ಬಹರೈನ್ಬಹರೈನ್ ಕನ್ನಡ ಭವನದಲ್ಲಿ 10ನೇ ವಿಶ್ವದಾಖಲೆ ಬರೆದ ಉಡುಪಿಯ...

ಬಹರೈನ್ ಕನ್ನಡ ಭವನದಲ್ಲಿ 10ನೇ ವಿಶ್ವದಾಖಲೆ ಬರೆದ ಉಡುಪಿಯ ತನುಶ್ರೀ ಪಿತ್ರೋಡಿ; 50 ನಿಮಿಷಗಳಲ್ಲಿ ಯೋಗದ 333 ಆಸನಗಳ ಪ್ರದರ್ಶನ

ಬಹರೈನ್: ಇಲ್ಲಿನ ಕನ್ನಡ ಸಂಘ ಹಾಗು ಯೋಗ ಕಮ್ಯೂನಿಟಿಯ ಸಹಯೋಗದಲ್ಲಿ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಗಪಟು ತನುಶ್ರೀಯವರು ಕೇವಲ 50 ನಿಮಿಷಗಳಲ್ಲಿ ಯೋಗದ 333 ಆಸನಗಳನ್ನು ಪ್ರದರ್ಶಿಸಿ ತನ್ನ ಹತ್ತನೆಯ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಬಹರೈನ್‌ನ ಕನ್ನಡ ಭವನದ ಸಭಾಂಗಣದಲ್ಲಿ ನೆರೆದ ಜನಸಮೂಹ ಎದ್ದು ನಿಂತು ಗೌರವ ಸಲ್ಲಿಸುತ್ತಾ ಕಿವಿಗಡಚಿಕ್ಕುವ ಕರತಾಡನದಿಂದ ತನುಶ್ರೀ ಅವರನ್ನು ಅಭಿನಂದಿಸಿತು.

ಬಹರೈನ್‌ಗೆ ಬರುವಾಗಲೇ 7 ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹಾಗು 2 ಗಿನ್ನೆಸ್ ವಿಶ್ವ ದಾಖಲೆಯೂ ಸೇರಿದಂತೆ 9 ವಿಶ್ವ ದಾಖಲೆಗಳನ್ನು ತನ್ನ ಹೆಸರಲ್ಲಿ ಹೊಂದಿದ್ದ ತನುಶ್ರೀ ಅವರು ಈ ಹಿಂದೆ 45 ನಿಮಿಷಗಳಲ್ಲಿ 245 ಆಸನಗಳನ್ನು ತೋರಿಸಿ ಮಾಡಿದ್ದ ತನ್ನದೇ ವಿಶ್ವ ದಾಖಲೆಯನ್ನು ಮುರಿದು ವಿದೇಶಿ ನೆಲದಲ್ಲಿ ಪ್ರಥಮ ಹಾಗು ತನ್ನ ಹತ್ತನೆಯ ವಿಶ್ವ ದಾಖಲೆಯನ್ನು ಬರೆದರು.

ಕನ್ನಡ ಸಂಘ ಬಹರೈನ್ ಅಧ್ಯಕ್ಷ ಅಜಿತ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಬಹರೈನ್ ಯೋಗ ಸಮುದಾಯದ ಅಧ್ಯಕ್ಷೆ ಮಿಸ್ ಫಾತಿಮಾ ಅಲ್ ಮನ್ಸೂರಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಗೌರವ ಅತಿಥಿಗಳಾಗಿ ಉನೀಕಾ ಸಮೂಹ ಸಂಸ್ಥೆಗಳ ಸಿಇಒ ಜಯಶಂಕರ್ ವಿಶ್ವನಾಥನ್, ಇಂಡಿಯನ್ ಕ್ಲಬ್ಬಿನ ಅಧ್ಯಕ್ಷ ಜೋಸೆಫ್ ಜಾಯ್, ಬಹರೈನ್ ಕೇರಳೀಯ ಸಮಾಜಂನ ಅಧ್ಯಕ್ಷ ಪಿ.ವಿ.ರಾಧಾಕೃಷ್ಣ ಪಿಳ್ಳೈ, ಇಂಡಿಯನ್ ಸ್ಕೂಲ್ ಬಹರೈನ್‌ನ ಅಧ್ಯಕ್ಷ ಬಿನು ಮನ್ನಿಲ್ ವರ್ಗೀಸ್ ಮುಂತಾದವರು ಉಪಸ್ಥಿತರಿದ್ದರು.

