-ಬೆಂಕಿ ಬಸಣ್ಣ, ಉತ್ತರ ಕೆರೊಲಿನಾ

ಉತ್ತರ ಅಮೇರಿಕದ ವೀರಶೈವ-ಲಿಂಗಾಯತ ಸಮುದಾಯದ ಅತ್ಯಂತ ಹಿರಿಯ ಹಾಗೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸಂಘಟನೆಯಾದ ‘ವೀರಶೈವ ಸೊಸೈಟಿ ಆಫ್ ನಾರ್ತ್ ಅಮೇರಿಕ (VSNA)’ ಉತ್ತರ ಕೆರೊಲಿನಾದ ಸ್ಯಾನ್ಫೋರ್ಡ್ ನಗರದಲ್ಲಿ ತನ್ನ 48ನೇ ರಾಷ್ಟ್ರೀಯ ಮಹಾಸಮ್ಮೇಳನಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದೆ.
34 ಸ್ಥಳೀಯ ಸಂಘಗಳನ್ನು ಹೊಂದಿರುವ VSNA, ಉತ್ತರ ಅಮೇರಿಕದ ಭಾರತೀಯ ಸಂಘಟನೆಗಳ ಪೈಕಿ ಅತೀ ಹೆಚ್ಚು ರಾಷ್ಟ್ರೀಯ ಮಹಾಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.


ಎರಡು ದಿನಗಳ ಈ ಮಹಾಸಮ್ಮೇಳನದ ಮೊದಲ ದಿನವೇ ಅಮೇರಿಕದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವೀರಶೈವ-ಲಿಂಗಾಯತ ಕುಟುಂಬಗಳು, ಬಸವಾಭಿಮಾನಿಗಳು ಹಾಗೂ ಕನ್ನಡಿಗರು ಭಾಗವಹಿಸಿ ಹಬ್ಬದ ಸಂಭ್ರಮವನ್ನು ಸೃಷ್ಟಿಸಿದರು.
ಈ ಬಾರಿಯ ಮಹಾಸಮ್ಮೇಳನದ ಯಶಸ್ವಿ ಆಯೋಜನೆಯ ಹಿಂದೆ ಮಹಾಸಮ್ಮೇಳನದ ಅಧ್ಯಕ್ಷ ವಸಂತ್ ಕಲಾಲೆ, ಸಹಾಧ್ಯಕ್ಷ ಹಾಗೂ VSNA ಕಾರ್ಯದರ್ಶಿ ನಂದಿ ನಾಗರಾಜ್ ಮತ್ತು VSNA ಅಧ್ಯಕ್ಷ ತುಮಕೂರು ದಯಾನಂದ್ ಅವರ ಸಮರ್ಥ ನಾಯಕತ್ವ ಪ್ರಮುಖ ಪಾತ್ರ ವಹಿಸಿದೆ. ನೂರಾರು ಸ್ವಯಂಸೇವಕರ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿರುವ ಇವರಿಗೆ ಭಾಗವಹಿಸಿದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾಸಮ್ಮೇಳನದ ಮೊದಲ ದಿನದ ಕಾರ್ಯಕ್ರಮಗಳು ಬೆಳಗ್ಗೆ ಅತ್ಯಂತ ಭಕ್ತಿಭಾವದಿಂದ ಆರಂಭಗೊಂಡವು. ಕಿರಣ್ ಗಂಗನಹಳ್ಳಿ ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ ರುದ್ರಾಭಿಷೇಕ ಮತ್ತು ಲಿಂಗಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿ, ಭಗವಂತನ ಆಶೀರ್ವಾದ ಕೋರಿದರು. ರುದ್ರಾಭಿಷೇಕ ಮತ್ತು ಲಿಂಗಪೂಜೆಯೊಂದಿಗೆ ಸಮಾವೇಶಕ್ಕೆ ಆಧ್ಯಾತ್ಮಿಕ ಸ್ಪರ್ಶ ದೊರಕಿತು. ಧರ್ಮ ಮತ್ತು ಸಂಸ್ಕೃತಿಯನ್ನು ಸಮಾನವಾಗಿ ಪೋಷಿಸುವ VSNAಯ ಧ್ಯೇಯಕ್ಕೆ ಈ ಸಾಮೂಹಿಕ ಪೂಜೆ ಮತ್ತೊಂದು ಉತ್ತಮ ಉದಾಹರಣೆಯಾಯಿತು.
