ಇತರೆವಿಶ್ವದಲ್ಲೇ ಮೊದಲ ಬಾರಿ ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ...

ವಿಶ್ವದಲ್ಲೇ ಮೊದಲ ಬಾರಿ ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ

ಯುರೋಪಿನಾದ್ಯಂತ ಯಕ್ಷಗಾನ ಕಲಿಸುತ್ತಿರುವ ಹವ್ಯಾಸಿ ಯಕ್ಷಗಾನ ಕಲಾವಿದನ ಸಾಹಸಗಾಥೆ!

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ

ಕರಾವಳಿ ಕರ್ನಾಟಕದ ಜನಪ್ರಿಯ ಕಲೆಯಾಗಿರುವ ಯಕ್ಷಗಾನವು ಇಂದು ಸಾಂಪ್ರದಾಯಿಕ ಸೊಗಡನ್ನು ಕಾಪಾಡಿಕೊಂಡೇ ವಿದೇಶಗಳಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಕರಾವಳಿ ಹಾಗು ಮಲೆನಾಡಿಗೆ ಸೀಮಿತವಾಗಿರುವ ಯಕ್ಷಗಾನವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಬೇಕೆಂಬ ಮಹತ್ತರವಾದ ಆಶಯವನ್ನಿಟ್ಟುಕೊಂಡು ಹವ್ಯಾಸಿ ಯಕ್ಷಗಾನ ಕಲಾವಿದರೊಬ್ಬರು, ಹಗಲು–ಇರುಳು ಎನ್ನದೇ ವಿದೇಶಿ ನೆಲದಲ್ಲಿ ಯಕ್ಷಗಾನದ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಚಂಡೆ–ಮದ್ದಳೆಯ ನಾದ ಜಗತ್ತಿಗೆ ಕೇಳಿಸುವಂತೆ, ಯಕ್ಷಗಾನ ವಿದೇಶದ ವೇದಿಕೆಗಳಲ್ಲೂ ಮೊಳಗುವಂತೆ ಮಾಡಲು ಹೊರಟಿದ್ದಾರೆ. ಈಗ ನಾವು ಹೇಳಲು ಹೊರಟಿರುವುದು ಜರ್ಮನಿಯಲ್ಲಿ ನೆಲೆನಿಂತು ಯಕ್ಷಗಾನವನ್ನು ತನ್ನ ಉಸಿರಾಗಿಸಿಕೊಂಡಿರುವ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಗ್ರಾಮದ ಅಜೀತ್ ಪ್ರಭು ತಲ್ಲೂರು ಅವರ ಯಕ್ಷಗಾನ ಪಯಣದ ಬಗ್ಗೆ…

ಬಾಲ್ಯದಿಂದಲೇ ಯಕ್ಷಗಾನವನ್ನು ರೂಡಿಸಿಕೊಂಡು, ಚಂಡೆ–ಮದ್ದಳೆಯ ನಾದದೊಂದಿಗೆ ಬೆಳೆದ ಅಜೀತ್ ಪ್ರಭು, ಹವ್ಯಾಸಿ ಕಲಾವಿದರಾಗಿ ದೇಶ-ವಿದೇಶಗಳ ವೇದಿಕೆಗಳಲ್ಲೂ ಪ್ರದರ್ಶನ ನೀಡಿ, ವಿದೇಶಿ ನೆಲದಲ್ಲಿ ಹುಟ್ಟಿ-ಬೆಳೆದ ಕನ್ನಡಿಗರ ಮಕ್ಕಳಿಗೆ ಉಚಿತ ತರಬೇತಿ ನೀಡುವ ಮೂಲಕ ಯಕ್ಷಗಾನವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ಮುಂದಾಗಿದ್ದಾರೆ.

ಮಾಸ್ತಿಕಟ್ಟೆ ಮೂಲದ ಅಜೀತ್ ಪ್ರಭು ಅವರು, 2017ರಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ ನಗರದಲ್ಲಿ ನೆಲೆಯಾಗಿದ್ದಾರೆ. ಬೆಂಗಳೂರಿನ ಯುವಿಸಿಇ (UVCE) ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದು, ಪ್ರಸ್ತುತ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿರುವ ಪ್ರಮುಖ ಬ್ಯಾಂಕ್ ಒಂದರಲ್ಲಿ ಸೀನಿಯರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿ ಜೀವನದ ನಡುವೆ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಯುರೋಪಿನ ವಿವಿಧ ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಕಲೆಯ ಪ್ರಚಾರ – ಪ್ರಸಾರದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ಯಕ್ಷಗಾನದ ಮೇಲಿನ ಪ್ರೀತಿಯಿಂದ 20ಕ್ಕೂ ಹೆಚ್ಚು ಮಕ್ಕಳು, ಯಕ್ಷಗಾನ ಆಸಕ್ತರಿಗೆ ಶಾಸ್ತ್ರೀಯವಾಗಿ ಯಕ್ಷಗಾನವನ್ನು ಕಲಿಸಿ ವಿದೇಶದಲ್ಲೂ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ವಿದೇಶದಲ್ಲಿರುವ ಭಾರತೀಯ ಸಮುದಾಯದಲ್ಲಿ ಯಕ್ಷಗಾನ ಕಲೆಯ ಜೀವಂತಿಕೆಯನ್ನು ಉಳಿಸುವುದು ಹಾಗೂ ಯುರೋಪಿನಲ್ಲಿ ಈ ಕಲೆಯನ್ನು ಪರಿಚಯಿಸುವುದು ಅವರ ನಿರಂತರ ಪ್ರಯತ್ನದ ಉದ್ದೇಶವಾಗಿದೆ.

ಜರ್ಮನಿಯಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿರುವ ಅಜೀತ್ ಅವರು, ವಿಶ್ವದಲ್ಲೇ ಮೊದಲ ಬಾರಿಗೆ ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಎರಡು ಹೊಸ ತಂಡಗಳು ರೂಪುಗೊಳ್ಳುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಯುರೋಪಿನ ವಿವಿಧ ದೇಶಗಳಲ್ಲಿ 6 ಕಡೆ ಪ್ರದರ್ಶನಗಳನ್ನು ನೀಡಲು ಪೂರ್ವ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ ಅಜೀತ್ ಪ್ರಭು ತಲ್ಲೂರು ಅವರೊಂದಿಗೆ globalkannadiga.com ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ….

ಪ್ರಶ್ನೆ: ನಿಮ್ಮ ಯಕ್ಷಗಾನ ಪಯಣದ ಬಗ್ಗೆ ಸಣ್ಣ ವಿವರ ನೀಡಬಹುದೇ…? ಯಕ್ಷಗಾನಕ್ಕೆ ಸಂಬಂಧಿಸಿ ತಂಡ ಅಥವಾ ಸಂಸ್ಥೆಯನ್ನು ಆರಂಭಿಸಿದ್ದೀರಾ…?

ಅಜೀತ್ ಪ್ರಭು: ನಮ್ಮ ಮನೆತನದಲ್ಲಿ ಯಕ್ಷಗಾನ ಕಲೆ ಪರಂಪರಾಗತವಾಗಿ ಬೆಳೆದು ಬಂದಿದ್ದು. ನನ್ನ ತಂದೆ, ದೊಡ್ಡಪ್ಪ, ಅಜ್ಜ ನನ್ನಂತೆಯೇ ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು. ಅವರು ಮಲೆನಾಡಿನಲ್ಲಿ ‘ಹುಲಿಕಲ್ ಮೇಳ’ ಎಂಬ ಯಕ್ಷಗಾನ ಸಂಘವನ್ನು ಸುಮಾರು 70 ವರ್ಷಗಳ ಹಿಂದೆ ಸ್ಥಾಪನೆ ಮಾಡಿದ್ದು, ಇದು ಬಹಳ ಹಳೇಯ ಹಾಗು ಹೆಸರಾಂತ ಯಕ್ಷಗಾನ ಮೇಳವಾಗಿದೆ. ಇಂದಿಗೂ ಮಲೆನಾಡಿನ ತೀರ್ಥಹಳ್ಳಿಯ ಮಾಸ್ತಿಕಟ್ಟೆಯಲ್ಲಿ ಈ ಮೇಳ ತನ್ನ ಕಾರ್ಯಕ್ರಮವನ್ನು ಮುಂದುವರಿಸುತ್ತಿದೆ. ಈ ಮೇಳ ವೃತೀಪರ ಅಲ್ಲ, ಕೇವಲ ಹವ್ಯಾಸಿ ಮೇಳವಾಗಿದೆ. ಇಂಥ ಪರಿಸರದಲ್ಲಿ ಬೆಳೆದ ಕಾರಣದಿಂದ ಯಕ್ಷಗಾನ ಕಲೆ ನನಗೆ ರಕ್ತಗತವಾಗಿ ಬಂದಿದೆ. ಇದರಿಂದಾಗಿ ನನಗೂ ಈ ಕಲೆ ಬಾಲ್ಯದಿಂದಲೇ ಕರಗತವಾಗಿತ್ತು. ಬಾಲ್ಯದಿಂದಲೇ ನನ್ನ ತಂದೆ ಹಾಗು ದೊಡ್ಡಪ್ಪರ ಜೊತೆ ಯಕ್ಷಗಾನ ನಾಟ್ಯಭ್ಯಾಸ, ಚಂಡೆ, ಮದ್ದಳೆಯನ್ನು ಕಲಿತಿದ್ದೇನೆ. ಕಾಲೇಜು ದಿನಗಳಲ್ಲಿ ಬೆಂಗಳೂರಿನಲ್ಲಿದ್ದಾಗಲೂ ಅಲ್ಲಿನ ಮಕ್ಕಳಿಗೆ ಉಚಿತವಾಗಿ ಯಕ್ಷಗಾನ ಕಲಿಸುತ್ತಿದ್ದೆ.

2017ರಲ್ಲಿ ಉದ್ಯೋಗ ನಿಮಿತ ಜರ್ಮನಿಗೆ ಬಂದ ಮೇಲೆ ಇಲ್ಲಿ ಯಕ್ಷಗಾನವನ್ನು ಹವ್ಯಾಸಿಯಾಗಿ ಮುಂದುವರಿಸಿದೆ. 2018ರಲ್ಲಿ ಜರ್ಮನಿಯ ಫ್ರ್ಯಾಂಕ್ಫರ್ಟ್ ನಗರದಲ್ಲಿ ರೈನ್ ಮೈನ್ ಕನ್ನಡ ಸಂಘದವರು ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ 1 ಗಂಟೆಗಳ ಕಾಲ ಯಕ್ಷಗಾನವನ್ನು ಪ್ರದರ್ಶನ ಮಾಡಿದ್ದೆವು. ಇದು ನನ್ನ ಯಕ್ಷಗಾನ ಪಯಣದ ಮೇಲೆ ಬಹಳ ದೊಡ್ಡ ಪರಿಣಾಮ ಬೀರಿತು. ವಿದೇಶಿ ನೆಲದಲ್ಲಿ ನನ್ನ ಯಕ್ಷಗಾನಕ್ಕೆ ದೊಡ್ಡ ವೇದಿಕೆಯೊಂದು ಸಿಕ್ಕಂತಾಯಿತು. ಜನ ನನ್ನ ಯಕ್ಷಗಾನವನ್ನು ಇಷ್ಟಪಟ್ಟರು.

ಅನಂತರ ಮಕ್ಕಳಿಗೆ ಯಕ್ಷಗಾನದ ತರಬೇತಿ ಆರಂಭಿಸಿದೆ. ಮುಂದೆ 2020ರ ಕೋವಿಡ್ ಸಂದರ್ಭದಲ್ಲೂ ನಮ್ಮ ಯಕ್ಷಗಾನ ತರಬೇತಿಗಳು ಆನ್ ಲೈನ್ ಮೂಲಕವೇ ನಡೆಯುತ್ತಿತ್ತು. ‘ಯಕ್ಷ ಮಿತ್ರರು ಜರ್ಮನಿ’ ಎಂಬ ಹೆಸರನ್ನಿಟ್ಟುಕೊಂಡು ಒಂದು ತಂಡವನ್ನು ಕಟ್ಟಿ, ಆ ಮೂಲಕ ಇಲ್ಲಿರುವ ಯಕ್ಷಗಾನ ಆಸಕ್ತರಿಗೆ, ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದ್ದೆವು. 2023ರಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ಯುರೋಪ್ ಪ್ರವಾಸಕ್ಕೆಂದು ಬಂದ ವೇಳೆ ನನ್ನ ಜೊತೆ ಈ ಬಗ್ಗೆ ಮಾತುಕತೆ ನಡೆಸಿ, ಯುರೋಪಿನಾದ್ಯಂತ ಯಕ್ಷಗಾನ ಜಾಲವನ್ನು ಬಲಪಡಿಸುವ ಉದ್ದೇಶದಿಂದ ‘ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕ’ವನ್ನು ಆರಂಭಿಸಿದೆವು. ಇದು ಅಧಿಕೃತವಾಗಿ ಇಲ್ಲಿ ನೋಂದಣಿಯಾಗಿದೆ. ಈ ಸಂಸ್ಥೆ ಇಂದು ಅನೇಕ ಯುರೋಪಿನ ದೇಶಗಳಲ್ಲಿ ಯಕ್ಷಗಾನ ಕಲಿಕೆ, ಸಹಕಾರ ಮತ್ತು ಪ್ರದರ್ಶನಗಳಿಗೆ ವೇದಿಕೆಯಾಗಿದೆ.

ಈವತ್ತು ಜರ್ಮನಿಯಲ್ಲಿ ಮಾತ್ರವಲ್ಲ, ಯೂರೋಪಿನ ನೆದರ್ ಲ್ಯಾಂಡ್, ಬೆಲ್ಜಿಯಂ ಸಹಿತ ನಾನಾ ಭಾಗಗಳಲ್ಲಿ 40ಕಿಂತ ಹೆಚ್ಚು ಜನ ಯಕ್ಷಗಾನ ಕಲಿಯುತ್ತಿದ್ದು, ಜೊತೆಗೆ ಅಲ್ಲಲ್ಲಿ ಯಕ್ಷಗಾನ ತಂಡವನ್ನು ಕಟ್ಟಿಕೊಂಡು ಪ್ರದರ್ಶನ ನೀಡುತ್ತಿರುವುದು ನನಗೆ ಬಹಳ ಹೆಮ್ಮೆ ಅನಿಸುತ್ತಿದೆ.

ಪ್ರಶ್ನೆ: ಜರ್ಮನಿಯಂಥ ವಿದೇಶಿ ನೆಲದಲ್ಲಿ ಯಕ್ಷಗಾನಕ್ಕೆ ಮನ್ನಣೆ ಸಿಗುತ್ತಿದೆಯೇ ? ಅಲ್ಲಿನ ಜನರ ಸ್ಪಂದನೆ ಹೇಗಿದೆ?

ಅಜೀತ್ ಪ್ರಭು: ಇಲ್ಲಿ ಯಕ್ಷಗಾನಕ್ಕೆ ಖಂಡಿತವಾಗಿಯೂ ಮನ್ನಣೆ ಸಿಗುತ್ತಿದೆ. ಜರ್ಮನಿಯಲ್ಲಿ ನನ್ನ ಆರಂಭದ ದಿನಗಳಲ್ಲಿ ಯಕ್ಷಗಾನಕ್ಕೆ ಅಷ್ಟೊಂದು ದೊಡ್ಡ ಮಟ್ಟದ ಪ್ರಾಧಾನ್ಯತೆಯಾಗಲಿ, ಮನ್ನಣೆಯಾಗಲಿ ಸಿಕ್ಕಿರಲಿಲ್ಲ. ಈಗ ನಮ್ಮದೇ ನಾಡಿನ ಈ ಕಲೆಗೆ ತವರಿನಲ್ಲಿ ಸಿಗುವಂಥ ಗೌರವ ಸಿಗುತ್ತಿದೆ. ಅದಕ್ಕೆ ಮೂಲ ಕಾರಣ ಕಲೆಯ ಮೇಲಿರುವ ಜನರ ಪ್ರೀತಿ. ಕರಾವಳಿ ಭಾಗದ ಈ ಕಲೆಯನ್ನು ಗುರುತಿಸುವಂಥ ಕಾರ್ಯವನ್ನು ಇಲ್ಲಿನ ಅನಿವಾಸಿ ಭಾರತೀಯರು ಮಾಡಿದ್ದಾರೆ. ಇಲ್ಲಿರುವ ಕನ್ನಡಪರ ಸಂಘಟನೆಗಳು ಏನೇ ಕಾರ್ಯಕ್ರಮ ಮಾಡಿದರೂ ನಮ್ಮನ್ನು ಕರೆದು ನಮಗೂ ಪ್ರದರ್ಶನಕ್ಕೆ ಒಂದು ಅವಕಾಶವನ್ನು ನೀಡುತ್ತಿರುವುದರಿಂದಲೇ ಈ ಕಲೆ ಇಲ್ಲಿ ಜೀವಂತವಾಗಿದೆ.

ಪ್ರಶ್ನೆ: ವಿದೇಶದ ಜನರಿಗೆ ಯಕ್ಷಗಾನವನ್ನು ಪರಿಚಯಿಸುವಾಗ ಎದುರಾದ ಸವಾಲುಗಳು ಯಾವುವು?

