ಇತರೆಬೋಡೆನ್ಸೀ ಸರೋವರದ ದಡದಲ್ಲಿ ಕನ್ನಡದ ಕಂಪು; ಜರ್ಮನಿಯಲ್ಲಿ ಅನಿವಾಸಿ...

ಬೋಡೆನ್ಸೀ ಸರೋವರದ ದಡದಲ್ಲಿ ಕನ್ನಡದ ಕಂಪು; ಜರ್ಮನಿಯಲ್ಲಿ ಅನಿವಾಸಿ ಕನ್ನಡಿಗರ ಅದ್ದೂರಿ ರಾಜ್ಯೋತ್ಸವ ಆಚರಣೆ

ಬೋಡೆನ್ಸೀ (ಜರ್ಮನಿ): ನಾಡು ದೂರವಿದ್ದರೂ ನುಡಿಯ ಮೇಲಿನ ಪ್ರೀತಿ ಎಂದಿಗೂ ದೂರವಾಗದು ಎಂಬುದಕ್ಕೆ ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ದೇಶಗಳ ಸಂಗಮ ಪ್ರದೇಶದಲ್ಲಿರುವ ಸುಂದರ ಬೋಡೆನ್ಸೀ ಸರೋವರದ ತೀರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮ ಸಾಕ್ಷಿಯಾಯಿತು.

ನೀಲಿ ನೀರಿನ ರಮಣೀಯ ಬೋಡೆನ್ಸೀ ಸರೋವರ, ಸುತ್ತಲಿನ ಹಸಿರು ಬೆಟ್ಟಗುಡ್ಡಗಳು ಹಾಗೂ ದೂರದಲ್ಲಿ ಬೆಳ್ಳಿಯಂತೆ ಕಂಗೊಳಿಸುವ ಆಲ್ಪ್ಸ್ ಪರ್ವತಶ್ರೇಣಿಗಳ ಸುಂದರ ಪರಿಸರದಲ್ಲಿ, ಕನ್ನಡಿಗರು ಒಂದಾಗಿ ಸೇರಿ ‘ಕಡಲಾಚೆಗೂ ನಾ ಕನ್ನಡದ ಪ್ರೇಮಿ!’ ಎಂಬ ಹೆಮ್ಮೆಯ ಘೋಷವಾಕ್ಯದೊಂದಿಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂಭ್ರಮಿಸಿದರು.

ಶ್ವೇತಾ-ಶಶಿ ದಂಪತಿಯ ಮುಂದಾಳತ್ವದಲ್ಲಿ ಸಿದ್ಧತೆ
ವಿದೇಶಿ ನೆಲದಲ್ಲಿದ್ದರೂ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕೆಂಬ ಕನ್ನಡಿಗರ ಬಹುದಿನಗಳ ಆಶಯಕ್ಕೆ ಶ್ವೇತಾ ಮತ್ತು ಶಶಿ ದಂಪತಿ ಮುಂದಾಳತ್ವ ನೀಡಿದರು. ಅವರ ಪ್ರೇರಣೆಯಿಂದ ಕನ್ನಡಿಗರೆಲ್ಲರೂ ಒಂದಾಗಿ ಸೇರಿ ಸಭಾಂಗಣ ಕಾಯ್ದಿರಿಸಿ, ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭಿಸಿದರು. ಕನ್ನಡಿಗರಿಗೆ ಆಹ್ವಾನ ನೀಡುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕೋರಲಾಯಿತು. ಇದಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಹಲವರು ಹಾಡು, ನೃತ್ಯ ಹಾಗೂ ಕಿರುಪ್ರಹಸನಗಳಲ್ಲಿ ಪಾಲ್ಗೊಳ್ಳಲು ಮುಂದೆ ಬಂದರು.

