ಯುಎಇಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ ಯುಎಇ; ದುಬೈ, ಅಬುಧಾಬಿ,...

ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ ಯುಎಇ; ದುಬೈ, ಅಬುಧಾಬಿ, ರಾಸ್ ಅಲ್ ಖೈಮಾದಲ್ಲಿ ಕಣ್ಮನ ಸೆಳೆದ ಸಿಡಿಮದ್ದು ಪ್ರದರ್ಶನ, ಡ್ರೋನ್ ಶೋಗಳು!

ದುಬೈ: ಹೊಸ ವರ್ಷವನ್ನು ಯುಎಇ ಬಹಳ ಅದ್ಧೂರಿಯಾಗಿ ಸ್ವಾಗತಿಸಿದೆ. 2025ಕ್ಕೆ ವಿದಾಯ ಹೇಳಿ 2026ನ್ನು ದುಬೈ, ಅಬುಧಾಬಿ, ಶಾರ್ಜಾ, ಅಜ್ಮಾನ್, ರಾಸ್ ಅಲ್ ಖೈಮಾ ಸೇರಿದಂತೆ ಎಲ್ಲ ಎಮಿರೇಟ್ಸ್‌ಗಳ ಜನರು ಸಂಭ್ರಮ-ಸಡಗರದಿಂದ ಬರಮಾಡಿಕೊಂಡರು.

Photo: Gulfnews

ಪ್ರತಿ ವರ್ಷ ಹೊಸ ವರ್ಷಾಚರಣೆಯನ್ನು ಇಡೀ ಜಗತ್ತೇ ತನ್ನತ್ತ ನೋಡುವಂತೆ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿರುವ ದುಬೈ, ಅಬುಧಾಬಿ, ರಾಸ್ ಅಲ್ ಖೈಮಾದಲ್ಲಿ ಈ ಬಾರಿಯೂ ದಾಖಲೆಯ ಸಿಡಿಮದ್ದು ಪ್ರದರ್ಶನ, ಡ್ರೋನ್ ಶೋಗಳು ಇಡೀ ಯುಎಇಯನ್ನು ಬೆಳಗಿಸಿದವು.

Photo: Mohammed Afridi Kaup

ಯುಎಇಯ ಪ್ರಮುಖ ಆಕರ್ಷಣೆಯಾಗಿರುವ ದುಬೈನ ವಿಶ್ವ ವಿಖ್ಯಾತಿ ಗಳಿಸಿರುವ ವಿಶ್ವದ ಅತ್ಯಂತ ಎತ್ತರವಾದ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾ ಈ ಬಾರಿಯೂ ಹೊಸ ವರ್ಷದ ಆಚರಣೆಯ ಕೇಂದ್ರಬಿಂದುವಾಗಿತ್ತು. ಸುಮಾರು 828 ಮೀಟರ್ (2,717 ಅಡಿ) ಎತ್ತರವಿರುವ ಈ ಟವರ್‌ನ ವಿವಿಧ ಅಂತಸ್ತುಗಳಿಂದ ಸಾವಿರಾರು ಸಿಡಿಮದ್ದುಗಳನ್ನು ಸಿಡಿಸಲಾಯಿತು. ಜೊತೆಗೆ ಲೇಸರ್ ಶೋ ಇನ್ನಷ್ಟು ಮೆರುಗು ತಂದುಕೊಟ್ಟಿತು. ಹಲವು ನಿಮಿಷಗಳ ಕಾಲ ನಡೆದ ಈ ಅದ್ಭುತ ಪ್ರದರ್ಶನವನ್ನು ವೀಕ್ಷಿಸಲು ಸಾವಿರಾರು ಸ್ಥಳೀಯರು ಮತ್ತು ಪ್ರವಾಸಿಗರು ಜಮಾಯಿಸಿದ್ದರು. ಈ ಅತೀ ಎತ್ತರದ ಕಟ್ಟಡವು ಬಣ್ಣಬಣ್ಣದ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.

ಇದಲ್ಲದೆ ದುಬೈನ ಗ್ಲೋಬಲ್ ವಿಲೇಜ್, ದುಬೈ ಫ್ರೇಮ್, ಅಟ್ಲಾಂಟಿಸ್ ದ ಪಾಮ್, ಬ್ಲೂವಾಟರ್ಸ್, ದಿ ಬೀಚ್ (JBR), ದುಬೈ ಫೆಸ್ಟಿವಲ್ ಸಿಟಿ, ಅಲ್ ಸೀಫ್ ಸೇರಿದಂತೆ ನಗರದ ಸುಮಾರು 40 ಸ್ಥಳಗಳಲ್ಲಿ ಪಟಾಕಿ ಪ್ರದರ್ಶನ ಭರ್ಜರಿಯಾಗಿ ನಡೆದವು. ಸಿಡಿಮದ್ದಿನೊಂದಿಗೆ ಹಲವು ಕಡೆಗಳಲ್ಲಿ ಎಲ್‌ಇಡಿ ಪರದೆ ಮತ್ತು ಲೈಟ್ ಶೋ(ಬೆಳಕು ಪ್ರದರ್ಶನ)ಗಳು ದುಬೈಯನ್ನು ಇನ್ನಷ್ಟು ಮಿಂಚುವಂತೆ ಮಾಡಿದವು. ಇದನ್ನೆಲ್ಲಾ ನೋಡಿ ಜನ ಕುಣಿದು ಕುಪ್ಪಲಿಸಿದರು.

