ದುಬೈ: ದುಬೈಯ ಭಾರತೀಯ ರಾಯಭಾರಿ ಕಚೇರಿ ಮತ್ತು ಏಮ್ ಇಂಡಿಯಾ ಫೋರಂ ಸಂಯುಕ್ತ ಆಶ್ರಯದಲ್ಲಿ ದುಬೈಯ ಕರಾನಿ ಇಂಟೀರಿಯರ್ ಎಲ್‌ಎಲ್‌ಸಿಯಲ್ಲಿ ಕಾರ್ಮಿಕರ ಜಾಗೃತಿ ಅಭಿಯಾನ ಇತ್ತೀಚಿಗೆ ಆಯೋಜಿಸಲಾಗಿತ್ತು.




ಕಾರ್ಯಕ್ರಮವು ಯೋಗಾದೊಂದಿಗೆ ಪ್ರಾರಂಭವಾಯಿತು. ನಂತರ ದುಬೈನ PBSK ವತಿಯಿಂದ ಕಲ್ಯಾಣ ಯೋಜನೆಗಳು ಮತ್ತು ದೂರು ಪರಿಹಾರ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಲಾಯಿತು. ಆರ್ಥಿಕ ವಂಚನೆಗಳ ಕುರಿತು ICAI ದುಬೈ ಶಾಖೆಯವರು ಉಪನ್ಯಾಸ ನೀಡಿದರು.
ಭಾರತೀಯ ರಾಯಭಾರಿ ಕಚೇರಿಯಿಂದ ಕಾರ್ಮಿಕ ಮತ್ತು ಮದದ್ ವಿಭಾಗದ ಕಾನ್ಸುಲ್ ಪಬಿತ್ರ ಮಜುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಮಿಕ ವಿಭಾಗದ ಉಪ ಕಾನ್ಸುಲ್ ದೀಪಕ್ ದಾಗರ್, ಗುರೂಜಿ ರಾಜರಾಮಜಿ, ಸಂತ್ ಕೃಪರಾಮಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಏಮ್ ಇಂಡಿಯಾ ಫೋರಂನ ಸಂಸ್ಥಾಪಕ ಅಧ್ಯಕ್ಷ ಶಿರಾಲಿ ಶೈಖ್ ಮುಝಫರ್ ಅವರ ನೇತೃತ್ವದಲ್ಲಿ, ಸಮನ್ವಯಕರಾದ ಮೊಹಮ್ಮದ್ ಅಝೀಮ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ನಿಯಾಝ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಆರ್ಥಿಕ ವಂಚನೆಗಳು, ಸೈಬರ್ ಅಪರಾಧಗಳು, ನಕಲಿ ಉದ್ಯೋಗ ಏಜೆನ್ಸಿಗಳು, ಸಿಮ್ ಕಾರ್ಡ್ ವಂಚನೆ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ದುಬೈಯ ಭಾರತೀಯ ರಾಯಭಾರಿ ಕಚೇರಿಯವರು ಕಾರ್ಮಿಕರ ಹಿತಾಸಕ್ತಿಗಾಗಿ ಏಮ್ ಇಂಡಿಯಾ ಫೋರಂ ಕೈಗೊಂಡಿರುವ ಮಹತ್ವದ ಕಾರ್ಯಗಳಿಗಾಗಿ ಪ್ರಶಂಸೆ ವ್ಯಕ್ತಪಡಿಸಿದರು.