ಬಳಿಕ ನಡೆದ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಜಗಜ್ಯೋತಿ ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಹಾಗೂ ಮಾನವೀಯತೆಯ ತತ್ವಗಳನ್ನು ಸ್ಮರಿಸಿ, ವೀರಶೈವ-ಲಿಂಗಾಯತ ಧರ್ಮದ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.


ಮಹಾಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದ ಮುಖ್ಯ ಭಾಷಣದಲ್ಲಿ ಯುನಿವರ್ಸಿಟಿ ಆಫ್ ಸೌತ್ ಫ್ಲೋರಿಡಾ ಧರ್ಮ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಗಿಲ್ ಬೆನ್-ಹೆರೂಟ್ ಅವರು “Virashaivism in the Diaspora – A Jewish Perspective” ವಿಷಯದ ಕುರಿತು ಚಿಂತನಾತ್ಮಕ ಉಪನ್ಯಾಸ ನೀಡಿದರು.
ಯಹೂದಿ ಸಮುದಾಯವು ಸಾವಿರಾರು ವರ್ಷಗಳಿಂದ ತನ್ನ ಧರ್ಮ, ಸಂಸ್ಕೃತಿ ಹಾಗೂ ಗುರುತನ್ನು ಹೇಗೆ ಉಳಿಸಿಕೊಂಡಿದೆ ಎಂಬುದನ್ನು ವಿವರಿಸಿದ ಅವರು, ಅಮೇರಿಕದಲ್ಲಿ ಬೆಳೆಯುತ್ತಿರುವ ವೀರಶೈವ-ಲಿಂಗಾಯತ ಮಕ್ಕಳಿಗೂ ಧಾರ್ಮಿಕ ಶಿಕ್ಷಣ ಹಾಗೂ ಸಾಂಸ್ಕೃತಿಕ ಅರಿವು ಅತ್ಯಗತ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅಮೇರಿಕದ ವಿಶ್ವವಿದ್ಯಾಲಯದಲ್ಲಿ ಡಾ. ಚಂದ್ರಶೇಖರ ಹಾಗೂ ಡಾ. ಸುಶೀಲಾ ವಿರೂಪಣ್ಣವರ ಬಸವಣ್ಣ ವಿರಶೈವ ಅಧ್ಯಯನ ವಿದ್ಯಾರ್ಥಿವೇತನ ಸ್ಥಾಪಿಸುವ ಯೋಜನೆಯನ್ನೂ ಪರಿಚಯಿಸಲಾಯಿತು.
ಮತ್ತೊಬ್ಬ ಪ್ರಮುಖ ಭಾಷಣಕಾರ ಪ್ರವೀಣ್ ಶಿವಕುಮಾರ್ ಅವರು ಯುವಜನರನ್ನು ಉದ್ದೇಶಿಸಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುವುದರ ಜೊತೆಗೆ ಬಸವಣ್ಣನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಆಧುನಿಕ ಜಗತ್ತಿನಲ್ಲಿ ಯಶಸ್ಸಿನೊಂದಿಗೆ ಮೌಲ್ಯಯುತ ಬದುಕು ಕೂಡ ಅಷ್ಟೇ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.


ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನಗೆದ್ದವು. “ಕರ್ನಾಟಕ ಸಿರಿ ವಯನ” ಪರಿಕಲ್ಪನೆಯಡಿ ಕರ್ನಾಟಕದ ಜಿಐ (GI) ಮಾನ್ಯತೆ ಪಡೆದ ಮೊಳಕಾಲ್ಮೂರು ಸಿಲ್ಕ್, ಇಲ್ಕಲ್ ಸೀರೆ, ಉಡುಪಿ ಸೀರೆ, ಮೈಸೂರು ಸಿಲ್ಕ್, ಪಟ್ಟದಂಚು ಹಾಗೂ ಕಸೂತಿ ಸೇರಿದಂತೆ ಕರ್ನಾಟಕದ ಜವಳಿ ವೈಭವವನ್ನು ಅದ್ಭುತವಾಗಿ ಪರಿಚಯಿಸಲಾಯಿತು. ಸಂಗೀತಾ ಪಾಟೀಲ್ ಅವರ ನಿರ್ದೇಶನದಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ದಂಪತಿಗಳು, ಮಹಿಳೆಯರು ಹಾಗೂ ಯುವಜನರು ಕರ್ನಾಟಕದ ಸಾಂಪ್ರದಾಯಿಕ ಉಡುಪುಗಳ ಸೊಬಗನ್ನು ವೇದಿಕೆಯಲ್ಲಿ ಅನಾವರಣಗೊಳಿಸಿದರು.
