ಇಂಗ್ಲೆಂಡ್: ಬ್ರಿಟಿಷ್ ನಾಗರಿಕರಿಗೆ ಯಾವುದೇ ರೀತಿಯ ಕಿರುಕುಳ ನೀಡುವ ಅಥವಾ ಬೆದರಿಸುವ ವಿದೇಶಿ ಪ್ರಯತ್ನಗಳನ್ನು ಯುನೈಟೆಡ್ ಕಿಂಗ್ಡಂ ಸಹಿಸುವುದಿಲ್ಲ ಎಂದು ಬ್ರಿಟನ್ ನ ಭದ್ರತಾ ಸಚಿವರು ಎಚ್ಚರಿಕೆ ನೀಡಿದ್ದಾರೆ. ಹಲವಾರು ಸಿಖ್ಖರು ಭಾರತ ಸರ್ಕಾರವು ನಮ್ಮನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿದೆ ಎಂದು ದೂರಿದ ಬಳಿಕ ಸಚಿವರ ಈ ಹೇಳಿಕೆ ಬಂದಿದೆ.
ಹಲವಾರು ಸಿಖ್ಖರಿಗೆ ಭಾರತ ಕಿರುಕುಳ ನೀಡಿದ್ದು, ಯುಕೆಯ ವಿಮಾನ ನಿಲ್ದಾಣಗಳಲ್ಲಿ ಅವರನ್ನು ಪ್ರತ್ಯೇಕವಾಗಿ ನಿಲ್ಲಿಸಲಾಗಿತ್ತು ಮತ್ತು ಅವರೊಂದಿಗೆ ಭಾರತ ದೇಶದ ಕುರಿತು ನಿಮ್ಮ ಅಭಿಪ್ರಾಯವೇನು? ಎಂದು ಪ್ರಶ್ನಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಡಾನ್ ಜಾರ್ವಿಸ್ ಸಿಖ್ ಫೆಡರೇಶನ್ ಗೆ ಪತ್ರ ಬರೆದಿದ್ದಾರೆ.
ಕೆನಡಾ ಮೂಲದ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯ ಬಗ್ಗೆ ಕೆನಡಾದ ತನಿಖೆಗಳೊಂದಿಗೆ ಸಹಕರಿಸುವಂತೆ ಜಾರ್ವಿಸ್ ಭಾರತ ಸರ್ಕಾರವನ್ನು ಒತ್ತಾಯಿಸಿದರು.
ಡಿ.10 ರಂದು ಬರೆದ ಪತ್ರದಲ್ಲಿ ಜಾರ್ವಿಸ್ “UK ಯಲ್ಲಿ ವ್ಯಕ್ತಿಗಳು ಅಥವಾ ಸಮುದಾಯಗಳನ್ನು ಬೆದರಿಸುವ, ಕಿರುಕುಳ ನೀಡುವ ಅಥವಾ ಹಾನಿ ಮಾಡುವ ಯಾವುದೇ ವಿದೇಶಿ ಶಕ್ತಿಯ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ. ಬೆದರಿಕೆ, ಜೀವ ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ. ನಮ್ಮ ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸ್ ಪಡೆಗಳ ಮೂಲಕ ಜನರನ್ನು ಸುರಕ್ಷಿತವಾಗಿರಿಸಲು ನಾವು ಬದ್ಧವಾಗಿದ್ದೇವೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಎಲ್ಲಾ ದೇಶಗಳು ಸಾರ್ವಭೌಮತ್ವ ಮತ್ತು ಕಾನೂನಿನ ನಿಯಮವನ್ನು ಗೌರವಿಸಬೇಕು ಮತ್ತು ಕಾನೂನು ಪ್ರಕ್ರಿಯೆಯೊಂದಿಗೆ ಸಹಕರಿಸಲು ಭಾರತ ಸರ್ಕಾರ ಸೇರಿದಂತೆ ಎಲ್ಲಾ ಭಾಗಿದಾರರನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.