Photo: Gulfnews

ಅಬುಧಾಬಿಯ ಅಲ್ ವಥ್ಬಾದಲ್ಲಿರುವ ಶೇಖ್ ಝಾಯೆದ್ ಉತ್ಸವದಲ್ಲಿ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ನಡೆದ ನಿರಂತರವಾದ ಹಾಗೂ ಅತ್ಯಾಕರ್ಷಕವಾದ ಪಟಾಕಿ ಪ್ರದರ್ಶನವನ್ನು ಜನರು ಕಣ್ತುಂಬಿಸಿಕೊಂಡರು. ಇಲ್ಲಿ ಸಾವಿರಾರು ಡ್ರೋನ್‌ಗಳನ್ನು ಬಳಸಿಕೊಂಡು ಆಕಾಶದಲ್ಲಿ ವಿಭಿನ್ನ ಶೈಲಿಯ ಕಲಾತ್ಮಕ ಚಿತ್ರಣಗಳು ಮೂಡುವಂತೆ ಮಾಡಲಾಯಿತು.

Photo: Gulfnews

ಇನ್ನೊಂದೆಡೆ ರಾಸ್ ಅಲ್ ಖೈಮಾದಲ್ಲಿ 15 ನಿಮಿಷಗಳ ಕಣ್ಮನ ಸೆಳೆಯುವ ಭವ್ಯ ಪಟಾಕಿ ಪ್ರದರ್ಶನ ಆಯೋಜಿಸಲಾಗಿತ್ತು. ಈ ಸಿಡಿಮದ್ದು ಪ್ರದರ್ಶನವು ರಾಸ್ ಅಲ್ ಖೈಮಾದ ಕರಾವಳಿಯನ್ನು ಬೆಳಗುವಂತೆ ಮಾಡಿತು. ಸಿಡಿಮದ್ದು ಹಾಗು ಡ್ರೋನ್ ಗಳು ಆಕಾಶದಲ್ಲಿ ಬಣ್ಣ ಬಣ್ಣಗಳ ಚಿತ್ತಾರವನ್ನು ಮೂಡಿಸಿದವು. ಜೊತೆಗೆ ಮಾರ್ಜಾನ್ ದ್ವೀಪ ಮತ್ತು ಅಲ್ ಹಮ್ರಾ ಪ್ರದೇಶಗಳಲ್ಲಿ ಸಿಡಿಮದ್ದು-ಡ್ರೋನ್‌ಗಳು ಮನಮೋಹಕ ಆಕಾಶಾಕೃತಿಗಳನ್ನು ಮೂಡುವಂತೆ ಮಾಡಿದವು. ಶಾರ್ಜಾದ ಅಲ್ ಮಜಾಝ್ ವಾಟರ್‌ಫ್ರಂಟ್, ಅಬುಧಾಬಿ ಕೋರ್ನಿಶ್ ಸೇರಿದಂತೆ ಇನ್ನಿತರ ಕಡೆಗಳಲ್ಲೂ ಪಟಾಕಿ ಪ್ರದರ್ಶನಗಳನ್ನು ಕಣ್ತುಂಬಿಸಿಕೊಳ್ಳುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

ಯುಎಇಯಾದ್ಯಂತ ಹೊಸ ವರ್ಷ ಆಚರಣೆಗೆ ಕ್ಷಣಗಣನೆ; ಆಕಾಶವನ್ನೇ ಬೆಳಗಿಸಲು ಸಜ್ಜಾಗಿರುವ ಕಣ್ಮನ ಸೆಳೆಯುವ ಪಟಾಕಿ ಪ್ರದರ್ಶನಗಳು

ದುಬೈ: 2026ನ್ನು ಅದ್ಧೂರಿಯಾಗಿ ಸ್ವಾಗತಿಸಲು ಯುಎಇ ಸಜ್ಜಾಗಿದೆ. ಹೊಸ ವರ್ಷಕ್ಕೆ ಕ್ಷಣಗಣನೆ...

Related Articles

Popular Categories