ದುಬೈ: ಕರ್ನಾಟಕ ಸಂಘ ದುಬೈ ಆಯೋಜನೆಯ 70ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಜಾಗತಿಕ ವ್ಯಾಪಾರ ವೇದಿಕೆ ಅನಾವರಣ ದುಬೈನಲ್ಲಿ ನವೆಂಬರ್ 9ರಂದು ಜರುಗಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಸಂಘದ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ ಮತ್ತು ಅವರ ಕಾರ್ಯಕಾರಿ ಸಮಿತಿಯ ದಯಾ ಕಿರೋಡಿಯನ್, ರೊನಾಲ್ಡ್ ಮಾರ್ಟಿಸ್, ಮಲ್ಲಿಕಾರ್ಜುನ ಗೌಡ, ಹಿದಾಯತ್ ಅಡ್ಡೂರು, ನಾಗರಾಜ್ ರಾವ್ ಮತ್ತು ಮನೋಹರ್ ಹೆಗ್ಡೆ ಆಮಂತ್ರಣ ನೀಡಿದರು.
ಆಮಂತ್ರಣವನ್ನು ಸ್ವೀಕರಿಸಿದ ಖಾದರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದರು. 70ನೇ ದುಬೈ ಕರ್ನಾಟಕ ರಾಜ್ಯೋತ್ಸವವನ್ನು ಈ ಬಾರಿ ವಿಭಿನ್ನವಾಗಿ ಆಚರಿಸಲಾಗುತ್ತಿದ್ದು, ಅನಿವಾಸಿ ಕನ್ನಡಿಗರಿಗಾಗಿ ಹಲವು ವೇದಿಕೆಗಳಲ್ಲಿ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ವ್ಯಾಪಾರ ಸೇತು ವಿಭಾಗದಿಂದ ಕರ್ನಾಟಕದ ಉದ್ದಿಮೆಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಅನ್ವೇಷಿಸುವ ಅವಕಾಶವನ್ನು “ಜಾಗತಿಕ ವ್ಯಾಪಾರ ವೇದಿಕೆ” ಅನಾವರಣ ಮಾಡುವುದರ ಮೂಲಕ ಕಲ್ಪಿಸಿಕೊಡಲಾಗುವುದು. ಕರ್ನಾಟಕದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಈ ವೇದಿಕೆಯಲ್ಲಿ ತಮ್ಮ ಸರಕು ಮತ್ತು ಸೇವೆಗಳನ್ನು ಅಂತಾರಾಷ್ಟ್ರೀಯ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಪರಿಚಯಿಸಿ ತಮ್ಮ ವ್ಯಾಪಾರವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಬಹುದಾಗಿದೆ ಎಂದು ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಶಶಿಧರ್ ನಾಗರಾಜಪ್ಪ ತಿಳಿಸಿದ್ದಾರೆ.