ಖತರ್ಖತರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ:...

ಖತರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ: ಗಲ್ಫ್ ನಾಡಿನಲ್ಲಿ ಗಂಧದ ನಾಡಿನ ವೈಭವ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ)ನ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮವು ಇತ್ತೀಚಿಗೆ ಐಡಿಯಲ್ ಇಂಡಿಯನ್ ಶಾಲಾ ಮೈದಾನದಲ್ಲಿ ಅತ್ಯಂತ ವೈಭವ ಮತ್ತು ಸಾಂಸ್ಕೃತಿಕ ಸಡಗರದೊಂದಿಂಗೆ ಯಶಸ್ವಿಯಾಗಿ ನೆರವೇರಿತು.

ಕಲಾ, ಕ್ರೀಡೆ, ಸಂಸ್ಕೃತಿ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಮೀಸಲಾದ 25 ಚೈತನ್ಯಮಯ ರಜತ ವರ್ಷದ ಕಾರ್ಯಕ್ರಮಗಳ ಸಂಭ್ರಮದಲ್ಲಿ ಈ ಸಮಾರೋಪ ಸಮಾರಂಭವು ಬಹಳ ವಿಜೃಂಭಣೆಯಿಂದ ಬೆಳಗಿತು.

ಪರಂಪರೆಯ ಪ್ರತಿಬಿಂಬ: ಹೊಯ್ಸಳ ಮಹಾದ್ವಾರ ಮತ್ತು ಯುಗ್ಮ ಗಜ ಸ್ವಾಗತ
ಐಡಿಯಲ್ ಶಾಲೆಯ ವಿಶಾಲ ಮೈದಾನವು ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ವೈಭವದಿಂದ ಕಂಗೊಳಿಸುತಿತ್ತು. ಅಲಂಕೃತ ಅಂಬಾರಿಗಳೊಂದಿಗೆ ಎರಡು ನೈಜ ಗಜ ಗಾತ್ರದ ಆನೆಗಳು ಪ್ರವೇಶದ್ವಾರದಲ್ಲಿ ಅತಿಥಿಗಳನ್ನು ಸ್ವಾಗತಿಸಿದವು. ಭವ್ಯ ಹೊಯ್ಸಳ ಮಹಾದ್ವಾರವು ಗತವೈಭವವನ್ನು ಮರುಕಳಿಸಿತು. ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಮತ್ತು ಡಾ. ಎಸ್. ಎಲ್. ಭೈರಪ್ಪ ಹಾಗೂ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ ಅವರಿಗೆ ನಮನಗಳನ್ನು ಸಲ್ಲಿಸಲು ನಿರ್ಮಿಸಿದ ದ್ವಾರಮಂಟಪ ರಾಜ್ಯದ ಸಾಹಿತ್ಯ ಪರಂಪರೆಯನ್ನು ಸಾರುತ್ತಿತ್ತು.

ಗೌರವಾನ್ವಿತ ಗಣ್ಯರ ಉಪಸ್ಥಿತಿ
ಗೌರವಾನ್ವಿತ ಅತಿಥಿಗಳಾದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮತ್ತು ಖ್ಯಾತ ಕ್ವಿಝ್ ಮಾಸ್ಟರ್ ಡಾ.ನಾ.ಸೋಮೇಶ್ವರ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಅನಿಲ್ ಭಾಸಗಿ ಅವರ ನಿರ್ದೇಶನದಲ್ಲಿ ಸಂಘದ ಸದಸ್ಯರ ‘ಹಚ್ಚೇವು ಕನ್ನಡದ ದೀಪ’ ಗೀತೆಯೊಂದಿಗೆ ಅತಿಥಿ ಗಣ್ಯರು, ಪ್ರಸ್ತುತ ಆಡಳಿತ ಹಾಗು ಸಲಹಾ ಮಂಡಳಿಯ ಸದಸ್ಯರೆಲ್ಲರೂ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉಪಾಧ್ಯಕ್ಷ ರಮೇಶ ಕೆ.ಎಸ್ ತಮ್ಮ ಆರಂಭಿಕ ನುಡಿಯೊಂದಿಗೆ ನಿರೂಪಕರಾದ ಅನುಷಾ ಲಕ್ಕಣ್ಣ ಮತ್ತು ಸುಜಿತ್ ಕುಮಾರ್ ಅವರನ್ನು ಪರಿಚಯಿಸಿದರು. ಆಕರ್ಷಕ ಭರತನಾಟ್ಯ ಪ್ರದರ್ಶನ ಮತ್ತು ಮಕ್ಕಳ ‘ನಮ್ಮ ಕನ್ನಡ ನಮ್ಮ ಹೆಮ್ಮೆ’ ನೃತ್ಯ ಪ್ರದರ್ಶನ ಸಾಂಸ್ಕೃತಿಕ ಸಂಜೆಗೆ ಸಾಕ್ಷಿಯಾಯಿತು.

