Lead Newsನ್ಯೂಯಾರ್ಕ್; ಆಲ್ಬನಿಯಲ್ಲಿ ಸಂಭ್ರಮದ ಕನ್ನಡ ಕಲಿ ಪದವಿ ಪ್ರದಾನ

ನ್ಯೂಯಾರ್ಕ್; ಆಲ್ಬನಿಯಲ್ಲಿ ಸಂಭ್ರಮದ ಕನ್ನಡ ಕಲಿ ಪದವಿ ಪ್ರದಾನ

ಮಳೆಯ ನಡುವೆಯೂ ಕನ್ನಡದ ಕಲರವ; ಪ್ರತಿಭಾ ಪ್ರದರ್ಶನ, ಪದವಿ ಪತ್ರ ವಿತರಣೆ, ಹಳ್ಳಿ ಆಟ, ಪಾಟ್‌ಲಕ್ ಭೋಜನದ ಸಂಭ್ರಮ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್

ಆಲ್ಬನಿ(ನ್ಯೂಯಾರ್ಕ್): ಅಮೇರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ ಭಾಷೆ, ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ನ್ಯೂಯಾರ್ಕ್ ರಾಜ್ಯದ ಆಲ್ಬನಿಯ ಕನ್ನಡ ಕಲಿ ಶಾಲೆಯ ವಾರ್ಷಿಕ ಪದವಿ ಪ್ರದಾನ ಸಮಾರಂಭವು ಆಗಸ್ಟ್ 2ರಂದು ಬಾಲ್‌ಸ್ಟನ್ ಲೇಕ್‌ನ ವೆಟರನ್ಸ್ ಮೆಮೋರಿಯಲ್ ಪಾರ್ಕ್‌ನಲ್ಲಿ ನಡೆಯಿತು.

ಮೋಡ ಕವಿದ ವಾತಾವರಣ, ಆಗಾಗ ಸುರಿಯುತ್ತಿದ್ದ ತುಂತುರು ಮಳೆಯ ನಡುವೆಯೂ ಕನ್ನಡ ಕಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಥಳೀಯ ಕನ್ನಡಿಗರು ಉತ್ಸಾಹದಿಂದ ಭಾಗವಹಿಸಿದರು. ಪದವಿ ಪ್ರದಾನ, ಮಕ್ಕಳ ಕನ್ನಡ ಪ್ರತಿಭಾ ಪ್ರದರ್ಶನ, ಕರ್ನಾಟಕದ ಸಾಂಪ್ರದಾಯಿಕ ಹಳ್ಳಿ ಆಟಗಳು ಹಾಗೂ ಪಾಟ್‌ಲಕ್ ಭೋಜನದೊಂದಿಗೆ ದಿನವಿಡೀ ಕನ್ನಡದ ಸಂಭ್ರಮ ಮನೆಮಾಡಿತ್ತು.

ಕನ್ನಡ ಕಲಿಕೆಗೆ ಆದ್ಯತೆ ನೀಡಲು ಕರೆ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ 81 ವರ್ಷದ ಹಿರಿಯ ನಾರಾಯಣ ರಾವ್ ಬೆಂಕಿ ಅವರು ಮಕ್ಕಳನ್ನು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕದಿಂದ ಸಾವಿರಾರು ಮೈಲುಗಳ ದೂರದಲ್ಲಿರುವ ಅಮೇರಿಕದಲ್ಲಿ ನೆಲೆಸಿದ್ದರೂ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯನ್ನು ಕಲಿಸುತ್ತಿರುವ ಶಿಕ್ಷಕರು ಮತ್ತು ಪೋಷಕರ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ಭಾಷೆ ಕೇವಲ ಸಂವಹನದ ಸಾಧನವಲ್ಲ; ಅದು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಬೇರುಗಳೊಂದಿಗೆ ಮುಂದಿನ ಪೀಳಿಗೆಯನ್ನು ಬೆಸೆಯುವ ಕೊಂಡಿ. ಅಮೇರಿಕದಲ್ಲಿ ಹುಟ್ಟಿ ಬೆಳೆಯುವ ಮಕ್ಕಳು ಕನ್ನಡ ಕಲಿತರೆ ಕರ್ನಾಟಕದಲ್ಲಿರುವ ತಮ್ಮ ಅಜ್ಜ-ಅಜ್ಜಿ ಹಾಗೂ ಬಂಧುಬಳಗದೊಂದಿಗೆ ಕನ್ನಡದಲ್ಲಿ ಮಾತನಾಡಲು ಸಾಧ್ಯವಾಗುವುದರ ಜೊತೆಗೆ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯೊಂದಿಗೂ ನಂಟು ಬೆಳೆಸಿಕೊಳ್ಳಬಹುದು ಎಂದು ಅವರು ಹೇಳಿದರು.

