ಯುಎಸ್‌ಎಜಪಾನ್‌ನಲ್ಲಿ 'ನಾವಿಕೋತ್ಸವ'ಕ್ಕೆ ಭರದ ಸಿದ್ಧತೆ: ಅಮೇರಿಕದಿಂದ ಹೊರಟ ಕನ್ನಡಿಗರು!

ಜಪಾನ್‌ನಲ್ಲಿ ‘ನಾವಿಕೋತ್ಸವ’ಕ್ಕೆ ಭರದ ಸಿದ್ಧತೆ: ಅಮೇರಿಕದಿಂದ ಹೊರಟ ಕನ್ನಡಿಗರು!

‘ಕಿಜುನಾ – ಗಡಿಗಳನ್ನು ಮೀರಿದ ಬಾಂಧವ್ಯ’ ಧ್ಯೇಯವಾಕ್ಯದಡಿ ನವೆಂಬರ್ 22ರಂದು ಟೋಕಿಯೋದಲ್ಲಿ ಕನ್ನಡದ ಹಬ್ಬ; ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಫ್ಯಾಷನ್ ಶೋ ಹಾಗೂ ಉದ್ಯಮ ಸಂವಾದಗಳ ವೈಭವ

ಟೋಕಿಯೋ(ಜಪಾನ್): ಉದಯಿಸುವ ಸೂರ್ಯನ ನಾಡಾದ ಜಪಾನ್‌ನಲ್ಲಿ ಕನ್ನಡದ ಕಂಪು ಪಸರಿಸಲು ವೇದಿಕೆ ಸಜ್ಜಾಗುತ್ತಿದೆ. ಜಪಾನ್ ದೇಶದ ರಾಜಧಾನಿ ಟೋಕಿಯೋದಲ್ಲಿ ನವೆಂಬರ್ 22ರಂದು ‘ಕಿಜುನಾ – ಗಡಿಗಳನ್ನು ಮೀರಿದ ಬಾಂಧವ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ‘ನಾವಿಕೋತ್ಸವ–2026’ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ನಾವಿಕ (ನಾವು ವಿಶ್ವ ಕನ್ನಡಿಗರು), ಟೋಕಿಯೋ ಕನ್ನಡ ಬಳಗ (TKB) ಹಾಗೂ ಕಿಜುನಾ ಸಹಯೋಗದಲ್ಲಿ ನಡೆಯಲಿರುವ ಈ ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳಲು ಅಮೇರಿಕದ ವಿವಿಧ ರಾಜ್ಯಗಳಿಂದ ಸುಮಾರು 300 ಕನ್ನಡಿಗರು ಜಪಾನ್ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ನಾವಿಕ ಸಂಸ್ಥೆಯ ಕೆಲವು ಪ್ರಮುಖರು ಈಗಾಗಲೇ ಜಪಾನ್ ತಲುಪಿದ್ದು, ಬಹುತೇಕ ಪ್ರತಿನಿಧಿಗಳು ನವೆಂಬರ್ 21ರಂದು ಟೋಕಿಯೋ ತಲುಪಲಿದ್ದಾರೆ.

ನವೆಂಬರ್ 21ರ ಶನಿವಾರ ಟೋಕಿಯೋ ಕನ್ನಡ ಬಳಗದ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ನವೆಂಬರ್ 22ರ ರವಿವಾರ ನಾವಿಕೋತ್ಸವದ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಮೇರಿಕ, ಜಪಾನ್ ಹಾಗೂ ಭಾರತದ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಉತ್ಸವವು ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಜಾಗತಿಕ ಸಂಭ್ರಮವಾಗಲಿದೆ.

ಕನ್ನಡಿಗರ ಸಂಗಮಕ್ಕೆ ಉತ್ಸುಕರಾದ ನಾವಿಕ ಅಧ್ಯಕ್ಷೆ
ನಾವಿಕ ಅಧ್ಯಕ್ಷೆ ಡಾ. ಅನ್ನಪೂರ್ಣ (ಅನು) ಭಟ್ ಅವರು ನಾವಿಕೋತ್ಸವದ ಯಶಸ್ಸಿಗಾಗಿ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ. ನಾವಿಕದ ಸಂಚಾಲಕ ಅಜಿತ್ ಭಾಸ್ಕರ್, ನಿಯೋಜಿತ ಅಧ್ಯಕ್ಷ ಡಾ. ಮನಮೋಹನ್ ಕಟ್ಟಪಾಡಿ, ವಿವಿಧ ಸಮಿತಿಗಳ ಸಂಯೋಜಕರು ಹಾಗೂ ಟೋಕಿಯೋ ಕನ್ನಡ ಬಳಗದ ಸ್ವಯಂಸೇವಕರು ಅಂತಿಮ ಸಿದ್ಧತೆಗಳಲ್ಲಿ ತೊಡಗಿದ್ದಾರೆ.

