ದುಬೈ: ಇಲ್ಲಿನ ಶೇಖ್ ಝಾಯೆದ್ ರಸ್ತೆಯಲ್ಲಿರುವ ಮಿಲೆನಿಯಂ ಪ್ಲಾಝಾ ಹೋಟೆಲ್‌ನ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಯುಎಇ ಬಂಟ್ಸ್‌ನ 48ನೇ ವರ್ಷದ ಕೂಡುಕಟ್ಟ್ “ಭಾವೈಕ್ಯ” ಬಂಟರ ಸಮಾಗಮಕ್ಕೆ ಯುಎಇಯಾದ್ಯಂತ ನೆಲೆಸಿರುವ ಸಾವಿರದ ಐನೂರಕ್ಕೂ ಹೆಚ್ಚು ಬಂಟರು ಸಾಕ್ಷಿಯಾದರು.



ಯುಎಇ ಬಂಟ್ಸ್‌ನ ನೂತನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಸಲಹಾ ಸಮಿತಿಯ ಸದಸ್ಯರ ಮತ್ತು 2025ನೇ ಸಾಲಿನ ಸಂಘಟನಾ ಸಮಿತಿಯ ಸರ್ವ ಸದಸ್ಯರ ಕಳೆದ ನಾಲ್ಕು ತಿಂಗಳುಗಳ ಕಠಿಣ ಪರಿಶ್ರಮವೇ ಈ ಬೃಹತ್ ಸಂಖ್ಯೆಯ ಬಂಟರನ್ನು ಒಗ್ಗೂಡಿಸಲು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.
ಬೆಳಗ್ಗೆ 10 ಗಂಟೆಗೆ 48ನೇ ವರ್ಷದ ಕೂಡುಕಟ್ಟ್ ‘ಭಾವೈಕ್ಯ’ ಕಾರ್ಯಕ್ರಮಕ್ಕೆ ಸಂಘದ ಪೋಷಕರಾದ ಸರ್ವೋತ್ತಮ ಶೆಟ್ಟಿ, ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು ಸಂಘಟನಾ ಸಮಿತಿಯ ಮಹಿಳಾ ಸದಸ್ಯೆಯರು ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ವೇಳೆ ಸಲಹಾ ಸಮಿತಿಯ ಸದಸ್ಯರಾದ ರತ್ನಾಕರ ಶೆಟ್ಟಿ, ಸುಂದರ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಂಜ, ಸಜನ್ ಶೆಟ್ಟಿ, ಸುಜತ್ ಶೆಟ್ಟಿ ಉಪಸ್ಥಿತರಿದ್ದರು. ನಂತರ ಸಂಗೀತಾ ಶೆಟ್ಟಿ ತಂಡದಿಂದ ಬಂಟ ಗೀತೆ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ಕಲಾವಿದರಿಂದ ಗಣಪತಿ ಸ್ತುತಿಯ ಯಕ್ಷಗಾನ ನೃತ್ಯದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.



ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯುಎಇ ಬಂಟ ಬಾಂಧವರಿಂದ ತುಳುನಾಡ ಮಣ್ಣ್‌ದ ಮಹಿಮೆ, ಭಾರತದ ಸಂಸ್ಕೃತಿಯ ಪಯಣ, ಬಂಟೆರ್ನ ಐಸಿರ ಮತ್ತು ಕಿರುಚಿತ್ರ ಸ್ಪರ್ಧೆಯಂತಹ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ವಿಭಿನ್ನ ರೀತಿಯಲ್ಲಿ ಮೂಡಿಬಂದ ಕಾರಣ, ಆರಂಭದಿಂದ ರಾತ್ರಿ ಒಂಬತ್ತು ಗಂಟೆಯ ತನಕ ಸಭಾಂಗಣವು ತುಂಬಿ ತುಳುಕುತ್ತಿತ್ತು.
