ವಿದೇಶದಲ್ಲಿ ಅಕೌಂಟೆಂಟ್ ಆಗಿ ವೃತ್ತಿ ಜೀವನ ಪ್ರಾರಂಭಿಸಿ, ನಿಷ್ಠೆ, ಕಠಿಣ ಪರಿಶ್ರಮ ಹಾಗೂ ಶಿಸ್ತಿನ ಮೂಲಕ ಉನ್ನತಿಯನ್ನು ಸಾಧಿಸಿದ ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೋ. ಯಶಸ್ವಿ ಉದ್ಯಮಿಯಷ್ಟೇ ಅಲ್ಲ, ಅನನ್ಯ ಸಮಾಜ ಸೇವಕರೂ ಆಗಿರುವ ಡಾ.ರೊನಾಲ್ಡ್ ಕೊಲಾಸೋ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರು. ಉದ್ಯೋಗ, ಉದ್ಯಮ ಎರಡರಲ್ಲೂ ಅಸಾಮಾನ್ಯ ಯಶಸ್ಸು ಕಂಡ ರೊನಾಲ್ಡ್ ಕೊಲಾಸೋ ಅವರು ಸಮಾಜ ತನಗೆ ನೀಡಿದ ಹಾಗೆಯೇ ತಾನೂ ಸಮಾಜಕ್ಕೆ ನೀಡಬೇಕು ಎಂದು ಪಣತೊಟ್ಟು ಸೇವಾ ಚಟುವಟಿಕೆಗಳಿಗೆ ಧುಮುಕಿದರು. ಧರ್ಮ, ಜಾತಿ, ಭಾಷೆ, ಲಿಂಗ, ಪ್ರದೇಶಗಳ ಭೇದವಿಲ್ಲದೆ ಅರ್ಹರಿಗೆ ಸಹಾಯಹಸ್ತ ಚಾಚುವುದನ್ನು ನಿರಂತರ ಮಾಡುತ್ತಾ ಬಂದಿದ್ದಾರೆ.

ಮೂಡುಬಿದಿರೆಯ ದಿವಂಗತ ಫ್ಯಾಬಿಯನ್ ಬಿ.ಎಲ್.ಕೊಲಾಸೊ ಮತ್ತು ಆಲಿಸ್ ಕೊಲಾಸೊ ಅವರ ಪುತ್ರರಾಗಿರುವ ಡಾ.ರೊನಾಲ್ಡ್ ಕೊಲಾಸೋ ಅವರ ಪತ್ನಿ ಜೀನ್ ಕೊಲಾಸೊ. ಫ್ರೆಡ್ರಿಕ್ ಕೊಲಾಸೊ, ಜೆಸಿಂತಾ ರೊಸಾರಿಯೊ, ಜಾನ್ ರಾಬರ್ಟ್ ಕೊಲಾಸೊ ಮತ್ತು ಲವೀನಾ ಕ್ರಾಸ್ತಾರ ಸಹೋದರ. ಡಾ. ಕೊಲಾಸೊರಿಗೆ ನೈಜಿಲ್ ರುಪಸ್ ಕೊಲಾಸೊ ಹಾಗೂ ರಾಂಡಲ್ ಶಾನ್ ಕೊಲಾಸೊ ಎಂಬಿಬ್ಬರು ಮಕ್ಕಳು. ಪುತ್ರ ನೈಜಿಲ್ ನಿಕಿತಾ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಅಮೆಲಿಯಾ ಕೊಲಾಸೊ ಎಂಬ ಪುತ್ರಿ ಇದ್ದಾರೆ. ರಾಂಡಲ್ ಕೊಲಾಸೊ ಅವರ ಪತ್ನಿ ರೆನಿಷಾ ಮ್ಯೂರಿಯಲ್.
ರೊನಾಲ್ಡ್ ಕೊಲಾಸೊ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮರ್ಕೆಂಟೈಲ್ ಲಾ (ವಾಣಿಜ್ಯ ಕಾನೂನು)ನಲ್ಲಿ ಪ್ರಥಮ ರ್ಯಾಂಕ್ ಪದವೀಧರ. ಬಳಿಕ ಅವರು ಅಥೆನ್ಸ್ ನ ಇಂಟರ್ ನ್ಯಾಶನಲ್ ಕೋಸ್ಟ್ ಅಕೌಂಟೆಂಟ್ಸ್ ಮತ್ತು ಮ್ಯಾನೇಜ್ ಮೆಂಟ್ ಅಕೌಂಟೆಂಟ್ಸ್ (ಐಸಿಎಎಂಎ) ನಿಂದ ಕೋಸ್ಟ್ ಕಂಟ್ರೋಲ್ ಮತ್ತು ಕೋಸ್ಟ್ ಮಾನಿಟರಿಂಗ್ ನಲ್ಲಿ ಪರಿಣತಿ ಪಡೆದಿದ್ದಾರೆ.

1975ರಲ್ಲಿ ಒಮಾನ್ ದೇಶದಲ್ಲಿ ಅಕೌಂಟೆಂಟ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದರು. ತಮ್ಮ ದಕ್ಷತೆ ಹಾಗೂ ನಿಷ್ಠಾವಂತ ದುಡಿಮೆಯಿಂದಾಗಿ ಗಲ್ಫ್ ನ ಎಂಟು ಹಾಗೂ ಯುರೋಪ್ ನ ಹಲವು ದೇಶಗಳಲ್ಲಿ ಅಕೌಂಟ್ಸ್ ಮುಖ್ಯಸ್ಥರಾಗಿ, ಆಡಳಿತ ವ್ಯವಸ್ಥಾಪಕರಾಗಿ, ಫೈನಾನ್ಸಿಯಲ್ ಕಂಟ್ರೋಲರ್ ಆಗಿ ಭಡ್ತಿ ಪಡೆಯುತ್ತಾ ಹೋದರು. ಗ್ರೀಸ್ ನ ಅಥೆನ್ಸ್ ನಲ್ಲಿರುವ ಸಿಸಿಐಸಿಎಲ್, ಜರ್ಮನಿಯ ಮನ್ನೆಸ್ ಮನ್ ಹಾಗೂ ಮಿಲಾನೊದ ಸೈಪೇಮ್ ಎಂಬ ಮೂರು ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳ ಒಕ್ಕೂಟದ ಕಮರ್ಷಿಯಲ್ ಸಿಇಒ ಆದರು.

ಆ ಸಂದರ್ಭದಲ್ಲಿ ಡಾ. ಕೊಲಾಸೋ ಅವರ ವೃತ್ತಿಪರತೆಯನ್ನು ಗಮನಿಸಿ ಪ್ರಮುಖ ಪೆಟ್ರೋಲಿಯಂ ಹಾಗೂ ಗ್ಯಾಸ್ ಯೋಜನೆಗಳು, ಟೌನ್ ಶಿಪ್ ಗಳು ಮತ್ತು ವಿಮಾನ ನಿಲ್ದಾಣ ನಿರ್ಮಾಣದಂತಹ ಬೃಹತ್ ಯೋಜನೆಗಳ ಉಸ್ತುವಾರಿಯನ್ನು ಅವರಿಗೆ ವಹಿಸಲಾಯಿತು. ತನಗೆ ವಹಿಸಿದ ಪ್ರತಿಯೊಂದು ಹುದ್ದೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ರೊನಾಲ್ಡ್ ಕೊಲಾಸೋ ಉದ್ಯಮ ರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಮತ್ತೆ ಅವರು ಹಿಂದಿರುಗಿ ನೋಡಲೇ ಇಲ್ಲ. ಅಪಾರ ಬುದ್ಧಿವಂತಿಕೆ, ನಿಷ್ಠೆ, ಕಠಿಣ ಪರಿಶ್ರಮ ಹಾಗೂ ಶಿಸ್ತು ಅವರಿಗೆ ಉದ್ಯಮ ಕ್ಷೇತ್ರದಲ್ಲಿ ಭಾರೀ ಯಶಸ್ಸು ತಂದಿತು. ಅವರು ಕೈ ಹಾಕಿದ ಎಲ್ಲ ಉದ್ಯಮಗಳಲ್ಲೂ ಯಶಸ್ಸು ಅವರ ಪಾಲಾಯಿತು.