ಇಂದಿನ ಮಕ್ಕಳು ಶಾಲೆಯ ಜೊತೆಗೆ ಟೆನಿಸ್, ಈಜು, ನೃತ್ಯ, ಟೇಕ್ವಾಂಡೋ ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪೋಷಕರೂ ಬಿಡುವಿಲ್ಲದ ಜೀವನ ನಡೆಸುತ್ತಿದ್ದಾರೆ. ಆದರೂ ಕನ್ನಡ ಕಲಿಕೆಯನ್ನು ಮತ್ತೊಂದು ಚಟುವಟಿಕೆಯೆಂದು ಪರಿಗಣಿಸದೆ ಆದ್ಯತೆಯಾಗಿ ಪರಿಗಣಿಸಬೇಕು ಎಂದು ನಾರಾಯಣ ರಾವ್ ಬೆಂಕಿ ಮನವಿ ಮಾಡಿದರು.

ಕನ್ನಡ ಕಲಿ ತರಗತಿಗಳಿಗೆ ಇನ್ನೂ ಸೇರದಿರುವ ಕನ್ನಡ ಕುಟುಂಬಗಳ ಮಕ್ಕಳನ್ನೂ ಪೋಷಕರು ಸೇರಿಸುವಂತೆ ಕರೆ ನೀಡಿದ ಅವರು, ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನೂ ವಿವರಿಸಿದರು. ಶಿಕ್ಷಕಿಯರಾದ ಲತಾ ಮೇಡಂ ಮತ್ತು ಮಾಧವಿ ದೀಕ್ಷಿತ್ ಹಾಗೂ ಮಕ್ಕಳ ಕನ್ನಡ ಕಲಿಕೆಗೆ ಬೆಂಬಲ ನೀಡುತ್ತಿರುವ ಪೋಷಕರ ಸೇವೆಯನ್ನು ಶ್ಲಾಘಿಸಿದರು.

ಪೋಷಕರ ನೇತೃತ್ವದಲ್ಲಿ ಕಾರ್ಯಕ್ರಮ
ಈ ವರ್ಷದ ಪದವಿ ಪ್ರದಾನ ಸಮಾರಂಭವನ್ನು ಮುಖ್ಯವಾಗಿ ಕನ್ನಡ ಕಲಿ ಪೋಷಕರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಮುಕ್ತಾ ಜೋಶಿ ಮತ್ತು ಸುಪ್ರಿಯಾ ವಾಳ್ವೇಕರ್ ಕಾರ್ಯಕ್ರಮದ ಸಂಯೋಜಕರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ರಾಜೀವ್ ಮಹಾಜನ್ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು.

ಕನ್ನಡ ಕಲಿ ನಡೆದು ಬಂದ ಹಾದಿ ನೆನಪಿಸಿದ ಚೈತಾಲಿ
ಪೋಷಕರ ಪರವಾಗಿ ಮಾತನಾಡಿದ ಚೈತಾಲಿ ಕಲ್ಯಾಣಪುರ ಅವರು, ಆಲ್ಬನಿಯ ಕನ್ನಡ ಕಲಿ ಶಾಲೆ ನಡೆದು ಬಂದ ಸುಮಾರು ಒಂದೂವರೆ ದಶಕದ ಹಾದಿಯನ್ನು ಸಭಿಕರ ಮುಂದೆ ತೆರೆದಿಟ್ಟರು.

2011-12ರಲ್ಲಿ ಆಲ್ಬನಿ ಕನ್ನಡ ಕೂಟದ ಅಧ್ಯಕ್ಷರಾಗಿದ್ದ ಬೆಂಕಿ ಬಸಣ್ಣ ಅವರ ನೇತೃತ್ವದಲ್ಲಿ ಕನ್ನಡ ಕಲಿ ತರಗತಿಗಳಿಗೆ ಚಾಲನೆ ದೊರೆಯಿತು ಎಂದು ಚೈತಾಲಿ ತಮ್ಮ ಭಾಷಣದಲ್ಲಿ ಸ್ಮರಿಸಿದರು. ಆರಂಭದ ದಿನಗಳಲ್ಲಿ ಆಲ್ಬನಿಯ ಹಳೆಯ ಹಿಂದೂ ದೇವಸ್ಥಾನದಲ್ಲಿ ಕನ್ನಡ ತರಗತಿಗಳು ನಡೆಯುತ್ತಿದ್ದವು ಎಂದು ಅವರು ತಿಳಿಸಿದರು.

ಕನ್ನಡ ಕಲಿಯ ಮೊದಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಮೀನಾ ಕೃಷ್ಣಪ್ಪ ಅವರ ಕೊಡುಗೆಯನ್ನು ಸ್ಮರಿಸಿದ ಚೈತಾಲಿ, ನಂತರದ ವರ್ಷಗಳಲ್ಲಿ ಕನ್ನಡ ಕಲಿಯನ್ನು ಬೆಳೆಸುವಲ್ಲಿ ಪ್ರವೀಣ್ ರಾವ್, ಅಲ್ಕಾ ಮತ್ತು ಮಮತಾ ಸೇರಿದಂತೆ ವಿವಿಧ ಅವಧಿಗಳಲ್ಲಿ ಕೈಜೋಡಿಸಿದವರ ಸೇವೆಯನ್ನೂ ನೆನಪಿಸಿಕೊಂಡರು.

2018ರಲ್ಲಿ ಕನ್ನಡ ಕಲಿ ತರಗತಿಗಳನ್ನು ಹಿಂದೂ ದೇವಸ್ಥಾನದಿಂದ ಬೌಗ್ಟ್ ಎಲಿಮೆಂಟರಿ ಶಾಲೆಗೆ (Bougt Elementary School) ಸ್ಥಳಾಂತರಿಸಲಾಯಿತು. ಕೋವಿಡ್ ನಂತರ ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ತರಗತಿಗಳು ಆನ್‌ಲೈನ್ ರೂಪದಲ್ಲಿಯೂ ಮುಂದುವರಿದವು ಎಂದು ಅವರು ವಿವರಿಸಿದರು.

ಲತಾ ಮೇಡಂ ಅವರ ಕನ್ನಡ ಸೇವೆ ಸ್ಮರಣೆ
ಕನ್ನಡ ಕಲಿ ಶಾಲೆಯ ಬೆಳವಣಿಗೆಯಲ್ಲಿ ಹಲವು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಲತಾ ಮೇಡಂ ಅವರ ಕೊಡುಗೆಯನ್ನು ಚೈತಾಲಿ ತಮ್ಮ ಭಾಷಣದಲ್ಲಿ ವಿಶೇಷವಾಗಿ ಸ್ಮರಿಸಿದರು.

