ದುಬೈ: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ‘ಹೆಮ್ಮೆಯ ದುಬೈ ಕನ್ನಡ ಸಂಘ’ದ ವತಿಯಿಂದ ನಡೆಯಲಿರುವ 7ನೇ ವರ್ಷದ ಯುಎಇ ಕನ್ನಡಿಗರ ‘ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ’ದ ಭಾಗವಾಗಿ ‘ದುಬೈ ದಸರಾ ಕಪ್’ ಕ್ರಿಕೆಟ್ ಪಂದ್ಯಾವಳಿ ಡಿಸೆಂಬರ್ 7ರಂದು ದುಬೈಯ ಅಲ್ ಕಿಸೆಸ್ಸ್ ನ MMCT ಮೈದಾನದಲ್ಲಿ ನಡೆಯಲಿದೆ.

ಬೆಳಗ್ಗೆ 9ರಿಂದ ಸಂಜೆ 6ರ ವರಗೆ 3 ಮತ್ತು 5 ಮೈದಾನಗಳಲ್ಲಿ ಒಂದೇ ಸಮಯದಲ್ಲಿ ನಡೆಯಲಿದೆ. ಈ ಕ್ರಿಕೆಟ್ ಪಂದ್ಯಾವಳಿಗಳು ಸಂಯುಕ್ತ ಅರಬ್ ಸಂಸ್ಥಾನ(UAE)ದಲ್ಲಿ ನೆಲಸಿರುವ ಸಮಸ್ತ ಅನಿವಾಸಿ ಪುರುಷ ಮತ್ತು ಮಹಿಳಾ ಕನ್ನಡಿಗರಿಗೆ ಆಯೋಜಿಸಲಾಗಿದೆ. ಈ ದಸರಾ ಕಪ್ ಪಂದ್ಯಾವಳಿಯಲ್ಲಿ ಒಟ್ಟು 32 ಪುರುಷರ ತಂಡ ಮತ್ತು 8 ಮಹಿಳಾ ತಂಡಗಳು ಸೇರಿ ಒಟ್ಟು 40 ತಂಡಗಳು ಪ್ರತಿಷ್ಠಿತ ‘ದುಬೈ ದಸರಾ ಟ್ರೋಫಿ’ಗಾಗಿ ಸೆಣಸಾತ ನಡೆಸಲಿವೆ.

ಪಂದ್ಯಾವಳಿಗಳ ವೇಳಾಪಟ್ಟಿ ತಯಾರಿ ಮತ್ತು ಆಯೋಜಕರೊಂದಿಗೆ ತಂಡದ ನಾಯಕರ ಸಮಾಲೋಚನೆ ಸಭೆ ಹಾಗೂ ತಂಡದ ಜೆರ್ಸಿ ಅನಾವರಣ ಇತ್ತೀಚೆಗೆ ಕರಾಮದಲ್ಲಿರುವ ಯುನಿಕ್ ವರ್ಲ್ಡ್ ಸೆಂಟರ್ ಬೋರ್ಡ್ ರೂಮಿನಲ್ಲಿ ನಡೆಯಿತು. ಎಲ್ಲಾ 40 ತಂಡಗಳ ಪ್ರತಿನಿಧಿ ಆಗಮಿಸಿ ಪಂದ್ಯದಲ್ಲಿ ಪಾಲಿಸಬೇಕಾದ ನೀತಿ ನಿಯಮಗಳನ್ನು ಕ್ರಿಕೆಟ್ ಆಯೋಜಕ ಸಮಿತಿಯ ಕ್ಲಿವನ್ ಅವರಿಂದ ಮಾಹಿತಿ ಪಡೆದರು. ಸಭೆಯಲ್ಲಿ ದಸರಾ ಕಪ್ ಕ್ರಿಕೆಟ್ ಆಯೋಜಕರಾದ ಹೆಮ್ಮೆಯ ದುಬೈ ಕನ್ನಡ ಸಂಘದ ರಫೀಕಲಿ ಕೊಡಗು, ಶಂಕರ್ ಬೆಳಗಾವಿ, ಪ್ರತಾಪ್ ಮಡಿಕೇರಿ, ಅಯೂಬ್ ಶಿವಮೊಗ್ಗ, ನಝೀರ ಮಂಡ್ಯ, ರಂಗ ಬೆಂಗಳೂರು, ಬಾಸಿತ್ ಉಡುಪಿ ಮುಂತಾದವರು ಉಪಸ್ಥಿತರಿದ್ದರು.
ದುಬೈ ದಸರಾದ ಮುಖ್ಯ ಕಾರ್ಯಕ್ರಮವಾದ ಕ್ರೀಡೋತ್ಸವ ಡಿಸೆಂಬರ್ 21ರಂದು ಬೆಳಗ್ಗೆ 8ರಿಂದ ರಾತ್ರಿ 11ರವರೆಗೆ ಬಹಳ ಅದ್ದೂರಿಯಾಗಿ ಎಥಿಸಲಾತ್ ಸ್ಪೋರ್ಟ್ಸ್ ಅಕಾಡೆಮಿ ಲೀಸರ್ ಕ್ಲಬ್ಬಿನಲ್ಲಿ ನಡೆಯಲಿದೆ. ಅಂದು ಮಕ್ಕಳು ಮಹಿಳೆಯರು ಮತ್ತು ಪುರುಷರಿಗೆ ವಿವಿಧ ರೀತಿಯ ಕ್ರೀಡೆ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ತಾಯಿನಾಡಿನಿಂದ ಖ್ಯಾತ ಕಲಾವಿದರನ್ನು ಕರೆಸಿ ಆಗಮಿಸಿದ ಅನಿವಾಸಿ ದುಬೈ ಕನ್ನಡಿಗರಿಗೆ ಸಂಗೀತ ಸಂಜೆಯ ರಸದೌತಣ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.


