ಇತರೆಜರ್ಮನಿ; ಫ್ರಾಂಕ್‌ಫರ್ಟ್‌ನಲ್ಲಿ ರೈನ್ ಮೈನ್ ಕನ್ನಡ ಸಂಘದಿಂದ ಅದ್ಧೂರಿ...

ಜರ್ಮನಿ; ಫ್ರಾಂಕ್‌ಫರ್ಟ್‌ನಲ್ಲಿ ರೈನ್ ಮೈನ್ ಕನ್ನಡ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

ವಿದೇಶಿ ನೆಲದಲ್ಲಿ ಕನ್ನಡದ ಕಲರವ; ಅನಿವಾಸಿಗಳ ಒಗ್ಗಟ್ಟಿನ ಸಂಭ್ರಮ

ಜರ್ಮನಿ: ಫ್ರಾಂಕ್‌ಫರ್ಟ್‌ನಲ್ಲಿ ನವೆಂಬರ್ 21ರ ಶನಿವಾರ ರೈನ್ ಮೈನ್ ಕನ್ನಡ ಸಂಘ (ಆರ್‌ಎಂಕೆಎಸ್) ತನ್ನ 11ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತು. ಕರ್ನಾಟಕದ ಗಡಿಗಳಾಚೆಯೂ ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಂಘವು ವರ್ಷದುದ್ದಕ್ಕೂ ವಿವಿಧ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.

ಸಂಘದ ಪದಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿ, ನಾಡಗೀತೆಯ ಗಾಯನದೊಂದಿಗೆ ಸಮಾರಂಭವನ್ನು ಉದ್ಘಾಟಿಸಿದರು. ಸಂಪ್ರದಾಯದಂತೆ ಗಣೇಶನ ಸ್ತುತಿಗೀತೆಯ ಮೂಲಕ ಪ್ರಥಮ ವಂದಿತನಿಗೆ ನಮನ ಸಲ್ಲಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರೈನ್ ಮೈನ್ ಕನ್ನಡ ಸಂಘದ ಅಧ್ಯಕ್ಷರಾದ ಲೋಕನಾಥ್ ರಾವ್ ಚೌಹಾನ್ ಅವರು, ರಾಜ್ಯೋತ್ಸವದ ಸಿದ್ಧತೆಯಲ್ಲಿ ಕೈಜೋಡಿಸಿದ ಎಲ್ಲರನ್ನೂ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರನ್ನೂ ಅಭಿನಂದಿಸಿ, ಸಮಾರಂಭದ ಯಶಸ್ಸಿಗೆ ಶುಭ ಹಾರೈಸಿದರು.

ಸಂಘದ ಕಾರ್ಯಕ್ರಮಗಳಿಗೆ ನಿರಂತರವಾಗಿ ಪ್ರಾಯೋಜಕತ್ವ ನೀಡುತ್ತಿರುವ ಡಿವಿಎಜಿ (DVAG) ಪ್ರತಿನಿಧಿಗಳೂ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕನ್ನಡಪರ ಕಾರ್ಯಕ್ರಮಗಳಿಗೆ ನಿರಂತರವಾಗಿ ಆರ್ಥಿಕ ಬೆಂಬಲ ನೀಡುತ್ತಿರುವ ಡಿವಿಎಜಿ ಹಾಗೂ ಇತರ ಎಲ್ಲ ಪ್ರಾಯೋಜಕರಿಗೆ ರೈನ್ ಮೈನ್ ಕನ್ನಡ ಸಂಘ ಕೃತಜ್ಞತೆ ಸಲ್ಲಿಸಿತು.

ಸಮಾರಂಭದ ಮೊದಲ ಭಾಗದಲ್ಲಿ ಸಂಘದ ಪುಟಾಣಿಗಳು ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು. ಬಣ್ಣಬಣ್ಣದ ಉಡುಗೆ ತೊಟ್ಟು ವೇದಿಕೆಯ ಮೇಲೆ ನವಿಲಿನಂತೆ ನರ್ತಿಸಿದ ಮಕ್ಕಳು ನೆರೆದವರ ಕಣ್ಮನ ಸೆಳೆದರು. ಹಲವು ವಾರಗಳ ಅಭ್ಯಾಸದಿಂದ ಮೂಡಿಬಂದ ಈ ಪ್ರದರ್ಶನಗಳು ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಮಹತ್ವವನ್ನೂ, ಇಂತಹ ಹಬ್ಬವನ್ನು ಒಟ್ಟಾಗಿ ಆಚರಿಸುವುದರ ಹಿಂದಿನ ಶ್ರಮವನ್ನೂ ಅರಿಯಲು ಅವಕಾಶ ನೀಡಿದವು.

