ಜರ್ಮನಿ: ಫ್ರಾಂಕ್ಫರ್ಟ್ನಲ್ಲಿ ನವೆಂಬರ್ 21ರಂದು ರೈನ್ಮೈನ್ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ, ಕನ್ನಡ ಕಲಿ ಮಕ್ಕಳು ‘ಗರುಡ ಗರ್ವಭಂಗ’ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕದ ಅಜಿತ್ ಪ್ರಭು ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದ ಮಕ್ಕಳಿಗೆ, ಪ್ರದರ್ಶನದ ಕೊನೆಯಲ್ಲಿ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು.
ಕರ್ನಾಟಕದ ಗಂಡುಕಲೆ ಎಂದೇ ಹೆಸರಾದ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಜರ್ಮನಿಯಲ್ಲಿ ನೆಲೆಸಿರುವ ಅಜಿತ್ ಪ್ರಭು ಅವರು ಯುರೋಪಿನ ವಿವಿಧೆಡೆ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಜರ್ಮನಿಯ ಮ್ಯೂನಿಕ್ ಮತ್ತು ಸ್ಟುಟ್ಗಾರ್ಟ್ ನಗರಗಳಲ್ಲಿ ಹಾಗೂ ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ನಲ್ಲೂ ಯಕ್ಷಗಾನವನ್ನು ಕಲಿಸುತ್ತಾ, ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. ಫ್ರಾಂಕ್ಫರ್ಟ್ನ ಕನ್ನಡ ಕಲಿ ಮಕ್ಕಳಿಗಾಗಿ ಅವರು ಆಯ್ದುಕೊಂಡ ಈ ಪ್ರಸಂಗದಲ್ಲಿ ರಾಮಭಕ್ತರಾದ ಮೈಂದ–ದ್ವಿವಿದರಿಗೆ ಶ್ರೀರಾಮನ ದರ್ಶನವಾಗುವ ಕಥೆಯೂ, ತನ್ನ ಬಲದ ಬಗ್ಗೆ ಗರ್ವ ಹೊಂದಿದ್ದ ಗರುಡನಿಗೆ ವಿನಯದ ಪಾಠ ದೊರೆಯುವ ಕಥೆಯೂ ಒಂದಾಗಿ ಹೆಣೆದುಕೊಂಡಿವೆ.
ತ್ರೇತಾಯುಗದಲ್ಲಿ ಶ್ರೀರಾಮನು ಅಶ್ವಿನಿ ಪುತ್ರರಾದ ಕಪಿವೀರ ಮೈಂದ–ದ್ವಿವಿದರಿಗೆ ಯುಗಯುಗದಲ್ಲೂ ದರ್ಶನ ನೀಡುವುದಾಗಿ ಮಾತು ಕೊಟ್ಟಿರುತ್ತಾನೆ. ದ್ವಾಪರಯುಗದಲ್ಲಿ ಸಿಂಹಮುಖಿಯು ಈ ಕಪಿವೀರರನ್ನು ಭೇಟಿಯಾಗಿ, ತನ್ನ ಪತಿ ನರಕಾಸುರನನ್ನು ಕೃಷ್ಣನು ಕೊಂದನೆಂದು ತಿಳಿಸಿ ನ್ಯಾಯ ಕೇಳುತ್ತಾಳೆ. ಕೃಷ್ಣನೇ ತಮ್ಮ ಆರಾಧ್ಯನಾದ ಶ್ರೀರಾಮನೆಂಬುದನ್ನು ಅರಿಯದ ಮೈಂದ–ದ್ವಿವಿದರು, ತಮ್ಮ ಗೆಳೆಯ ನರಕಾಸುರನನ್ನು ಕೊಂದವನು ಯಾರೆಂದು ಹುಡುಕುತ್ತಾ ಕೃಷ್ಣನ ನಗರಿಗೆ ಬರುತ್ತಾರೆ.