75 ವರ್ಷ ದಾಟಿದ ವಯಸ್ಸಿನಲ್ಲಿ, ಕ್ಯಾನ್ಸರ್ ವಿರುದ್ಧ ಹೋರಾಡಿದ ಬಳಿಕವೂ ಲತಾ ಮೇಡಂ ಕನ್ನಡ ಕಲಿಸುವ ಕಾರ್ಯವನ್ನು ಮುಂದುವರಿಸಿದ್ದರು. ಯಾವುದೇ ಸಂಭಾವನೆಯಿಲ್ಲದೆ ಸ್ವಯಂಸೇವಕಿಯಾಗಿ ಶುಕ್ರವಾರ ಸಂಜೆ ನಡೆಯುತ್ತಿದ್ದ ತರಗತಿಗಳಿಗೆ ಸುಮಾರು 50 ಮೈಲಿ ದೂರವನ್ನು ಕಾರಿನಲ್ಲಿ ಕ್ರಮಿಸಿ ಬೌಗ್ಟ್ ಎಲಿಮೆಂಟರಿ ಶಾಲೆಗೆ ಬರುತ್ತಿದ್ದರು. ಚಳಿಗಾಲದ ಪ್ರತಿಕೂಲ ಹವಾಮಾನದ ನಡುವೆಯೂ ತರಗತಿಗಳನ್ನು ನಡೆಸುತ್ತಿದ್ದ ಅವರ ಬದ್ಧತೆಯನ್ನು ಚೈತಾಲಿ ನೆನಪಿಸಿಕೊಂಡರು.

“ಒಬ್ಬನೇ ಒಬ್ಬ ವಿದ್ಯಾರ್ಥಿ ತರಗತಿಗೆ ಬಂದರೂ ಕನ್ನಡ ಕಲಿಸಬೇಕು” ಎಂಬ ಮನೋಭಾವದೊಂದಿಗೆ ಲತಾ ಮೇಡಂ ಕಾರ್ಯನಿರ್ವಹಿಸುತ್ತಿದ್ದರು ಎಂದು ಚೈತಾಲಿ ಹೇಳಿದರು.

ಅವರ ಸೇವೆ ಭಾಷಾ ಪಾಠಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಮಕ್ಕಳಿಗಾಗಿ ಕನ್ನಡ ನಾಟಕಗಳನ್ನು ರಚಿಸಿ, ಸಂಭಾಷಣೆ ಕಲಿಸಿ, ಮಕ್ಕಳಿಂದ ಅಭಿನಯ ಮಾಡಿಸುವುದರ ಜೊತೆಗೆ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಿದ್ದರು.

ಸುಮಾರು ಏಳೆಂಟು ವರ್ಷಗಳ ಕಾಲ ಕನ್ನಡ ಕಲಿಯ ಜವಾಬ್ದಾರಿ ನಿರ್ವಹಿಸಿದ ಲತಾ ಮೇಡಂ ಅವರಿಂದ ಕಳೆದ ವರ್ಷ ಜವಾಬ್ದಾರಿ ವಹಿಸಿಕೊಂಡ ಮಾಧವಿ ದೀಕ್ಷಿತ್ ಅವರು ಕನ್ನಡ ಕಲಿಯ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದಾರೆ.

ಕಥೆ, ಹಾಡು, ಭಾಷಣ — ಮಕ್ಕಳ ಕನ್ನಡ ಪ್ರತಿಭಾ ಪ್ರದರ್ಶನ
ಪದವಿ ಪ್ರದಾನ ಸಮಾರಂಭದಲ್ಲಿ ಪ್ರತಿಯೊಬ್ಬ ಕನ್ನಡ ಕಲಿ ವಿದ್ಯಾರ್ಥಿಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು. ಮಕ್ಕಳು ಕನ್ನಡದಲ್ಲಿ ಕಥೆ ಹೇಳಿದರು, ಹಾಡು ಹಾಡಿದರು, ಭಾಷಣ ಮಾಡಿದರು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಮಕ್ಕಳ ಕಾರ್ಯಕ್ರಮಗಳು ಕನ್ನಡದಲ್ಲಿಯೇ ನಡೆದದ್ದು ವಿಶೇಷವಾಗಿತ್ತು. ಅಮೇರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳು ವೇದಿಕೆಯ ಮೇಲೆ ನಿಂತು ಕನ್ನಡದಲ್ಲಿ ಮಾತನಾಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದನ್ನು ಪೋಷಕರು ಸಂತಸದಿಂದ ವೀಕ್ಷಿಸಿದರು.

ಮಕ್ಕಳನ್ನು ಕಾರ್ಯಕ್ರಮಕ್ಕೆ ಸಿದ್ಧಪಡಿಸಿದ ಶಿಕ್ಷಕಿ ಮಾಧವಿ ದೀಕ್ಷಿತ್ ಹಾಗೂ ಮನೆಯಲ್ಲಿ ಮಕ್ಕಳಿಗೆ ಅಭ್ಯಾಸ ಮಾಡಿಸಿ ಪ್ರೋತ್ಸಾಹಿಸಿದ ಪೋಷಕರ ಪರಿಶ್ರಮವನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಲಾಯಿತು.

ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪದಕ
ಕನ್ನಡ ಕಲಿ ಶಾಲೆಯ ವಿವಿಧ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪದಕಗಳನ್ನು ನೀಡಿ ಗೌರವಿಸಲಾಯಿತು.

4ನೇ ಹಂತದಲ್ಲಿ ಹರಿರಾಮ್ ಹೇಮಂತ್, ನಚಿಕೇತ ಮಹಾಜನ ಮತ್ತು ಮೊನ್ವಿತ ಮುನಿಕೃಷ್ಣಯ್ಯ, 3ನೇ ಹಂತದಲ್ಲಿ ಜೇಕ್ ಈಥನ್ ರಾಜಕಮಲ್, ಅವ್ಯುಕ್ತ್ ಶ್ರೀವಾಸ್ತವ ಮತ್ತು ಅಧಿರಾ ಗುರ್ರಂ, 2ನೇ ಹಂತದಲ್ಲಿ ಜೇನ್ ಎವಲಿನ್ ರಾಜಕಮಲ್, ಅವ್ನಿ ಸಂತೋಷ್ ಮತ್ತು ನಮನ್ ಅನಿರುಧ್, 1ನೇ ಹಂತದಲ್ಲಿ ನಿಹಾರಿಕಾ ಮಹಾಜನ ಮತ್ತು ಸುವೀರ್ ರಾಮ್ ಹೇಮಂತ್ ತಮ್ಮ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಕೂಟ ಆಫ್ ಕ್ಯಾಪಿಟಲ್ ಡಿಸ್ಟ್ರಿಕ್ಟ್ (KKCD) ಅಧ್ಯಕ್ಷೆ ಜ್ಯೋತಿ ಮುರುಂಡಿ ವಿಶೇಷ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಮಕ್ಕಳ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ KKCD ಕಾರ್ಯಕಾರಿ ಸಮಿತಿಯ ವತಿಯಿಂದ ಪ್ರತಿಯೊಬ್ಬ ಕನ್ನಡ ಕಲಿ ವಿದ್ಯಾರ್ಥಿಗೂ 20 ಡಾಲರ್ ನಗದು ಪ್ರೋತ್ಸಾಹಧನ ನೀಡಲಾಯಿತು.

ಲಗೋರಿ, ಖೋ-ಖೋ, ಕಬಡ್ಡಿ — ಹಳ್ಳಿ ಆಟಗಳ ಸಂಭ್ರಮ
ವೇದಿಕೆ ಕಾರ್ಯಕ್ರಮಗಳ ನಂತರ ಶಿಕ್ಷಕಿ ಮಾಧವಿ ದೀಕ್ಷಿತ್ ಮಕ್ಕಳಿಗಾಗಿ ಕರ್ನಾಟಕದ ಸಾಂಪ್ರದಾಯಿಕ ಗ್ರಾಮೀಣ ಆಟಗಳನ್ನು ಆಯೋಜಿಸಿದರು.

ಲಗೋರಿ, ಖೋ-ಖೋ, ಕಬಡ್ಡಿ ಸೇರಿದಂತೆ ಕರ್ನಾಟಕದ ಹಳ್ಳಿ ಆಟಗಳನ್ನು ಅಮೆರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಪರಿಚಯಿಸಲಾಯಿತು. ಕನ್ನಡ ಕಲಿ ವಿದ್ಯಾರ್ಥಿಗಳ ಜೊತೆಗೆ ಕನ್ನಡ ಕಲಿ ತರಗತಿಗಳಿಗೆ ಸೇರದ ಇತರ ಮಕ್ಕಳೂ ಆಟಗಳಲ್ಲಿ ಭಾಗವಹಿಸಿದರು.