ದ್ವಿತೀಯಾರ್ಧದಲ್ಲಿ ಸಂಘದ ಸದಸ್ಯರು ನಾಟಕ, ನೃತ್ಯ, ಫ್ಯಾಷನ್ ಶೋ ಮತ್ತು ಸಮೂಹಗಾಯನದ ಮೂಲಕ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿದರು. ಕನ್ನಡ ಕಲಿ ಮಕ್ಕಳು ಪ್ರಸ್ತುತಪಡಿಸಿದ ‘ಗರುಡ ಗರ್ವ ಭಂಗ’ ಯಕ್ಷಗಾನ ವಿಶೇಷ ಮೆಚ್ಚುಗೆ ಗಳಿಸಿತು. ನೆರೆದಿದ್ದ ಹಲವರಿಗೆ ಇದೇ ಮೊದಲ ಬಾರಿಗೆ ಯಕ್ಷಗಾನವನ್ನು ನೇರವಾಗಿ ನೋಡುವ ಅವಕಾಶ ದೊರೆಯಿತು.

ಪುಟಾಣಿ ಪಟಾಕಿಗಳು, ಚಿನ್ನರ ಮೇಳ, ಚಿನ್ನರ ಹೆಜ್ಜೆ, ಟೀಂ ಗೆಳೆಯರು, ಜನ್ ಆಲ್ಫಾಬೀಟ್ ಬ್ಲಾಸ್ಟರ್ಸ್, ರಂಗಚೇತನ, ಆರ್‌ಎಂಕೆಎಸ್ ಚೀರ್‌ಲೀಡರ್ಸ್, ನಾಟ್ಯಲಹರಿ, ನಮ್ಮ. ರ್ರಾಂಪ್ ನಮ್ಮ ಸ್ಟೈಲ್, ಟೀಂ ಲಯ, ಸೀಹೈಮ್ ಸ್ಟಾರ್ಸ್, ಕನ್ನಡ ಕಲಿ ತಂಡ, ಡಿ3 ಡ್ಯಾನ್ಸ್ ಟೀಂ ಮತ್ತು ಹಾಡು ಕರ್ನಾಟಕ ತಂಡಗಳು ತಮ್ಮ ಪ್ರದರ್ಶನಗಳಿಂದ ಸಮಾರಂಭಕ್ಕೆ ಮೆರುಗು ತಂದವು. ತಂಡಗಳ ಮುನ್ನಡೆ ವಹಿಸಿದವರು ಹಲವು ವಾರಗಳ ಕಾಲ ಅಭ್ಯಾಸಗಳನ್ನು ಸಂಯೋಜಿಸಿ, ಭಾಗವಹಿಸಿದವರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ವೇದಿಕೆ ಕಲ್ಪಿಸಿದರು. ಸಮಾರಂಭದ ಕೊನೆಯಲ್ಲಿ ‘ಹಾಡು ಕರ್ನಾಟಕ’ ತಂಡದ ಮಕ್ಕಳು ಮತ್ತು ವಯಸ್ಕರು ಒಟ್ಟಾಗಿ ಕನ್ನಡ ಗೀತೆಗಳನ್ನು ಹಾಡಿದರು. ಪ್ರೇಕ್ಷಕರೂ ದನಿಗೂಡಿಸಿ, ಹಾಡಿನ ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಈ ರಾಜ್ಯೋತ್ಸವದ ಮೂಲಕ ಜರ್ಮನಿಯಲ್ಲಿರುವ ಕನ್ನಡಿಗರು ಒಂದೆಡೆ ಸೇರಿ, ಹಳೆಯ ಬಾಂಧವ್ಯಗಳನ್ನು ಗಟ್ಟಿಗೊಳಿಸಿ, ಹೊಸ ಸ್ನೇಹಗಳನ್ನು ಬೆಳೆಸಿಕೊಂಡರು. ಅಭ್ಯಾಸದಿಂದ ಹಿಡಿದು ಸಮಾರಂಭದ ನಿರ್ವಹಣೆಯವರೆಗೂ ಎಲ್ಲರೂ ಕೈಜೋಡಿಸಿದ ರೀತಿ ‘ಒಗ್ಗಟ್ಟಿನಲ್ಲೇ ಬಲ’ ಎಂಬ ಮಾತಿಗೆ ನಿದರ್ಶನವಾಯಿತು. ತಾಯ್ನಾಡಿನಿಂದ ಸಾವಿರಾರು ಮೈಲಿ ದೂರದ ಜರ್ಮನಿಯಲ್ಲಿ ಕನ್ನಡ ಭಾಷೆಯ ಮೂಲಕ ನಮ್ಮ ಗುರುತನ್ನು ಉಳಿಸಿಕೊಂಡು, ಇಲ್ಲಿಯೇ ಒಂದು ‘ಪುಟ್ಟ ಕರ್ನಾಟಕ’ವನ್ನು ಕಟ್ಟಿಕೊಂಡಿರುವುದು ಸಂಭ್ರಮದ ಸಂಗತಿಯೂ ಹೆಮ್ಮೆಯ ವಿಚಾರವೂ ಹೌದು.

ಕಾರ್ಯಕ್ರಮದ ಸಿದ್ಧತೆ ಮತ್ತು ನಿರ್ವಹಣೆಯಲ್ಲಿ ಲೋಕನಾಥ್ ರಾವ್ ಚೌಹಾನ್, ಗುರುರಾಜ್ ಹರಳೆಣ್ಣೆ, ವಿಜಯ್ ಹುಗ್ಗಿ, ಭರತ್ ಬಾವಿಮನೆ, ಗುಂಡೂರಾವ್, ಮಂಜುನಾಥ್ ಷಡಕ್ಷರಯ್ಯ, ಲಕ್ಷ್ಮೀ ಭಟ್, ರಮ್ಯ ಲಕ್ಷೀಶ, ಸುಹಾಸ್ ಕೊಣನೂರು, ಸುನಿಲ್ ಪಾಟಿಲ್ , ವೆಂಕಟೇಶ್ ಬಿರಾದಾರ್, ಅಂಕಿತ ಪ್ರದೀಪ್ ಹಾಗೂ ಇವರೊಟ್ಟಿಗೆ ಅನೇಕ ಸ್ವಯಂಸೇವಕರು ಶ್ರಮಿಸಿದರು. ನಿರೂಪಕರು ಪ್ರತಿ ಪ್ರದರ್ಶನವನ್ನೂ ಪ್ರೇಕ್ಷಕರಿಗೆ ಪರಿಚಯಿಸುತ್ತಾ, ದಿನವಿಡೀ ನಡೆದ ಕಾರ್ಯಕ್ರಮವನ್ನು ಸರಾಗವಾಗಿ ಮುನ್ನಡೆಸಿದರು. ಸಮಾರಂಭದ ಯಶಸ್ಸಿಗೆ ಕೈಜೋಡಿಸಿದ ಎಲ್ಲ ಕಲಾವಿದರು, ತಂಡಗಳ ನೇತೃತ್ವ ವಹಿಸಿದವರು, ನಿರೂಪಕರು ಮತ್ತು ಸ್ವಯಂಸೇವಕರಿಗೆ ರೈನ್ ಮೈನ್ ಕನ್ನಡ ಸಂಘ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ. ಮುಂದಿನ ದಿನಗಳಲ್ಲಿಯೂ ಕನ್ನಡಿಗರನ್ನು ಒಂದೆಡೆ ಸೇರಿಸುವ ಇಂತಹ ಕನ್ನಡಪರ ಕಾರ್ಯಕ್ರಮಗಳನ್ನು ಸಂಘವು ಹಮ್ಮಿಕೊಳ್ಳಲಿದೆ.

ಶೋಭಾ ಚೌಹಾನ್, ಫ್ರಾಂಕ್ಫರ್ಟ್, ಜರ್ಮನಿ

Hot this week

ಜರ್ಮನಿ; ರೈನ್‌ಮೈನ್ ಕನ್ನಡ ಸಂಘದ ರಾಜ್ಯೋತ್ಸವಕ್ಕೆ ಮೆರುಗು ತಂದ ಕನ್ನಡ ಕಲಿ ಮಕ್ಕಳ ‘ಗರುಡ ಗರ್ವಭಂಗ’

ಜರ್ಮನಿ: ಫ್ರಾಂಕ್‌ಫರ್ಟ್‌ನಲ್ಲಿ ನವೆಂಬರ್ 21ರಂದು ರೈನ್‌ಮೈನ್ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ...

ಕರ್ನಾಟಕ ಜಾನಪದ ಪರಿಷತ್ತು ಓಮಾನ್ ಘಟಕದಿಂದ ರಾಷ್ಟ್ರೀಯ ದಿನಾಚರಣೆ ಸಂಭ್ರಮ

ಒಮಾನ್ ಮಸ್ಕತ್ ಸುಲ್ತಾನೇಟ್ ಆಫ್ ಓಮಾನ್‌ನ ರಾಷ್ಟ್ರೀಯ ದಿನಾಚರಣೆಯನ್ನು ಕರ್ನಾಟಕ ಜಾನಪದ...

ದುಬೈನ ಸಮುದ್ರ ವಿಹಾರ ಕ್ರೂಸ್‌ನಲ್ಲಿ ಲೇಖಕಿ ಎಹ್ಸಾಸ್ ನಯಾಬ್‍ರ ‘ಪ್ರಜಾಪ್ರಭುತ್ವದ ಶೋಕ’ ಕೃತಿ ಬಿಡುಗಡೆ

ದುಬೈ: ಭಾರತದ ರಾಜಕೀಯ, ಸಾಮಾಜಿಕ ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆಗಳ ಕುರಿತು ವೈಚಾರಿಕ...

Related Articles

Popular Categories