ಅಲ್ಲಿ ಮೈಂದ–ದ್ವಿವಿದರು ವನವನ್ನು ಹಾಳುಗೆಡವತೊಡಗುತ್ತಾರೆ. ಅವರನ್ನು ಸಾಮಾನ್ಯ ಕಪಿಗಳೆಂದು ಭಾವಿಸಿದ ವನಪಾಲಕರು ಓಡಿಸಲು ಹೋಗಿ ತಾವೇ ಓಡಿ ಬರುವ ಪ್ರಸಂಗ ಎದುರಾಗುತ್ತದೆ. ಮಾತನಾಡುವ ಎರಡು ವಿಚಿತ್ರ ಕಪಿಗಳು ವನವನ್ನು ಹಾಳು ಮಾಡುತ್ತಿವೆ ಎಂದು ವನಪಾಲಕರು ಕೃಷ್ಣನಿಗೆ ದೂರು ನೀಡುತ್ತಾರೆ. ಕೃಷ್ಣನು ಗರುಡನನ್ನು ಆ ಕಪಿವೀರರ ಬಳಿಗೆ ಕಳುಹಿಸುತ್ತಾನೆ. ಮೈಂದ–ದ್ವಿವಿದರನ್ನು ಎದುರಿಸುವಾಗ ಗರುಡನ ಗರ್ವ ಮುರಿಯುತ್ತದೆ. ಅತ್ತ, ಕೃಷ್ಣನೇ ತಮ್ಮ ಶ್ರೀರಾಮನೆಂಬ ಅರಿವು ಮೂಡಿದಾಗ ಮೈಂದ–ದ್ವಿವಿದರು ಕ್ಷಮೆ ಯಾಚಿಸುತ್ತಾರೆ. ತ್ರೇತಾಯುಗದಲ್ಲಿ ಕೊಟ್ಟ ಮಾತಿನಂತೆ ಕೃಷ್ಣನು ಸೀತಾಸಮೇತ ಶ್ರೀರಾಮನಾಗಿ ಅವರಿಗೆ ದರ್ಶನ ನೀಡುವುದರೊಂದಿಗೆ ಪ್ರಸಂಗ ಮುಕ್ತಾಯಗೊಳ್ಳುತ್ತದೆ.
ಮೈಂದನಾಗಿ ಸ್ನಿಗ್ಧಾ ಚೌಹಾನ್, ದ್ವಿವಿದನಾಗಿ ಖುಷಿ ಶಣೈ, ಸಿಂಹಮುಖಿಯಾಗಿ ಪದ್ಮಾಸಿನಿ, ಕೃಷ್ಣನಾಗಿ ಪ್ರದ್ಯುಮ್ನ ಪ್ರಭು, ರುಕ್ಮಿಣಿಯಾಗಿ ನಿಶಾಲ್ ಹುಗ್ಗಿ ಹಾಗೂ ಗರುಡನಾಗಿ ಅದಿತಿ ರಾವ್ ಅಭಿನಯಿಸಿದರು. ವನಪಾಲಕರ ಪಾತ್ರಗಳನ್ನು ಶೌರ್ಯ ಚೌಹಾನ್, ಮನ್ವಿತ್ ಬಾವಿಮನೆ ಮತ್ತು ಸಾರ್ಥಕ ಗಡ್ಗೆ ನಿರ್ವಹಿಸಿದರು. ಆರು ವಾರಗಳ ಅಭ್ಯಾಸದಲ್ಲಿ ಇಡೀ ಪ್ರಸಂಗವನ್ನು ಕಲಿತು ಒಟ್ಟಾಗಿ ರಂಗಕ್ಕೆ ತಂದ ಈ ಎಳೆಯ ಕಲಾವಿದರ ಪರಿಶ್ರಮ ರಾಜ್ಯೋತ್ಸವದಲ್ಲಿ ನೆರೆದವರ ಪ್ರಶಂಸೆಗೆ ಪಾತ್ರವಾಯಿತು.

-ಶೋಭಾ ಚೌಹಾನ್, ಫ್ರಾಂಕ್ಫರ್ಟ್