ಅಜೀತ್ ಪ್ರಭು: ಯಕ್ಷಗಾನ ಎಂಬುದು ಬಹುಮುಖ್ಯವಾಗಿ ಕನ್ನಡ ಜಾನಪದ ಕಲೆ. ಅದರಲ್ಲೂ ಕರಾವಳಿ ಭಾಗದ ಪ್ರಮುಖ ಕಲೆ. ಕನ್ನಡ, ತುಳು, ಕೊಂಕಣಿ ಭಾಷೆಯಲ್ಲಿ ಪ್ರದರ್ಶನ ನಡೆಯುತ್ತಿದೆ. ಆದರೆ ಇದು ಇಲ್ಲಿನ ಸ್ಥಳೀಯರಿಗೆ ಅರ್ಥ ಮಾಡಿಸುವುದು ಸುಲಭದ ಕೆಲಸವಲ್ಲ. ಜರ್ಮನ್ ಹಾಗು ಯೂರೋಪಿನ ಸ್ಥಳೀಯ ಜನರು ಯಕ್ಷಗಾನದ ವೇಷ-ಭೂಷಣವನ್ನು ನೋಡಿ ಆನಂದಿಸುತ್ತಾರೆ. ಆದರೆ ಅವರಿಗೆ ಭಾಗವತಿಕೆ, ಹಿಮ್ಮೇಳದ ಚಂಡೆ, ಮದ್ದಳೆಯ ಶಬ್ದ ಇಷ್ಟ ಆಗಲ್ಲ. ಯಕ್ಷಗಾನದ ವೇಳೆ ಹೊರಬರುವ ಶಬ್ದ ಅವರಿಗೆ ಕೇಳುವುದಕ್ಕೆ ಆಗಲ್ಲ. ಅವರು ಸಂಗೀತವನ್ನು ನಿಶಬ್ಧವಾಗಿ ಆನಂದಿಸುವವರು. ಮತ್ತೊಂದು ಅವರಿಗೆ ಹೆಚ್ಚು ಆಸಕ್ತಿ ಇಲ್ಲದಿರಲು ಮುಖ್ಯ ಕಾರಣ ಭಾಷೆ. ಯಕ್ಷಗಾನ ಕನ್ನಡದಲ್ಲಿರುವುದರಿಂದ ಅವರಿಗೆ ಅದು ಅರ್ಥ ಆಗಲ್ಲ. ಇನ್ನೊಂದೆಡೆ ಯಕ್ಷಗಾನ ಪ್ರಸಂಗದಲ್ಲಿ ಬರುವ ಮಹಾಭಾರತ, ರಾಮಾಯಣದ ಕಥೆಗಳು ಅವರಿಗೆ ಗೊತ್ತಿಲ್ಲ. ಅಲ್ಲದೆ ಗಂಟೆಗಟ್ಟಲೆ ಕೂತು ನೋಡುವ ಸಮಯ ಕೂಡ ಅವರಿಗಿರುವುದಿಲ್ಲ. ಇದು ನಮ್ಮ ಕಲೆಯನ್ನು ಸ್ಥಳೀಯರಿಗೆ ಮುಟ್ಟಿಸಲು ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜರ್ಮನ್ ಭಾಷೆಯಲ್ಲಿಯೇ ಯಕ್ಷಗಾನವನ್ನು ಪ್ರದರ್ಶನ ಮಾಡಲು ನಾವು ಸಿದ್ಧತೆ ನಡೆಸುತ್ತಿದ್ದೇವೆ. ಅದು ಯಾವ ರೀತಿ ಸ್ಥಳೀಯರಿಗೆ ತಲುಪುತ್ತೆ ಎಂಬುದನ್ನು ನೋಡಬೇಕು.

ಪ್ರಶ್ನೆ: ವಿದೇಶದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಯಕ್ಷಗಾನದಲ್ಲಿ ಆಸಕ್ತಿ ಹೇಗೆ ಮೂಡಿಸುತ್ತೀರಿ?

ಅಜೀತ್ ಪ್ರಭು: ಮೊದಲು ನಮಗೂ ಇದೊಂದು ಪ್ರಶ್ನೆ ಬಹಳವಾಗಿ ಕಾಡಿತ್ತು. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಇಲ್ಲಿನ ಮಕ್ಕಳು ಕಲೆಯತ್ತ ಮೂಡುತ್ತಿರುವ ಆಸಕ್ತಿಯನ್ನು ನೋಡಿದರೆ ನಮಗೇ ಆಶ್ಚರ್ಯವಾಗುತ್ತೆ. ನಮ್ಮ ಯಕ್ಷಗಾನವನ್ನು ಹೆಚ್ಚು ಶಾಂತವಾಗಿ ನೋಡಿ ಆನಂದಿಸುವವರೇ ಮಕ್ಕಳು. ಯಕ್ಷಗಾನದಲ್ಲಿನ ವೇಷ, ಭೂಷಣಗಳು ಇಲ್ಲಿನ ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತೆ. ಯಕ್ಷಗಾನದ ಗಂಧಗಾಳಿಯೇ ಇಲ್ಲದ ಮಕ್ಕಳು ಇದರಿಂದ ಆಕರ್ಷಿತರಾಗಿ ಯಕ್ಷಗಾನ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಲೆಯ ಹಿರಿಮೆಯಿಂದಾಗಿ ಇಲ್ಲಿಯೇ ಹುಟ್ಟಿ ಬೆಳೆದ ಮಕ್ಕಳು ಕೂಡ ಯಕ್ಷಗಾನಕ್ಕೆ ಮಾರುಹೋಗಿದ್ದಾರೆ. ಈವತ್ತು ‘ಯಕ್ಷಧ್ರುವ’ ತಂಡದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಅದರಲ್ಲಿ 10ಕ್ಕೂ ಹೆಚ್ಚು ಮಕ್ಕಳು ಕಳೆದ 3 ವರ್ಷಗಳಿಂದ ಯಕ್ಷಗಾನ ಕಲಿತು ಬಹಳಷ್ಟು ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಅದೇ ಮಕ್ಕಳಿಂದ ನಾವು ಈವತ್ತು ಜರ್ಮನಿಯಲ್ಲಿ ಯಕ್ಷಗಾನವನ್ನು ಪ್ರದರ್ಶಿಸಲು ಸಾಧ್ಯವಾಗುತ್ತಿದೆ.

ಪ್ರಶ್ನೆ: ನಿಮ್ಮ ಯಕ್ಷಗಾನ ತರಬೇತಿಗೆ ಅಗತ್ಯವಾದ ಗುರುಗಳು ಮತ್ತು ಸಂಪನ್ಮೂಲಗಳು, ಇನ್ನಿತರ ಪರಿಕರಗಳು ವಿದೇಶಿ ನೆಲದಲ್ಲಿ ಸುಲಭವಾಗಿ ಸಿಗುತ್ತದೆಯೇ…?

