇಶನ್ (ಎಸ್‌ಇಎಫ್) ಆಸ್ಪತ್ರೆಗೆ ಮತ್ತು ಪುನರ್ನಿರ್ಮಾಣ ಪ್ರಯತ್ನಗಳಿಗಾಗಿ, ಪ್ರವಾಹ ಪರಿಹಾರ, ಮುಖ್ಯಮಂತ್ರಿ ನಿಧಿಗೆ ಗಮನಾರ್ಹ ಆರ್ಥಿಕ ಕೊಡುಗೆ ನೀಡಿದೆ.
2019ರಲ್ಲಿ ಅಕ್ಕ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡು ಮೊಬೈಲ್ ಮ್ಯಾಮೊಗ್ರಫಿ ಬಸ್ ಅನ್ನು ದಾನ ಮಾಡಿತು. ಪ್ರವಾಹದಿಂದ ಹಾನಿಗೊಳಗಾದ ಸಮುದಾಯಕ್ಕೆ ಸಹಾಯ ಮಾಡಲು ಕೊಡಗಿನಲ್ಲಿ ಪ್ರಾಥಮಿಕ ಶಾಲೆಯ ಪುನರ್ನಿರ್ಮಾಣದಲ್ಲಿ ಅಕ್ಕ ಕೂಡ ತೊಡಗಿಸಿಕೊಂಡಿದೆ. ಮೈಸೂರಿನ ಮೃಗಾಲಯಕ್ಕೆ ದೇಣಿಗೆ ನೀಡಿದೆ.
ಹಲವಾರು ವಿಶ್ವ ಕನ್ನಡ ಸಮ್ಮೇಳನಗಳು ಮತ್ತು ಇತರ ಕಾರ್ಯಕ್ರಮಗಳ ಮೂಲಕ ಅಕ್ಕ ಕರ್ನಾಟಕದಾದ್ಯಂತದ ಸಾವಿರಾರು ಕಲಾವಿದರಿಗೆ ಅಮೆರಿಕದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಗಳನ್ನು ಒದಗಿಸಿದೆ. ಕನ್ನಡದ ಪ್ರಖ್ಯಾತ ಬರಹಗಾರರು, ಕವಿಗಳು ಎಸ್.ಎಲ್. ಬೈರಪ್ಪ, ನಿಸಾರ್ ಅಹ್ಮದ್, ಚಂದ್ರಶೇಖರ ಕಂಬಾರ, ಜಯಂತ್ ಕಾಯ್ಕಿಣಿ ಮುಂತಾದವರು ಅಕ್ಕ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಅಕ್ಕ ಸಮ್ಮೇಳನಗಳ ಸಮಯದಲ್ಲಿ ಅನೇಕ ಪುಸ್ತಕಗಳು ಮತ್ತು ಸಿಡಿಗಳನ್ನು ಬಿಡುಗಡೆ ಮಾಡಲಾಗಿದೆ.
► ಅಮೆರಿಕದಲ್ಲಿ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ‘ಕನ್ನಡ ಕಲಿಯೋಣ ಬನ್ನಿ’ ವಿಶೇಷ ಕಾರ್ಯಕ್ರಮ ಯಶಸ್ಸು ಕಾಣುತ್ತಿದೆಯೇ?
ಡಾ.ಅಮರನಾಥ ಗೌಡ: ‘ಕನ್ನಡ ಕಲಿಯೋಣ ಬನ್ನಿ’ ವಿಶೇಷ ಕಾರ್ಯಕ್ರಮಕ್ಕೆ ಅಮೆರಿಕದಲ್ಲಿ ಬಹಳಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ಯೋಜನೆಯು ಈಗಾಗಲೇ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಮತ್ತು ಕನ್ನಡ ಭಾಷೆಯ ಕಲಿಕೆಯಲ್ಲಿ ಆಸಕ್ತಿ ತೋರಿಸುವ ಎಲ್ಲರಿಗೂ ಕಲಿಸುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮದಿಂದಾಗಿ ಇಲ್ಲಿ ಹುಟ್ಟಿ ಬೆಳೆದವರ ಪೈಕಿ ಶೇ.80ರಷ್ಟು ಮಂದಿ ಕನ್ನಡದಲ್ಲಿಯೇ ಮಾತನಾಡುವಂತಾಗಿದೆ. ಇನ್ನು ಮತ್ತಷ್ಟು ಜನರನ್ನು ತಲುಪುವಂತೆ ಮಾಡಲಾಗುತ್ತಿದೆ.