ಬಹರೈನ್: “ಸಮುದಾಯದ ಎಲ್ಲಾ ಸದಸ್ಯರು ಒಗ್ಗಟ್ಟಾಗಿ, ಒಂದಾಗಿ ನಿಂತಾಗ ಮಾತ್ರ ಸಮುದಾಯ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಹಾಗಾಗಿ ಎಲ್ಲರೂ ಒಂದಾಗಿ ಸಮಾಜದ ಏಳಿಗೆಗಾಗಿ ದುಡಿಯೋಣ. ಈವತ್ತು ಮೊಗವೀರ್ಸ್ ಬಹರೈನ್ ಸಂಘಟನೆ ಸಮಾಜಮುಖಿ ಕೆಲಸಗಳನ್ನು ಕೆಲಸ ಮಾಡುತ್ತಾ ಯಶಸ್ವಿಯಾಗಿ ಇಪ್ಪತ್ತು ವರುಷಗಳನ್ನು ಪೂರೈಸಿದನ್ನು ನೋಡಿ ಬಹಳ ಸಂತೋಷವಾಗುತ್ತಿದೆ. ಅಧ್ಯಕ್ಷೆಯಾಗಿ ಶಿಲ್ಪಾ ಶಮಿತ್ ಕುಂದರ್ ಅವರು ಬಹಳ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ. ನನ್ನ ಸಹಕಾರ, ಪ್ರೋತ್ಸಾಹ “ಮೊಗವೀರ್ಸ್ ಬಹರೈನ್” ಸಂಘಟನೆಗೆ ನಿರಂತರವಾಗಿರುತ್ತದೆ” ಎಂದು ನಾಡೋಜ ಜಿ .ಶಂಕರ್ ಹೇಳಿದರು.





ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಅನಿವಾಸಿ ಮೊಗವೀರ ಸಮುದಾಯದ ಒಕ್ಕೂಟವಾದ “ಮೊಗವೀರ್ಸ್ ಬಹರೈನ್” ಸಂಘಟನೆಯ ಇಪ್ಪತ್ತನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಇಲ್ಲಿನ ಪಂಚತಾರಾ ಹೋಟೆಲ್ “ಶೆರಟಾನ್” ನ ಸಭಾಂಗಣದಲ್ಲಿ ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಯಾಗಿ ದ್ವೀಪಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮ್ಮಾನವನ್ನು ಸ್ವೀಕರಿಸಿ ನಾಡೋಜ ಡಾಕ್ಟರ್ ಜಿ .ಶಂಕರ್ ಮಾತನಾಡುತ್ತಿದ್ದರು.
ಅವರೊಂದಿಗೆ ವೇದಿಕೆಯಲ್ಲಿ ಬಹರೈನ್’ನ ಭಾರತೀಯ ರಾಯಭಾರಿ ವಿನೋದ್ .ಕೆ. ಜಾಕೋಬ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ.ಸಿ.ಕೋಟ್ಯಾನ್, ಕಾಂಚನ ಆಟೋಮೊಬೈಲ್ಸ್ ನ ಆಡಳಿತ ನಿರ್ದೇಶಕ ಪ್ರಸಾದ್ ರಾಜ್ ಕಾಂಚನ್, ಉದ್ಯಮಿ ಸಂತೋಷ್ ಕೋಡಿಕಲ್, ಮೋಹನ್ ಬೆಂಗ್ರೆ, ಮಾರುತಿ ಜನ ಸೇವಾ ಸಂಘ ಹಾಗು ಮಾರುತಿ ಯುವಕ ಮಂಡಲ ಉಳ್ಳಾಲ ಇದರ ಅಧ್ಯಕ್ಷ ಸಂದೀಪ್ ಪುತ್ರನ್, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ವರದರಾಜ್ ಬಂಗೇರ, ಮಂಗಳೂರು ಅಸೋಸಿಯೇಷನ್ ಆಫ್ ಸೌದಿ ಅರೇಬಿಯಾದ ಸ್ಥಾಪಕ ರವಿ ಕರ್ಕೇರ, ದಿಯಾರ್ ಅಲ್ ಮುಹರಾಕ್’ನ ಸಿಎಫ್ಒ ಸುಭಾಶ್ಚಂದ್ರ, ಕನ್ನಡ ಸಂಘದ ಅಧ್ಯಕ್ಷ ಅಮರನಾಥ್ ರೈ, ಮೊಗವೀರ್ಸ್ ಬಹರೈನ್ ನ ಅಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್, ಉಪಾಧ್ಯಕ್ಷ ವಿನೋದ್ ಶ್ರೀಯಾನ್ ಮುಂತಾದವರು ಉಪಸ್ಥಿತರಿದ್ದರು.





ಶಿಲ್ಪಾ ಶಮಿತ್ ಕುಂದರ್ ಅವರ ಅಧ್ಯಕ್ಷತೆಯಲ್ಲಿ “ಮೊಗವೀರ್ಸ್ ಬಹರೈನ್”ನ ಇಪ್ಪತ್ತನೆಯ ವಾರ್ಷಿಕೋತ್ಸವ ಸಾಧಕರ ಸಮ್ಮಾನ ಹಾಗು ಸಾಂಸ್ಕ್ರತಿಕ ವೈಭವದ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಚೆಂಡೆ, ವಾದ್ಯಗಳೊಂದಿಗೆ ಎಲ್ಲಾ ಗಣ್ಯರುಗಳನ್ನು ಸಭಾಂಗಣದ ಮುಖ್ಯ ದ್ವಾರದಿಂದ ವೇದಿಕೆಯವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಎಲ್ಲಾ ಗಣ್ಯರುಗಳು ಒಂದಾಗಿ ದ್ವೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಭಾರತೀಯ ರಾಯಭಾರಿ ವಿನೋದ್ .ಕೆ .ಜಾಕೋಬ್ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಕ್ಕೆ ಬಳಿಕ ಮಾತನಾಡಿದ ಅವರು, ಇಂತಹ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಮ್ಮ ಬಾಂಧವ್ಯದ ಬೆಸುಗೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ದ್ವೀಪದಲ್ಲಿ ಇಪ್ಪತ್ತು ವರುಷಗಳನ್ನು ಪೂರೈಸಿದ ‘ಮೊಗವೀರ್ಸ್ ಬಹರೈನ್’ನ ಕಾರ್ಯವೈಖರಿ ಅಭಿನಂದನಾರ್ಹ ಎಂದರು.





ದ್ವೀಪದಲ್ಲಿ ಮೊಗವೀರ್ಸ್ ಬಹರೈನ್ ನ ಎರಡು ದಶಕಗಳ ಯಶೋಗಾಥೆಯ ಜೊತೆಗೆ ಮೊಗವೀರ ಸಮಾಜದ ಆಚಾರ ವಿಚಾರ, ಸಾಧನೆಗಳ ಸಮಗ್ರ ಚಿತ್ರಣವನ್ನು ನೀಡುವ ಕೈಪಿಡಿ “ಕಡಲ ಸಿರಿ” ಸುಂದರ ಸ್ಮರಣ ಸಂಚಿಕೆಯನ್ನು ಭಾರತೀಯ ರಾಯಭಾರಿಗಳು ಬಿಡುಗಡೆಗೊಳಿಸಿ ಲೋಕಾರ್ಪಣೆ ಮಾಡಿದರು.
ಮುಂದಕ್ಕೆ ವೇದಿಕೆ ಸಾಧಕರುಗಳ ಸಮ್ಮಾನಕ್ಕೆ ಸಾಕ್ಷಿಯಾಯಿತು. ದ್ವೀಪಕ್ಕೆ ಪ್ರಥಮ ಬಾರಿ ಭೇಟಿ ನೀಡಿ ಮೊಗವೀರ ಬಾಂಧವರಲ್ಲಿ ಹೊಸ ಚೈತನ್ಯವನ್ನು ಮೂಡಿಸಿದ ನಾಡೋಜ ಡಾಕ್ಟರ್ ಜಿ.ಶಂಕರ್ ಅವರನ್ನು ಸಾಂಪ್ರದಾಯಿಕವಾಗಿ ಸಮ್ಮಾನಿಸಿ ‘ಮೊಗವೀರ ಹೃದಯ ಸಾಮ್ರಾಟ’ ಎನ್ನುವ ಬಿರುದನ್ನು ನೀಡಿದ ನಂತರ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರುಗಳನ್ನು ಸಮ್ಮಾನಿಸಲಾಯಿತು.





ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಝಾಕ್ ಹಾಗು ಶಂಕರ್ ಜತ್ತನ್ನ ಅವರನ್ನು ಅನೇಕ ದಶಕಗಳಿಂದ ದ್ವೀಪದಲ್ಲಿ ಅವರು ಮಾಡಿರುವ ಸಮಾಜ ಸೇವೆಗೆ ಸಮ್ಮಾನಿಸಿದರೆ, ನಾಡಿನ ಮೊಗವೀರ ಸಮಾಜದ ಸಾಧಕರುಗಳಾದ ಈಶ್ವರ್ ಮಲ್ಪೆ ಹಾಗು ಕುಮಾರಿ ಸಿಂಧೂರ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
















ಪ್ರಧಾನ ಕಾರ್ಯದರ್ಶಿ ಸುಮನ್ ಸುವರ್ಣ ಹಾಗು ಸಾಂಸ್ಕ್ರತಿಕ ಕಾರ್ಯದರ್ಶಿ ಸಂದೀಪ್ ಮೆಂಡನ್ ಸಾಧಕರ ಕಿರು ಪರಿಚಯ ನೀಡಿದರು. ನಂತರ ವೇದಿಕೆಯಲ್ಲಿ ವರ್ಣರಂಜಿತ ಸಾಂಸ್ಕ್ರತಿಕ ಲೋಕ ಸೃಷ್ಟಿಯಾಗಿ ಎಲ್ಲರನ್ನೂ ಮಂತ್ರಮುಗ್ದರನ್ನಾಗಿಸಿತು. ದ್ವೀಪದ ಮೊಗವೀರ ಸಮುದಾಯದ ಕಲಾವಿದರು ವಿವಿಧ ರೀತಿಯ ಕಲಾಪ್ರದರ್ಶನವನ್ನು ನೀಡಿ ಎಲ್ಲರ ಮನಗೆದ್ದರೆ, ನಾಡಿನ ಖ್ಯಾತ ಗಾಯಕ ಸುಪ್ರೀತ್ ಸಫಲಿಗ ತಮ್ಮ ಸುಮಧುರ ಕಂಠದಿಂದ ಎಲ್ಲರನ್ನೂ ಮೋಡಿ ಮಾಡಿದರು. ನಾಡಿನ ಖ್ಯಾತ ನಿರೂಪಕ ಮಧುರಾಜ್ ತಮ್ಮ ಆಕರ್ಷಕ ಮಾತುಗಳಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿದರು. ಈ ಕಾರ್ಯಕ್ರಮಕ್ಕೆ ವಿವಿಧ ಕೊಲ್ಲಿ ರಾಷ್ಟ್ರಗಳ ಮೊಗವೀರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ನಾಡಿನ ಮೊಗವೀರ ಸಮಾಜದ ಸಾಧಕರು ಹಾಗು ದ್ವೀಪದ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಆಹ್ವಾನಿತ ಗಣ್ಯರುಗಳು ಆಗಮಿಸಿ ಶುಭಹಾರೈಸಿದರು. ಅಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್ ಎಲ್ಲರ ಸಹಕಾರ, ಪ್ರೋತ್ಸಾಹಕ್ಕೆ ಕೃತಜ್ಞತೆಗಳನ್ನು ಅರ್ಪಿಸಿದರು.
ವರದಿ: ಕಮಲಾಕ್ಷ ಅಮೀನ್