ಮಧ್ಯಾಹ್ನ ತುಂತುರು ಮಳೆ ಸುರಿಯುತ್ತಿದ್ದರೂ ಮಕ್ಕಳು ಮತ್ತು ಪೋಷಕರು ಉತ್ಸಾಹದಿಂದ ಆಟಗಳಲ್ಲಿ ಪಾಲ್ಗೊಂಡರು.

ಪೋಷಕರ ಕೈರುಚಿಯಲ್ಲಿ ಪಾಟ್‌ಲಕ್ ಭೋಜನ
ಕಾರ್ಯಕ್ರಮದ ಮತ್ತೊಂದು ವಿಶೇಷತೆ ಪಾಟ್‌ಲಕ್ ಬ್ರಂಚ್ ಮತ್ತು ಭೋಜನವಾಗಿತ್ತು. ಪೋಷಕರು ತಮ್ಮ ಮನೆಗಳಲ್ಲಿ ತಯಾರಿಸಿದ ಕರ್ನಾಟಕ ಹಾಗೂ ಭಾರತದ ವಿವಿಧ ಬಗೆಯ ಸಾಂಪ್ರದಾಯಿಕ ತಿಂಡಿ-ತಿನಿಸು ಮತ್ತು ಖಾದ್ಯಗಳನ್ನು ತಂದು ಎಲ್ಲರೊಂದಿಗೆ ಹಂಚಿಕೊಂಡರು.

ವಿವಿಧ ಬಗೆಯ ಆಹಾರವನ್ನು ತಯಾರಿಸಿ ತಂದ ಪೋಷಕರ ಸಹಭಾಗಿತ್ವ ಕಾರ್ಯಕ್ರಮಕ್ಕೆ ಮನೆಯ ಹಬ್ಬದ ವಾತಾವರಣವನ್ನು ತಂದಿತು.

ಎಲ್ಲರ ಸಹಕಾರದಲ್ಲಿ ಕನ್ನಡದ ಸಂಭ್ರಮ
ಕಾರ್ಯಕ್ರಮದ ಸ್ಥಳವನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸಬೇಕಾದ ಪರಿಸ್ಥಿತಿ ಎದುರಾದಾಗ ಮುರಳಿ ಮತ್ತು ಸುಷ್ಮಾ ಅವರು ತಕ್ಷಣ ಹೊಸ ಸ್ಥಳವನ್ನು ಕಾಯ್ದಿರಿಸುವಲ್ಲಿ ನೆರವಾದರು. ಹಲವು ವರ್ಷಗಳಿಂದ ಕನ್ನಡ ಕಲಿ ವಿದ್ಯಾರ್ಥಿಗಳ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿ ಮುದ್ರಿಸುತ್ತಿರುವ ಉಮಾ ಬೆಂಕಿ ಅವರು ಈ ವರ್ಷವೂ ಆ ಜವಾಬ್ದಾರಿಯನ್ನು ನಿರ್ವಹಿಸಿದರು.

ಶಿಕ್ಷಕರು, ಪೋಷಕರು, ಸ್ವಯಂಸೇವಕರು ಹಾಗೂ KKCD ಕಾರ್ಯಕಾರಿ ಸಮಿತಿಯ ಸಹಕಾರದೊಂದಿಗೆ, ಮೋಡ ಮತ್ತು ತುಂತುರು ಮಳೆಯ ನಡುವೆಯೂ ಮಕ್ಕಳ ಕನ್ನಡದ ಕಲರವ, ಪೋಷಕರ ಕೈರುಚಿಯ ಊಟ ಹಾಗೂ ಕರ್ನಾಟಕದ ಹಳ್ಳಿ ಆಟಗಳೊಂದಿಗೆ ದಿನದ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.

