ಖತರ್ಕರ್ನಾಟಕ ಸಂಘ ಖತರ್‌ನಿಂದ 71ನೇ ಕರ್ನಾಟಕ ರಾಜ್ಯೋತ್ಸವ ‘ಕರುನಾಡ...

ಕರ್ನಾಟಕ ಸಂಘ ಖತರ್‌ನಿಂದ 71ನೇ ಕರ್ನಾಟಕ ರಾಜ್ಯೋತ್ಸವ ‘ಕರುನಾಡ ವೈಭವ 2026’ ಪೋಸ್ಟರ್ ಅನಾವರಣ

ದೋಹಾ: ಭಾರತೀಯ ರಾಯಭಾರ ಕಚೇರಿ, ದೋಹಾ ಇದರ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸಾಂಸ್ಕೃತಿಕ ಕೇಂದ್ರ (ICC)ಕ್ಕೆ ಸಂಯೋಜಿತವಾಗಿರುವ ಪ್ರಮುಖ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ಕರ್ನಾಟಕ ಸಂಘ ಖತರ್‌ (KSQ) ವತಿಯಿಂದ ಆಯೋಜಿಸಲಾಗುತ್ತಿರುವ 71ನೇ ಕರ್ನಾಟಕ ರಾಜ್ಯೋತ್ಸವದ ‘ಕರುನಾಡ ವೈಭವ 2026’ ಕಾರ್ಯಕ್ರಮದ ಅಧಿಕೃತ ಪೋಸ್ಟರ್‌ನ್ನು ಅನಾವರಣಗೊಳಿಸಲಾಯಿತು.

ನವೆಂಬರ್ 6ರಂದು ಶುಕ್ರವಾರ ಸಂಜೆ 4 ಗಂಟೆಯಿಂದ ಅಲ್ ವಕ್ರಾದ ಡಿಪಿಎಸ್ ಎಂಐಎಸ್ ಸಭಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ.

ಗಣ್ಯರ ಸಮ್ಮುಖದಲ್ಲಿ ಪೋಸ್ಟರ್ ಅನಾವರಣ

ಪೋಸ್ಟರ್ ಅನಾವರಣ ಕಾರ್ಯಕ್ರಮವು ಕರ್ನಾಟಕ ಸಂಘ ಖತರ್‌ನ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಬಳಿಕ ಕರ್ನಾಟಕ ಸಂಘ ಖತರ್‌ನ ಅಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಅಧ್ಯಕ್ಷೀಯ ಭಾಷಣ ಮಾಡಿದರು. ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘದ ಸದಸ್ಯರು ಹಾಗೂ ಕತಾರ್‌ನಲ್ಲಿರುವ ಕರ್ನಾಟಕ ಮೂಲದ ಸಹೋದರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

‘ಕರುನಾಡ ವೈಭವ 2026’ರ ಅಧಿಕೃತ ಪೋಸ್ಟರ್‌ನ್ನು ಕರ್ನಾಟಕ ಸಂಘ ಖತರ್‌ನ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು, ಉಪಾಧ್ಯಕ್ಷ ಅನಿಲ್ ಭಾಸಗಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಐಸಿಬಿಎಫ್ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಸಂಘ ಖತರ್‌ನ ಮಾಜಿ ಅಧ್ಯಕ್ಷ ದೀಪಕ್ ಶೆಟ್ಟಿ, ಕರ್ನಾಟಕ ಸಂಘ ಖತರ್‌ನ ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ಶೆಟ್ಟಿ, ಸಲಹಾ ಸಮಿತಿಯ ಸದಸ್ಯರಾದ ಡಾ. ಸಂಜಯ್ ಕುದರಿ ಹಾಗೂ ಮಹೇಶ್ ಗೌಡ, ಸೇರಿದಂತೆ ಖತರ್‌ನ ವಿವಿಧ ಕರ್ನಾಟಕ ಮೂಲದ ಸಹೋದರ ಸಂಘಟನೆಗಳ ಅಧ್ಯಕ್ಷರು ಹಾಗೂ ಪ್ರತಿನಿಧಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.

ಕರ್ನಾಟಕದ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಉಪಸ್ಥಿತಿಯು ಖತರ್‌ನಲ್ಲಿರುವ ಕನ್ನಡಿಗರ ಒಗ್ಗಟ್ಟು ಹಾಗೂ ಪರಸ್ಪರ ಸಹಕಾರಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕ ಸಂಘ ಖತರ್‌ನ ಉಪಾಧ್ಯಕ್ಷ ಅನಿಲ್ ಭಾಸಗಿ ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಸಹೋದರ ಸಂಘಟನೆಗಳ ಪ್ರತಿನಿಧಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಮುದಾಯದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಉಮಾಶ್ರೀ ಅವರಿಗೆ ‘ಖತರ್‌ ಕನ್ನಡ ಸಮ್ಮಾನ’

‘ಕರುನಾಡ ವೈಭವ 2026’ರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ‘ಖತರ್‌ ಕನ್ನಡ ಸಮ್ಮಾನ’ವನ್ನು ಹಿರಿಯ ಕನ್ನಡ ಚಲನಚಿತ್ರ ನಟಿ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಹಾಲಿ ಉಪಸಭಾಪತಿ ಉಮಾಶ್ರೀ ಅವರಿಗೆ ಪ್ರದಾನ ಮಾಡಲಾಗುವುದು.