ಅಜೀತ್ ಪ್ರಭು: ಯಕ್ಷಗಾನ ತರಬೇತಿಗೆ ಬಹಳ ದೊಡ್ಡ ಸವಾಲು ಅಂದರೆ ಹಿಮ್ಮೇಳ. ಚಂಡೆ, ಮದ್ದಳೆ, ಹಾರ್ಮೋನಿಯಂ ಮುಂತಾದ ವಾದ್ಯಗಳೊಂದಿಗೆ ಹಾಡು-ತಾಳ-ಲಯವನ್ನು ಇಲ್ಲಿ ಹೇಳಿಕೊಡಲು ಸಾಧ್ಯ ಆಗುತ್ತಿಲ್ಲ. ಅದಕ್ಕೆ ಬೇಕಾದ ಅಭ್ಯಾಸ, ತರಬೇತಿ ಸಾಧ್ಯವಿಲ್ಲ. ಅದಕ್ಕೆ ಬೇಕಾದ ಪರಿಕರಗಳನ್ನು ಸಂಯೋಜಿಸಲು ನಮಗೆ ಆಗಲ್ಲ. ಮೂಲಭೂತವಾಗಿ ತಾಳ ಅಭ್ಯಾಸ ಮಾಡಲು, ಪದ್ಯಗಳನ್ನು ಅಭಿನಯಿಸಲು ನಾನೇ ತರಬೇತಿ ನೀಡುತ್ತೇನೆ. ಜೊತೆಗೆ ಚಂಡೆ, ಮದ್ದಳೆಯ ಬಗ್ಗೆ ನನಗೆ ಅಭ್ಯಾಸ ಇರುವುದರಿಂದ ಅದನ್ನು ನಾನೇ ಆನ್ ಲೈನ್ ಮೂಲಕ ಹೇಳಿಕೊಡುತ್ತಿದ್ದೇನೆ. ಆದರೆ ಇಲ್ಲಿ ನಮಗೆ ಹಿಮ್ಮೇಳ ಇಲ್ಲದಿರುವುದರಿಂದ ಉಡುಪಿಯಲ್ಲಿರುವ ಯಕ್ಷಗಾನ ಕಲಾವಿದ ಲಂಬೋಧರ ಹೆಗ್ಡೆ ಅವರಿಂದ ಕೆಲವೊಂದು ಹಿಮ್ಮೇಳವನ್ನು, ತಾಳಕ್ಕೆ ಬೇಕಾದ ಪದ್ಯಗಳನ್ನು ರೆಕಾರ್ಡ್ ಮಾಡಿಸಿಕೊಂಡು ಹಿಮ್ಮೇಳ ಅಭ್ಯಾಸವನ್ನು ಮಾಡಿಸುತ್ತಿದ್ದೇನೆ. ಇಲ್ಲಿ ನಮಗೆ ಯಕ್ಷಗಾನ ಕೇಂದ್ರ, ಅಕಾಡೆಮಿಯ ಸಹಾಯ, ಸಹಕಾರ ಏನಿಲ್ಲ. ಯಕ್ಷಗಾನ ಕೇಂದ್ರದ ಪಠ್ಯ ಪುಸ್ತಕಗಳನ್ನು ಕೂಡ ಇಲ್ಲಿ ನಾವು ಬಳಸಲು ಆಗುತ್ತಿಲ್ಲ. ಇಲ್ಲಿ ಹುಟ್ಟಿ ಬೆಳೆದ ಹೆಚ್ಚಿನ ಮಕ್ಕಳಿಗೆ ಕನ್ನಡ ಭಾಷೆಯನ್ನು ಓದುವುದಕ್ಕೆ, ಬರೆಯುವುದಕ್ಕೆ ಬಾರದ ಕಾರಣ ಅದನ್ನು ಹೇಳಿಕೊಡುವುದು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನು ಕೂಡ ಇಂಗ್ಲಿಷ್’ನಲ್ಲಿಯೇ ಹೇಳಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.

ಯಕ್ಷಗಾನದಲ್ಲಿ ಪಾತ್ರಕ್ಕೆ ತಕ್ಕಂತೆ ವಿಶೇಷ ವೇಷಭೂಷಣಗಳು ಬೇಕಾಗುತ್ತೆ. ಇಲ್ಲಿ ನಮಗೆ ಭಾರತದಿಂದಲೇ ಅದನ್ನೆಲ್ಲ ತರಿಸಿಕೊಳ್ಳಬೇಕು. ನಮ್ಮ ನಾಡಿನಲ್ಲಿ ಬಣ್ಣ ಹಚ್ಚಲು ಮೇಕಪ್ ಮ್ಯಾನ್ ಸುಲಭವಾಗಿ ಸಿಗುತ್ತಾರೆ. ಇಲ್ಲಿಯೇ ಅದೆಲ್ಲ ಸಾಧ್ಯವಾಗದ ಮಾತು. ವೇಷಭೂಷಣ, ಮೇಕಪ್ ಇನ್ನಿತರ ಕಾರ್ಯವನ್ನೆಲ್ಲ ನಾನೇ ನಾಟ್ಯಾಭ್ಯಾಸದ ಜೊತೆ ಮಕ್ಕಳಿಗೆ ಕಲಿಸುತ್ತಿದ್ದೇನೆ. ಇಲ್ಲದಿದ್ದರೆ ಪ್ರದರ್ಶನ ಮಾಡಲು ಸಾಧ್ಯವೇ ಇಲ್ಲ….

ಪ್ರಶ್ನೆ: ಮುಂದಿನ ಪೀಳಿಗೆ ಯಕ್ಷಗಾನವನ್ನು ಮುಂದುವರಿಸುವುದರಲ್ಲಿ ನಿಮಗೆ ಆಶಾವಾದ ಇದೆಯೇ?

ಅಜೀತ್ ಪ್ರಭು: ಮುಂದಿನ ಪೀಳಿಗೆ ಯಕ್ಷಗಾನ ಕಲೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬುದೇ ನಮ್ಮ ಮಹತ್ತರ ಉದ್ದೇಶವೂ ಆಗಿದೆ. ಆ ದಿಸೆಯಲ್ಲಿಯೇ ನಾವು ಶ್ರೀಮಂತ ಕಲೆಯಾಗಿರುವ ಯಕ್ಷಗಾನವನ್ನು ನಮ್ಮ ಮಕ್ಕಳಿಗೆ ಕಲಿಸುತ್ತಿರುವುದು. ಅದು ಎಂದಿಗೂ ನಶಿಸಿ ಹೋಗಬಾರದು, ಇನ್ನಷ್ಟು ಜನರಿಗೆ ತಲುಪಬೇಕು ಎಂಬ ಗುರಿಯನ್ನಿಟ್ಟುಕೊಂಡು ತರಬೇತಿ ನೀಡುತ್ತಿದ್ದೇನೆ. ನಾನು ಪ್ರದರ್ಶನ ನೀಡುವುದಕ್ಕಿಂತಲೂ ನಮ್ಮ ಮಕ್ಕಳು ಪ್ರದರ್ಶನ ನೀಡಬೇಕು ಎಂಬ ಆಶಯ ನನ್ನದು. ಯಕ್ಷಗಾನದ ಬೇರು ಇನ್ನಷ್ಟು ಗಟ್ಟಿಯಾಗಿ ಬೆಳೆಯಲಿ ಎಂಬ ಉದ್ದೇಶದಿಂದಲೇ ನಾನು ಹೆಚ್ಚಾಗಿ ಮಕ್ಕಳಿಗೆ ಉಚಿತವಾಗಿ ಯಕ್ಷಗಾನವನ್ನು ಕಲಿಸುತ್ತಿದ್ದೇನೆ. ಮಕ್ಕಳ ಪ್ರದರ್ಶನ ನೋಡಿ ಇನ್ನಷ್ಟು ಮಕ್ಕಳಿಗೆ ಆಸಕ್ತಿ ಹಟ್ಟುತ್ತೆ. ಅವರು ಕೂಡ ಕಲಿಯಲು ಆಸಕ್ತಿ ತೋರಿಸುತ್ತಾರೆ. ಇದರಿಂದಾಗಿ ಬಹುತೇಕ ಮಕ್ಕಳು ತಾವಾಗಿಯೇ ಯಕ್ಷಗಾನದ ಹಿಂದೆ ಬರುವಂತಾಗುತ್ತದೆ.

ಪ್ರಶ್ನೆ: ತಾವು ವಿದೇಶದಲ್ಲಿದ್ದರೂ ಯಕ್ಷಗಾನದ ಮೂಲ ಸತ್ವವನ್ನು ಹೇಗೆ ಕಾಪಾಡಿಕೊಳ್ಳುತ್ತೀರಿ?

ಅಜೀತ್ ಪ್ರಭು: ನಾವು ವಿದೇಶದಲ್ಲಿದ್ದರೂ ಯಕ್ಷಗಾನದ ಮೂಲ ಸತ್ವವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾದ ವಿಷಯ. ವಿಶ್ವದ ವಿವಿಧೆಡೆ ಇರುವ ಅನಿವಾಸಿ ಭಾರತೀಯರು ಯಕ್ಷಗಾನದ ಮೂಲ ಸತ್ವವನ್ನು ಮರೆತು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಿರುವುದು ಸಮಂಜಸವಲ್ಲ. ಹೆಚ್ಚಿನ ಕಡೆ ವೇಷ, ಭೂಷಣ, ಮೇಕಪ್, ನಾಟ್ಯ, ಭಾಷೆಯನ್ನು ವಿಭಿನ್ನವಾಗಿ ತೋರಿಸುವ ಕಾರ್ಯ ನಡೆಯುತ್ತಿದೆ. ಇದು ಯಕ್ಷಗಾನದ ಮೂಲ ಸತ್ವಕ್ಕೆ ಕೊಡಲಿ ಏಟು ನೀಡಿದಂತಾಗುತ್ತಿದೆ. ಕಲೆಗೆ, ಕಲೆಯ ಬೆಳವಣಿಗೆಗೆ ಇದು ಮಾರಕ. ಯಕ್ಷಗಾನದ ಮೂಲ ಸತ್ವ ಏನಿದೆಯೋ ಅದನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಉದ್ದೇಶದಿಂದ ನಾವು ಯಕ್ಷಗಾನವನ್ನು ಕಲಿಸುತ್ತಿದ್ದೇವೆ. ಕಳೆದ 8 ವರ್ಷಗಳಿಂದ ಲಾಭದ ಉದ್ದೇಶಕ್ಕಾಗಲಿ, ವಾಣಿಜ್ಯ ಉದ್ದೇಶಕ್ಕಾಗಲಿ ನಾವು ಯಕ್ಷಗಾನವನ್ನು ಬಳಸಿಲ್ಲ. ಮಕ್ಕಳಿಗೂ ವರ್ಷಗಟ್ಟಲೆ ತಾಳಾಭ್ಯಾಸ ನಡೆಸಿ, ಪ್ರಸಂಗಗಳ ಕುರಿತು ಜ್ಞಾನ ತುಂಬಿ, ವೇಷ-ಭೂಷಣಗಳ ಕುರಿತ ಅರಿವು ಮೂಡಿಸಿ ಪ್ರದರ್ಶನ ನೀಡುತ್ತಿದ್ದೇವೆ. ಯಕ್ಷಗಾನದ ಮೂಲ ಏನಿದೆಯೋ ಅದು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸಬೇಕು ಎಂಬುವುದೇ ನಮ್ಮ ಮೂಲ ಉದ್ದೇಶವೂ ಆಗಿದೆ.

ಪ್ರಶ್ನೆ: ಪ್ರಸಕ್ತ ಹೊಸ ಪೀಳಿಗೆಯವರಿಗೆ ಯಕ್ಷಗಾನ ಕಲೆಯನ್ನು ಕಲಿಸಲು ಯಾವ ಪ್ರಯತ್ನಗಳು ನಡೆಯುತ್ತಿವೆ?

ಅಜೀತ್ ಪ್ರಭು: ಯಕ್ಷಗಾನ ಕಲೆಯನ್ನು ಮಕ್ಕಳಿಗೆ ಹೆಚ್ಚಿನ ಆಧ್ಯತೆಯಲ್ಲಿ ಕಲಿಸುತ್ತಿದ್ದೇನೆ. ಅವರು ಸರಿಯಾಗಿ ಕಲಿಕೆಯ ರೂಪದಲ್ಲಿ ಕಲಿಯುತ್ತಾರೆ. ಇದು ಹೆಚ್ಚು ಪರಿಣಾಮ ಬೀರುತ್ತೆ. ಇದರಿಂದ ಈ ಕಲೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತೆ. ಇದು ಮುಂದೆ ಕಲೆಯ ಉಳಿವಿಗೆ ಸಹಕಾರಿ ಆಗುತ್ತೆ. ಮಕ್ಕಳಿಗೆ ಮಕ್ಕಳ ಪ್ರಸಂಗವನ್ನೇ ನೀಡಿ ಪ್ರದರ್ಶನಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಇದರಿಂದ ಇನ್ನಷ್ಟು ಮಕ್ಕಳಿಗೆ ಆಸಕ್ತಿ ಕೂಡ ಹುಟ್ಟುತ್ತದೆ. ಇದೆಲ್ಲವೂ ಯಕ್ಷಗಾನ ಮುಂದಿನ ಪೀಳಿಗೆಗೆ ಉಳಿಯುವಂತೆ ಮಾಡುವಲ್ಲಿ ಸಹಕರಿಸುತ್ತದೆ.

ಪ್ರಶ್ನೆ: ವಿದೇಶದಲ್ಲಿರುವ ಕಲಾವಿದರಿಗೆ ಯಕ್ಷಗಾನ ಅಭ್ಯಾಸದಲ್ಲಿ ಏನೇನು ಕಷ್ಟಗಳು, ತೊಡಕುಗಳು ಎದುರಾಗುತ್ತಿವೆ…?

ಅಜೀತ್ ಪ್ರಭು: ವಿದೇಶಿ ನೆಲದಲ್ಲಿ ಮಕ್ಕಳಿಗೆ ಕಲಿಸುವುದೆಂದರೆ ಸುಲಭದ ಕೆಲಸವಲ್ಲ. ಪ್ರಮುಖವಾಗಿ ಭಾಷೆಯ ಜೊತೆಗೆ ಹಲವು ರೀತಿಯ ಅಡೆತಡೆಗಳು ಎದುರಾಗಿತ್ತದೆ. ದುಬೈ, ಯುಎಸ್ಎ ಮುಂತಾದ ಕಡೆಗಳಲ್ಲಿ ಯಕ್ಷಗಾನಕ್ಕೆ ಅದರದ್ದೇ ಆದ ಪ್ರೇಕ್ಷಕರಿದ್ದಾರೆ. ಆದರೆ ಜರ್ಮನಿಯಂಥ ದೇಶದಲ್ಲಿ ಕರಾವಳಿ ಭಾಗದ ಜನರ ಸಂಖ್ಯೆ ತುಂಬಾ ಕಡಿಮೆ. ಜೊತೆಗೆ ಯಕ್ಷಗಾನ ಅಭಿಮಾನಿಗಳು, ಪ್ರೇಕ್ಷಕರಿಲ್ಲ. ನಾವು ಸುಮಾರು 50ಕ್ಕೂ ಹೆಚ್ಚು ಕಡೆ ಪ್ರದರ್ಶನ ಮಾಡಿದ್ದೇವೆ. ನಮಗೆ ಊರಿನ ಪ್ರೇಕ್ಷಕರು ಸಿಕ್ಕಿದ್ದು ಬಹಳ ಕಡಿಮೆ. ಇಲ್ಲಿ ಚಳಿ ಜಾಸ್ತಿ, ಇಂಥ ವಾತಾವರಣದಲ್ಲಿಯೇ ಅಭ್ಯಾಸ, ಪ್ರದರ್ಶನವನ್ನು ನೀಡುವುದು ಕಷ್ಟ ಆಗುತ್ತೆ. ಅಭ್ಯಾಸದ ವೇಳೆ ಶಬ್ದವನ್ನು ಕೂಡ ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗುತ್ತೆ. ಪ್ರದರ್ಶನ ನೀಡಲು ವೇದಿಕೆ, ರಂಗಸ್ಥಳ ಕೂಡ ನಾವೇ ಸಿದ್ಧಪಡಿಸಬೇಕಾಗುತ್ತದೆ. ಮೈಕ್, ಬೆಳಕು, ಅದನ್ನು ಬಳಸುವಂಥ ತಂತ್ರಜ್ಞರ ಲಭ್ಯತೆ ಕೂಡ ನಮಗೆ ದೊಡ್ಡ ಸವಾಲೇ ಆಗಿದೆ.

ಪ್ರಶ್ನೆ: ನಿಮ್ಮ ವೃತ್ತಿ ಜೊತೆ ಯಕ್ಷಗಾನ…ಎರಡನ್ನೂ ಹೇಗೆ ಸಮತೋಲನ ಮಾಡಿಕೊಳ್ಳುತ್ತೀರಿ?

ಅಜೀತ್ ಪ್ರಭು: ನಾನು ವೃತ್ತಿಯಲ್ಲಿ ಜರ್ಮನಿಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಅಲ್ಲಿ ಬೆಳಗ್ಗೆ 9ರಿಂದ ಸಂಜೆ 6ರ ವರಗೆ ಕೆಲಸ ಮಾಡುತ್ತೇನೆ. ನನ್ನ ಪತ್ನಿ ಕೂಡ ಕರ್ನಾಟಕ, ಹಿಂದೂಸ್ತಾನಿ ಸಂಗೀತ ಕಲಾವಿದೆ ಆಗಿದ್ದು, ಇಲ್ಲಿ ಮಕ್ಕಳಿಗೆ ಸಂಗೀತ ತರಬೇತಿಯನ್ನು ನೀಡುತ್ತಿರುವುದರಿಂದ ಅವಳಿಂದ ನನಗೆ ಉತ್ತಮ ಬೆಂಬಲ, ಸಹಕಾರ ಸಿಗುತ್ತಿದೆ. ಇದರಿಂದ ನನ್ನ ವೃತ್ತಿ ಜೀವನದ ಜೊತೆ ಯಕ್ಷಗಾನಕ್ಕೂ ಸಮಯ ನೀಡಲು ಸಾಧ್ಯವಾಗುತ್ತಿದೆ. ವೃತ್ತಿ ಜೀವನದೊಂದಿಗೆ ಯಕ್ಷಗಾನವನ್ನು ಮುಂದುವರಿಸಿಕೊಂಡು ಹೋಗುವುದು ಈಗ ದೊಡ್ಡ ಸಾಹಸದ ಕೆಲಸವೇ ಆಗಿದೆ. ಆದರೆ ನಾನು ಯಕ್ಷಗಾವನ್ನು ಇಷ್ಟಪಟ್ಟು ಕಲಿಸುತ್ತಿರುವುದರಿಂದ ನನಗೆ ಅದು ದೊಡ್ಡ ಕೆಲಸದ ರೀತಿ ಅನಿಸುತ್ತಿಲ್ಲ.

ಪ್ರಶ್ನೆ: ತವರಿನ ಯಕ್ಷಗಾನ ಮತ್ತು ವಿದೇಶದಲ್ಲಿನ ಯಕ್ಷಗಾನದಲ್ಲಿ ನಿಮಗೆ ಕಂಡ ಮುಖ್ಯ ವ್ಯತ್ಯಾಸವೇನು?

ಅಜೀತ್ ಪ್ರಭು: ತವರಿನ ಯಕ್ಷಗಾನಕ್ಕೂ ಮತ್ತು ವಿದೇಶದಲ್ಲಿನ ಯಕ್ಷಗಾನಕ್ಕೂ ತುಂಬಾನೇ ವ್ಯತ್ಯಾಸವಿದೆ. ನಮ್ಮ ದೇಶದಲ್ಲಿರುವಂಥ ವೇದಿಕೆ, ರಂಗಸ್ಥಳ ಇಲ್ಲಿ ಸಿಗಲ್ಲ. ಅಲ್ಲಿರುವ ವೃತ್ತಿಪರ ಯಕ್ಷಗಾನ ಕಲಾವಿದರು ಇಲ್ಲಿ ಯಾರೂ ಇಲ್ಲ. ನಾವು ಇಲ್ಲಿ ಯಕ್ಷಗಾನ ಪ್ರದರ್ಶನ ಮಾಡುವಾಗ ಹಿಮ್ಮೇಳನ ಇರಲ್ಲ, ಬದಲಾಗಿ ರೆಕಾರ್ಡಿಂಗ್ ಹಾಕುತ್ತೇವೆ. ಮೇಕಪ್ ಮ್ಯಾನ್, ವೇಷ-ಭೂಷಣ ಮಾಡಲು ಹಲವು ತಿಂಗಳ ಸಿದ್ಧತೆ ಬೇಕಾಗುತ್ತದೆ. ಜರ್ಮನಿಯಂಥ ದೇಶದಲ್ಲಿ ಯಕ್ಷಗಾನ ಪ್ರೇಕ್ಷಕರಿಗಿಂತಲೂ ಯಕ್ಷಗಾನೇತರ ಪ್ರೇಕ್ಷಕರು ಜಾಸ್ತಿ ಇದ್ದಾರೆ. ಅವರನ್ನು ಗಂಟೆಗಟ್ಟಲೆ ಒಂದೆಡೆ ಕೂತು ನೋಡುವಂತೆ ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ಪ್ರಸಂಗವನ್ನು ಸಣ್ಣ ಅವಧಿಯಲ್ಲಿಯೇ ಮುಗಿಸುವಂತೆ ನೋಡಿಕೊಳ್ಳಬೇಕಾಗುತ್ತದೆ.

ಪ್ರಶ್ನೆ: ಜರ್ಮನಿ-ಯುರೋಪಿನಂತಹ ವಿದೇಶಿ ವೇದಿಕೆಯಲ್ಲಿ ಪ್ರದರ್ಶನ ನೀಡಿದ ನಿಮ್ಮ ಅನುಭವ ಹೇಗಿತ್ತು?

ಅಜೀತ್ ಪ್ರಭು: ಇಲ್ಲಿನ ನೆಲದಲ್ಲಿ ನನ್ನ ಯಕ್ಷಗಾನವನ್ನು ಆರಂಭದಲ್ಲಿ ನೋಡಿದವರೆಲ್ಲರೂ ಇಷ್ಟಪಟ್ಟರು. ಅಭಿನಂದಿಸುವ ಮೂಲಕ ಇನ್ನಷ್ಟು ಹುರಿದುಂಬಿಸಿ ನನ್ನನ್ನು ಮತ್ತಷ್ಟು ಯಕ್ಷಗಾನಕ್ಕೆ ಒಗ್ಗಿಕೊಳ್ಳುವಂತೆ ಮಾಡಿದರು. ನಮ್ಮ ಪ್ರದರ್ಶನ ಕಂಡ ಜನ ಹಲವು ನಿಮಿಷಗಳ ಚಪ್ಪಾಳೆಯ ಮೂಲಕ ತಮ್ಮ ಅಭಿನಂದನೆ, ಬೆಂಬಲವನ್ನು ನೀಡಿದ್ದು, ಇದು ನಮ್ಮ ಯಕ್ಷಗಾನ ಬೆಳವಣಿಗೆಗೆ ಪೂರಕವಾಯಿತು. ನಮ್ಮ ಪ್ರದರ್ಶನ ನೋಡಿ, ಸಂತೋಷಪಟ್ಟ ಜರ್ಮನ್, ಯುರೋಪಿಯನ್ಸ್ ಸ್ಥಳೀಯರು ಕೂಡ ಹೆಮ್ಮೆಪಟ್ಟು ನಮಗೆ ಒಳ್ಳೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಪ್ರಶ್ನೆ: ಯಕ್ಷಗಾನ ನಿಮ್ಮ ಜೀವನಕ್ಕೆ ನೀಡಿದ ದೊಡ್ಡ ಕೊಡುಗೆ ಏನು?

ಅಜೀತ್ ಪ್ರಭು: ಯಕ್ಷಗಾನದಿಂದ ನನಗೊಂದು ಸಂತೃಪ್ತಿ ಇದೆ. ಯಕ್ಷಗಾನ ಕಲಿತಿದ್ದಕ್ಕೆ ಸಾರ್ಥಕತೆಯಿದೆ. ಈ ಕಲೆಯ ಮೇಲೆ ನನಗೆ ಭಾವನಾತ್ಮಕ ಪ್ರೀತಿ ಇರುವುದರಿಂದ ಎಲ್ಲೇ ಹೋದರು ಇತರರಿಗೆ ಕಲಿಸಲು ನನಗೊಂದು ಅವಕಾಶ ಕೊಟ್ಟಿದೆ. ಯಕ್ಷಗಾನದಿಂದ ನನ್ನನ್ನು ಜನ ಗುರುತಿಸುತ್ತಾರೆ. ನನಗೆ ಎಲ್ಲೆಡೆ ಮನ್ನಣೆಯೂ ಸಿಕ್ಕಿದೆ. ಕಲಿಯುವ ಮಕ್ಕಳು ಗುರುಗಳಂತೆ ಗೌರವ ನೀಡುವಾಗ ಹೆಮ್ಮೆ ಅನಿಸುತ್ತದೆ. ಇದಕ್ಕಿಂತ ಮಿಗಿಲಾಗಿ ನನಗೆ ಇನ್ನೇನು ಬೇಕು.

ಪ್ರಶ್ನೆ: ವಿದೇಶದಲ್ಲಿದ್ದುಕೊಂಡು ಯಕ್ಷಗಾನ ಕಲೆಯನ್ನು ಪೋಷಿಸುತ್ತಿರುವ ತಾವು, ರಾಜ್ಯ ಸರಕಾರಕ್ಕೆ ಏನಾದರೂ ಬೇಡಿಕೆಯನ್ನು ಇಡಲು ಇಚ್ಛಿಸುತ್ತೀರಾ…?

ಅಜೀತ್ ಪ್ರಭು: ಯಕ್ಷಗಾನ ಕಲೆಗೆ ವಿದೇಶದಲ್ಲಿ ಬಿಡಿ, ನಮ್ಮ ನಾಡಿನಲ್ಲಿಯೇ ಸರಿಯಾದ ಮನ್ನಣೆ ಸಿಗುತ್ತಿಲ್ಲ. ಯಕ್ಷಗಾನ ಅಕಾಡೆಮಿ ಇದ್ದರೂ ಯಕ್ಷಗಾನ ಕಲಾವಿದರಿಗೆ ಏನು ಬೇಕು, ಅದೇ ಸಿಗುತ್ತಿಲ್ಲ. ನಾವು ವಿದೇಶದಲ್ಲಿ ಹವ್ಯಾಸಿ ಕಲಾವಿದರಾಗಿದ್ದು, ಅದನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯವೆಸಗುತ್ತಿದ್ದೇವೆ. ಆದರೆ ವಿದೇಶಗಳಲ್ಲಿ ಅದೆಷ್ಟೋ ಮಂದಿ ಮಕ್ಕಳು ಯಕ್ಷಗಾನ ಕಲಿಯುತ್ತಿದ್ದಾರೆ. ಅವರ ಕಲಿಕೆಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅನಿವಾಸಿ ಯಕ್ಷಗಾನ ಅಕಾಡೆಮಿ ಸ್ಥಾಪಿಸಿ, ಆ ಮೂಲಕ ವಿದೇಶದಲ್ಲಿ ಯಕ್ಷಗಾನ ಕಲಿಯುವ ಮಕ್ಕಳಿಗೆ ಸರ್ಟಿಫಿಕೇಟ್ ಕೊಡುವಂತ ಕಾರ್ಯ ನಡೆಯಬೇಕು. ಇದರಿಂದ ಯಕ್ಷಗಾನ ಕಲೆಯನ್ನು ವಿಶ್ವ ಮಟ್ಟದಲ್ಲಿ ಗುರುತಿಸುವ, ಮನ್ನಣೆ ನೀಡುವ ಕಾರ್ಯ ಮಾಡಿದಂತಾಗುತ್ತದೆ. ಜೊತೆಗೆ ಯಕ್ಷಗಾನ ಕಲಿಯುವ ಮಕ್ಕಳಿಗೂ ಪ್ರೇರಣೆ ನೀಡಿದಂತಾಗುತ್ತದೆ. ಇದರಿಂದ ನಾವು ಯಕ್ಷಗಾನವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ.

ಪ್ರಶ್ನೆ: ಮೊದಲ ಬಾರಿಗೆ ಯಕ್ಷಗಾನವನ್ನು ಅಮೇರಿಕದ ಅಟ್ಲಾಂಟಾದಲ್ಲಿ ಕೊಂಕಣಿ ಭಾಷೆಯಲ್ಲಿ ಪ್ರಸ್ತುತ ಪಡಿಸಿದ ಅನುಭವ ಹೇಗಿತ್ತು…?

ಅಜೀತ್ ಪ್ರಭು: 2016ರಲ್ಲಿ ಯಕ್ಷಗಾನವನ್ನು ಅಮೇರಿಕದ ಅಟ್ಲಾಂಟಾದಲ್ಲಿ ಕೊಂಕಣಿ ಭಾಷೆಯಲ್ಲಿ ಮೊದಲ ಬಾರಿಗೆ ಪ್ರದರ್ಶನ ಮಾಡಿದ್ದೆವು. ಈ ವೇಳೆ ವಿಶ್ವದ ಮೊದಲ ಕೊಂಕಣಿ ಯಕ್ಷಗಾನ ವೀಡಿಯೋ ಚಿತ್ರಗಳನ್ನು ನಿರ್ಮಿಸಿ ಬಿಡುಗಡೆ ಮಾಡಿದ್ದೆವು. ಇದೊಂದು ನಮಗೆ ಮಹತ್ವದ ಮೈಲಿಗಲ್ಲು ಅನ್ನಬಹುದು. ಅದಕ್ಕೂ ಮುನ್ನ ಉಡುಪಿ, ಕರಾವಳಿ ಭಾಗದಲ್ಲಿ ಕೊಂಕಣಿ ಭಾಷೆಯಲ್ಲಿ ಯಕ್ಷಗಾನ ಮಾಡಿದ್ದರು. ಆದರೆ ಅಮೇರಿಕದಲ್ಲಿ ಮಾಡಿದ್ದ ಪ್ರದರ್ಶನ ನಮಗೆ ಬಹಳ ಹೊಸದಾಗಿತ್ತು. ಕನ್ನಡೇತರ ಪ್ರೇಕ್ಷಕರು ಯಕ್ಷಗಾನವನ್ನು ಬಹಳ ಇಷ್ಟಪಟ್ಟರು. ಜಗತ್ತಿನಾದ್ಯಂತವಿರುವ ಕೊಂಕಣಿ ಭಾಷಿಗರು ಯಕ್ಷಗಾನ ನೋಡಿ ಆನಂದಪಟ್ಟುಕೊಂಡರು.

ಪ್ರಶ್ನೆ: ವಿದೇಶದಲ್ಲಿ ಯಕ್ಷಗಾನವನ್ನು ಇನ್ನಷ್ಟು ಜನರಿಗೆ ತಲುಪಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಏನನ್ನಾದರೂ ಬಯಸುತ್ತೀರಾ….?

ಅಜೀತ್ ಪ್ರಭು: ವಿದೇಶದಲ್ಲಿರುವ ಮಕ್ಕಳ ಕಲಿಕೆಗೆ ಹೆಚ್ಚಿನ ಆಧ್ಯತೆ, ಒತ್ತು ನೀಡಬೇಕು. ಅನಿವಾಸಿ ಭಾರತೀಯರಿಗಾಗಿಯೇ ಯಕ್ಷಗಾನ ಬೋರ್ಡ್ ಅಂತ ಮಾಡಿ, ಯಕ್ಷಗಾನ ಕಲಿತ ಮಕ್ಕಳಿಗೆ ಅಧಿಕೃತವಾಗಿ ಸರ್ಟಿಫಿಕೇಟ್ ನೀಡುವಂತಾಗಬೇಕು. ಅನಿವಾಸಿ ಮಕ್ಕಳಿಗೆ ಯಕ್ಷಗಾನ ಕಲಿಯಲು ಇನ್ನಷ್ಟು ಪ್ರೇರಣೆ ನೀಡುವ ಕಾಯಕ ನಡೆಯಬೇಕು. ಇಲ್ಲಿ ಯಕ್ಷಗಾನ ಕಲಿಯುವ ಮಕ್ಕಳು ನಮ್ಮ ಕಲಿಕೆಗೆ, ಕಲೆಗೆ ಮನ್ನಣೆ ಸಿಗಬೇಕೆಂದು ಬಯಸುತ್ತಾರೆ. ಈ ದಿಸೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಕಾರ್ಯಪ್ರವೃತವಾಗಬೇಕು.

ಪ್ರಶ್ನೆ: ವಿದೇಶದಲ್ಲಿರುವ ಕನ್ನಡ ಸಂಘಟನೆಗಳು ಯಕ್ಷಗಾನಕ್ಕೆ ಯಾವ ರೀತಿಯ ಬೆಂಬಲ ನೀಡುತ್ತಿವೆ?

ಅಜೀತ್ ಪ್ರಭು: ಕನ್ನಡಪರ ಸಂಘಟನೆಗಳಿಂದಲೇ ಇಲ್ಲಿ ನಾವು ಯಕ್ಷಗಾನ ಪ್ರದರ್ಶನ, ಪ್ರಚಾರ ಮಾಡಲು ಸಾಧ್ಯವಾಗಿದೆ. ಆರಂಭದಲ್ಲಿ ಕರ್ನಾಟಕ ರಾಜ್ಯೋತ್ಸವದಂಥ ಕಾರ್ಯಕ್ರಮದ ಮೂಲಕವೇ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದೆವು. ಬಳಿಕ ಯಕ್ಷಗಾನ ತಂಡವನ್ನು ಮಾಡಿ, ಅನಂತರ ಸಂಘಟನೆ ಮಾಡಿ ಆ ಮೂಲಕ ಪ್ರದರ್ಶನವನ್ನು ನೀಡುತ್ತಿದ್ದೇವೆ. ಈಗಲೂ ಯೂರೋಪಿನ ಪ್ರತಿಯೊಂದು ನಗರಗಳಲ್ಲಿ ಕನ್ನಡ ಸಂಘಗಳ ಕರ್ನಾಟಕ ರಾಜ್ಯೋತ್ಸವ, ಯುಗಾದಿಯಂಥ ಕಾರ್ಯಕ್ರಮಗಳಲ್ಲಿ ನಮ್ಮ ಪ್ರದರ್ಶನವನ್ನು ನೀಡುತ್ತಿದ್ದೇವೆ. ಜೊತೆಗೆ ಇಂಡೋ ಜರ್ಮನ್ ಸಂಘಟನೆಗಳು, ಇತರ ಭಾರತೀಯ ಸಂಘಟನೆಗಳು ಕೂಡ ಸಾಥ್ ನೀಡುತ್ತಿರುವುದರಿಂದ ಇಲ್ಲಿ ಯಕ್ಷಗಾನವನ್ನು ಪರಿಚಯಿಸಲು ಸಾಧ್ಯವಾಗುತ್ತಿದೆ.

ಪ್ರಶ್ನೆ: ಯಕ್ಷಗಾನವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಏನು ಮಾಡಬಹುದು?

ಅಜೀತ್ ಪ್ರಭು: ಯಕ್ಷಗಾನವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಮೊದಲ ಆಧ್ಯತೆ ಯಕ್ಷಗಾನ ಕಲಿಕೆ. ಕಲಿಕೆಯ ಮೂಲಕವೇ ಯಕ್ಷಗಾನವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಸಾಧ್ಯ. ಕನ್ನಡಿಗರು, ಭಾರತೀಯರಿಗೆ ಯಕ್ಷಗಾನದ ಸತ್ವ, ಕಲೆಯ ಮಹತ್ವವನ್ನು ತಿಳಿಸುವ ಕಾರ್ಯ ನಡೆಯಬೇಕು. ಭಾರತೀಯರು ಇದರ ಬಗ್ಗೆ ಆಧ್ಯತೆ ನೀಡಿ, ಪರಿಚಯಿಸುವ ಕಾರ್ಯ ಮಾಡಿದರೆ ಖಂಡಿತವಾಗಿಯೂ ಜಾಗತಿಕ ಮಟ್ಟದಲ್ಲಿ ಯಕ್ಷಗಾನವನ್ನು ಪರಿಚಯಿಸಲು ಸಾಧ್ಯವಾಗುತ್ತದೆ.

