ದುಬೈ: ಗಲ್ಫ್ ದೇಶದ ಅತ್ಯಂತ ಹಳೆಯ ಹಾಗು ಗೌರವಿತ ಯಕ್ಷಗಾನ ತಂಡಗಳಲ್ಲಿ ಒಂದಾದ ದುಬೈ ಯಕ್ಷಗಾನದ ಮಾತೃ ಸಂಸ್ಥೆ ‘ಯಕ್ಷ ಮಿತ್ರರು ದುಬೈ’ ಇದರ 22ನೇ ವರ್ಷದ ‘ಯಕ್ಷ ಸಂಭ್ರಮ’ದ ಪ್ರಯುಕ್ತ ರವಿವಾರದಂದು ದುಬೈನ ಎಮಿರೇಟ್ಸ್ ಥಿಯೇಟರ್‌ನಲ್ಲಿ ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಐತಿಹಾಸಿಕ ಯಕ್ಷಗಾನ ಪ್ರಸಂಗ ಬಹಳ ಯಶಸ್ವಿಯಾಗಿ ಪ್ರದರ್ಶನಗೊಂಡಿತು.






ಕಳೆದ 2 ದಶಕಗಳಿಂದ ಕರಾವಳಿಯ ಸಾಂಪ್ರದಾಯಿಕ ಕಲಾ ಪ್ರಕಾರವಾದ ಯಕ್ಷಗಾನವನ್ನು ಯುಎಇಯಾದ್ಯಂತ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿರುವ ‘ಯಕ್ಷ ಮಿತ್ರರು ದುಬೈ’, ಈ ಬಾರಿ ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಐತಿಹಾಸಿಕ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುವ ಮೂಲಕ ಯುಎಇಗರ ಮನಗೆದ್ದಿದೆ.
ರವಿವಾರ ಸಂಜೆ ಪುತ್ತಿಗೆ ವಾಸುದೇವ್ ಭಟ್ ಅವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಸಂತೋಷ್ ನೇತೃತ್ವದಲ್ಲಿ ಸಾಂಪ್ರದಾಯಿಕ ಪೂಜೆ ಹಾಗು ಚೌಕಿ ಪೂಜೆಯನ್ನು ವೆಂಕಟೇಶ್ ಶಾಸ್ತ್ರಿ ಮತ್ತು ಭವಾನಿ ಶಂಕರ್ ಶರ್ಮಾ ಅವರ ಸಹಕಾರದಿಂದ ನೆರವೇರಿಸಲಾಯಿತು.





ಬಳಿಕ ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಉದ್ಘಾಟನೆ ವೇಳೆ ಪುತ್ತಿಗೆ ವಾಸುದೇವ ಭಟ್, ಉದ್ಯಮಿಗಳಾದ ಹರೀಶ್ ಶೇರಿಗಾರ್, ಪ್ರವೀಣ್ ಕುಮಾರ್ ಶೆಟ್ಟಿ, ಹರೀಶ್ ಬಂಗೇರ, ದಿವಾಕರ ಶೆಟ್ಟಿ, ಪದ್ಮರಾಜ್ ಎಕ್ಕಾರ್ ಮತ್ತು ಸತೀಶ್ ಪೂಜಾರಿ ಸೇರಿದಂತೆ ಹಲವು ಗಣ್ಯರು ಮತ್ತು ಯಕ್ಷಮಿತ್ರರು ಹಿರಿಯ ಸದಸ್ಯರಾದ ಚಿದಾನಂದ ಪೂಜಾರಿ, ರವಿ ಕೋಟ್ಯಾನ್, ಸತೀಶ್ ಶೆಟ್ಟಿ, ದಯಾ ಕಿರೋಡಿಯನ್, ಜಯಂತ್ ಶೆಟ್ಟಿ, ಅಶೋಕ್ ತೋನ್ಸೆ, ದಿನರಾಜ್ ಶೆಟ್ಟಿ ಮತ್ತು ದಿನೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಡಾ.ಬಿ.ಆರ್. ಶೆಟ್ಟಿ ಯಕ್ಷಮಿತ್ರರ ಯಕ್ಷಗಾನ ಪ್ರದರ್ಶನವನ್ನು ಕೊಂಡಾಡಿದರು. ಯಕ್ಷಮಿತ್ರರ 22ನೇ ವಾರ್ಷಿಕೋತ್ಸವದ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ. ಅವರ ಮೊದಲ ಪ್ರದರ್ಶನದಲ್ಲಿ ಭಾಗವಹಿಸಿದ್ದನ್ನು ನಾನು ಇನ್ನೂ ಮರೆತಿಲ್ಲ. ಕೊಲ್ಲಿಯಲ್ಲಿ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಯಕ್ಷಮಿತ್ರರ ಕೊಡುಗೆ ಪ್ರಶಂಸನೀಯ ಎಂದರು.





‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಯಕ್ಷಗಾನ ಪ್ರಸಂಗವನ್ನು ಕಿಶೋರ್ ಗಟ್ಟಿ ಅವರ ನಿರ್ದೇಶನದಲ್ಲಿ ಯಕ್ಷಮಿತ್ರರು ದುಬೈ ವಿದ್ಯಾರ್ಥಿಗಳು ಬಹಳ ಸೊಗಸಾಗಿ ಪ್ರಸ್ತುತಪಡಿಸಿದರು. ಬಾಲಗೋಪಾಲ ರೂಪದಲ್ಲಿ ಮಕ್ಕಳ ಪೂರ್ವರಂಗ , ಪೌರಾಣಿಕ ಪಾತ್ರಗಳ ಅಲಂಕೃತ ಪ್ರವೇಶದಿಂದ ಕಾರ್ಯಕ್ರಮ ಚೈತನ್ಯಭರಿತವಾಯಿತು.
ಊರಿನ ಪ್ರಸಿದ್ಧ ಭಾಗವತರಾದ ಬಲಿಪ ಶಿವಶಂಕರ ಭಟ್, ಸಿದ್ಧ ಕಟ್ಟೆ ಭರತ್ ಶೆಟ್ಟಿ, ಚೆಂಡೆ ಮದ್ದಳೆಯಲ್ಲಿ ಸುಬ್ರಮಣ್ಯ ಭಟ್ ದೇಲಂತಮಜಲು, ಸಮರ್ಥ್ ಉಡುಪ, ಹಾಗೂ ಮುಮ್ಮೇಳದಲ್ಲಿ ಗಣೇಶ್ ಚಂದ್ರ ಮಂಡಲ, ರಕ್ಷಿತ್ ಶೆಟ್ಟಿ ಪಡ್ರೆ, ಅಕ್ಷಯ್ ಭಟ್ ಶಿರ್ತಾಡಿ ಸಹಕರಿಸಿದರು. ವೈವಿಧ್ಯಮಯ ವೇಷಭೂಷಣವನ್ನು ಜಯಂತ ಪೈವಳಿಕೆ ಮತ್ತು ಪ್ರಸಾದ್ ಕಾಯಕಟ್ಟೆ ವಿನ್ಯಾಸಗೊಳಿಸಿದ್ದರು. ಗಣೇಶ್ ಚಂದ್ರಮಂಡಲ, ರಕ್ಷಿತ್ ಶೆಟ್ಟಿ ಪಡ್ರೆ, ಅಕ್ಷಯ್ ಭಟ್ ಶಿರ್ತಾಡಿ ಮೊದಲಾದ ಕಲಾವಿದರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಯಕ್ಷಮಿತ್ರರು ದುಬೈಯ ಕಲಾವಿದರ ಕೂಡುವಿಕೆಯೊಂದಿಗೆ, ಯಕ್ಷಗುರುಗಳಾದ ಕಿಶೋರ್ ಗಟ್ಟಿ ಇವರ ದಕ್ಷ ನಿರ್ದೇಶನದಲ್ಲಿ ಶಬರಿಮಲೆ ಸ್ವಾಮಿ ಅಯ್ಯಪ್ಪ ಪ್ರಸಂಗವು ಸಂಪನ್ನಗೊಂಡಿತು.
ಈ ವೇಳೆ ಯಕ್ಷಮಿತ್ರರು ದುಬೈನಿಂದ ಯಕ್ಷಗಾನ ಕಲೆಗೆ ನೀಡುತ್ತಿರುವ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ ಎಲ್ಲಾ ಅತಿಥಿ ಕಲಾವಿದರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕಾಗಿಯೇ ತಾಯಿನಾಡಿನಿಂದ ಬಂದ ಯಕ್ಷಮಿತ್ರರು ದುಬೈನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಗಿರಿಧರ್ ನಾಯಕ್ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಯಕ್ಷಮಿತ್ರರು ದುಬೈಯ ಸಂಸ್ಥಾಪಕ ಹಾಗೂ ಸಂಚಾಲಕರಾದ ಚಿದಾನಂದ ಪೂಜಾರಿ, ಈ ವರಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡಿದ ಪ್ರತಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ರಜನೀಶ್ ಅಮೀನ್ ಮತ್ತು ಅಕ್ಷಯ ಕುಲಾಲ್ ನಿರೂಪಿಸಿ, ವಂದಿಸಿದರು.