“ದಿ ನ್ಯೂ ರಾಯಲ್ಸ್” ಕಾರ್ಯಕ್ರಮದಲ್ಲಿ ಯುವಕರು ಕೆಎಸ್ಐಸಿ ರೇಷ್ಮೆ ಉಡುಪುಗಳಲ್ಲಿ ಮೈಸೂರು ರಾಜಮನೆತನದ ವೈಭವವನ್ನು ನೆನಪಿಸಿದರೆ, ಉಡುಪಿ ಸೀರೆ ಹಾಗೂ ಕಸೂತಿ ಸೀರೆಗಳ ಪ್ರದರ್ಶನ ಕರ್ನಾಟಕದ ಕೈಮಗ್ಗ, ನೇಕಾರಿಕೆ ಮತ್ತು ಕಸೂತಿ ಕಲೆಯ ಶ್ರೀಮಂತ ಪರಂಪರೆಯನ್ನು ಅಮೇರಿಕದ ನೆಲದಲ್ಲಿ ಪರಿಚಯಿಸಿತು.
ಶ್ರುತಿ ಬೀದರ್ ಅವರ ನೇತೃತ್ವದಲ್ಲಿ ನಡೆದ ಡೊಳ್ಳು-ಪಟ್ಟಕುಣಿತ ಜುಗಲ್ಬಂದಿ ಕಾರ್ಯಕ್ರಮ ಸಭಾಂಗಣವನ್ನು ರೋಮಾಂಚನಗೊಳಿಸಿತು. ಡೊಳ್ಳಿನ ಘರ್ಜನೆ, ಪಟ್ಟಕುಣಿತದ ಬಣ್ಣಬಣ್ಣದ ಧ್ವಜಗಳು ಹಾಗೂ ಕಲಾವಿದರ ಉತ್ಸಾಹಭರಿತ ಪ್ರದರ್ಶನಕ್ಕೆ ಸಭಿಕರು ಭರ್ಜರಿ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಣ್ಣನವರ ವಚನಗಳನ್ನು ಆಧರಿಸಿದ “ಮಾಯೆಯ ಮಂಟಪ” ನೃತ್ಯನಾಟಕವೂ ವಿಶೇಷ ಗಮನ ಸೆಳೆಯಿತು. ಡಾ. ಬಸವಣ್ಣ ಗೌಡ ಅವರ ನಿರೂಪಣೆ, ವೀಣಾ ಸಿಂದಗಿ ಸಾಣಿಕೊಪ್ಪ ಅವರ ನೃತ್ಯ ನಿರ್ದೇಶನ, ಶುಭಾ ವಾರದ್ ಅವರ ಕಥಾರಚನೆ ಹಾಗೂ ಕುಮಾರ್ ಕವಿ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ನೃತ್ಯನಾಟಕ ಬಸವ ತತ್ವದ ಸಂದೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸಿತು.


ಮಕ್ಕಳ ಮತ್ತು ಯುವಜನರ ಪ್ರತಿಭೆಯೂ ಮೊದಲ ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಪುಟಾಣಿಗಳ “ಚಂದಮಾಮ”, ಮಕ್ಕಳ “ಭಕ್ತಿ ಸಂಭ್ರಮ”, ಮೆರಿಲ್ಯಾಂಡ್ ಯುವ ತಂಡದ ಫ್ಯೂಷನ್ ನೃತ್ಯ ಹಾಗೂ ಇತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರಿಂದ ಭಾರೀ ಮೆಚ್ಚುಗೆ ಗಳಿಸಿದವು. ಅಮೇರಿಕದಲ್ಲಿ ಜನಿಸಿ ಬೆಳೆದ ಮಕ್ಕಳು ಹಾಗೂ ಯುವಜನರು ಕನ್ನಡ ಭಾಷೆ, ಕರ್ನಾಟಕದ ಸಂಸ್ಕೃತಿ ಮತ್ತು ಬಸವ ತತ್ವದ ಮೇಲಿನ ತಮ್ಮ ಅಭಿಮಾನವನ್ನು ಕಲೆಯ ಮೂಲಕ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಮಹಾಸಮ್ಮೇಳನದಲ್ಲಿ ಅನುಭವ ಮಂಟಪ ಚರ್ಚೆಗಳು, VIRC ಚಟುವಟಿಕೆಗಳು, VS² ವಚನ ಶಾಲೆ, ಮಕ್ಕಳ ಮತ್ತು ಯುವಜನರಿಗಾಗಿ ವಿಶೇಷ ಕಾರ್ಯಕ್ರಮಗಳು ಹಾಗೂ ಮಹಿಳಾ ವೇದಿಕೆಗಳಿಗೂ ಆದ್ಯತೆ ನೀಡಲಾಗಿದ್ದು, ಮುಂದಿನ ಪೀಳಿಗೆಯಲ್ಲಿ ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿತ್ತುವ ಸಂಘಟನೆಯ ದೂರದೃಷ್ಟಿ ಸ್ಪಷ್ಟವಾಗಿ ಗೋಚರಿಸಿತು.