ಪ್ರಶ್ನೆ: ಯಕ್ಷಗಾನಕ್ಕಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಗುರುತಿಸುವ ಕಾರ್ಯ ನಡೆದಿದೆಯೇ…?(ನಿಮಗೆ ಸಿಕ್ಕ ಗೌರವ, ಪ್ರಶಸ್ತಿ, ಸನ್ಮಾನ)

ಅಜೀತ್ ಪ್ರಭು: ಯಕ್ಷಗಾನವನ್ನು ಇಷ್ಟಪಟ್ಟು ಹವ್ಯಾಸಕ್ಕಾಗಿ ಮಾಡುತ್ತಿದ್ದೇನೆ ಹೊರತು ಗುರುತಿಸುವಂತೆ ಮಾಡುವುದಕ್ಕಾಗಿ ಅಲ್ಲ. ಯಾವುದೇ ಅಪೇಕ್ಷೆ, ನಿರೀಕ್ಷೆಯಂತೂ ಇಲ್ಲವೇ ಇಲ್ಲ. ಕಮರ್ಷಿಯಲ್ ಆಗಿಯೂ ಮಾಡುತ್ತಿಲ್ಲ. ಉದ್ಯೋಗ ಅಂತ ನನಗೆ ಬೇರೇನೇ ಇದೆ. ನಾನು ದುಡಿದ ಹಣದಿಂದಲೇ ಯಕ್ಷಗಾನಕ್ಕೆ ಸಂಬಂಧಿಸಿದ ಇತರ ಕಾರ್ಯಗಳನ್ನು ಮಾಡುತ್ತಿದ್ದೇನೆ. ಕಾರಣ ನಾನು ಬೆಳೆದು ಬಂದ ಪರಿಸರ, ಯಕ್ಷಗಾನದ ಮೇಲಿನ ಪ್ರೀತಿ, ನನ್ನ ಅಪ್ಪ, ದೊಡ್ಡಪ್ಪ ಯಾವುದೇ ಫಲಾಪೇಕ್ಷೆ ಇಲ್ಲದೆ ಯಕ್ಷಗಾನಕ್ಕಾಗಿ ನೀಡಿದ ಸೇವೆ. ಅದೇ ನನಗೂ ಸ್ಪೂರ್ತಿ. ಆದರೂ ದೇಶ-ವಿದೇಶದ ನೆಲದಲ್ಲಿ ಜನ ನನ್ನನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಯುರೋಪಿನ ನೆದರ್ಲಾಂಡ್ ದೇಶದ ಐಂಧೋವೆನ್ ನಗರದ ಶ್ರೀಗಂಧ ಹಾಲ್ಯಾಂಡ್ ಕನ್ನಡ ಬಳಗವು ‘ಶ್ರೀಗಂಧ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ನನಗೆ ಈ ಬಿರುದು, ಸನ್ಮಾನಕ್ಕಿಂತಲೂ ನಾನು ಕಲಿಸುವ ಮಕ್ಕಳು ನೀಡುವ ಗೌರವ, ಪ್ರೀತಿಯೇ ದೊಡ್ಡ ಪ್ರಶಸ್ತಿ-ಸನ್ಮಾನಕ್ಕೆ ಸಮಾನ ಎನ್ನುವ ಭಾವ ನನ್ನದು.

ಪ್ರಶ್ನೆ: ಪ್ರಸಕ್ತ ಎಲ್ಲೆಲ್ಲಿ ತಾವು ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದೀರಿ…?

ಅಜೀತ್ ಪ್ರಭು: ಸೋಮವಾರದಿಂದ ಶುಕ್ರವಾರದ ವರಗೆ ನಾನು ಆಫೀಸಿನ ಕೆಲಸದಲ್ಲಿ ತಲ್ಲೀನನಾಗಿರುತ್ತೇನೆ. ಅದರ ಮಧ್ಯೆ ಸಂಜೆ ವೇಳೆ ಮಕ್ಕಳಿಗೆ ಆನ್ ಲೈನ್ ತರಗತಿ ಮಾಡುತ್ತೇನೆ. ಶನಿವಾರ ಮತ್ತು ರವಿವಾರ ನೇರ ತರಗತಿಯನ್ನು ನೀಡುತ್ತೇನೆ. ನಾನು ಇರುವ ಕಡೆಯಿಂದ ಸುಮಾರು 400ಕಿಮೀ. ದೂರವಿರುವ ಮ್ಯೂನಿಕ್ ಎಂಬಲ್ಲಿಗೆ ತಿಂಗಳಾಂತ್ಯಕ್ಕೆ ಬುಲೆಟ್ ಟ್ರೈನಲ್ಲಿ ತೆರಳಿ ಅಲ್ಲಿ ಮಕ್ಕಳಿಗೆ ತರಗತಿ ನಡೆಸುತ್ತೇನೆ. ಇನ್ನೊಂದು ಕಡೆ 2025ರಿಂದ ನೆದರ್ಲಾಂಡ್ ದೇಶದ ಐಂಧೋವೆನ್ ನಗರಕ್ಕೆ ತೆರಳಿ ಅಲ್ಲಿ ಕೂಡ ಮಕ್ಕಳಿಗೆ ತರಗತಿ ನಡೆಸುತ್ತೇನೆ. ಅಲ್ಲದೇ ಕಿಶೋರ್ ಮಟಗೋಡು ಅವರ ನೇತೃತ್ವದಲ್ಲಿ ಬೆಲ್ಜಿಯಂನ ಬ್ರಸ್ಸೆಲ್ಸ್‌ನಲ್ಲಿಯೂ ಯಕ್ಷಗಾನ ತರಗತಿಗಳನ್ನು ಆರಂಭಿಸಿದ್ದೇನೆ. ಜೊತೆಗೆ ವಾರಾಂತ್ಯದಲ್ಲಿ ಕೆಲವು ಕಡೆ ಪ್ರದರ್ಶನ ಕೂಡ ನೀಡುತ್ತಿದ್ದೇನೆ.

Hot this week

ದುಬೈಯಲ್ಲಿ ಸಂಪನ್ನಗೊಂಡ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವೈಭವ

ದುಬೈ: ಅರಬ್ ಸಂಯುಕ್ತ ಸಂಸ್ಥಾನ ವಾಣಿಜ್ಯ ನಗರಿ ದುಬೈಯಲ್ಲಿ ಸಾಮೂಹಿಕ ಶ್ರೀ...

ಸಲಾಲದಲ್ಲಿ ಅದ್ದೂರಿಯಾಗಿ ನಡೆದ ಕನ್ನಡಿಗರ ‘ಸ್ನೇಹ ಸಂಗಮ’ ಕಾರ್ಯಕ್ರಮ

ಸಲಾಲ(ಒಮಾನ್): ಇಲ್ಲಿನ ಅನಿವಾಸಿ ಕನ್ನಡಿಗರ ಅನ್ನೂರ್ ಎಜುಕೇಶನಲ್ ಸೆಂಟರ್ ವತಿಯಿಂದ 'ಸ್ನೇಹ...

ಫೆಬ್ರವರಿ 1ರಂದು ಶಾರ್ಜಾದಲ್ಲಿ ‘ಮಾರ್ಗದೀಪ ಪ್ರೀಮಿಯರ್ ಲೀಗ್-4’ ಕ್ರಿಕೆಟ್ ಟೂರ್ನಮೆಂಟ್; ಜರ್ಸಿ ಬಿಡುಗಡೆ

ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿವಂಗತ ವಸಂತ್ ಬೇಕಲ್ ಸ್ಮರಣಾರ್ಥ...

ದುಬೈ; ‘ಗಲ್ಫ್ ಫುಡ್ 2026’ ಮೇಳದಲ್ಲಿ ಮಿಂಚಿದ ‘ನಂದಿನಿ’

ದುಬೈ: ಯುಎಇಯಲ್ಲಿ 31 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವದ ಅತಿದೊಡ್ಡ...

ಫ್ಲೋರಿಡಾ; ತ್ಯಾಗರಾಜ–ಪುರಂದರ ದಾಸರ ಆರಾಧನಾ ಉತ್ಸವ ಭಕ್ತಿಭಾವದಿಂದ ಆಚರಣೆ

ಫ್ಲೋರಿಡಾ: ಇತ್ತೀಚೆಗೆ ತ್ಯಾಗರಾಜ ಹಾಗೂ ಪುರಂದರ ದಾಸರ ಆರಾಧನಾ ಉತ್ಸವವನ್ನು ಸಾಂಸ್ಕೃತಿಕ...

Related Articles

Popular Categories