ಪ್ರಣಯರಾಜ ಶ್ರೀನಾಥ್ ಮತ್ತು ಡಾ.ಆರತಿ ಕೃಷ್ಣ ವಿಶೇಷ ಅತಿಥಿಗಳು
ಖ್ಯಾತ ಕನ್ನಡ ಚಲನಚಿತ್ರ ನಟ ಪ್ರಣಯರಾಜ ಡಾ. ಶ್ರೀನಾಥ್ ಅವರು ನಾವಿಕೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 26ರಂದು ಥ್ಯಾಂಕ್ಸ್‌ಗಿವಿಂಗ್ ವಿಶೇಷ ಗಾಲಾ ಔತಣಕೂಟವನ್ನೂ ಆಯೋಜಿಸಲಾಗಿದೆ.

ಸಾಹಿತ್ಯ ವೇದಿಕೆಯಲ್ಲಿ ಕನ್ನಡದ ಕಂಪು
ನವೆಂಬರ್ 22ರಂದು ಬೆಳಗ್ಗೆ 9.30ರಿಂದ ನಡೆಯಲಿರುವ ‘ಸಾಹಿತ್ಯ ವೇದಿಕೆ’ ಕಾರ್ಯಕ್ರಮವನ್ನು ನಾವಿಕದ ಬೆಂಕಿ ಬಸಣ್ಣ (ನ್ಯೂಯಾರ್ಕ್) ಹಾಗೂ ಟೋಕಿಯೋ ಕನ್ನಡ ಬಳಗದ ಶ್ರೀಕಲಾ ಬೊಳ್ಳಾಜೆ ಸಂಯೋಜಿಸಲಿದ್ದಾರೆ.

ಅಮೇರಿಕ ಮತ್ತು ಜಪಾನ್‌ನ ಕನ್ನಡ ಕವಿಗಳ ಕವನ ವಾಚನ, ಸ್ವರಚಿತ ಸಾಹಿತ್ಯ ಪ್ರಸ್ತುತಿ, ಟೋಕಿಯೋ ಕನ್ನಡ ಬಳಗದ ‘ಕನ್ನಡ ಸುಧೆ’ ಪತ್ರಿಕೆಯ ಪರಿಚಯ, ಜಪಾನಿನ ಸಾಹಿತ್ಯದ ಪರಂಪರೆ ಮತ್ತು ಆಧುನಿಕತೆ ಕುರಿತು ಸಂವಾದ ಹಾಗೂ ‘ಕೃತಕ ಬುದ್ಧಿಮತ್ತೆ (AI) ಮತ್ತು ಕನ್ನಡ ಸಾಹಿತ್ಯ’ ವಿಷಯದ ಚರ್ಚೆ ಪ್ರಮುಖ ಆಕರ್ಷಣೆಗಳಾಗಿವೆ. ಇದರೊಂದಿಗೆ ಹೊಸ ಕನ್ನಡ ಪುಸ್ತಕಗಳ ಬಿಡುಗಡೆ, ‘ವಿಶ್ವ ಕನ್ನಡ ಕೂಟಗಳ ಕೈಪಿಡಿ’ ಹಾಗೂ ಅಮೇರಿಕದ ‘ದರ್ಪಣ’ ಪತ್ರಿಕೆಯ ಪರಿಚಯವೂ ನಡೆಯಲಿದೆ.