ಜುಲೈ 3ರ ಮೊದಲ ದಿನದ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮಹಾಸಮ್ಮೇಳನದ ಸಂಭ್ರಮ ಇನ್ನೂ ಮುಂದುವರಿದಿದೆ. ಎರಡನೇ ಹಾಗೂ ಅಂತಿಮ ದಿನವಾದ ಜುಲೈ 4ರಂದು ಅನುಭವ ಮಂಟಪ ಚರ್ಚೆಗಳು, ವಿಶೇಷ ಉಪನ್ಯಾಸಗಳು, ಯುವಜನ ಕಾರ್ಯಕ್ರಮಗಳು, ವೀರಗಾಸೆ, ಇನ್ನೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿವೆ.
ಇದೇ ಸಂದರ್ಭದಲ್ಲಿ ಅಮೇರಿಕದ 250ನೇ ಸ್ವಾತಂತ್ರ್ಯೋತ್ಸವವನ್ನೂ ಮಹಾಸಮ್ಮೇಳನದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಾದ ನಾವು, ನಮ್ಮ ತಾಯ್ನಾಡಿನ ಸಂಸ್ಕೃತಿ ಮತ್ತು ಬಸವಣ್ಣನವರ ಆದರ್ಶಗಳನ್ನು ಉಳಿಸಿಕೊಂಡಿರುವಂತೆಯೇ ನಮಗೆ ಅವಕಾಶ ನೀಡಿದ ಅಮೇರಿಕದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಾಗೂ ಮೌಲ್ಯಗಳಿಗೂ ಗೌರವ ಸಲ್ಲಿಸುವ ಸಂಕೇತವಾಗಿ ಈ ವಿಶೇಷ ಆಚರಣೆಯನ್ನು ಸೇರಿಸಲಾಗಿದೆ.

ಉತ್ತರ ಕೆರೊಲಿನಾ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ವಾಸಿಸುವ ವೀರಶೈವ-ಲಿಂಗಾಯತರು, ಕನ್ನಡಿಗರು ಹಾಗೂ ಭಾರತೀಯರು ಕುಟುಂಬ ಸಮೇತರಾಗಿ ಆಗಮಿಸಿ ಎರಡನೇ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಆಯೋಜಕರು ಆಹ್ವಾನಿಸಿದ್ದಾರೆ.
ಧರ್ಮ, ಸಂಸ್ಕೃತಿ, ಶಿಕ್ಷಣ, ಸಮಾಜಸೇವೆ ಮತ್ತು ಯುವಶಕ್ತಿಯ ಐದು ಸ್ತಂಭಗಳ ಮೇಲೆ ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬೆಳೆದಿರುವ VSNA, ತನ್ನ 48ನೇ ರಾಷ್ಟ್ರೀಯ ಮಹಾಸಮ್ಮೇಳನದ ಮೂಲಕ ಮತ್ತೊಮ್ಮೆ ಬಸವಣ್ಣನವರ ಸಂದೇಶವನ್ನು ಉತ್ತರ ಅಮೆರಿಕಾದಾದ್ಯಂತ ಮೊಳಗಿಸುತ್ತಿದೆ. ಇದು ಕೇವಲ ಒಂದು ಮಹಾಸಮ್ಮೇಳನವಲ್ಲ; ಮುಂದಿನ ಪೀಳಿಗೆಗೆ ನಮ್ಮ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯನ್ನು ಹಸ್ತಾಂತರಿಸುವ ಮಹತ್ತರ ಸಾಂಸ್ಕೃತಿಕ ಚಳವಳಿಯಾಗಿದೆ.

