ದುಬೈ: ದುಬೈ ಸಿಲಿಕಾನ್ ಓಯಸಿಸ್ (DSO) ನಿವಾಸಿಗಳಿಗೆ ಆಹಾರ, ಔಷಧಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ಶೀಘ್ರದಲ್ಲೇ ಡ್ರೋನ್ ಮೂಲಕ ತಲುಪಲಿದೆ. ಹೌದು, ಮಧ್ಯಪ್ರಾಚ್ಯದಲ್ಲೇ ಮೊದಲ ಬಾರಿಗೆ ಡ್ರೋನ್ ಡೆಲಿವರಿ ವ್ಯವಸ್ಥೆಯನ್ನು ದುಬೈಯಲ್ಲಿ ಪರಿಚಯಿಸಲಾಗಿದೆ.
ಪ್ರಸ್ತುತ, DSO ಪ್ರದೇಶದಲ್ಲಿ ಡ್ರೋನ್ ಡೆಲಿವರಿ ಸೇವೆಗೆ ದುಬೈನ ಕ್ರೌನ್ ಪ್ರಿನ್ಸ್, ಯುಎಇಯ ಉಪ ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಸಚಿವರಾಗಿರುವ ಅಧ್ಯಕ್ಷರಾದ ಶೇಖ್ ಹಮ್ದಾನ್ ಬಿನ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಚಾಲನೆ ನೀಡಿದ್ದಾರೆ.
ಚಾಲನಾ ಕಾರ್ಯಕ್ರಮದಲ್ಲಿ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧ್ಯಕ್ಷ, ದುಬೈ ವಿಮಾನ ನಿಲ್ದಾಣಗಳ ಅಧ್ಯಕ್ಷ, ಎಮಿರೇಟ್ಸ್ ಏರ್‌ಲೈನ್ ಸಮೂಹಗಳ ಅಧ್ಯಕ್ಷ ಮತ್ತು ದುಬೈ ಇಂಟಿಗ್ರೇಟೆಡ್ ಎಕನಾಮಿಕ್ ಜೋನ್ಸ್ ಅಥಾರಿಟಿಯ ಅಧ್ಯಕ್ಷರಾಗಿರುವ ಶೇಖ್ ಅಹ್ಮದ್ ಬಿನ್ ಸಯೀದ್ ಅಲ್ ಮಕ್ತೌಮ್ ಕೂಡಾ ಭಾಗವಹಿಸಿದ್ದರು.
ಮೊದಲ ಹಂತದಲ್ಲಿ, ದುಬೈ ಸಿಲಿಕಾನ್ ಓಯಸಿಸ್‌ನಲ್ಲಿರುವ ನಾಲ್ಕು ಕಾರ್ಯಾಚರಣಾ ಡ್ರೋನ್ ಡೆಲಿವರಿ ಮಾರ್ಗಗಳಲ್ಲಿ ವಾಣಿಜ್ಯ ಸೇವೆಗಳನ್ನು ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಡ್ರೋನ್ ಡೆಲಿವರಿ ಸೇವೆಗೆ ಚೀನಾದ ಕೀಟಾ ಡ್ರೋನ್ ಯುಎಇಯಲ್ಲಿ ವಾಣಿಜ್ಯ ಪರವಾನಗಿಯನ್ನು ಪಡೆದಿದ್ದು, ಕಂಪನಿಯು ಚೀನೀ ತಂತ್ರಜ್ಞಾನ ಸಂಸ್ಥೆ ಮೀಟುವಾನ್‌ನ ಭಾಗವಾಗಿದೆ. ಕೀಟಾ ಡ್ರೋನ್‌ಗಳು 2.3 ಕಿಲೋಗ್ರಾಂಗಳಷ್ಟು ಲೋಡ್ ಹೊರುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಕಂಪೆನಿಯು ಹೇಳಿದೆ. ನಮ್ಮ ಡ್ರೋನ್‌ಗಳು ನಗರ ಪರಿಸರಕ್ಕೆ ಅನುಗುಣವಾಗಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಲಾಜಿಸ್ಟಿಕ್ಸ್ ಸೇವೆಗಳನ್ನು ಒದಗಿಸುತ್ತವೆ ಎಂದು ಸಂಸ್ಥೆಯು ಹೇಳಿದೆ.