ಡಾ. ನಾ. ಸೋಮೇಶ್ವರರಿಗೆ ‘ಖತರ್‌ ಕನ್ನಡ ಸಮ್ಮಾನ್’ ಪ್ರಶಸ್ತಿ
ಸಮಾರಂಭದ ಪ್ರಮುಖ ಆಕರ್ಷಣೆಯಾಗಿ, ಸಾಹಿತ್ಯ ಮತ್ತು ಜ್ಞಾನ ಹಂಚಿಕೆ ಲೋಕದ ಅಪಾರ ಕೊಡುಗೆಗಾಗಿ ಡಾ.ನಾ.ಸೋಮೇಶ್ವರರಿಗೆ “ಖತರ್‌ ಕನ್ನಡ ಸಮ್ಮಾನ್” ಪ್ರಶಸ್ತಿ ಪ್ರದಾನ ಮಾಡಲಾಯಿತು. ತಮ್ಮ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಅವರು ಶಿಕ್ಷಕರಿಗೆ ಜೀವಿತಾವಧಿಯ ಋಣ ಮತ್ತು ‘ಥಟ್ ಅಂತ ಹೇಳಿ’ ಕ್ವಿಝ್ ಕಾರ್ಯಕ್ರಮದ ಮೂಲಕ ಜ್ಞಾನ ಹಂಚುವ ತಮ್ಮ ಧ್ಯೇಯವನ್ನು ಹಂಚಿಕೊಂಡರು.

ಸಾಂಸ್ಕೃತಿಕ ವೈಭವ….
ಕಾರ್ಯಕ್ರಮದ ಸಾಂಸ್ಕೃತಿಕ ವೈಭವವು ಭುವನ ಸೂರಜ್ ಮತ್ತು ಭಾವನಾ ನವೀನ್ ಅವರ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿ ಸೌಮ್ಯ ಕೆ.ಟಿ.ಯವರ ನೃತ್ಯ ಸಂಯೋಜನೆಯ ಮೈಸೂರು ಅರಸರ ಶೌರ್ಯವನ್ನು ಬಿಂಬಿಸುವ ನೃತ್ಯ ರೂಪಕ ಮತ್ತು ಸಂಘದ ಸದಸ್ಯರ ಎಕ್ಕ ಮಾರ್ ತಂಡದವರ ಉತ್ಸಾಹಭರಿತ ನೃತ್ಯ ಪ್ರದರ್ಶನದ ಮೂಲಕ ಮತ್ತಷ್ಟು ಕಳೆ ಗಟ್ಟಿತು. ಭಾಗವಹಿಸಿದ ಎಲ್ಲ ಕಲಾವಿದರಿಗೂ ಮೆಚ್ಚುಗೆಯ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ವಿಜಯ್ ಪ್ರಕಾಶ್ ಸಂಗೀತ ಸಂಭ್ರಮ
ಸಮಾರೋಪದ ವಿಶೇಷ ಆಕರ್ಷಣೆಯಾಗಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಮನಮೋಹಕ ಸಂಗೀತ ಸಂಜೆಯು ಅನನ್ಯ ಪ್ರಕಾಶ್, ನಿಶಾನ್ ರೈ ಮತ್ತು ಪ್ರಖ್ಯಾತ ತಂಡದೊಂದಿಗೆ ನಡೆಯಿತು. ವಿಜಯ್ ಪ್ರಕಾಶ್ ರವರನ್ನು “ಸಂಗೀತ ಸೌರಭ” ಬಿರುದು ನೀಡಿ ಗೌರವಿಸಲಾಯಿತು. ವಿಶೇಷ ಕಲಾವಿದೆ ಹೇಮಾ ವಿ. ಪಾಟೀಲ್ ಅವರ ಕೈಚಳಕದ ಕಲಾ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.

ಕೃತಜ್ಞತೆ ಮತ್ತು ‘ಶ್ರಿಗಂಧ’ ಬಿಡುಗಡೆ
ಪ್ರಧಾನ ಕಾರ್ಯದರ್ಶಿ ಕುಮಾರ ಸ್ವಾಮಿ ಅವರು ರಜತ ವರ್ಷಾಚರಣೆಯಲ್ಲಿ ನಡೆದ 24 ಚಟುವಟಿಕೆಗಳ ವಿಡಿಯೋ ಪ್ರದರ್ಶಿಸಿ, ಎಲ್ಲರ ಸಹಕಾರ ಮತ್ತು ಸಹಯೋಗಕ್ಕೆ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷರಾದ ರವಿ ಶೆಟ್ಟಿ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ನುಡಿಗಳನ್ನು ಉಲ್ಲೇಖಿಸುತ್ತಾ, ಸಂಘಗಳಿಗೆ ಸೇವೆ ಸಲ್ಲಿಸುವುದು ತಮ್ಮ ಜನುಮದ ಋಣವನ್ನು ತೀರಿಸಲು ಒದಗಿದ ಅತ್ಯಮೂಲ್ಯ ಅವಕಾಶ ಎಂದು ಭಾವಪೂರ್ಣವಾಗಿ ವ್ಯಕ್ತಪಡಿಸಿದರು.

ಯು.ಟಿ. ಖಾದರ್ ಅವರು “ಶ್ರಿಗಂಧ” ವಾರ್ಷಿಕ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ, ಕನ್ನಡ ಸಂಸ್ಕೃತಿಯನ್ನು ಜಾಗತಿಕವಾಗಿ ಉತ್ತೇಜಿಸುವ ಕೆಎಸ್‌ಕ್ಯೂ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಪೋಷಕರು ತಮ್ಮ ಮಕ್ಕಳ ಆಕಾಂಕ್ಷೆಗಳನ್ನು ಪೋಷಿಸಬೇಕು ಎಂದು ಕರೆ ನೀಡಿದರು.

ಭಾರತದ ಖತರ್ ರಾಯಭಾರಿ ವಿಪುಲ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಾಂಸ್ಕೃತಿಕ ಬಾಂಧವ್ಯಗಳನ್ನು ಬಲಪಡಿಸುವಲ್ಲಿ ಕೆಎಸ್‌ಕ್ಯೂ ವಹಿಸುತ್ತಿರುವ ಪಾತ್ರವನ್ನು ಹಾಗೂ ಅಪೆಕ್ಸ್ ಸಂಸ್ಥೆಗಳಿಗೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು. ಅವರಿಗೆ ಕೃತಜ್ಞತಾ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಸಿಲ್ವರ್ ಕಾರ್ನಿವಲ್ ಪ್ರಾಯೋಜಕರಿಗೆ, ಹೊಯ್ಸಳ ಮಹಾದ್ವಾರದ ಹಾಗೂ ಅಂಬಾರಿ ಗಜಗಳ ರೂವಾರಿ ಹರೀಶ್ ಕೊಡಿಯಾಲ್ ಬೈಲ್ ಮತ್ತು ಶ್ರಿಗಂಧ ಸಂಚಿಕೆಯ ಮುಖ್ಯ ಸಂಪಾದಕ ಕಿಶೋರ್ ಅವರಿಗೆ ಸಂಪಾದಕರ ಮಂಡಳಿಯ ಪರವಾಗಿ ವಿಶೇಷ ಗೌರವ ಸಲ್ಲಿಸಲಾಯಿತು. ಸೌಮ್ಯ ಕೆ.ಟಿ. ವಂದಿಸಿದರು.

ಸಂಘದ ಸಲಹಾ ಸಮಿತಿಯ ಸದಸ್ಯರು, ಸಮುದಾಯ ನಾಯಕರು, ನೆರೆ ರಾಷ್ಟ್ರಗಳ ಕನ್ನಡ ಸಂಘಗಳ ನಾಯಕರುಗಳು, ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು, ಅಪೆಕ್ಸ್ ಸಂಸ್ಥೆಗಳ ಮತ್ತು ಕರ್ನಾಟಕ ಮೂಲದ ಸಂಘಗಳ ನಾಯಕರುಗಳ ಪಾಲ್ಗೊಳ್ಳುವಿಕೆ ಈ ಉತ್ಸವಕ್ಕೆ ವಿಶೇಷ ಮೆರುಗನ್ನು ನೀಡಿತು.

ಆಡಳಿತ ಸಮಿತಿ, ಪ್ರಾಯೋಜಕರು ಮತ್ತು ಸ್ವಯಂಸೇವಕರ ಶ್ರಮದ ಫಲವಾಗಿ, ಈ ರಜತ ಸಮಾರೋಪವು ಖತರ್‌ನ ಕನ್ನಡಿಗರ ಒಗ್ಗಟ್ಟು ಮತ್ತು ಸಂಸ್ಕೃತಿ ಪ್ರೀತಿಯ ಪ್ರತೀಕವಾಗಿ ರೂಪುಗೊಂಡು, ಐತಿಹಾಸಿಕ ಕ್ಷಣಗಳಾಗಿ ಸ್ಥಾಪಿತವಾಯಿತು.

Hot this week

Kuwait: KCWA’s annual family picnic draws over 600 attendees at Mishref Garden

Kuwait: The Kuwait Canara Welfare Association (KCWA) organised its...

ಖತರ್‌ನಲ್ಲಿ ಕರಾವಳಿ ಕನ್ನಡಿಗನ ಸಾಧನೆ; ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆ

ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ...

ದುಬೈ: ಕನ್ನಡಿಗರ ಕೂಟದಿಂದ ʼಕನ್ನಡ ರಾಜ್ಯೋತ್ಸವ 2025ʼ ಭವ್ಯ ಸಂಭ್ರಮ

ದುಬೈ: ಕನ್ನಡಿಗರ ಕೂಟ – ದುಬೈ ಮತ್ತು ಗಲ್ಫ್ ಕನ್ನಡ ಮೂವೀಸ್...

Related Articles

Popular Categories