ʼವಾರ್ತಾಭಾರತಿʼ ಮಾಧ್ಯಮ ಸಮೂಹವು ಜಾಗತಿಕ ಕನ್ನಡಿಗರಿಗಾಗಿ ವಿಶೇಷವಾಗಿ ರೂಪಿಸಿರುವ globalkannadiga.com ವೆಬ್ಸೈಟ್ ಅನ್ನು ಲೋಕಾರ್ಪಣೆಗೊಳಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರ.
ವಸ್ತುನಿಷ್ಠ, ಜನಪರ ಪತ್ರಿಕೋದ್ಯಮದ ಮೂಲಕ ʼವಾರ್ತಾಭಾರತಿʼ ಪತ್ರಿಕೆ ಮತ್ತು ಚಾನಲ್ ಕನ್ನಡಿಗ ಓದುಗರ ಮತ್ತು ನೋಡುಗರ ವಿಶ್ವಾಸಾರ್ಹತೆ ಮತ್ತು ನಂಬಿಕೆ ಹಾಗೂ ಪ್ರೀತಿ ಗಳಿಸಿದೆ.
ಈಗ ʼವಾರ್ತಾಭಾರತಿʼ ಮತ್ತೊಂದು ಎತ್ತರಕ್ಕೆ ವಿಸ್ತರಿಸಿಕೊಳ್ಳುತ್ತಿರುವುದು ಒಟ್ಟು ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಕಾರಣವಾಗುತ್ತದೆ ಎನ್ನುವುದು ನನ್ನ ನಂಬಿಕೆ.
ಕನ್ನಡ ನೆಲದ ಸತ್ಯ ಹೊರದೇಶಗಳಿಗೂ ತಲುಪಬೇಕು. ಹೊರದೇಶಗಳಿಗೆ ಬದುಕು ಅರಸಿ ಹೊರಟ ಕನ್ನಡಿಗರಿಗೂ ಧ್ವನಿಯಾಗಿರುವ ʼವಾರ್ತಾಭಾರತಿʼ ಪತ್ರಿಕೆ, ಅನಿವಾಸಿ ಕನ್ನಡಿಗರ ಸಾಧನೆ ಸವಾಲುಗಳ ಬಗ್ಗೆ ಬೆಳಕು ಚೆಲ್ಲುವ ಜೊತೆಗೆ ವಿದೇಶಗಳಲ್ಲಿ ಕನ್ನಡದ ಕಂಪನ್ನು ಪಸರಿಸುವ ಸಾರ್ಥಕ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ.
ಜಗತ್ತಿನ ಉದ್ದಗಲಗಳಲ್ಲಿ ನೆಲೆಸಿ, ಆಯಾ ದೇಶದ ಪ್ರಗತಿಗೆ ಮಹತ್ತರ ಕೊಡುಗೆ ನೀಡುತ್ತಿರುವ ಜಾಗತಿಕ ಕನ್ನಡಿಗರಿಗಾಗಿಯೇ, ಪತ್ರಿಕೆಯು globalkannadiga.com ಎಂಬ ವೆಬ್ಸೈಟ್ನ್ನು ಪ್ರಾರಂಭಿಸಿ, ಜಾಗತಿಕ ಕನ್ನಡಿಗ ಸಮುದಾಯವನ್ನು ಒಂದು ವೇದಿಕೆಯಲ್ಲಿ ಜೊತೆಗೂಡಿಸುವ ನಿಮ್ಮ ಪ್ರಯತ್ನ ನಿಜಕ್ಕೂ ಅಭಿನಂದನೀಯ.
ಕನ್ನಡಪರ ಚಿಂತನೆಯ ಮತ್ತೊಂದು ಹೆಜ್ಜೆಯಾಗಿ ರೂಪಿತವಾಗಿರುವ ಈ ವೆಬ್ಸೈಟ್, ವಿಶ್ವದೆಲ್ಲೆಡೆಯ ಕನ್ನಡ ಬಂಧುಗಳನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗಲಿ ಹಾಗೂ ಪತ್ರಿಕೆಯ ಕನ್ನಡ ಸೇವೆ, ನಾಡ ಸೇವೆ ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇನೆ.

ಅನಿವಾಸಿ ಕನ್ನಡಿಗರ ಸಾಧನೆ, ಸವಾಲುಗಳ ಬಗ್ಗೆ ʼಗ್ಲೋಬಲ್ ಕನ್ನಡಿಗʼ ಬೆಳಕು ಚೆಲ್ಲಲಿ : ಸಿಎಂ ಸಿದ್ದರಾಮಯ್ಯ
Popular Categories