ಜಪಾನ್–ಭಾರತ–ಅಮೆರಿಕ ಉದ್ಯಮ ಸಂವಾದ
ನವೆಂಬರ್ 22ರಂದು ಬೆಳಗ್ಗೆ 10ರಿಂದ 11ರವರೆಗೆ ‘ಬಿಸಿನೆಸ್ ಫೋರಂ’ ನಡೆಯಲಿದೆ. ಉದ್ಯಮ ಸಮಿತಿ ಸಂಯೋಜಕ ಸುರೇಶ್ ರಾಮಚಂದ್ರ ಅವರ ನೇತೃತ್ವದಲ್ಲಿ ಜಪಾನ್, ಭಾರತ ಮತ್ತು ಅಮೇರಿಕ ನಡುವಿನ ಉದ್ಯಮ, ಹೂಡಿಕೆ ಹಾಗೂ ತಂತ್ರಜ್ಞಾನ ಸಹಕಾರದ ಕುರಿತು ಚರ್ಚೆ ನಡೆಯಲಿದೆ. ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಫಿನ್‌ಟೆಕ್, ಮೂಲಸೌಕರ್ಯ, ಎಲೆಕ್ಟ್ರಿಕ್ ವಾಹನಗಳು, ರೋಬೋಟಿಕ್ಸ್, ಬಾಹ್ಯಾಕಾಶ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಅವಕಾಶಗಳ ಕುರಿತು ತಜ್ಞರು ವಿಚಾರ ವಿನಿಮಯ ನಡೆಸಲಿದ್ದಾರೆ. ವಿಜ್ಞಾನಿ ಹಾಗೂ ಉದ್ಯಮಿ ಡಾ. ಶ್ರೀಹರಿ ಚಂದ್ರಘಟಗಿ ಅವರೊಂದಿಗೆ ವಿಶೇಷ ಸಂವಾದವೂ ಆಯೋಜಿಸಲಾಗಿದೆ.

‘AI ಅವಾಂತರ!’ – ಹಾಸ್ಯದ ಮೂಲಕ ತಂತ್ರಜ್ಞಾನದ ಕಥೆ
ಕನ್ನಡಿಗರ ಮನರಂಜನೆಗಾಗಿ ‘AI ಅವಾಂತರ!’ ಎಂಬ ಹಾಸ್ಯ ನಾಟಕ ಸಿದ್ಧವಾಗಿದೆ. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ತಂತ್ರಜ್ಞಾನದಿಂದ ಉಂಟಾಗುವ ತಮಾಷೆಗಳು, ಎಡವಟ್ಟುಗಳು ಹಾಗೂ ಅವಾಂತರಗಳನ್ನು ಹಾಸ್ಯದ ಮೂಲಕ ಪ್ರೇಕ್ಷಕರ ಮುಂದಿಡುವ ಈ ನಾಟಕದಲ್ಲಿ ಅಮೆರಿಕದ ಕನ್ನಡ ಕಲಾವಿದರು ಅಭಿನಯಿಸಲಿದ್ದಾರೆ. ಆಧುನಿಕ ತಂತ್ರಜ್ಞಾನ ಮತ್ತು ಕನ್ನಡ ಹಾಸ್ಯದ ಸಮ್ಮಿಲನವಾಗಿರುವ ಈ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ನಿರೀಕ್ಷೆಯಿದೆ.

‘ಸಿರಿನಾಡ ವೈಭವ’ – ನೃತ್ಯದ ಮೂಲಕ ಕರ್ನಾಟಕ ದರ್ಶನ
ಹ್ಯೂಸ್ಟನ್‌ನ ಸ್ಟುಡಿಯೋ ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್ ಕಲಾ ನಿರ್ದೇಶಕಿ ಗುರು ರಶ್ಮಿ ಶಶಿ ಅವರ ಪರಿಕಲ್ಪನೆ ಹಾಗೂ ನೃತ್ಯ ಸಂಯೋಜನೆಯಲ್ಲಿ ‘ಸಿರಿನಾಡ ವೈಭವ’ ಎಂಬ ವಿಶೇಷ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಕರ್ನಾಟಕದ ಶ್ರೀಮಂತ ಸಂಸ್ಕೃತಿ, ನೈಸರ್ಗಿಕ ಸೌಂದರ್ಯ ಹಾಗೂ ಜನಪದ ಪರಂಪರೆಯನ್ನು ಶಾಸ್ತ್ರೀಯ ಮತ್ತು ಜಾನಪದ ನೃತ್ಯಗಳ ಮೂಲಕ ಪರಿಚಯಿಸಲಾಗುತ್ತದೆ. ಪಲ್ಲವಿ ಬೊಳ್ಳೂರು, ಪ್ರಮಿತಿ ಉಪಾಧ್ಯಾಯ, ರೂಪಾ ಕುಲಗೋಡ್, ಮಣಿ ವಿಶ್ವನಾಥ್, ಮೈಥಿಲಿ ಮೂರ್ತಿ ಹಾಗೂ ರಶ್ಮಿ ಶಶಿ ಈ ನೃತ್ಯ ವೈಭವದಲ್ಲಿ ಭಾಗವಹಿಸಲಿದ್ದಾರೆ.