ಆದರೆ…
ಕಾರ್ಯಕ್ರಮ ಮುಗಿದು ಎಲ್ಲರೂ ಮನೆಗೆ ತೆರಳಿದ ನಂತರವೂ, ಆ ದಿನದ ಕಥೆ ಅಲ್ಲಿಗೇ ಮುಗಿಯಲಿಲ್ಲ. ಅಂದು ರಾತ್ರಿ ನಡೆದ ಒಂದು ಪುಟ್ಟ ಘಟನೆ ಕಾರ್ಯಕ್ರಮಕ್ಕೆ ಮತ್ತೊಂದು ಅರ್ಥಪೂರ್ಣ ಅಂತ್ಯ ನೀಡಿತು.

ಅಜ್ಜನ $11ಕ್ಕೆ ಅವ್ಯಾನ್‌ನ $20!
ಮುಖ್ಯ ಅತಿಥಿ ನಾರಾಯಣ ರಾವ್ ಬೆಂಕಿ ಅವರು ಅಂದು ಪ್ರತಿಯೊಬ್ಬ ಕನ್ನಡ ಕಲಿ ವಿದ್ಯಾರ್ಥಿಗೂ ವೈಯಕ್ತಿಕವಾಗಿ ಶುಭಾಶಯ ಪತ್ರ ಬರೆದು, ತಮ್ಮ ಸ್ವಂತ ಹಣದಿಂದ ತಲಾ 11 ಡಾಲರ್ ನೀಡಿದ್ದರು.

ಅದರ ಹಿಂದೆ ಒಂದು ಸರಳ ಉದ್ದೇಶವಿತ್ತು — ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಉಳಿತಾಯದ ಅಭ್ಯಾಸ ಕಲಿಸುವುದು.

“ಈ ಹಣವನ್ನು ಕೂಡಲೇ ಖರ್ಚು ಮಾಡಬೇಡಿ. ನಿಮ್ಮ ಪಿಗ್ಗಿ ಬ್ಯಾಂಕ್‌ನಲ್ಲಿ ಹಾಕಿ. ಇಂದು ಹಣವನ್ನು ಉಳಿಸಿದರೆ, ನಾಳೆ ಆ ಹಣ ನಿಮ್ಮನ್ನು ಉಳಿಸಬಹುದು,” ಎಂದು ಅವರು ಮಕ್ಕಳಿಗೆ ಹೇಳಿದ್ದರು.

ಅಂದು ರಾತ್ರಿ ಪೋಷಕಿ ಚೈತಾಲಿ ಕಲ್ಯಾಣಪುರ ಅವರಿಂದ ಒಂದು ಸಂದೇಶ ಬಂತು. ಮಕ್ಕಳಿಗೆ ದೊರೆತ ಹಣವನ್ನು ನೆಪವಾಗಿಟ್ಟುಕೊಂಡು ಉಳಿತಾಯದ ಮಹತ್ವ, ಭವಿಷ್ಯಕ್ಕಾಗಿ ಹಾಗೂ ಕಾಲೇಜು ಶಿಕ್ಷಣಕ್ಕಾಗಿ ಹಣವನ್ನು ಉಳಿಸುವ ಅಗತ್ಯದ ಕುರಿತು ಮಕ್ಕಳೊಂದಿಗೆ ಮಾತನಾಡಿದ್ದಾಗಿ ಅವರು ತಿಳಿಸಿದರು.

ಆದರೆ ಅವರ ಎಂಟು ವರ್ಷದ ಮಗ ಅವ್ಯಾನ್ ಕಲ್ಯಾಣಪುರ ಮಾತ್ರ ಅಜ್ಜ ಕೊಟ್ಟ 11 ಡಾಲರ್‌ನ್ನು ಬೇರೆಯೇ ರೀತಿಯಲ್ಲಿ ನೋಡಿದ್ದ.

“ಅಜ್ಜ ವಯಸ್ಸಾದವರು. ಅವರಿಗೂ ಅವರಿಗಾಗಿ ಹಣ ಬೇಕಲ್ಲವೇ?” ಎಂದು ಅವ್ಯಾನ್ ತನ್ನ ತಾಯಿಗೆ ಕೇಳಿದ್ದ.