ಮಕ್ಕಳ ಪ್ರತಿಭೆಗೆ ವೇದಿಕೆ, ಗಾಯನ-ನೃತ್ಯಕ್ಕೆ ಮೆರುಗು
ಕಾರ್ಯಕ್ರಮದ ನಿರೂಪಣೆಯನ್ನು ಅನುಷಾ ಅವರು ಕನ್ನಡದ ಅಭಿಮಾನ ಸಾರುವ ಕವನದ ಮೂಲಕ ನಡೆಸಿಕೊಟ್ಟರು. ಅನುಷಾ ಅವರ ನೇತೃತ್ವದಲ್ಲಿ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಳಿಕ ಪುಟಾಣಿ ಮಕ್ಕಳಾದ ಅಥರ್ವ್, ರಿಧಾನ್, ಆರಾಧ್ಯ ಮತ್ತು ಅಕ್ಷರ ತಮ್ಮ ಹಾಡು, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ನೆರೆದವರ ಗಮನ ಸೆಳೆದರು. ಮಾಲತೇಶ್, ಅನುಷಾ, ಕವನ ಮತ್ತು ದೀಪಾ ಅವರ ಸುಮಧುರ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ದಿವ್ಯಾ ಅವರು ತಮ್ಮ ಮಗಳು ಐರಾಳೊಂದಿಗೆ ಪ್ರದರ್ಶಿಸಿದ ಕಿರು ನಾಟಕ ಹಾಗೂ ಮಂಜು ಅವರು ತಮ್ಮ ಮಗನೊಂದಿಗೆ ಪ್ರಸ್ತುತಪಡಿಸಿದ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ತಾಯಿ-ಮಗಳು ಮತ್ತು ತಂದೆ-ಮಗನ ಜೋಡಿಗಳ ಈ ವಿಶೇಷ ಪ್ರದರ್ಶನಗಳು ಕಾರ್ಯಕ್ರಮದ ಆಕರ್ಷಣೆಯನ್ನು ಹೆಚ್ಚಿಸಿದವು.

ಕನ್ನಡ ರಸಪ್ರಶ್ನೆ, ಅಂತ್ಯಾಕ್ಷರಿ, ಸ್ಯಾಂಡಲ್‌ವುಡ್ ಸಂಭ್ರಮ
ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಮಕ್ಕಳಿಗಾಗಿ ಕನ್ನಡ ರಸಪ್ರಶ್ನೆ ಆಯೋಜಿಸಲಾಗಿತ್ತು. ವಿದೇಶಿ ನೆಲದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ ಕಲಿಯುವ ಅವಕಾಶಗಳು ಸೀಮಿತವಾಗಿದ್ದರೂ, ಅವರು ಉತ್ಸಾಹದಿಂದ ಪ್ರಶ್ನೆಗಳಿಗೆ ಉತ್ತರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ದೊಡ್ಡವರಿಗಾಗಿ ಅಂತ್ಯಾಕ್ಷರಿ ಹಾಗೂ ಸ್ಯಾಂಡಲ್‌ವುಡ್ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕನ್ನಡ ಚಲನಚಿತ್ರ ಗೀತೆಗಳು, ಸಿನಿಮಾ ನೆನಪುಗಳು, ನಗು-ಚಪ್ಪಾಳೆಗಳೊಂದಿಗೆ ಸ್ಪರ್ಧೆಗಳು ಮನರಂಜನೆಯ ರಸದೌತಣ ನೀಡಿದವು.

ಕರ್ನಾಟಕದ ಖಾದ್ಯಗಳ ಸವಿರುಚಿ
ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿದ್ದು ಕರ್ನಾಟಕದ ಸಾಂಪ್ರದಾಯಿಕ ಆಹಾರ ಮೇಳ. ಪ್ರತಿಯೊಬ್ಬರೂ ತಮ್ಮ ತಮ್ಮ ಊರಿನ ವಿಶೇಷ ಖಾದ್ಯಗಳನ್ನು ಪ್ರೀತಿಯಿಂದ ತಯಾರಿಸಿ ತಂದಿದ್ದರು. ಬಗೆಬಗೆಯ ಕರ್ನಾಟಕದ ಆಹಾರ ಪದಾರ್ಥಗಳನ್ನು ಪರಸ್ಪರ ಹಂಚಿಕೊಂಡು ಸವಿಯುವ ಮೂಲಕ ತವರೂರಿನ ಆಹಾರ ಸಂಸ್ಕೃತಿ ಮತ್ತು ಊರಿನ ನೆನಪುಗಳನ್ನು ಮೆಲುಕು ಹಾಕಿದರು.

ಕೊನೆಯಲ್ಲಿ ರಮ್ಯಾ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಕನ್ನಡದ ಹೆಸರಿನಲ್ಲಿ ಒಂದಾದ ಅನಿವಾಸಿ ಕನ್ನಡಿಗರು
ಒಟ್ಟಿನಲ್ಲಿ ಬೋಡೆನ್ಸೀ ಸರೋವರದ ಸುಂದರ ತೀರದಲ್ಲಿ ನಡೆದ ಈ ಕನ್ನಡ ರಾಜ್ಯೋತ್ಸವ ಕೇವಲ ಒಂದು ಆಚರಣೆಯಾಗಿರದೆ, ವಿದೇಶಿ ನೆಲದಲ್ಲಿ ಕನ್ನಡಿಗರ ಭಾಷಾಭಿಮಾನ, ಸಾಂಸ್ಕೃತಿಕ ಒಗ್ಗಟ್ಟು ಮತ್ತು ಪರಸ್ಪರ ಬಾಂಧವ್ಯವನ್ನು ಸಾರಿದ ಸುಂದರ ಸಮಾಗಮವಾಗಿ ಮೂಡಿಬಂತು.