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಉಮಾಶ್ರೀ ಅವರು ಸಾರ್ವಜನಿಕ ಜೀವನದಲ್ಲಿಯೂ ಸೇವೆ ಸಲ್ಲಿಸಿದ್ದು, ಕರ್ನಾಟಕ ಸರ್ಕಾರದ ಮಾಜಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಹಾಸ್ಯ ಮತ್ತು ಸಂಗೀತದ ರಸದೌತಣ

ರಾಜ್ಯೋತ್ಸವ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ವಿಶೇಷ ‘ಹಾಸ್ಯ ಮತ್ತು ಸಂಗೀತ ವೈಭವ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಘವೇಂದ್ರ (ರಾಗಿಣಿ), ಜಗ್ಗಪ್ಪ ಹಾಗೂ ಸುಷ್ಮಿತಾ ಅವರು ಹಾಸ್ಯದ ರಸದೌತಣ ನೀಡಲಿದ್ದು, ಸಾ ರೇ ಗ ಮ ಪ ಖ್ಯಾತಿಯ ಮೆಹಬೂಬ್ ಸಾಬ್ ಹಾಗೂ ರೇವಣಸಿದ್ಧ ಫುಲಾರಿ ಅವರು ಸಂಗೀತ ಕಾರ್ಯಕ್ರಮದ ಮೂಲಕ ರಂಜಿಸಲಿದ್ದಾರೆ. ಕಾರ್ಯಕ್ರಮವನ್ನು ಪ್ರಣಿತಾ ನಿರೂಪಿಸಲಿದ್ದಾರೆ.

ಕನ್ನಡದ ಸಾಂಸ್ಕೃತಿಕ ವೈಭವ ಅನಾವರಣ

ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ಕರ್ನಾಟಕ ಸಂಘ ಖತರ್‌ ಹಾಗೂ ಖತರ್‌ನ ವಿವಿಧ ಕರ್ನಾಟಕ ಮೂಲದ ಸಹೋದರ ಸಂಘಟನೆಗಳ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕರ್ನಾಟಕದ ಶ್ರೀಮಂತ ಕಲೆ, ಸಂಸ್ಕೃತಿ, ಭಾಷೆ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಸಂಗೀತ, ನೃತ್ಯ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ನಡೆಯಲಿದ್ದು, ಖತರ್‌ನ ಕನ್ನಡಿಗರಿಗೆ ತಮ್ಮ ನಾಡಿನ ಸಂಸ್ಕೃತಿಯನ್ನು ಸಂಭ್ರಮಿಸುವ ವಿಶೇಷ ವೇದಿಕೆಯಾಗಲಿದೆ.

ಹಾಸ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸನ್ಮಾನದ ಸಂಗಮವಾಗಿರುವ ‘ಕರುನಾಡ ವೈಭವ 2026’ ಖತರ್‌ನ ವಿವಿಧ ಭಾಗಗಳಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕರ್ನಾಟಕ ರಾಜ್ಯೋತ್ಸವದ ಸಂಭ್ರಮವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಲಿದೆ.

Hot this week

ಮಸ್ಕತ್‌ನಲ್ಲಿ ಸತ್ಯನಾರಾಯಣ ಪೂಜೆ-ನಾರಾಯಣ ಗುರು ಜಯಂತಿ ಆಚರಣೆ

ಮಸ್ಕತ್: ಒಮಾನ್ ಬಿಲ್ಲವಾಸ್ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬ್ರಹ್ಮಶ್ರೀ...

ದುಬೈ; ಗಂಧರ್ವ ಗಮಕ ಶಾಲೆಯಲ್ಲಿ ವಿಶೇಷ ಗುರುಪೂರ್ಣಿಮಾ ಕಾರ್ಯಕ್ರಮ

ದುಬೈ: ಗಮಕ ಕಲೆಯ ಪ್ರಸಿದ್ಧ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ...

ಅಕ್ಟೋಬರ್ 2; ಮಸ್ಕತ್‌ನಲ್ಲಿ ‘ಜೀವಧಾರೆ’ ಬೃಹತ್ ರಕ್ತದಾನ ಶಿಬಿರ

ಮಸ್ಕತ್: ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಒಮಾನ್ ಘಟಕ ಹಾಗೂ ಮಾನ್ಯ ಸಾಂಸ್ಕೃತಿಕ...

ಅಕ್ಟೋಬರ್ 4ರಂದು ದುಬೈಯಲ್ಲಿ ‘ವಿಖಾಯ ಡೇ’ ಬೃಹತ್ ರಕ್ತದಾನ ಶಿಬಿರ

ದುಬೈ: ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ವಿಖಾಯ ವತಿಯಿಂದ, ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿದ್ದ...

ಅಭಿಯಂತರರ ದಿನಾಚರಣೆ ಆಚರಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ರಾಯಭಾರ ಕಚೇರಿ, ದೋಹಾ ಆಶ್ರಯದ ಭಾರತೀಯ ಸಾಂಸ್ಕೃತಿಕ ಕೇಂದ್ರದ...

Related Articles

Popular Categories