‘ಬಂಟ ವಿಭೂಷಣ’, “ಮಣ್ಣಿನ ಮಗ”, “ತುಳುನಾಡ ಮರ್ಮಯೆ” ಪ್ರಶಸ್ತಿ ಪ್ರದಾನ
ವರ್ಷಂಪ್ರತಿ ಕೊಡಮಾಡುವ ಪ್ರತಿಷ್ಠಿತ ‘ಬಂಟ ವಿಭೂಷಣ’ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚೌಟ, “ಈ ಇಷ್ಟು ದೊಡ್ಡ ಪ್ರಶಸ್ತಿಗೆ ನಾನು ಅರ್ಹನಲ್ಲ, ಆದರೂ ಈ ಪ್ರಶಸ್ತಿಯನ್ನು ಪ್ರೀತಿಪೂರ್ವಕವಾಗಿ ಸ್ವೀಕರಿಸುತ್ತೇನೆ,” ಎಂದು ಹೇಳುತ್ತಾ, ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕು ಮತ್ತು ಅಲ್ಲಿಯ ಯುವಕರಿಗೆ ಅಲ್ಲಿಯೇ ಕೆಲಸ ಸಿಗಬೇಕು ಎಂಬುದು ತಮ್ಮ ಕನಸು. ಅದಕ್ಕಾಗಿ ಇಲ್ಲಿರುವ ಎಲ್ಲ ದಕ್ಷಿಣ ಕನ್ನಡ ಜಿಲ್ಲೆಯವರು ಸಹಕಾರ ನೀಡಬೇಕು ಎಂದು ಕೋರಿದರು. ಜೊತೆಗೆ, ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.




ನಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ದಂಪತಿಗಳಿಗೆ ‘ಮಣ್ಣಿನ ಮಗ’ ಮತ್ತು ಬಾಲಿವುಡ್ ನಟ ವಿವೇಕ್ ಒಬೆರಾಯ್ ಗೆ ‘ತುಳುನಾಡ ಮರ್ಮಯೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟ ರಿಷಬ್ ಶೆಟ್ಟಿ, ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆ ಆದ ಮೇಲೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಆದರೆ, ಪ್ರವೀಣ್ ಅಣ್ಣ ನನ್ನ ಸ್ನೇಹಿತರಾಗಿರುವುದರಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಎಂದರು.
ಅನಂತರ ಮಾತನಾಡಿದ ನಟ ವಿವೇಕ್ ಒಬೆರಾಯ್, ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನಮಗೆ ಹೆಮ್ಮೆಯ ಸಂಗತಿ. ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಇನ್ನೂ ಮುಂದೆಯೂ ಯುಎಇ ಬಂಟ್ಸ್‌ನ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.






‘ಬಂಟ ಬ್ರಹ್ಮ’,’ಬಂಟ ಕಲಾ ಮಾಣಿಕ್ಯ’ ಮತ್ತು ‘ಬಂಟ ಸೇವ ರತ್ನ’ ಪ್ರಶಸ್ತಿ ಪ್ರದಾನ
ಈ ಮರಳು ಭೂಮಿಯಲ್ಲಿ ಕಳೆದ 44 ವರ್ಷಗಳಿಂದ ಯುಎಇ ಬಂಟ್ಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತ ಬಂದಿರುವ ಸರ್ವೋತ್ತಮ ಶೆಟ್ಟಿ ದಂಪತಿಗಳಿಗೆ ‘ಬಂಟ ಬ್ರಹ್ಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಬಂಟ ಕಲಾ ಮಾಣಿಕ್ಯ’ ಪ್ರಶಸ್ತಿಯನ್ನು ಮರಳು ಭೂಮಿಯಲ್ಲಿ ಯಕ್ಷಗಾನವನ್ನು ಪೋಷಿಸಿಕೊಂಡು ಬರುತಿರುವ ದಿನೇಶ್ ಶೆಟ್ಟಿ ಕೊಟ್ಟಿಂಜ ದಂಪತಿ ಮತ್ತು ನಾಟಕ ರಂಗದ ನಿರ್ದೇಶಕ ವಿಶ್ವನಾಥ ಶೆಟ್ಟಿ ದಂಪತಿಗಳಿಗೆ ನೀಡಿ ಗೌರವಿಸಲಾಯಿತು.’