ಕಾರ್ಯಕ್ರಮದ ಆಯೋಜನೆ, ಸಾಂಸ್ಕೃತಿಕ ಪ್ರದರ್ಶನ, ಆಟೋಟಗಳು ಹಾಗೂ ಆಹಾರ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಕನ್ನಡಿಗರು ಉತ್ಸಾಹದಿಂದ ಕೈಜೋಡಿಸಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.

‘ಊರು ಬೇರಾದರೂ ನಮ್ಮ ಭಾವ ಒಂದೇ, ದೇಶ ಬೇರಾದರೂ ನಮ್ಮ ಭಾಷೆ ಒಂದೇ’ ಎಂಬ ಸಂದೇಶದೊಂದಿಗೆ ಮುಂದಿನ ದಿನಗಳಲ್ಲಿಯೂ ಕನ್ನಡದ ಹೆಸರಿನಲ್ಲಿ ಒಂದಾಗಿ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಸಂಭ್ರಮಕ್ಕೆ ತೆರೆ ಎಳೆಯಲಾಯಿತು.

ಕಡಲಾಚೆಗೂ ನಾ ಕನ್ನಡದ ಪ್ರೇಮಿ!’ ಎಂಬ ಘೋಷವಾಕ್ಯ ಬೋಡೆನ್ಸೀ ತೀರದಲ್ಲಿ ಕನ್ನಡದ ಕಂಪನ್ನು ಮತ್ತಷ್ಟು ಪಸರಿಸಿತು.

Hot this week

ಬಹರೈನ್‌ನಲ್ಲಿ ಜನಮನ ಸೂರೆಗೊಂಡ ‘ಅಮರ ಮಧುರ ಗೀತೆ’; ಮಾಧುರ್ಯಭರಿತ ಅಮರ ಚಲನಚಿತ್ರಗೀತೆಗಳ ಲೋಕದಲ್ಲಿ ಸಂತೋಷದಿಂದ ತೇಲಾಡಿದ ದ್ವೀಪದ ಸಂಗೀತ ಪ್ರೇಮಿಗಳು

ಮನಾಮ(ಬಹರೈನ್): ಹಳೆಯ ಕನ್ನಡ ಚಿತ್ರಗೀತೆಗಳ ಸುಮಧುರ ಲೋಕದಲ್ಲಿ ಸಂಗೀತ ಪ್ರೇಮಿಗಳನ್ನು ತೋಯಿಸಿದ...

ಮುತ್ತುಗಳ ದ್ವೀಪದಲ್ಲಿ ಮೊಳಗಲಿದೆ ಕನ್ನಡದ ಕಹಳೆ; ನಾಳೆ ಬಹರೈನ್‌ನಲ್ಲಿ ‘ಕರುನಾಡ ವೈಭವ’ದ ಸಂಭ್ರಮ!

ಬಹರೈನ್: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಕನ್ನಡಿಗರ ಅಭಿಮಾನವನ್ನು...

ಜಪಾನ್‌ನಲ್ಲಿ ‘ನಾವಿಕೋತ್ಸವ’ಕ್ಕೆ ಭರದ ಸಿದ್ಧತೆ: ಅಮೇರಿಕದಿಂದ ಹೊರಟ ಕನ್ನಡಿಗರು!

ಟೋಕಿಯೋ(ಜಪಾನ್): ಉದಯಿಸುವ ಸೂರ್ಯನ ನಾಡಾದ ಜಪಾನ್‌ನಲ್ಲಿ ಕನ್ನಡದ ಕಂಪು ಪಸರಿಸಲು ವೇದಿಕೆ...

ಬೆಲ್ಜಿಯಂನಲ್ಲಿ ‘ಕರ್ನಾಟಕ ಕಲಾ ಉತ್ಸವ 2026’

ಕೊರ್ಟೆನ್‌ಬರ್ಗ್(ಬೆಲ್ಜಿಯಂ): ಕರ್ನಾಟಕದ ಶ್ರೀಮಂತ ಕಲಾ ಮತ್ತು ಸಾಂಸ್ಕೃತಿಕ ಪರಂಪರೆಯ ವೈಭವವು ಇತ್ತೀಚೆಗೆ...

Related Articles

Popular Categories