ದುಬೈ: ‘ಕುಲಾಲ ಫ್ಯಾಮಿಲಿ ದುಬೈ ಯುಎಇ’ ವತಿಯಿಂದ ಮಂಗಳವಾರ ದುಬೈಯ ಝಬೀಲ್ ಪಾರ್ಕಿನಲ್ಲಿ ಆಯೋಜಿಸಲಾಗಿದ್ದ ‘ವಿಹಾರ ಕೂಟ 2025’ ಯಶಸ್ವಿಯಾಗಿ ನಡೆಯಿತು.

ಸುಮಾರು 130ಕ್ಕೂ ಅಧಿಕ ಸಂಖ್ಯೆಯಲ್ಲಿ ಕುಲಾಲ ಸಮುದಾಯದ ಭಾಂದವರು ಪಾಲುಗೊಂದು ಸಂಭ್ರಮಿಸಿದರು. ಬೆಳಗ್ಗೆ 9 ಗಂಟೆಗೆ ಉಪಹಾರದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕುಮಾರಿ ದೇಶ್ನ ಪ್ರವೀಣ್ ಕುಲಾಲ್ ಹಾಗೂ ಧನ್ವಿ ಸಚಿನ್ ಕುಲಾಲ್ ಪ್ರಾರ್ಥನೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದುಬೈಯಲ್ಲಿ ಹಲವು ವರುಷಗಳಿಂದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದುಕೊಂಡು ಹಿರಿಯರು ಹಾಗೂ ಮಾರ್ಗದರ್ಶಕರಾಗಿರುವ ಪದ್ಮನಾಭ ಕುಲಾಲ್ ಎಕ್ಕಾರು ಕಾರ್ಯಕ್ರಮಕ್ಕೆ ಶುಭಹಾರೈಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಮಕ್ಕಳಿಗೆ ಹಾಗೂ ದೊಡ್ಡವರಿಗಾಗಿ ವಿವಿಧ ಮೋಜಿನ ಕ್ರೀಡಾ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಕೊನೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವನ್ನು ನೀಡಲಾಯಿತು. ವಿಹಾರ ಕೂಟದಲ್ಲಿ ಭಾಗವಹಿಸದವರು ತುಂಬಾ ಉತ್ಸಾಹದಿಂದ ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು. ಅಕ್ಷಯ ಕುಲಾಲ್, ಮುಖೇಶ್ ಕುಲಾಲ್, ಆನಂದ ಸಾಲ್ಯಾನ್, ಪ್ರವೀಣ್ ಕುಲಾಲ್, ನವನೀತ್ ಕುಲಾಲ್ ಹಾಗೂ ದಾಕ್ಷಾಯಿಣಿ ಕುಲಾಲ್ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಹಕರಿಸಿದರು.


