ಇತರೆಉಗಾಂಡದಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ; ‘ನಾದ –...

ಉಗಾಂಡದಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ; ‘ನಾದ – ಗಾನ – ವೈಭವ’ ಕಾರ್ಯಕ್ರಮದಲ್ಲಿ ಅನಾವರಣಗೊಂಡ ಕನ್ನಡದ ಕಂಪು; ಕಲಾ ಸಂಭ್ರಮಕ್ಕೆ ಸಾಕ್ಷಿಯಾದ ವೇದಿಕೆ

ಕಂಪಾಲ: ಕರ್ನಾಟಕದ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯ ಅಭಿಮಾನವನ್ನು ವಿದೇಶಿ ನೆಲದಲ್ಲಿಯೂ ಮೆರೆದ ಕನ್ನಡಿಗರು, ಉಗಾಂಡದ ರಾಜಧಾನಿ ಕಂಪಾಲದ ಕಟಿ-ಕಟಿ ಮೈದಾನದಲ್ಲಿ ನವೆಂಬರ್ 21ರಂದು ‘ನಾದ – ಗಾನ – ವೈಭವ’ ಎಂಬ ಶೀರ್ಷಿಕೆಯಡಿ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿದರು.

ರಾಷ್ಟ್ರಗೀತೆ, ಕರ್ನಾಟಕದ ನಾಡಗೀತೆ ಹಾಗೂ ಉಗಾಂಡದ ರಾಷ್ಟ್ರಗೀತೆಯ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಾವು ಜನಿಸಿದ ನಾಡು ಕರ್ನಾಟಕದ ಮೇಲಿನ ಅಭಿಮಾನ ಹಾಗೂ ಬದುಕಿಗೆ ನೆಲೆ ನೀಡಿದ ಉಗಾಂಡ ದೇಶದ ಮೇಲಿನ ಗೌರವವನ್ನು ಸಮಾನವಾಗಿ ವ್ಯಕ್ತಪಡಿಸಿದ ಈ ಕಾರ್ಯಕ್ರಮವು, ನಾಡು-ನುಡಿಯ ಪ್ರೀತಿಯ ಜೊತೆಗೆ ಸಾಂಸ್ಕೃತಿಕ ಸಾಮರಸ್ಯಕ್ಕೂ ಸಾಕ್ಷಿಯಾಯಿತು.

ಕರ್ನಾಟಕ ಸಂಘದ ಅಧ್ಯಕ್ಷರಾದ ದೀಪಕ್ ಜಗದೀಶ್ ಅವರು ಆಗಮಿಸಿದ ಗಣ್ಯರು ಹಾಗೂ ಕನ್ನಡಿಗರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಂಪಾಲಾ ನಗರದ ಮೇಯರ್ ಬಲಿಮ್ವೆಜೊ ರೊನಾಲ್ಡ್ ನ್ಸುಬುಗಾ ಅವರು ಮಾತನಾಡಿ, ಉಗಾಂಡ ದೇಶದ ಪ್ರಗತಿಯಲ್ಲಿ ಭಾರತೀಯ ಸಂಘ-ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು. ಅಲ್ಲದೆ, ಮುಂದಿನ ದಿನಗಳಲ್ಲಿಯೂ ಸರಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.

ಭಾರತೀಯ ಹೈಕಮಿಷನ್‌ನ ಪ್ರತಿನಿಧಿ ಸಂತೋಷ್ ಸಿನ್ಹಾ, ಇಂಡಿಯನ್ ಅಸೋಸಿಯೇಷನ್ ಅಧ್ಯಕ್ಷ ಪರೇಶ್ ಮೆಹ್ತಾ ಹಾಗೂ ಕಾರ್ಯದರ್ಶಿ ಶಶಿ ನಾಯರ್ ಅವರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿದ ಉದ್ಯಮಿಗಳ ಸಹಕಾರವೂ ಸಮಾರಂಭದ ಯಶಸ್ಸಿಗೆ ಮಹತ್ವದ ಕೊಡುಗೆಯಾಯಿತು.

ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಮಕ್ಕಳು ಹಾಗೂ ಮಹಿಳೆಯರು ಪ್ರದರ್ಶಿಸಿದ ಆಕರ್ಷಕ ನೃತ್ಯಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿದ್ದವು. ಬೆಂಗಳೂರಿನಿಂದ ವಿಶೇಷವಾಗಿ ಆಗಮಿಸಿದ್ದ ಖ್ಯಾತ ಗಾಯಕರಾದ ಗಣೇಶ್ ಕಾರಂತ್ ಮತ್ತು ಸುರಕ್ಷಾ ದಾಸ್ ಅವರ ಸಂಗೀತ ರಸಮಂಜರಿ ಪ್ರೇಕ್ಷಕರ ಮನಸೂರೆಗೊಂಡಿತು. ಸುಮಧುರ ಹಾಡುಗಳ ಮೂಲಕ ಅವರು ಸಭಿಕರನ್ನು ಸಂಗೀತ ಲೋಕದಲ್ಲಿ ತೇಲಾಡಿಸಿದರು.

‘ಪಾಚಿ’ ಚಿತ್ರದ ಟೀಸರ್ ಬಿಡುಗಡೆ
ಇದೇ ಸಂದರ್ಭದಲ್ಲಿ, ಆಧುನಿಕ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಒಬ್ಬನೇ ಮಗುವಾಗಿ ಬೆಳೆಯುವ ಮಗುವಿನ ಭಾವನಾತ್ಮಕ ಹಾಗೂ ಮಾನಸಿಕ ಹೋರಾಟಗಳನ್ನು ಆಧರಿಸಿದ ಕನ್ನಡ ಚಲನಚಿತ್ರ ‘ಪಾಚಿ’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವೂ ನಡೆಯಿತು. ಇದು ಸಮಾರಂಭಕ್ಕೆ ಮತ್ತೊಂದು ವಿಶೇಷ ಆಕರ್ಷಣೆಯನ್ನು ಒದಗಿಸಿತು.

ಇದಲ್ಲದೆ, ಸಂಘದ ಹಿರಿಯ ಸದಸ್ಯರು ನೀಡಿದ ಸಂದೇಶಗಳನ್ನು ಪ್ರದರ್ಶಿಸುವ ಮೂಲಕ ಹಿರಿಯರ ಅನುಭವ, ಮಾರ್ಗದರ್ಶನ ಹಾಗೂ ಸಂಘದ ಬೆಳವಣಿಗೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಲಾಯಿತು.

ಕಾರ್ಯಕ್ರಮದ ಯಶಸ್ಸಿನ ಹಿಂದೆ ಸಂಘದ ಬೋರ್ಡ್ ಆಫ್ ಟ್ರಷ್ಟಿ ಸೀತಾರಾಮ್ ದೇಶ್ ಪಾಂಡೆ ಮತ್ತು ಶ್ರೀ ವೆಂಕಟೇಶ್ ಮನೆಪಳ್ಳಿ ಸೇರಿದಂತೆ, ಕರ್ನಾಟಕ ಸಂಘದ ಅಧ್ಯಕ್ಷ ದೀಪಕ್ ಜಗದೀಶ್, ಉಪಾಧ್ಯಕ್ಷ ಸಂತೋಷ್ ರಾಥೋಡ್, ಖಜಾಂಚಿ  ಮುರಳಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಶ್ರಮ ಮತ್ತು ಸಂಘಟನಾ ಚಾತುರ್ಯ ಪ್ರಮುಖವಾಗಿತ್ತು.

ಈ ಯಶಸ್ಸಿಗೆ ಶ್ರಮಿಸಿದ ತಂಡದಲ್ಲಿ ಹಿಮಾಂಶು, ಪ್ರವೀಣ್, ವರುಣ್, ಭಾವಿತಾ, ಪ್ರಥಿ, ವೀಣಾ, ಭಾಸ್ಕರ್, ಗಣಪತಿ, ಹರಿಗೋಪಾಲ್, ಶ್ರೀಹರ್ಷ, ಮುರಳಿ ಅಶೋಕ್, ಶಶಾಂಕ್, ಮಹೇಶ್ ಹಾಗೂ ಅನಿಲ್ ಯಾದವ್ ಅವರು ಪ್ರಮುಖ ಪಾತ್ರ ವಹಿಸಿದರು.

ಇನ್ನು ಕಾರ್ಯಕ್ರಮದ ನಿರೂಪಣೆಯು ಸಮಾರಂಭದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ಉಗಾಂಡದ ಗಾನಕೋಗಿಲೆ ಎಂದೇ ಪ್ರಸಿದ್ಧರಾದ ಸುಮಧುರ ಕಂಠದ ಶೋಭಾ ಪ್ರಭು ಹಾಗೂ ನಗುಮುಖದ ಯುವ ಪ್ರತಿಭೆ ವಿಕ್ರಂ ವೇಣೂರು ಅವರ ಆಕರ್ಷಕ ನಿರೂಪಣೆ ಸಭಿಕರನ್ನು ಕೊನೆಯವರೆಗೂ ರಂಜಿಸಿತು.

ಒಟ್ಟಿನಲ್ಲಿ, ಕನ್ನಡದ ನಾಡು-ನುಡಿ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಗಾಂಡದ ನೆಲದಲ್ಲಿ ಪರಿಚಯಿಸುವುದರ ಜೊತೆಗೆ ಕನ್ನಡಿಗರ ಒಗ್ಗಟ್ಟು ಹಾಗೂ ಸಾಂಸ್ಕೃತಿಕ ಅಭಿಮಾನವನ್ನು ಸಾರಿದ ಈ ವರ್ಷದ ಕರ್ನಾಟಕ ರಾಜ್ಯೋತ್ಸವವು ಎಲ್ಲರ ಮನದಲ್ಲಿ ಅವಿಸ್ಮರಣೀಯ ನೆನಪಾಗಿ ಉಳಿಯಿತು. ವಿದೇಶಿ ನೆಲದಲ್ಲಿಯೂ ಕನ್ನಡದ ಕಂಪನ್ನು ಪಸರಿಸಿದ ಈ ಸಂಭ್ರಮದ ಯಶಸ್ಸು ಸಂಘಟಕರ ಸಂಘಟನಾ ಶಕ್ತಿ ಮತ್ತು ಕನ್ನಡಿಗರ ಒಗ್ಗಟ್ಟಿಗೆ ಸಾಕ್ಷಿಯಾಯಿತು.

Hot this week

ಜರ್ಮನಿ; ಫ್ರಾಂಕ್‌ಫರ್ಟ್‌ನಲ್ಲಿ ರೈನ್ ಮೈನ್ ಕನ್ನಡ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

ಜರ್ಮನಿ: ಫ್ರಾಂಕ್‌ಫರ್ಟ್‌ನಲ್ಲಿ ನವೆಂಬರ್ 21ರ ಶನಿವಾರ ರೈನ್ ಮೈನ್ ಕನ್ನಡ ಸಂಘ...

ಜರ್ಮನಿ; ರೈನ್‌ಮೈನ್ ಕನ್ನಡ ಸಂಘದ ರಾಜ್ಯೋತ್ಸವಕ್ಕೆ ಮೆರುಗು ತಂದ ಕನ್ನಡ ಕಲಿ ಮಕ್ಕಳ ‘ಗರುಡ ಗರ್ವಭಂಗ’

ಜರ್ಮನಿ: ಫ್ರಾಂಕ್‌ಫರ್ಟ್‌ನಲ್ಲಿ ನವೆಂಬರ್ 21ರಂದು ರೈನ್‌ಮೈನ್ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ...

ಕರ್ನಾಟಕ ಜಾನಪದ ಪರಿಷತ್ತು ಓಮಾನ್ ಘಟಕದಿಂದ ರಾಷ್ಟ್ರೀಯ ದಿನಾಚರಣೆ ಸಂಭ್ರಮ

ಒಮಾನ್ ಮಸ್ಕತ್ ಸುಲ್ತಾನೇಟ್ ಆಫ್ ಓಮಾನ್‌ನ ರಾಷ್ಟ್ರೀಯ ದಿನಾಚರಣೆಯನ್ನು ಕರ್ನಾಟಕ ಜಾನಪದ...

ದುಬೈನ ಸಮುದ್ರ ವಿಹಾರ ಕ್ರೂಸ್‌ನಲ್ಲಿ ಲೇಖಕಿ ಎಹ್ಸಾಸ್ ನಯಾಬ್‍ರ ‘ಪ್ರಜಾಪ್ರಭುತ್ವದ ಶೋಕ’ ಕೃತಿ ಬಿಡುಗಡೆ

ದುಬೈ: ಭಾರತದ ರಾಜಕೀಯ, ಸಾಮಾಜಿಕ ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆಗಳ ಕುರಿತು ವೈಚಾರಿಕ...

Related Articles

Popular Categories