ಉದ್ಯೋಗ, ಉದ್ಯಮ ಎರಡರಲ್ಲೂ ಅಸಾಮಾನ್ಯ ಯಶಸ್ಸು ಕಂಡ ರೊನಾಲ್ಡ್ ಕೊಲಾಸೋ ಅವರು ಸಮಾಜ ತನಗೆ ನೀಡಿದ ಹಾಗೆಯೇ ತಾನೂ ಸಮಾಜಕ್ಕೆ ನೀಡಬೇಕು ಎಂದು ಪಣತೊಟ್ಟು ಸೇವಾ ಚಟುವಟಿಕೆಗಳಿಗೆ ಧುಮುಕಿದರು. ಧರ್ಮ, ಜಾತಿ, ಭಾಷೆ, ಲಿಂಗ, ಪ್ರದೇಶಗಳ ಭೇದವಿಲ್ಲದೆ ಎಲ್ಲೆಲ್ಲಿ ಜನರಿಗೆ ಏನೇನು ಅಗತ್ಯವಿದೆಯೋ ಅದನ್ನು ಒದಗಿಸುತ್ತಾ ಹೋದರು. ಆ ಪೈಕಿ ಸಾರ್ವಜನಿಕರಿಗೆ ಪ್ರಯೋಜನವಾಗುವ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸಿ ಕೊಡುವಲ್ಲಿ ಅವರು ಅಪಾರ ಕಾಳಜಿ ವಹಿಸಿದರು. ಅದೆಷ್ಟೋ ಜನರು, ಸಂಸ್ಥೆಗಳು, ಸಂಘಟನೆಗಳಿಗೆ ಕೊಲಾಸೋ ನೆರವು ನೀಡಿದ್ದಾರೆ. ಸರಕಾರಕ್ಕೆ ಹಲವಾರು ಕಚೇರಿ, ಕಟ್ಟಡಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಮಂದಿರ, ಮಸೀದಿ, ಚರ್ಚ್ ಗಳನ್ನೂ ಕಟ್ಟಿಸಿಕೊಟ್ಟಿದ್ದಾರೆ.
ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅವರ ಸೇವೆಯ ವ್ಯಾಪ್ತಿ ಹಬ್ಬಿದೆ. ಬೆಂಗಳೂರು ಹೊರವಲಯದ ದೇವನಹಳ್ಳಿಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ಅವರ ಪಾತ್ರ ಇತಿಹಾಸದಲ್ಲಿ ದಾಖಲಾಗಲಿದೆ. ಕೊಲಾಸೊ ಅವರ ಸೇವಾ ಚಟುವಟಿಕೆಗಳ ವ್ಯಾಪ್ತಿ ಅದೆಷ್ಟು ವಿಶಾಲವಾಗಿತ್ತು ಎಂದರೆ ಅದನ್ನು ನೋಡಿ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸೇವಾ ಚಟುವಟಿಕೆಗಳನ್ನು ಯೋಜಿಸಿದವು.
ಜನರಿಗೆ ನೆರವಾಗುವುದು, ಅವರ ಜೊತೆ ನಮ್ಮ ಸಂಪತ್ತನ್ನು ಹಂಚಿಕೊಳ್ಳುವುದರಿಂದ ನನಗೆ ಬಹಳ ತೃಪ್ತಿ, ಸಂತಸ ಹಾಗೂ ನೆಮ್ಮದಿ ಸಿಕ್ಕಿದೆ. ಇದರಿಂದ ನಮಗೆ ಧರ್ಮ ಕಲಿಸುವ ಮೌಲ್ಯಗಳ ಸಮೀಪ ಇರುವುದು ನನಗೆ ಸಾಧ್ಯವಾಗಿದೆ ಎನ್ನುತ್ತಾರೆ ಕೊಲಾಸೊ. ಅವರ ಪತ್ನಿ ಜೀನ್ ಕೊಲಾಸೊ ಅವರು ಪತಿಯ ಸೇವೆಯ ಹಂಬಲಕ್ಕೆ ಆಸರೆಯಾಗಿ ನಿಂತವರು.
ಕೊಲಾಸೊ ಅವರು ಭೇಟಿ ನೀಡದ ದೇಶಗಳಿಲ್ಲ, ಒಡನಾಡದ ಪ್ರಭಾವಿಗಳು, ಗಣ್ಯರಿಲ್ಲ ಎಂಬಷ್ಟು ಅವರು ಜಗತ್ತಿನೆಲ್ಲೆಡೆ -ರಾಜಕೀಯ ಸಾಮಾಜಿಕ ವಲಯದಲ್ಲಿ ಚಿರಪರಿಚಿತರು. ಅಮೆರಿಕ, ಆಸ್ಟ್ರೇಲಿಯ, ಬ್ರಿಟನ್, ಯುಎಇಯಂತಹ ದೇಶಗಳ ಅಧ್ಯಕ್ಷರು, ಪ್ರಧಾನಿಗಳ ಕಾರ್ಯಕ್ರಮಗಳಿಗೆ ಕೊಲಾಸೋ ಅವರಿಗೆ ವಿಶೇಷ ಆಹ್ವಾನವಿರುತ್ತದೆ. ಭಾರತದ ಎಲ್ಲ ರಾಜಕೀಯ ಪಕ್ಷಗಳ ವರಿಷ್ಠರು ಅವರ ಜೊತೆ ಒಡನಾಟ ಇಟ್ಟುಕೊಂಡು ಅವರೊಂದಿಗೆ ಸಲಹೆ ಪಡೆಯುತ್ತಾರೆ. ಅವರಿಗೆ ಬಂದಿರುವ ಅಂತರ್ ರಾಷ್ಟ್ರೀಯ ಪ್ರಶಸ್ತಿಗಳು, ಬಿರುದುಗಳು ಹಾಗೂ ಸನ್ಮಾನಗಳು ಅಸಂಖ್ಯ.
ತಮ್ಮ ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ ಡಾ. ರೊನಾಲ್ ಕೊಲಾಸೊ ಅವರು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ , ಯುರೋಪ್ ಹಾಗೂ ಹಲವು ಮಧ್ಯ ಪ್ರಾಚ್ಯ ದೇಶಗಳ ಪ್ರತಿಷ್ಠಿತ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಿಂದ 44ಕ್ಕೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
ಮದುವೆ ಸಂದರ್ಭ ಮಾಡಿದ ಪ್ರಮಾಣವೇ ಸ್ಫೂರ್ತಿ: ಡಾ. ರೊನಾಲ್ಡ್ ಕೊಲಾಸೊ

ಅದು 1983ರಲ್ಲಿ ಅವರ ಮದುವೆ ಸಂದರ್ಭ. ಧರ್ಮಗುರುಗಳ ಸಮ್ಮುಖದಲ್ಲಿ ದಾಂಪತ್ಯದ ಪ್ರಮಾಣ ಸ್ವೀಕರಿಸಬೇಕಿತ್ತು. ದಾಂಪತ್ಯದ ಪ್ರಮಾಣ ಸ್ವೀಕರಿಸುವ ಗಳಿಗೆ ಬಂದಾಗ, ಕೊಲಾಸೊ ದಂಪತಿ ಮಾಡಿದ್ದು ಸಮಾಜ ಸೇವೆಯ ಪ್ರಮಾಣ. ತಮ್ಮ ದುಡಿಮೆಯ, ತಮ್ಮ ಗಳಿಕೆಯ ಒಂದಷ್ಟು ಪ್ರಮಾಣವನ್ನು ಜನರಿಗಾಗಿ, ದೇಶಕ್ಕಾಗಿ, ವಿಶ್ವದ ಶಾಂತಿಗಾಗಿ ನೀಡುವ ಪ್ರಮಾಣವನ್ನು ರೊನಾಲ್ಡ್ ಕೊಲಾಸೊ ಹಾಗೂ ಜೀನ್ ಕೊಲಾಸೊ ದಂಪತಿ ಸ್ವೀಕರಿಸಿದ್ದನ್ನು ಡಾ.ರೊನಾಲ್ಡ್ ಕೊಲಾಸೊ ಸ್ಮರಿಸುತ್ತಾರೆ.
ಮಾನವೀಯತೆಯನ್ನು ಆಚರಿಸಲು ದೇವರು ಪ್ರತಿಯೊಬ್ಬರಿಗೂ ಒಂದೇ ಅವಕಾಶ ಕೊಡುತ್ತಾರೆ. ನನಗೂ ಆ ಒಂದು ಅವಕಾಶ ಬಂದಿತ್ತು. ನನಗೆ ಬಂದಿದ್ದ ಅವಕಾಶದಲ್ಲಿ ನಾನು ನನ್ನ ಕೈಯಲ್ಲಿ ಆದಷ್ಟು ಸಮಾಜಕ್ಕೆ ನೀಡಿದ್ದೇನೆ. ಏಕೆಂದರೆ ಇಂದು ನನ್ನ ಬಳಿ ಏನೇನು ಇದೆಯೋ ಅದೆಲ್ಲವನ್ನೂ ನೀಡಿದ್ದೇ ಸಮಾಜ.
ನಾವು ಪ್ರತಿ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಲೇ ಇರುತ್ತೇವೆ. ನಮ್ಮ ಬ್ಯಾಂಕ್ ಬ್ಯಾಲೆನ್ಸ್, ನಮ್ಮ ಬಳಿ ಇರುವ ಬಂಗಲೆ, ಕಾರುಗಳು ಇತರ ಆಸ್ತಿಗಳ ಮೂಲಕ ನಮ್ಮ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳುವುದರಲ್ಲಿ ನಾವು ತೃಪ್ತಿ ಪಡಬಾರದು. ಪ್ರತೀ ವರ್ಷ ನಾವು ಎಷ್ಟು ಹೃದಯಗಳನ್ನು ಮುಟ್ಟಿದ್ದೇವೆ, ಎಷ್ಟು ಹೃದಯಗಳ ಪ್ರೀತಿಯನ್ನು ಸಂಪಾದಿಸಿದ್ದೇವೆ ಎನ್ನುವುದರ ಆಧಾರದ ಮೇಲೆ ನಮ್ಮ ಸಾರ್ಥಕತೆಯನ್ನು ಅಳೆಯಬೇಕು. ನಾನು ಪ್ರತೀ ವರ್ಷ ಮಾಡುವುದು ಇದನ್ನೇ ಎನ್ನುತ್ತಾರೆ.
ಸರ್ಕಾರ್ ಕೊಲಾಸೊ…!

ಡಾ.ರೊನಾಲ್ಡ್ ಕೊಲಾಸೊ ಅವರು ಸರಕಾರ ಅಲ್ಲ. ಆದರೆ, ಇವರನ್ನು ‘ಸರ್ಕಾರ್’ ಎಂದು ಕರೆಯಲು ಯಾವುದೇ ಅಡ್ಡಿ ಇಲ್ಲ!. ಏಕೆಂದರೆ ಒಂದು ಸರಕಾರ ಒಂದೂವರೆ ಡಜನ್ ಮಂತ್ರಿಗಳನ್ನು, ಒಂದೂವರೆ ಲಕ್ಷದಷ್ಟು ಸಿಬ್ಬಂದಿಯನ್ನು ಇಟ್ಟುಕೊಂಡೂ ಮಾಡಲಾಗದಷ್ಟು ಅಥವಾ ಮಾಡಿದಷ್ಟು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಇವರೊಬ್ಬರೇ ಮಾಡಿದ್ದಾರೆ. ದೇಶ-ವಿದೇಶಗಳಲ್ಲಿನ ಅವರ ಸೇವೆಯನ್ನು ಬದಿಗಿಟ್ಟು ಕೇವಲ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಮಾಡಿರುವ ಸೇವೆ, ಕೊಡುಗೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದೇ ಪುಸ್ತಕ ಆಗುವಷ್ಟಿದೆ.
ರಾಜಧಾನಿ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳ ಕಟ್ಟಡಗಳಿಂದ ಹಿಡಿದು ಕರಾವಳಿಯ ಕಂಬಳದವರೆಗೂ ಡಾ.ಕೊಲಾಸೊ ತನ್ನದೇ ಛಾಪು ಮೂಡಿಸಿದ್ದಾರೆ. ಶಿಕ್ಷಣ, ಆರೋಗ್ಯ, ಕಲೆ-ಸಂಸ್ಕೃತಿ, ಬಡವರಿಗೆ ಮನೆಗಳನ್ನು ಕಟ್ಟಿಸುವುದು, ಪೊಲೀಸ್-ನ್ಯಾಯಾಂಗ ಇಲಾಖೆಗಳಿಗೆ ಕಟ್ಟಡ ಕಚೇರಿಗಳ ನಿರ್ಮಾಣ, ಕಂದಾಯ ಇಲಾಖೆ, ಪಂಚಾಯತ್ರಾಜ್ ಇಲಾಖೆ, ಲೋಕೋಪಯೋಗಿ, ತೋಟಗಾರಿಕೆ, ಸಮುದಾಯ ಭವನಗಳು, ಕ್ರೀಡಾ ಕ್ಷೇತ್ರದ ಮೂಲಭೂತ ಸೌಕರ್ಯಗಳು, ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಪ್ರಕೃತಿ ವಿಕೋಪಗಳ ಸಂದರ್ಭ ನೆರವು, ಸಾಮೂಹಿಕ ವಿವಾಹಗಳು, ವಿಶೇಷ ಚೇತನ ಮಕ್ಕಳಿಗೆ ಸವಲತ್ತುಗಳು, ಸಾರ್ವಜನಿಕ ಬಳಕೆಯ ಮೂಲಭೂತ ಸೌಕರ್ಯಗಳು, ಗುಡಿ-ಚರ್ಚ್-ಮಸೀದಿಗಳ ನಿರ್ಮಾಣ… ಹೀಗೆ ಒಂದು ಸರಕಾರ ತನ್ನ ವ್ಯಾಪ್ತಿಯಲ್ಲಿ ಏನೇನೆಲ್ಲಾ ಜನರಿಗೆ ಮಾಡಬಹುದೋ ಅದೆಲ್ಲವನ್ನೂ ಸ್ವತಃ ಅತ್ಯಂತ ವ್ಯವಸ್ಥಿತವಾಗಿ ಡಾ.ರೊನಾಲ್ಡ್ ಕೊಲಾಸೊ ಅವರೇ ಮಾಡಿದ್ದಾರೆ.