ಈ ದಾಖಲೆಯ ಅಧಿಕೃತ ತೀರ್ಪುಗಾರರಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ ಏಷ್ಯಾ ಮುಖ್ಯಸ್ಥ ಡಾಕ್ಟರ್ ಮನೀಶ್ ವೈಶ್ನೋಯಿ ಕಾರ್ಯನಿರ್ವಹಿಸಿದ್ದರು.
ದೀಪಪ್ರಜ್ವಲನೆಯೊಂದಿಗೆ ಬೆಳಗ್ಗೆ 10 ಗಂಟೆಗೆ ವಿದ್ಯುಕ್ತ ಚಾಲನೆಗೊಂಡ ಕಾರ್ಯಕ್ರಮವು ಕುಮಾರಿ ರಿತು ಪಿತ್ರೋಡಿ ಪ್ರಾರ್ಥನೆಯೊಂದಿಗೆ ಆರಂಭಾವಾಯಿತು. ತದನಂತರ ಸಂಘದ ಯೋಗ ಶಿಕ್ಷಕ ಹಾಗೂ ಸಂಚಾಲಕರಾದ ಶಿವಾನಂದ ಪಾಟೀಲ್, ಸುಜಾತಾ ಎಚ್.ಕೆ. ಮತ್ತು ಚಂದ್ರ ಧೂಳೆಹೊಳಿ ಅವರ ಮಾರ್ಗದರ್ಶನದಲ್ಲಿ ಸದಸ್ಯರು ಮತ್ತು ಮಕ್ಕಳಿಂದ 15 ನಿಮಿಷಗಳ ಯೋಗಾಸನವು ವೇದಿಕೆಯಲ್ಲಿ ಪ್ರದರ್ಶನಗೊಂಡಿತು. ಇದೇ ಸಂದರ್ಭದಲ್ಲಿ ತನುಶ್ರೀ ಅವರ ಯೋಗ ಪಯಣದ ಸಾಕ್ಷ್ಯಚಿತ್ರವನ್ನು ದೊಡ್ಡ ಪರದೆಯ ಮೇಲೆ ಪ್ರಸಾರ ಮಾಡಲಾಯಿತು.

ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರು ತನುಶ್ರೀ ಅವರ ಸಾಧನೆಯನ್ನು ಶ್ಲಾಘಿಸಿ, ಭಾರತೀಯಕಲೆ, ಸಂಸ್ಕೃತಿ ಮತ್ತು ಯೋಗದ ಪ್ರಚಾರಕ್ಕಾಗಿ ಕನ್ನಡ ಸಂಘವು ಸದಾ ಬದ್ಧವಾಗಿದೆ ಎಂದರು.

ಮುಖ್ಯ ಅತಿಥಿಗಳು ಮತ್ತು ಗೌರವಾನ್ವಿತ ಅತಿಥಿಗಳು ತಮ್ಮ ಭಾಷಣದಲ್ಲಿ ತನುಶ್ರೀ ಅವರು ತಮ್ಮ ಸಣ್ಣ ವಯಸ್ಸಿನಲ್ಲಿಯೇ ಮೈಗೂಡಿಸಿಕೊಂಡ ಶಿಸ್ತು, ಕಠಿಣ ಶ್ರಮ, ಬದ್ಧತೆಯನ್ನು ಹಾದಿ ಹೊಗಳಿದರು. ಎಲ್ಲ ಅತಿಥಿಗಳಿಗೂ ಅಧ್ಯಕ್ಷರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ತನುಶ್ರೀ ಅವರ ಪೋಷಕರಾದ ಉದಯಕುಮಾರ್ ಮತ್ತು ಸಂಧ್ಯಾ ಪಿತ್ರೋಡಿ ಹಾಗೂ ಹಿತೈಷಿಗಳಾದ ನಾಗರಾಜ ವರ್ಕಡಿ ಮತ್ತು ರಾಘವೇಂದ್ರ ದೇವಾಡಿಗರಿಗೆ ಕನ್ನಡ ಸಂಘದಿಂದ ಸನ್ಮಾನಿಸಲಾಯಿತು.

ಗೌರವ ಸನ್ಮಾನ ಸ್ವೀಕರಿಸಿದ ತನುಶ್ರೀ ತಮ್ಮ ಧನ್ಯವಾದ ಭಾಷಣದಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, “ಯೋಗದ ನಿಯಮಿತ ಅಭ್ಯಾಸದಿಂದ ಆರೋಗ್ಯಕರ ಮತ್ತು ಶಾಂತ ಜೀವನ ಸಾಧ್ಯ” ಎನ್ನುವ ಸಂದೇಶವನ್ನು ಜನರಿಗೆ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ನಾಗರಾಜ ವರ್ಕಾಡಿ ಅವರು ತನುಶ್ರೀ ಅವರ ಸಾಧನೆಯನ್ನು ವಿಶ್ಲೇಷಿಸಿ ಪ್ರೇರಣಾದಾಯಕ ಸಮಾರೋಪ ಭಾಷಣ ಮಾಡಿದರು. ವಿದೇಶಿ ನೆಲದಲ್ಲಿ ತನ್ನ ಪ್ರಥಮ ವಿಶ್ವ ದಾಖಲೆಯನ್ನು ಬರೆದ ಈ ಸಾಧನೆ ತನುಶ್ರೀ ಅವರ ಯೋಗ ಪಯಣದಲ್ಲಿ ಸುವರ್ಣ ಅಧ್ಯಾಯವಾಗಿದ್ದು, ಮಾತ್ರವಲ್ಲದೆ ಕೊಲ್ಲಿ ರಾಷ್ಟ್ರಗಳಲ್ಲಿ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಿದ ಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆಗೂ ಕನ್ನಡ ಸಂಘ ಪಾತ್ರವಾಗಿದೆ.

ಸಂಘದ ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಸ್ವಾಗತಿಸಿ, ಒಟ್ಟು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ವಂದನಾರ್ಪಣೆಗೈದರು. ಸಂಘದ ಉಪಾಧ್ಯಕ್ಷ ನಿತಿನ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಇತರ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ತನುಶ್ರೀ ಸಾಧನೆಯನ್ನು ಹೊಗಳಿ ಅಭಿನಂದನೆ ಸಲ್ಲಿಸಿದರು.

ವರದಿ: ಕಮಲಾಕ್ಷ ಅಮೀನ್

Hot this week

Kuwait: KCWA’s annual family picnic draws over 600 attendees at Mishref Garden

Kuwait: The Kuwait Canara Welfare Association (KCWA) organised its...

ಖತರ್‌ನಲ್ಲಿ ಕರಾವಳಿ ಕನ್ನಡಿಗನ ಸಾಧನೆ; ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆ

ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ...

ಖತರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ: ಗಲ್ಫ್ ನಾಡಿನಲ್ಲಿ ಗಂಧದ ನಾಡಿನ ವೈಭವ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ)ನ ಕರ್ನಾಟಕ ರಾಜ್ಯೋತ್ಸವ – ರಜತ...

ದುಬೈ: ಕನ್ನಡಿಗರ ಕೂಟದಿಂದ ʼಕನ್ನಡ ರಾಜ್ಯೋತ್ಸವ 2025ʼ ಭವ್ಯ ಸಂಭ್ರಮ

ದುಬೈ: ಕನ್ನಡಿಗರ ಕೂಟ – ದುಬೈ ಮತ್ತು ಗಲ್ಫ್ ಕನ್ನಡ ಮೂವೀಸ್...

Related Articles

Popular Categories