ಸ್ಯಾಂಡಲ್‌ವುಡ್ ತಾರೆಯರ ವೈಭವ – ವಿಶೇಷ ಫ್ಯಾಷನ್ ಶೋ
ನಾವಿಕೋತ್ಸವದ ಮತ್ತೊಂದು ಆಕರ್ಷಣೆ ‘ಸ್ಯಾಂಡಲ್‌ವುಡ್ ಫ್ಯಾಷನ್ ಶೋ’. ರಶ್ಮಿ ಅವರ ನೃತ್ಯ ಸಂಯೋಜನೆ ಹಾಗೂ ನಿರ್ದೇಶನದಲ್ಲಿ ಸುಮಾರು 20 ಕಲಾವಿದರು ಭಾಗವಹಿಸಲಿದ್ದು, ಕನ್ನಡ ಚಿತ್ರರಂಗದ ಸುವರ್ಣಯುಗದಿಂದ ಇಂದಿನವರೆಗಿನ ಪಯಣವನ್ನು ವೇದಿಕೆಯ ಮೇಲೆ ಅನಾವರಣಗೊಳಿಸಲಿದ್ದಾರೆ. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಭಾರತಿ, ಅಂಬರೀಶ್ ಸೇರಿದಂತೆ ಕನ್ನಡ ಚಿತ್ರರಂಗದ ಜನಪ್ರಿಯ ತಾರೆಯರು ಹಾಗೂ ಪ್ರಸಿದ್ಧ ಜೋಡಿಗಳ ವೇಷಭೂಷಣ ಮತ್ತು ಶೈಲಿಯನ್ನು ಮರುಸೃಷ್ಟಿಸುವ ಈ ವಿನೂತನ ಕಾರ್ಯಕ್ರಮ ಕನ್ನಡ ಚಿತ್ರರಂಗದ ಸವಿನೆನಪುಗಳನ್ನು ಮೆಲುಕು ಹಾಕಿಸಲಿದೆ.

ಟೋಕಿಯೋ ಕನ್ನಡ ಬಳಗದಿಂದ ಸಾಂಸ್ಕೃತಿಕ ಸಂಭ್ರಮ
ಆತಿಥೇಯ ಟೋಕಿಯೋ ಕನ್ನಡ ಬಳಗದ ವತಿಯಿಂದ ದಿನವಿಡೀ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಸಿದ್ಧಗೊಂಡಿವೆ. ಕನ್ನಡ ಹಾಡುಗಳು, ನೃತ್ಯಗಳು, ನಾಟಕಗಳು, ಸಾಹಿತ್ಯ ಚಟುವಟಿಕೆಗಳು ಹಾಗೂ ವಿವಿಧ ಕಲಾ ಪ್ರದರ್ಶನಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಲಿವೆ. ಜಪಾನ್‌ನಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ಅಮೆರಿಕದಿಂದ ಆಗಮಿಸುವ ಕನ್ನಡಿಗರ ಸಂಗಮ ಟೋಕಿಯೋದಲ್ಲಿ ಕರ್ನಾಟಕದ ವಾತಾವರಣ ನಿರ್ಮಿಸಲಿದೆ.

ರಜನಿ ಮಹೇಶ್ ನೇತೃತ್ವದಲ್ಲಿ ಒಂಬತ್ತು ದಿನಗಳ ಜಪಾನ್ ಪ್ರವಾಸ
ನಾವಿಕದ ಪ್ರವಾಸ ಸಮಿತಿ ಸಂಯೋಜಕಿ ರಜನಿ ಮಹೇಶ್ ಅವರ ನೇತೃತ್ವದಲ್ಲಿ ನವೆಂಬರ್ 21ರಿಂದ 29ರವರೆಗೆ ಒಂಬತ್ತು ದಿನಗಳ ವಿಶೇಷ ಜಪಾನ್ ಪ್ರವಾಸವನ್ನು ಆಯೋಜಿಸಲಾಗಿದ್ದು, ಅಮೇರಿಕದಿಂದ ಆಗಮಿಸುವ ಸುಮಾರು 300 ಕನ್ನಡಿಗರು ಇದರಲ್ಲಿ ಭಾಗವಹಿಸಲಿದ್ದಾರೆ. ಪ್ರವಾಸದ ಯೋಜನೆ ಹಾಗೂ ವ್ಯವಸ್ಥೆಗಾಗಿ ರಜನಿ ಮಹೇಶ್ ಅವರು ಹಲವು ತಿಂಗಳುಗಳಿಂದ ಶ್ರಮಿಸಿದ್ದಾರೆ. ನಾವಿಕೋತ್ಸವದ ನಂತರ ಪ್ರವಾಸಿಗರು ಟೋಕಿಯೋ, ವಿಶ್ವವಿಖ್ಯಾತ ಮೌಂಟ್ ಫುಜಿ ಪರ್ವತ, ಹಕೋನೆ, ಐತಿಹಾಸಿಕ ಹಿರೋಷಿಮಾ, ಮಿಯಾಜಿಮಾ ದ್ವೀಪ, ಕ್ಯೋಟೋ, ನಾರಾ ಹಾಗೂ ಒಸಾಕಾ ನಗರಗಳಿಗೆ ಭೇಟಿ ನೀಡಲಿದ್ದಾರೆ. ಜಪಾನ್‌ನ ವಿಶ್ವಪ್ರಸಿದ್ಧ ಬುಲೆಟ್ ರೈಲಿನಲ್ಲಿ ಪ್ರಯಾಣಿಸುವುದು ಈ ಪ್ರವಾಸದ ಮತ್ತೊಂದು ವಿಶೇಷ ಆಕರ್ಷಣೆಯಾಗಿದೆ.

ಒಟ್ಟಿನಲ್ಲಿ, ಉದಯಿಸುವ ಸೂರ್ಯನ ನಾಡಾದ ಜಪಾನ್‌ನಲ್ಲಿ ಕನ್ನಡದ ಸೂರ್ಯ ಮತ್ತೊಮ್ಮೆ ಪ್ರಕಾಶಿಸಲು ಸಜ್ಜಾಗಿದ್ದಾನೆ. ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಸ್ನೇಹದ ಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಾವಿಕೋತ್ಸವ–2026, ವಿಶ್ವ ಕನ್ನಡಿಗರ ಪಾಲಿಗೆ ಮರೆಯಲಾಗದ ಸಂಭ್ರಮವಾಗುವ ನಿರೀಕ್ಷೆಯಿದೆ.

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್

Hot this week

ಬೆಲ್ಜಿಯಂನಲ್ಲಿ ‘ಕರ್ನಾಟಕ ಕಲಾ ಉತ್ಸವ 2026’

ಕೊರ್ಟೆನ್‌ಬರ್ಗ್(ಬೆಲ್ಜಿಯಂ): ಕರ್ನಾಟಕದ ಶ್ರೀಮಂತ ಕಲಾ ಮತ್ತು ಸಾಂಸ್ಕೃತಿಕ ಪರಂಪರೆಯ ವೈಭವವು ಇತ್ತೀಚೆಗೆ...

ದುಬೈ: ಅಲ್ ಖಮರ್ ಟ್ರಸ್ಟ್ ಮೂಳೂರು ವತಿಯಿಂದ ಯಶಸ್ವಿ ರಕ್ತದಾನ ಶಿಬಿರ; 80ಕ್ಕೂ ಅಧಿಕ ಮಂದಿಯಿಂದ ರಕ್ತದಾನ

ದುಬೈ: ಅಲ್ ಖಮರ್ ಟ್ರಸ್ಟ್ ಮೂಳೂರು ವತಿಯಿಂದ ದುಬೈ ಆರೋಗ್ಯ ಪ್ರಾಧಿಕಾರದ...

ದೋಹಾ; ಕೇಂದ್ರ ಸಚಿವ ಡಾ.ಚಂದ್ರಶೇಖರ್ ಪೆಮ್ಮಸಾನಿಯನ್ನು ಭೇಟಿಯಾದ ಕರ್ನಾಟಕ ಸಂಘ ಖತರ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು

ದೋಹಾ: ಕರ್ನಾಟಕ ಸಂಘ ಖತರ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು, ಭಾರತ...

ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೋಕಲ್ ಅವರಿಂದ ಆಲ್ಬನಿಯಲ್ಲಿ ದೀಪಾವಳಿ ಸಂಭ್ರಮಾಚರಣೆ!

ಆಲ್ಬನಿ: ನ್ಯೂಯಾರ್ಕ್ ರಾಜ್ಯದ ಗವರ್ನರ್ ಕ್ಯಾಥಿ ಹೋಕಲ್ ಅವರು ಮಂಗಳವಾರ ಆಲ್ಬನಿಯ...

Related Articles

Popular Categories