ಡಾ.ರೊನಾಲ್ಡ್ ಕೊಲಾಸೊ ಸೇವಾ ಚಟುವಟಿಕೆಗಳಲ್ಲಿ ಹಲವು ಪ್ರಥಮಗಳ ದೊಡ್ಡ ಪಟ್ಟಿ

1. ಪೊಲೀಸ್ ಮ್ಯೂಸಿಯಂ ಕಟ್ಟಡದ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಂಚಾರಕ್ಕಾಗಿ 2 ಆಧುನಿಕ ಪೊಲೀಸ್ ಠಾಣೆಗಳ ನಿರ್ಮಾಣ
2. ಎರಡು ಹಿಂದೂ ದೇವಾಲಯಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. 35ಕ್ಕೂ ಹೆಚ್ಚು ಐತಿಹಾಸಿಕ ದೇವಾಲಯಗಳಿಗೆ ಆರ್ಥಿಕ ಸಹಾಯ ನೀಡಿದ್ದಾರೆ. ಬೆಂಗಳೂರಿನ ಬೋವಿಪಾಳ್ಯ- ಅಗ್ರಹಾರದಲ್ಲಿ ಮುನೀಶ್ವರ ದೇವಸ್ಥಾನವನ್ನು ನಿರ್ಮಿಸಲು ಪ್ರಮುಖ ದಾನಿಯಾಗಿದ್ದಾರೆ. 700 ವರ್ಷಗಳ ಹಿಂದಿನ ಸಿಂಗಾರಹಳ್ಳಿ-ಬೆಂಗಳೂರಿನಲ್ಲಿನ ಮದ್ದೂರಮ್ಮ ದೇವಸ್ಥಾನ ಕಟ್ಟಲು ಕೊಡುಗೆ ನೀಡಿದ್ದಾರೆ. ಮಂಗಳೂರಿನ ಶ್ರೀಸೂರ್ಯನಾರಾಯಣ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಕೊಡುಗೆ ನೀಡಿದ್ದಾರೆ. ರಾಜ್ಯದ ಬೇರೆ ಬೇರೆ 35 ದೇವಸ್ಥಾನಗಳಿಗೆ, ಮಸೀದಿ, ಚರ್ಚ್ ಕಟ್ಟಡ ನಿರ್ಮಾಣಕ್ಕೆ ಮತ್ತು ಮೂಲಭೂತ ಸೌಕರ್ಯಕ್ಕೆ ದೇಣಿಗೆ ನೀಡಿದ್ದಾರೆ.
3. 60ಕ್ಕೂ ಹೆಚ್ಚು ಚರ್ಚುಗಳಿಗೆ ಗಣನೀಯ ಹಣಕಾಸಿನ ನೆರವಿನ ಜೊತೆಗೆ ಒಂದು ಚರ್ಚ್ ಅನ್ನು ಸಂಪೂರ್ಣವಾಗಿ ನಿರ್ಮಿಸಿ ಕೊಟ್ಟಿದ್ದಾರೆ.
4. ಬೆಂಗಳೂರಿನ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಿನಿ ವಿಧಾನ ಸೌಧದ ಬಳಿ ಕಂದಾಯ ಇಲಾಖೆಗೆ ಇಡೀ ತಾಲೂಕು ಕಚೇರಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ.
5. ಆಧುನಿಕ ವಕೀಲರ ಭವನವನ್ನು ನಿರ್ಮಿಸಿ ಕೊಟ್ಟಿದ್ದಾರೆ.
6. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸದಹಳ್ಳಿಯಲ್ಲಿ ಮಳೆ ನೀರು ಹರಿಯುವ ಬೃಹತ್ ಚರಂಡಿಗಳೊಂದಿಗೆ 2.5 ಕಿಲೋಮೀಟರ್ಗಳ ಆಧುನಿಕ ಜೋಡಿ ರಸ್ತೆಯನ್ನು ನಿರ್ಮಿಸಿ ಸರ್ಕಾರಕ್ಕೆ ನೀಡಿದ್ದಾರೆ
7. ವಿವಿಧ ಜಿಲ್ಲೆಗಳಲ್ಲಿ ಸುಮಾರು 70 ಶಾಲೆಗಳಿಗೆ ಗಣನೀಯ ಆರ್ಥಿಕ ಸಹಾಯದ ಜೊತೆಗೆ ಅಂತರ್ ರಾಷ್ಟ್ರೀಯ ಗುಣಮಟ್ಟದ ಸರಕಾರಿ ಪ್ರೌಢಶಾಲೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ.
8. ವಿವಿಧ ಸಾರ್ವಜನಿಕ ಮತ್ತು ಉಚಿತ ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಆರ್ಥಿಕ ಸಹಾಯದ ಜೊತೆಗೆ 65 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ.
9. ರೈತರಿಗೆ, ಬಡವರಿಗೆ ಮನೆಗಳ ನಿರ್ಮಾಣ ಮಾಡಿದ್ದಾರೆ.
10. ತೋಟಗಾರಿಕೆ ಇಲಾಖೆಗೆ ಆಧುನಿಕ ಹಾಪ್ಕಾಮ್ಸ್ ಮಳಿಗೆಗಳ ನಿರ್ಮಾಣ ಮಾಡಿಕೊಟ್ಟಿದ್ದಾರೆ.
11. ಸಮುದಾಯ ಭವನಗಳ ನಿರ್ಮಾಣ, ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಮಾಡಿದ್ದಾರೆ
12. ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಿದ್ದಾರೆ.
13. ಕಲೆ ಮತ್ತು ಸಂಸ್ಕೃತಿ, ಪಂಚಾಯತ್ ರಾಜ್ ಇಲಾಖೆ, ಪಿಡಬ್ಲ್ಯುಡಿ ಇಲಾಖೆ, ಕ್ರೀಡಾ ಇಲಾಖೆಗಳಿಗೆ ಸೇರಿದಂತೆ ಇತರ ವಿವಿಧ ಸರ್ಕಾರಿ-ಮೂಲ ಸೌಕರ್ಯಗಳಿಗೆ ಸಹಾಯ ಮಾಡಿದ್ದಾರೆ.
14. ನಿರ್ಗತಿಕರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ಸೌಲಭ್ಯಗಳನ್ನು ಒದಗಿಸಿದ್ದಾರೆ.
15. ಸ್ಮಶಾನಗಳಿಗೆ ಸೌಲಭ್ಯಗಳನ್ನು ಒದಗಿಸಿದ್ದಾರೆ.
16. ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ವಿವಿಧ ಆರೋಗ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಸಂಸ್ಥೆಗಳಿಗೆ ಮೂಲಭೂತ ದೇಣಿಗೆ ನೀಡಿದ್ದಾರೆ.
17. ಮಂಗಳೂರಿನ ಕೊಂಕಣಿ ಕಲಾ ಕೇಂದ್ರ ಕಟ್ಟಡ ನಿರ್ಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಮಾಂಡ್ ಸೊಬಾಣ್ ವಿಶ್ವ ಕೊಂಕಣಿ ಕೇಂದ್ರಗಳಿಗೆ ಮತ್ತು ಕೊಂಕಣಿ ಕಲಾವಿದರಿಗೆ, ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಾಯ ಮಾಡಿದ್ದಾರೆ.
18. ವಿವಿಧ ಪ್ರಾಕೃತಿಕ ವಿಕೋಪ ನಡೆದಾಗ ಕರ್ನಾಟಕ ಸರಕಾರಕ್ಕೆ ಪರಿಹಾರ ನಿಧಿ ನೀಡಿದ್ದಲ್ಲದೆ ಕೊರೋನ ಸಂದರ್ಭದಲ್ಲಿ ೧೮ ಸಾವಿರ ಕುಟುಂಬಗಳಿಗೆ ಅಗತ್ಯ ೨೦ ಸಾವಿರ ದಿನಸಿ ವಸ್ತುಗಳ ಬ್ಯಾಗುಗಳನ್ನು ವಿತರಿಸಿದ್ದಾರೆ.
19. ಮಂಗಳೂರಿನ ಬೋಳಾರದ ಮಂಗಳಾದೇವಿ ದೇವಸ್ಥಾನದ ಬಳಿ ಸುಸಜ್ಜಿತ ರಸ್ತೆಯ ನಿರ್ಮಾಣದಲ್ಲಿ ಕೊಡುಗೆ.
20. ಬೆಂಗಳೂರಿನ ಕೊಂಕಣಿ ಭವನ ನಿರ್ಮಾಣದಲ್ಲಿ ಕೊಡುಗೆ ನೀಡಿದ್ದಾರೆ.
21. ವಿವಿಧ ಸಂಘಟನೆಗಳ ಸೇವಾ ಕಾರ್ಯಕ್ರಮ ಸೇರಿದಂತೆ ಸಮಾಜದ ಎಲ್ಲಾ ವರ್ಗ, ಜಾತಿ, ಸಮುದಾಯದ ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
22. ಬಹರೈನ್ ನಲ್ಲಿ ನಿರ್ಮಾಣವಾಗಿರುವ ‘ಕನ್ನಡ ಭವನ’ವು ವಿದೇಶದಲ್ಲಿರುವ ಮೊತ್ತ ಮೊದಲ ಕನ್ನಡ ಭವನವಾಗಿದ್ದು, ಇದಕ್ಕಾಗಿ ದೊಡ್ಡ ಮೊತ್ತದ ದೇಣಿಗೆ ನೀಡಿ ಇದರ ಸ್ಥಾಪನೆಗೆ ಪ್ರಮುಖ ಕಾರಣಕರ್ತರಾಗಿದ್ದಾರೆ.
ರೊನಾಲ್ಡ್ ಕೊಲಾಸೊ ಅವರನ್ನು ಅರಸಿ ಬಂದ ಪ್ರಮುಖ ಗೌರವ, ಸನ್ಮಾನ, ಬಿರುದು, ಪ್ರಶಸ್ತಿಗಳು:
*ಪರೋಪಕಾರಕ್ಕಾಗಿ 2017ನೇ ವಾರ್ಷಿಕ ಟೈಮ್ಸ್ ನೌ ಗ್ಲೋಬಲ್ ಇಂಡಿಯನ್ ಪ್ರಶಸ್ತಿ.
*ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 2017ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.
*ಮಂಗಳೂರು ವಿಶ್ವವಿದ್ಯಾನಿಲಯದ 42ನೆ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ.
* ಬಹರೈನ್ ನಲ್ಲಿ 2015ರಲ್ಲಿ ಅಂದಿನ ರಾಷ್ಟ್ರಪತಿ ದಿ. ಎ.ಪಿ.ಜೆ. ಅಬ್ದುಲ್ ಕಲಾಂರಿಂದ ‘ಇಂಡಿಯನ್ ಕ್ಲಬ್ ಸೆಂಟಿನರಿ ಅವಾರ್ಡ್’.
*2018ರ ಅಕ್ಟೋಬರ್ 15ರಂದು ಟೊರಾಂಟೋದ ಸಂಸತ್ ‘ಭವನದಲ್ಲಿ ಕೆನಡಾ ಸರಕಾರದ ಪರವಾಗಿ ಸನ್ಮಾನ.
*2018ರ ಅಕ್ಟೋಬರ್ 9ರಂದು ಮಿಸ್ಸಿಸುವಾಗದಲ್ಲಿ ‘ಕೆನರಾ ವರ್ಲ್ಡ್ ವಿಶನರಿ ಅವಾರ್ಡ್’.
*ಬೆಂಗಳೂರಿನ ಪ್ರೇಝರ್ ಟೌನ್ ನಲ್ಲಿ ಅತ್ಯಾಧುನಿಕ ಪೊಲೀಸ್ ಠಾಣೆಯ ನಿರ್ಮಾಣಕ್ಕಾಗಿ 2004ರಲ್ಲಿ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಧರಂಸಿಂಗ್ ರಿಂದ ಸನ್ಮಾನ.
*2010ರಲ್ಲಿ ಮಂಗಳೂರಿನಲ್ಲಿ ನಡೆದ ವಿಶ್ವ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿಯವರಿಂದ ‘ವಿಶ್ವ ಕೊಂಕಣಿ ಸಮಾಜ ರತ್ನ’ಬಿರುದು.
*ಲಂಡನ್ ನಲ್ಲಿ 2017ರ ಅಕ್ಟೋಬರ್ 22ರಂದು ನಡೆದ ಕಾರ್ಯಕ್ರಮದಲ್ಲಿ ಲಂಡನ್ ನ ಕೊಂಕಣಿ ಸಾಹಿತ್ಯ ಸಂಘಟನೆಯಿಂದ ‘ಕೊಂಕಣಿ ಸಮುದಾಯದ ಮುತ್ತು’ ಗೌರವ.
*ಭಾರತದಲ್ಲಿ ಮಾನವೀಯ ಸೇವೆಗಳಿಗಾಗಿ ದುಬೈನಲ್ಲಿ 2013ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಎಇಗಾಗಿನ ‘ಭಾರತೀಯ ರಾಯಭಾರಿಯಿಂದ ‘ಕೊಂಕಣ್ ರತ್ನ ಪ್ರಶಸ್ತಿ’.
*ಕೊಡುಗೈ ದಾನಿಯಾಗಿ ಸಮಾಜಕ್ಕೆ ನೀಡಿದ ದಾನ ಚಟುವಟಿಕೆಗಳಿಗಾಗಿ 2014ರಲ್ಲಿ ಕುವೈತ್ ನ ಕೆಸಿಡಬ್ಲ್ಯುಎ ಸಂಘಟನೆಯಿಂದ ‘ಕೊಂಕಣಿ ಕುವರ್’ಬಿರುದು.
* ಮಸ್ಕತ್, ಓಮನ್ ಎಂಸಿಸಿಪಿಯಿಂದ 2015ರಲ್ಲಿ ಪ್ರತಿಷ್ಟಿತ ಗೌರವದೊಂದಿಗೆ ‘ಕೊಂಕಣಿ ರಾಯ್ ಸಾಹೇಬ್’ ಬಿರುದು.
* 2015ರಲ್ಲಿ ದೋಹಾ, ಕತಾರ್ ನ ತುಳು ಒಕ್ಕೂಟ (ಟಿಕೆಕ್ಯೂ)ನಿಂದ ‘ತುಳುನಾಡ ಬೊಲ್ಪು’ಬಿರುದು.
*2017ರಲ್ಲಿ ದೋಹಾ ಖತರ್ ನ ಎಂಸಿಸಿಯಿಂದ ‘ದಯಾ ಸಮ್ರಾಟ್’ಬಿರುದು.
*ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ವೀರ ಸಿಂಹಾಸನ ಮಹಾಸಂಸ್ಥಾನ ಪೀಠದ ‘ರ್ಮಗುರು ಶ್ರೀ ಜಗದ್ಗುರು ರಂಭಾಪುರಿ ಸ್ವಾಮೀಜಿಯಿಂದ 2009ರಲ್ಲಿ ‘ಧರ್ಮ ಪ್ರಬೋಧನ ಚತುರ’ಗೌರವ.
*2004ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯಿಂದ ‘ಕೊಂಕಣಿ ಸಮಾಜ ಸೇವಾ ಪ್ರಶಸ್ತಿ’.
* ಉದ್ಯಮಿಗಳು ಮತ್ತು ವೃತ್ತಿಪರರ ವೇದಿಕೆಯಾದ ರಚನಾ ಮಂಗಳೂರು ವತಿಯಿಂದ ‘2006ನೇ ಸಾಲಿನ ಎನ್ಆರ್ಐ ಉದ್ಯಮಿ’ಪ್ರಶಸ್ತಿ
*2006ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯಿಂದ ಚಿಕ್ಕಮಗಳೂರಿನ ಬಿರೂರಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಮಾಜ ಸೇವೆಗಾಗಿ ವಿಶೇಷ ಗೌರವ.
*2009ರಲ್ಲಿ ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ನಿಂದ ಗೌರವ.
*2011ರಲ್ಲಿ ಅಂದಿನ ಕೇಂದ್ರದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆಯವರಿಂದ ‘ಸಾಮಾಜಿಕ ಆತ್ಮಸಾಕ್ಷಿಯ ಪ್ರಶಸ್ತಿ’.
*ಸಮಾಜ ಸೇವೆಗಾಗಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ವತಿಯಿಂದ ಬಿಷಪ್ ರಿಂದ ಸನ್ಮಾನ.
*2004ರಲ್ಲಿ 49ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಸಾಂಸ್ಕೃತಿಕ ಅಕಾಡಮಿಯಿಂದ ಪ್ರಶಸ್ತಿ.
*ಶಿವಮೊಗ್ಗ ಕ್ರೈಸ್ತ ಧರ್ಮಪ್ರಾಂತದಿಂದ 2018ರಲ್ಲಿ ‘ಚೈತನ್ಯ ಶ್ರೀ ಪ್ರಶಸ್ತಿ’
* 2020ರ ಫೆ.2ರಂದು ಮೂರು ಧರ್ಮ ಪ್ರಾಂತಗಳ ಬಿಷಪರಿಂದ ‘ವಿಶ್ವ ಭೂಷಣ’ ಬಿರುದು.
*ಥೈಲ್ಯಾಂಡ್ ನಲ್ಲಿ 2020ರಲ್ಲಿ ಏಷ್ಯಾವನ್ ಮ್ಯಾಗಝೀನ್ ನಿಂದ ‘ಭಾರತೀಯ ಮಹಾನತಂ ವಿಕಾಸ್ ಪುರಸ್ಕಾರ’
* ವಿಶ್ವದ 51ನೇ ಶ್ರೇಯಾಂಕದ ಯುರೋಪಿಯನ್ ಇಂಟರ್ ನ್ಯಾಶನಲ್ ಯುನಿವರ್ಸಿಟಿ ಆಫ್ ಪ್ಯಾರಿಸ್, ಫ್ರಾನ್ಸ್ ನಿಂದ 2024ರಲ್ಲಿ ಗೌರವ
*2020ರಲ್ಲಿ ಪರೋಪಕಾರ, ಜಾಗತಿಕ ನಾಯಕತ್ವ ಮತ್ತು ನಿರ್ವಹಣೆಯಲ್ಲಿ ವೃತ್ತಿಪರ ಡಾಕ್ಟರೇಟ್.
*ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್ ನಲ್ಲಿ ಘೋಷಿಸಿದಂತೆ 30 ವರ್ಷಗಳಿಂದ ಕರ್ನಾಟಕ ಸರಕಾರಕ್ಕೆ ಮೂಲಸೌಕರ್ಯಗಳಲ್ಲಿ ಸಹಕಾರ ಸೇರಿದಂತೆ ಸಾಮಾಜಿಕ ದತ್ತಿ ಕಾರ್ಯಗಳಿಗಾಗಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಕೊಲಾಸೋ ಅವರ ಸೇವಾ ಕಾರ್ಯವನ್ನು ನಮೂದಿಸಲಾಗಿದೆ.
* ಅಕ್ಟೋಬರ್ 2023ರಲ್ಲಿ ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಲಾರ್ಡ್ಸ್ ನಲ್ಲಿನ ಇನ್ ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ನಿಂದ ಭಾರತದ ಮಾಜಿ ಮುಖ್ಯ ನ್ಯಾಯಾಧೀಶರಿಂದ ಸಹಿ ಮಾಡಿದ ಪ್ರತಿಷ್ಠಿತ ಫೆಲೋಶಿಪ್ ಪ್ರಶಸ್ತಿ.
* 2015ರ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯನ್ ಪ್ರಧಾನ ಮಂತ್ರಿಯವರ ‘ಮೆರಿಟೋರಿಯಸ್ ಸರ್ವೀಸ್ ಅವಾರ್ಡ್’. ಈ ಪ್ರಶಸ್ತಿಗೆ 80 ದೇಶಗಳಿಂದ ಒಬ್ಬ ವ್ಯಕ್ತಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ
* 2017 -2018ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡಾ.ಕೊಲಾಸೊ ಅವರನ್ನು ಎರಡು ಬಾರಿ ಉಪಹಾರ ಸಭೆಗೆ ಆಹ್ವಾನಿಸಿದ್ದಾರೆ.
* ಫೆಬ್ರವರಿ 2023 ರಲ್ಲಿ ಥೈಲ್ಯಾಂಡ್ ನಲ್ಲಿ ಮೈಕ್ರೋಸಾಫ್ಟ್ ಸತ್ಯ ನಾದೆಲ್ಲಾ, ನೊಬೆಲ್ ಪುರಸ್ಕೃತ ಅಮರ್ಥ್ಯ ಸೇನ್, ಪೆಪ್ಸಿಕೊದ ಇಂದ್ರಾ ನೂಯಿ ಅವರ ಬಳಿಕ ASIA ONE ಗ್ಲೋಬಲ್ ಇಂಡಿಯನ್ ಆಫ್ ದಿ ಇಯರ್ 2022- 2023 ಪ್ರಶಸ್ತಿ.
* ದುಬೈನಲ್ಲಿ ‘ಕೊಂಕಣ ರತನ್ 2013’ ಪ್ರಶಸ್ತಿ.
* 3 ಡಯಾಸಿಸ್ ಬಿಷಪ್ ಗಳಿಂದ ವಿಶ್ವಭೂಷಣ 2020 ಬಿರುದು.
* ಪೋಪ್ ಫ್ರಾನ್ಸಿಸ್ ಅವರಿಂದ ಪವಿತ್ರ ಅಪೋಸ್ಟೋಲಿಕ್ ಆಶೀರ್ವಾದ ಪ್ರಮಾಣಪತ್ರ.
ಆಸ್ಟ್ರೇಲಿಯಾ ಪ್ರಧಾನಿ ಕಚೇರಿಯಿಂದ ಪ್ರಶಸ್ತಿ

ಡಾ.ರೊನಾಲ್ಡ್ ಕೊಲಾಸೊ ಅವರ ದತ್ತಿ ಹಾಗೂ ಲೋಕೋಪಯೋಗಿ ಚಟುವಟಿಕೆಗಳನ್ನು ಗುರುತಿಸಿ ಅವರಿಗೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಇದರಲ್ಲಿ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಯ ಕಚೇರಿಯಿಂದ ಸಿಎಸ್ಐಎ ಮೂಲಕ ನೀಡಲಾದ ‘2015 ಇಂಟರ್ನ್ಯಾಷನಲ್ ರೆಕಗ್ನಿಷನ್ ಅವಾರ್ಡ್ ಫಾರ್ ಲೀಡರ್ ಶಿಪ್ ಇನ್ ಸರ್ವಿಸ್ ಎಕ್ಸಲೆನ್ಸ್’ ಕೂಡಾ ಸೇರಿದೆ. ವಿಶ್ವದ 80 ರಾಷ್ಟ್ರಗಳ ಪೈಕಿ ಈ ಪ್ರಶಸ್ತಿಗಾಗಿ ಆಯ್ಕೆಯಾದ ಏಕೈಕ ವ್ಯಕ್ತಿ ರೊನಾಲ್ಡ್ ಕೊಲಾಸೊ ‘ಭಾರತೀಯರು ಎನ್ನುವುದು ಹೆಮ್ಮೆಯ ವಿಚಾರ.
ವಾಷಿಂಗ್ಟನ್ ನಲ್ಲಿ 2017 ಮತ್ತು 2018ರಲ್ಲಿ ಅಂದಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಉಪಾಹಾರ ಸಭೆಯಲ್ಲಿ ಭಾಗವಹಿಸುವ ಅವಕಾಶ ಪಡೆದ ವಿಶ್ವದ ಕೆಲವೇ ಕೆಲವು ಪ್ರತಿನಿಧಿಗಳಲ್ಲಿ ಕೊಲಾಸೊ ಅವರು ಒಬ್ಬರು.
ಪ್ರತಿಷ್ಠಿತ ಡಿಸ್ಟಿಂಗ್ವಿಶ್ಡ್ ಫೆಲೋಶಿಪ್ 2023 ಅವಾರ್ಡ್

ಡಾ. ರೊನಾಲ್ಡ್ ಕೊಲಾಸೊ ಅವರಿಗೆ 2023ರಲ್ಲಿ ಇನ್ ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್ (IOD) ವತಿಯಿಂದ ‘ಡಿಸ್ಟಿಂಗ್ವಿಶ್ಡ್ ಫೆಲೋಶಿಪ್ 2023’ ಅವಾರ್ಡ್ ನೀಡ ಗೌರವಿಸಲಾಗಿದೆ.
ಬ್ರಿಟಿಷ್ ಸಂಸತ್ತಿನ ಪ್ರತಿಷ್ಠಿತ ಹೌಸ್ ಆಫ್ ಲಾರ್ಡ್ಸ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕೊಲಾಸೊ ಅವರ ಅಸಾಧಾರಣ ಸಮಾಜ ಸೇವಾ ಚಟುವಟಿಕೆಗಳನ್ನು ಗುರುತಿಸಿ ಈ ಗೌರವ ನೀಡಲಾಯಿತು. ಜಗತ್ತಿನ ವಿವಿಧೆಡೆಗಳಿಂದ ಬಂದಿದ್ದ ಗಣ್ಯರು, ಕಾರ್ಪೊರೇಟ್ ದಿಗ್ಗಜರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಲಂಡನ್ ನಗರದ ಲಾರ್ಡ್ ಮೇಯರ್, ಮಿನಿಸ್ಟರ್ ಆಫ್ ಲಂಡನ್ ಹಾಗು ಪಾರ್ಲಿಮೆಂಟರಿ ಅಂಡರ್ ಸೆಕ್ರೆಟರಿ ಪೌಲ್ ಸ್ಕಲ್ಲಿ, ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ಇಂಡಿಯಾದ ಅಧ್ಯಕ್ಷ ಲೆ. ಜ. ಸುರಿಂದರ್ ನಾಥ್, ಕಾನ್ಫೆಡರೇಷನ್ ಆಫ್ ಬ್ರಿಟಿಷ್ ಇಂಡಸ್ಟ್ರಿನ ಉಪಾಧ್ಯಕ್ಷ ಲಾರ್ಡ್ ಕರಣ್ ಬಿಲ್ಲಿಮೋರಿಯ, ಹೌಸ್ ಆಫ್ ಲಾರ್ಡ್ಸ್ ನ ಮಾಜಿ ಡೆಪ್ಯುಟಿ ಸ್ಪೀಕರ್ ಲಾರ್ಡ್ ಸ್ವರಾಜ್ ಪಾಲ್, ಸದ್ಗುರು ಶ್ರೀ ಮಧುಸೂಧನ್ ಸಾಯಿ, ಹಿಂದೂಜಾ ಗ್ರೂಪ್ ನ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ, ಯುಕೆ ನಾಮಿನೇಷನ್ ಹಾಗು ಗವರ್ನೆನ್ಸ್ ಕಮಿಟಿಯ ಅಧ್ಯಕ್ಷೆ ಶ್ರುತಿ ವಡೇರ, ಸಿಂಗಾಪುರದ ಟಿ ಐ ಡಬ್ಲ್ಯೂ ಕ್ಯಾಪಿಟಲ್ ನ ಗ್ಲೋಬಲ್ ಸಿ ಈ ಓ ಹಾಗು ಮ್ಯಾನೇಜಿಂಗ್ ಪಾರ್ಟ್ ನರ್ ಮೋಹಿತ್ ರಲ್ಹಾನ್, ಅಬುಧಾಬಿ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಹಾಗು ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ಯುಎಇ ಅಧ್ಯಕ್ಷ ಡಾ. ತಾಯಿರ್ ಕಮಾಲಿ, ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ನವೀನ್ ಬಿ ಚಾವ್ಲ, ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ಇಂಡಿಯಾದ ಮಹಾ ನಿರ್ದೇಶಕ ಅಶೋಕ್ ಕಪೂರ್, ಭಾರತದ ಮಾಜಿ ಆಡಿಟರ್ ಜನರಲ್ ಶ್ರೀನಿವಾಸನ್ ಸತ್ಯಮೂರ್ತಿ , ರಾಜ್ಯಸಭೆಯ ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ಮತ್ತಿತರ ಗಣ್ಯರು ಈ ವಿಶೇಷ ಸಮಾರಂಭದಲ್ಲಿ ಉಪಸ್ಥಿತರಿದ್ದು, ಡಾ. ಕೊಲಾಸೊರನ್ನು ಅಭಿನಂದಿಸಿದರು.