ಕಂಪನಿಯು 2017 ರಲ್ಲಿ ಡೆಲಿವರಿ ಸೇವೆಗಳಲ್ಲಿ ಡ್ರೋನ್‌ಗಳ ಸಾಧ್ಯತೆಗಳನ್ನು ಪರಿಗಣಿಸಲು ಪ್ರಾರಂಭಿಸಿದ್ದು, 2021 ರಲ್ಲಿ ಚೀನಾದ ಶೆನ್‌ಜೆನ್‌ನಲ್ಲಿ ತನ್ನ ಮೊದಲ ವಾಣಿಜ್ಯ ವಿತರಣಾ ಸೇವೆಯನ್ನು ಪ್ರಾರಂಭಿಸಿತ್ತು. ಸದ್ಯ, ಕೀಟಾ ಡ್ರೋನ್ ಬೀಜಿಂಗ್, ಶೆನ್‌ಜೆನ್, ಶಾಂಘೈ ಮತ್ತು ಗುವಾಂಗ್‌ಝೌ ಸೇರಿದಂತೆ ಪ್ರಮುಖ ನಗರಗಳ 53 ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದುವರೆಗೂ 4,00,000 ಕ್ಕೂ ಹೆಚ್ಚು ಡೆಲಿವರಿಗಳನ್ನು ಪೂರ್ಣಗೊಳಿಸಿದೆ. ಈ ಸೇವೆಯು ಕಚೇರಿಗಳು, ವಸತಿ ಪ್ರದೇಶಗಳು, ಪ್ರವಾಸಿ ತಾಣಗಳು, ಉದ್ಯಾನವನಗಳು, ಕ್ಯಾಂಪಸ್‌ಗಳು ಮತ್ತು ಗ್ರಂಥಾಲಯಗಳು ಸೇರಿದಂತೆ ಹಲವು ರೀತಿಯ ಸ್ಥಳಗಳಲ್ಲಿ 90,000 ಕ್ಕೂ ಹೆಚ್ಚು ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿವೆ.
“ಭವಿಷ್ಯದ ಚಲನಶೀಲತೆಯಲ್ಲಿ ದುಬೈ ನಾಯಕತ್ವವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ, ನಾವು ಇಂದು ಮಧ್ಯಪ್ರಾಚ್ಯದ ಮೊದಲ ರೀತಿಯ ಡ್ರೋನ್ ಡೆಲಿವರಿ ವ್ಯವಸ್ಥೆಯನ್ನು ಪ್ರಾರಂಭಿಸಿದ್ದೇವೆ. ವ್ಯವಸ್ಥೆಯ ವ್ಯಾಪ್ತಿಯನ್ನು ದುಬೈಯ 33% ಗೆ ವಿಸ್ತರಿಸಲು ನಾವು ತಂಡಗಳಿಗೆ ನಿರ್ದೇಶನ ನೀಡಿದ್ದೇವೆ. 2033 ರ ವೇಳೆಗೆ ದುಬೈ ಅನ್ನು ವಿಶ್ವದ ಅಗ್ರ ಮೂರು ನಗರ ಆರ್ಥಿಕತೆಗಳಲ್ಲಿ ಒಂದನ್ನಾಗಿ ಪರಿವರ್ತಿಸುವ ದುಬೈ ಆರ್ಥಿಕ ಕಾರ್ಯಸೂಚಿ ಗುರಿಗೆ ಈ ಯೋಜನೆಯು ಬೆಂಬಲಿಸುತ್ತದೆ. ಇದು ಭವಿಷ್ಯದ ನಗರಗಳಿಗೆ ಜಾಗತಿಕ ಮಾನದಂಡವನ್ನು ಹೊಂದಿಸುತ್ತದೆ” ಎಂದು ಚಾಲನೆ ನೀಡಿದ ಬಳಿಕ ಹಮ್ದಾನ್ ಬಿನ್ ಮಹಮ್ಮದ್ ಹೇಳಿದ್ದಾರೆ.