ಬಂಟ ಸೇವ ರತ್ನ’ ಪ್ರಶಸ್ತಿಯನ್ನು ಬಾಲಕೃಷ್ಣ ಶೆಟ್ಟಿ ಮಾಡುರುಗುತ್ತು ದಂಪತಿ ಮತ್ತು ವಸಂತ ಶೆಟ್ಟಿಗೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ,ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಹಾಗೂ ಸಲಹಾ ಸಮಿತಿಯ ಸದಸ್ಯರು ಮತ್ತು 2025ನೇ ಸಾಲಿನ ಸಂಘಟನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಆರ್ ಜೆ ನಯನ ಶೆಟ್ಟಿ ಮತ್ತು ಸಾಯಿಲ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ ಎಲ್ಲಾ ಪ್ರಾಯೋಜಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ವೇದಿಕೆಯಲ್ಲಿ ಯುಎಇ ಬಂಟ್ಸ್‌ನ ಮಹಾ ಪೋಷಕರಾದ ಬಿ.ಆರ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉಪಾಧ್ಯಕ್ಷ ಪ್ರೇಮ್ ನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದ ಯಶಸ್ಸಿನ ಹಿಂದೆ ಶ್ರಮಿಸಿದ 2025ನೇ ಸಾಲಿನ ಸಂಘಟನಾ ಸಮಿತಿಯ ಸದಸ್ಯರಾದ ದಿನ್ ರಾಜ್ ಶೆಟ್ಟಿ ಮತ್ತು ದೀಪ್ತಿ ದಿನ್ ರಾಜ್ ಶೆಟ್ಟಿ, ಅನುಪ್ ಶೆಟ್ಟಿ ಮತ್ತು ಚೈತ್ರ ಅನುಪ್ ಶೆಟ್ಟಿ, ಸುಪ್ರಜ್ ಶೆಟ್ಟಿ ಮತ್ತು ಪೃಥ್ವಿ ಸುಪ್ರಜ್ ಶೆಟ್ಟಿ, ವಸಂತ ಶೆಟ್ಟಿ ಮತ್ತು ರಜಿತಾ ವಸಂತ ಶೆಟ್ಟಿ, ಸೀತಾರಾಮ ಶೆಟ್ಟಿ ಮತ್ತು ಅಶ್ವಿನಿ ಸೀತಾರಾಮ ಶೆಟ್ಟಿ, ಗೋಕುಲದಾಸ್ ರೈ ಮತ್ತು ನಿಶ್ಮಿತಾ ಗೋಕುಲದಾಸ್ ರೈ, ಕೀರ್ತಿ ನಿತ್ಯ ಪ್ರಕಾಶ್ ಶೆಟ್ಟಿ, ಮೇಘ ಪ್ರಸನ್ನ ಶೆಟ್ಟಿ, ವಿದ್ಯಾಶ್ರೀ ಸತೀಶ್ ಹೆಗ್ಡೆ, ದೀಪಾ ಕಿರಣ್ ಶೆಟ್ಟಿ, ಲಾಸ್ಯ ಸಂಪತ್ ಶೆಟ್ಟಿ ಮತ್ತಿತರರು ಸಹಕರಿಸಿದರು.
ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳ ವಿಜೇತರು: “ಬಂಟೆರ್ನ ಐಸಿರ”
ಪ್ರಥಮ: ಅಥರ್ವ ವಸಂತ ಶೆಟ್ಟಿ (ನಾಗಾರಾಧನೆ)
ದ್ವಿತೀಯ: ತಶ್ವಿ ಸಂತೋಷ್ ಶೆಟ್ಟಿ (ಕಾಲುಂಗುರ)
ತೃತೀಯ: ಮಹೀಕಾ ಶೆಟ್ಟಿ (ಮುಡಿಪು ಕಟ್ಟುನು)
“ತುಳುನಾಡ ಮಣ್ಣಿನ ಮಹಿಮೆ”
ಪ್ರಥಮ: ಮುಂಡ್ಕೂರು ಕ್ಷೇತ್ರ ತಂಡ
ದ್ವಿತೀಯ: ಕಟೀಲು ಕ್ಷೇತ್ರ ತಂಡ
ತೃತೀಯ: ಮಂದರ್ತಿ ಕ್ಷೇತ್ರ ತಂಡ
“ನಮ್ಮ ಸಂಸ್ಕೃತಿಯ ಪಯಣ”
ಪ್ರಥಮ: ಕರ್ನಾಟಕ ತಂಡ
ದ್ವಿತೀಯ: ರಾಜಸ್ಥಾನ ತಂಡ
ತೃತೀಯ: ಮಹಾರಾಷ್ಟ್ರ ತಂಡ
“ಕಿರುಚಿತ್ರ ಸ್ಪರ್ಧೆ”
ಪ್ರಥಮ: ಸುಸೈಡ್ ಡೆ (Suicide Day)
ದ್ವಿತೀಯ: ಲಾಸ್ಟ್ ಡೋಸ್ (Last Dose)
ತೃತೀಯ: ರಾಂಗ್ ಮೂವ್ (Wrong Move – ತಪ್ಪು ಹೆಜ್ಜೆ)
ಚಿತ್ರ-ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ


