ಬಹರೈನ್: ಮೂರು ತಿಂಗಳ ಹಿಂದೆ ಬಹರೈನ್ ನ ಕರಾವಳಿ ಕಾವಲು ಪಡೆಯಿಂದ ಬಂಧನಕ್ಕೆ ಒಳಗಾಗಿದ್ದ ತಮಿಳುನಾಡಿನ ಇಡಿಂತಕರೈನ 28 ಮೀನುಗಾರರು ತಿರುವನಂತಪುರಂ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ.
ವಿಧಾನಸಭೆ ಸ್ಪೀಕರ್ ಎಂ ಅಪ್ಪಾವು ಮತ್ತು ತಿರುನಲ್ವೇಲಿ ಸಂಸದ ಸಿ ರಾಬರ್ಟ್ ಬ್ರೂಸ್ ಈ ಮೀನುಗಾರರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಆಗಸ್ಟ್ 31 ರಂದು ಉದ್ಯೋಗಕ್ಕಾಗಿ ಇರಾನ್‌ಗೆ ತೆರಳಿದ್ದ ಈ ಮೀನುಗಾರರನ್ನು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಸೆಪ್ಟೆಂಬರ್ 11ರಂದು ಬಂಧಿಸಲಾಗಿತ್ತು. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮತ್ತು ಸಂಸದ ಬ್ರೂಸ್ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ಮೀನುಗಾರರನ್ನು ವಾಪಸ್ ಕಳುಹಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಬಹರೈನ್ ನ ಸ್ಥಳೀಯ ನ್ಯಾಯಾಲಯ ಈ ಮೀನುಗಾರರಿಗೆ 6 ತಿಂಗಳ ಜೈಲು ಶಿಕ್ಷೆ ಘೋಷಿಸಿದ್ದು, ನಂತರ ಅದನ್ನು 3 ತಿಂಗಳುಗಳಿಗೆ ಇಳಿಸಿತ್ತು. ಇದೀಗ ಶಿಕ್ಷೆಯ ಅವಧಿ ಮುಗಿದ ನಂತರ ಮೀನುಗಾರರನ್ನು ಬಿಡುಗಡೆಗೊಳಿಸಲಾಗಿದೆ.