ಬಹರೈನ್'ಕನ್ನಡ ಸಂಘ ಬಹರೈನ್'ನಿಂದ 'ಯಕ್ಷ ವೈಭವ 2026': ಅದ್ಧೂರಿ...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026 – ಲಕ್ಷ್ಮೀ ಸ್ವಯಂವರ – ವಾಲಿ ಮೋಕ್ಷ” ಯಕ್ಷಗಾನ ಕಾರ್ಯಕ್ರಮವು ಇತ್ತೀಚೆಗೆ ಕನ್ನಡ ಭವನದ ಆಶಾ ಪ್ರಕಾಶ್ ಶೆಟ್ಟಿ ಸಭಾಂಗಣದಲ್ಲಿ ಅದ್ಧೂರಿಯಾಗಿ ಜರುಗಿತು. 400ಕ್ಕೂ ಅಧಿಕ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಕ್ಷಗಾನ ಕಲಾ ವೈಭವವನ್ನು ಆಸ್ವಾದಿಸಿದರು.

ಭಾರತ ಮತ್ತು ಯುಎಇಯಿಂದ ಆಗಮಿಸಿದ ಅತಿಥಿ ಕಲಾವಿದರು ಹಾಗೂ ಕನ್ನಡ ಸಂಘದ ಕಲಾವಿದರ ಸಮನ್ವಯದಲ್ಲಿ ಮೂಡಿಬಂದ ಪ್ರದರ್ಶನವು ಕರಾವಳಿಯ ಶ್ರೀಮಂತ ಯಕ್ಷಗಾನ ಪರಂಪರೆಯ ವೈಭವವನ್ನು ಅನಾವರಣಗೊಳಿಸಿತು. ಅತಿಥಿ ಭಾಗವತರಾಗಿ ಸ್ವರವಾರಿಧಿ ಕಾವ್ಯಶ್ರೀ ನಾಯಕ್ ಆಜೇರು, ಹಿಮ್ಮೇಳ ಕಲಾವಿದರಾದ ಸವಿನಯ ನೆಲ್ಲಿತೀರ್ಥ ಹಾಗೂ ಸತ್ಯಜಿತ್ ರಾವ್ ರಾಯಿ, ಮುಮ್ಮೇಳದ ಅತಿಥಿ ಕಲಾವಿದರಾದ ಯಕ್ಷಗುರು ಶೇಖರ್ ಡಿ. ಶೆಟ್ಟಿಗಾರ್ ಹಾಗೂ ರವಿ ಕುಮಾರ್ ಮುಂಡಾಜೆ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯಿಂದ ಕಾರ್ಯಕ್ರಮವನ್ನು ಸಮೃದ್ಧಗೊಳಿಸಿದರು.

ಕಾರ್ಯಕ್ರಮದ ಅಂಗವಾಗಿ ಭಾರತ ಮತ್ತು ಯುಎಇಯಿಂದ ಆಗಮಿಸಿದ ಅತಿಥಿ ಕಲಾವಿದರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸಿದ ಕಲಾವಿದರಿಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಆರ್ಥಿಕ ಮತ್ತು ವಿವಿಧ ರೀತಿಯ ಸಹಕಾರ ನೀಡಿದ ಕಲಾಪೋಷಕರು ಹಾಗೂ ಪ್ರಾಯೋಜಕರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ, ಯಕ್ಷಗಾನ ಹಾಗೂ ಕಲಾಸೇವೆಗೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಸಂಘದ ಯಕ್ಷಗಾನ ಸಂಚಾಲಕರಾದ ರಾಮ ಪ್ರಸಾದ್ ಅಮ್ಮೆನಡ್ಕ ಹಾಗೂ ಶೋಭಾ ರಾಮಪ್ರಸಾದ್ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮವು ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಪದಾಧಿಕಾರಿಗಳು, ಕಲಾಪೋಷಕರಾದ ಸುಭಾಶ್ಚಂದ್ರ, ನವೀನ್ ಶೆಟ್ಟಿ ರಿಫ, ಶ್ರೀನಾಥ್ ಚೆಕ್ಕೆ ಹಾಗೂ ನವೀನ್ ಭಂಡಾರಿ, ಸಂಘದ ಮಾಜಿ ಅಧ್ಯಕ್ಷರುಗಳಾದ ರಾಜ್ ಕುಮಾರ್, ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಅಮರನಾಥ್ ರೈ, ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹರೈನ್–ಸೌದಿ ಘಟಕದ ಅಧ್ಯಕ್ಷ ಗೋಪಾಲ್ ಶೆಟ್ಟಿ, ವಿಶ್ವಕರ್ಮ ಸೇವಾ ಬಳಗದ ಅಧ್ಯಕ್ಷ ಸತೀಶ್ ಉಳ್ಳಾಲ್ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಹಾಗೂ ಕಲಾಪೋಷಕ ಸುಭಾಶ್ಚಂದ್ರ ಅವರು ಔಪಚಾರಿಕವಾಗಿ ಮಾತನಾಡಿ, ಯಕ್ಷಗಾನ ಕಲೆಯ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಅದರ ಪರಿಚಯದ ಮಹತ್ವವನ್ನು ಒತ್ತಿಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಾಮ ಪ್ರಸಾದ್ ಅಮ್ಮೆನಡ್ಕ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.

ಯಕ್ಷಗಾನ‌ ತರಬೇತುದಾರರಾಗಿ ಹಿರಿಯ ಕಲಾವಿದ ಮೋಹನ್ ಎಡನೀರು, ಯಕ್ಷಗಾನ ಕೇಂದ್ರದ ಯಕ್ಷ ಶಿಕ್ಷಕ ಜೀವಿತೇಶ್ ಪೂಂಜ‌ ಅವರು ಸಹಕರಿಸಿದ್ದರು. ಕನ್ನಡ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಕಲಾವಿದರು, ಸ್ವಯಂಸೇವಕರು, ಕಲಾಪೋಷಕರು ಹಾಗೂ ಹಿತೈಷಿಗಳ ಸಂಘಟಿತ ಸಹಕಾರದಿಂದ ಯಕ್ಷ ವೈಭವ 2026 ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಕಲಾಭಿಮಾನಿಗಳು ಹಾಗೂ ಅತಿಥಿಗಳಿಗಾಗಿ ಲಘೂಪಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಹರೈನ್‌ನಲ್ಲಿ ಕನ್ನಡ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕನ್ನಡ ಸಂಘದ ನಿರಂತರ ಪ್ರಯತ್ನದ ಭಾಗವಾಗಿ ನಡೆದ ಯಕ್ಷ ವೈಭವ 2026, ಕರಾವಳಿಯ ಸಾಂಪ್ರದಾಯಿಕ ಯಕ್ಷಗಾನ ಕಲೆಯನ್ನು ಕನ್ನಡಿಗರು ಹಾಗೂ ಕಲಾಭಿಮಾನಿಗಳ ನಡುವೆ ಮತ್ತಷ್ಟು ಪರಿಚಯಿಸುವ ಮಹತ್ವದ ವೇದಿಕೆಯಾಯಿತು

Hot this week

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

ಕರ್ನಾಟಕ ಸಂಘ ಖತರ್‌ನಿಂದ 71ನೇ ಕರ್ನಾಟಕ ರಾಜ್ಯೋತ್ಸವ ‘ಕರುನಾಡ ವೈಭವ 2026’ ಪೋಸ್ಟರ್ ಅನಾವರಣ

ದೋಹಾ: ಭಾರತೀಯ ರಾಯಭಾರ ಕಚೇರಿ, ದೋಹಾ ಇದರ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಭಾರತೀಯ...

ಮಸ್ಕತ್‌ನಲ್ಲಿ ಸತ್ಯನಾರಾಯಣ ಪೂಜೆ-ನಾರಾಯಣ ಗುರು ಜಯಂತಿ ಆಚರಣೆ

ಮಸ್ಕತ್: ಒಮಾನ್ ಬಿಲ್ಲವಾಸ್ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬ್ರಹ್ಮಶ್ರೀ...

ದುಬೈ; ಗಂಧರ್ವ ಗಮಕ ಶಾಲೆಯಲ್ಲಿ ವಿಶೇಷ ಗುರುಪೂರ್ಣಿಮಾ ಕಾರ್ಯಕ್ರಮ

ದುಬೈ: ಗಮಕ ಕಲೆಯ ಪ್ರಸಿದ್ಧ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ...

ಅಕ್ಟೋಬರ್ 2; ಮಸ್ಕತ್‌ನಲ್ಲಿ ‘ಜೀವಧಾರೆ’ ಬೃಹತ್ ರಕ್ತದಾನ ಶಿಬಿರ

ಮಸ್ಕತ್: ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಒಮಾನ್ ಘಟಕ ಹಾಗೂ ಮಾನ್ಯ ಸಾಂಸ್ಕೃತಿಕ...

Related Articles

Popular Categories