ಅಷ್ಟೇ ಅಲ್ಲ..ಅಜ್ಜ ಕೊಟ್ಟ 11 ಡಾಲರ್‌ಗೆ ತನ್ನ ಕಡೆಯಿಂದ ಇನ್ನೂ 9 ಡಾಲರ್ ಸೇರಿಸಿ, ಒಟ್ಟು 20 ಡಾಲರ್ ಮಾಡಿ, ಅದನ್ನು ಒಂದು ಕಾರ್ಡ್‌ನಲ್ಲಿ ಇಟ್ಟು, ಕೆಲವು ಒಳ್ಳೆಯ ಮಾತುಗಳನ್ನು ಬರೆದು ಅಜ್ಜನಿಗೇ ಮರಳಿ ಕೊಡಬೇಕು ಎಂದು ಅವನು ಬಯಸಿದ್ದ. ವಿಷಯ ತಿಳಿದ ನಾರಾಯಣ ರಾವ್ ಅವರು ಹಣವನ್ನು ಮರಳಿ ಪಡೆಯಲು ಒಪ್ಪಲಿಲ್ಲ.

“ಅದು ಅವನಿಗೆ ನನ್ನ ಪುಟ್ಟ ಉಡುಗೊರೆ. ಅವ್ಯಾನ್ ಹಣವನ್ನು ತನ್ನಲ್ಲೇ ಇಟ್ಟುಕೊಳ್ಳಲಿ. ನನಗೆ ಒಂದು ಧನ್ಯವಾದ ಪತ್ರ ಬರೆದರೆ ಸಾಕು. ಮುಂದೆ ಕಾಲೇಜು ಮುಗಿಸಿ, ತಾನೇ ದುಡಿದು ಹಣ ಸಂಪಾದಿಸಲು ಆರಂಭಿಸಿದ ಮೇಲೆ ಬೇಕಾದರೆ ಕೊಡಲಿ,” ಎಂದರು.

81 ವರ್ಷದ ಅಜ್ಜ ಮಕ್ಕಳಿಗೆ ಉಳಿತಾಯದ ಪಾಠ ಹೇಳಿದರೆ, ಎಂಟು ವರ್ಷದ ಅವ್ಯಾನ್ ಹಿರಿಯರ ಬಗ್ಗೆ ಕಾಳಜಿ ಮತ್ತು ಹಂಚಿಕೊಳ್ಳುವ ಮನಸ್ಸಿನ ಪಾಠವನ್ನು ನೆನಪಿಸಿದ.

Hot this week

ಯುರೋಪಿನಾದ್ಯಂತ ಭಾರತೀಯ ಕಲಾಪ್ರಕಾರಗಳಿಗೆ ಆಸರೆಯಾಗಿರುವ ‘ಬೆಲ್ಜಿಯಂ ಕಲಾ ವೇದಿಕೆ’

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ದೂರದ ಯುರೋಪಿನ ನೆಲದಲ್ಲಿ ಭಾರತೀಯ ಕಲಾಪ್ರಕಾರಗಳನ್ನು,...

55th International Cultural Fest and Cultural Exchange Programme concludes in Dubai

Dubai, July 26: The 55th International Cultural Fest and...

ಖತರ್‌ನಲ್ಲಿ ಭಾರತೀಯ ರಾಯಭಾರಿ ವಿಪುಲ್ ಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾ: ಖತರ್‌ನಲ್ಲಿ ಮೂರು ವರ್ಷಗಳ ಯಶಸ್ವಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಭಾರತದ ರಾಯಭಾರಿ...

ಯಕ್ಷಗಾನ ಕಲಾವಿದ ವಾಸು ಬಾಯರುಗೆ ‘ವಿಶೇಷ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ’

ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ (YAKU)ಯು ತವರೂರು ತಿರುಗಾಟದಲ್ಲಿ...

Related Articles

Popular Categories