೨೦ಕ್ಕೂ ಹೆಚ್ಚು ದೇಶಗಳ ಗಣ್ಯರು, ಪ್ರತಿಷ್ಠಿತ ಕಂಪೆನಿಗಳ ನಿರ್ದೇಶಕರು, ಸಿಇಒಗಳು, ಹಿರಿಯ ನಿವೃತ್ತ ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಡಾ. ಕೊಲಾಸೊ ಅವರು ಕರ್ನಾಟಕ ರಾಜ್ಯದಾದ್ಯಂತ ಕಳೆದ ಮೂರು ದಶಕಗಳಲ್ಲಿ ಮಾಡಿರುವ ಹಲವಾರು ಸಮಾಜ ಸೇವಾ ಚಟುವಟಿಕೆಗಳನ್ನು ಗುರುತಿಸಿ ಈ ಹಿಂದೆ ಇಂಡೋ ಯುಕೆ ಸಮ್ಮಿಟ್ 2022ರ ಸಂದರ್ಭ ಲಂಡನ್ ನ ಹೌಸ್ ಆಫ್ ಲಾರ್ಡ್ಸ್ ನಲ್ಲಿ ಅವರಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನೀಡಿ ಗೌರವಿಸಲಾಗಿತ್ತು.
ಲಂಡನ್ ನಗರದ ಲಾರ್ಡ್ ಮೇಯರ್, ಮಿನಿಸ್ಟರ್ ಆಫ್ ಲಂಡನ್ ಹಾಗು ಪಾರ್ಲಿಮೆಂಟರಿ ಅಂಡರ್ ಸೆಕ್ರೆಟರಿ ಪೌಲ್ ಸ್ಕಲ್ಲಿ, ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ಇಂಡಿಯಾದ ಅಧ್ಯಕ್ಷ ಲೆ. ಜ. ಸುರಿಂದರ್ ನಾಥ್ ಅವರು ಡಿಸ್ಟಿಂಗ್ವಿಶ್ಡ್ ಫೆಲೋಶಿಪ್ ೨೦೨೩ ಅನ್ನು ಡಾ. ರೊನಾಲ್ಡ್ ಕೊಲಾಸೊ ಅವರಿಗೆ ಪ್ರದಾನ ಮಾಡಿದರು. ಇನ್ಸ್ ಟಿಟ್ಯೂಟ್ ಆಫ್ ಡೈರೆಕ್ಟರ್ಸ್ ನ್ ಅಧ್ಯಕ್ಷ ಹಾಗು ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಎಂ ಎನ್ ವೆಂಕಟಾಚಲಯ್ಯ ಪ್ರಶಸ್ತಿಯ ಪ್ರಮಾಣಪತ್ರಕ್ಕೆ ಸಹಿ ಹಾಕಿದರು.
ಡಾ. ಕೊಲಾಸೊ ಅವರು ಈ ಹಿಂದೆ ಏಷ್ಯಾ ಒನ್ ಗ್ಲೋಬಲ್ ಇಂಡಿಯನ್ ಆಫ್ ದಿ ಇಯರ್ 2022 ಪ್ರಶಸ್ತಿಗೂ ಪಾತ್ರರಾಗಿದ್ದರು. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್, ಪೆಪ್ಸಿ ಸಿಇಒ ಇಂದಿರಾ ನೂಯಿ , ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಮತ್ತಿತರ ಗಣ್ಯರು ಈ ಹಿಂದೆ ಆ ಪ್ರಶಸ್ತಿಯನ್ನು ಪಡೆದಿದ್ದರು. ಟೈಮ್ಸ್ ನೌ ಚಾನಲ್ ಹಾಗು ಐಸಿಐಸಿಐ ಬ್ಯಾಂಕ್ ಜಂಟಿಯಾಗಿ ಡಾ. ಕೊಲಾಸೊ ಅವರಿಗೆ ಗ್ಲೋಬರ್ ಎನ್ನಾರೈ ಆಫ್ ದಿ ಇಯರ್ 2017 ಪ್ರಶಸ್ತಿ ನೀಡಿ ಗೌರವಿಸಿದ್ದರು.

ಹೌಸ್ ಆಫ್ ಕಾಮನ್ಸ್ ನಲ್ಲಿ ಸನ್ಮಾನ
ಮಾನವೀಯ ಸ್ಪಂದನೆಗಾಗಿ, ಅಸಾಧಾರಣ ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾದ ಮೊದಲ ವ್ಯಕ್ತಿ ಡಾ. ರೊನಾಲ್ಡ್ ಕೊಲಾಸೊ. ವಿಶ್ವಾದ್ಯಂತ ಮಾನವೀಯ ಸಾಧನೆಗಳಿಗಾಗಿ ಅದರಲ್ಲೂ ವಿಶೇಷವಾಗಿ ಕನ್ನಡ ನಾಡಿಗಾಗಿ ನೀಡಿದ ಅನನ್ಯ ಕೊಡುಗೆಗಳಿಗಾಗಿ ಲಂಡನ್ ನ ಪ್ರತಿಷ್ಠಿತ ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್ ನಲ್ಲಿ ಸನ್ಮಾನಿತರಾಗಿ ಕನ್ನಡದ ಹೆಮ್ಮೆಯನ್ನು ಹೆಚ್ಚಿಸಿದ, ಭಾರತದ ಘನತೆಯನ್ನು ಎತ್ತಿ ಹಿಡಿದವರು ಡಾ.ರೊನಾಲ್ಡ್ ಕೊಲಾಸೊ.
***
ದುರ್ಬಲರ, ಬಡವರ ಸೇವೆಗೆ ಬದುಕನ್ನು ಮುಡಿಪಾಗಿಟ್ಟಿರುವ ಡಾ.ಕೊಲಾಸೊ
ಡಾ.ರೊನಾಲ್ಡ್ ಕೊಲಾಸೊ ತುಳುವ, ಕನ್ನಡಿಗ, ಭಾರತೀಯ ಎನ್ನಲು ನಮಗೆ ತುಂಬಾ ಅಭಿಮಾನವಿದೆ, ಸಂತೋಷವಿದೆ. ದುಬೈಯನ್ನು ಕರ್ಮ ಕ್ಷೇತ್ರವನ್ನಾಗಿಸಿಕೊಂಡಿದ್ದರೂ ವಿಶ್ವದೆಲ್ಲೆಡೆ ತನ್ನ ಸೇವೆಯನ್ನು ವಿಸ್ತರಿಸಿದ್ದಾರೆ. ಸಂಪತ್ತನ್ನು ಎಂದೂ ಕೂಡಿಡದೆ ಸಮಾಜದ ದುರ್ಬಲರ, ಆರ್ಥಿಕವಾಗಿ ಹಿಂದುಳಿದವರ ಸೇವೆಗೆ ತನ್ನ ಬದುಕನ್ನು ಮುಡಿಪಾಗಿಟ್ಟುಕೊಂಡಿದ್ದಾರೆ. ನೂರಾರು ಪ್ರಶಸ್ತಿಗಳನ್ನು ಗಳಿಸಿದ್ದರೂ ಅತ್ಯಂತ ಸರಳವಾಗಿ ಜೀವಿಸಿ ಎಲ್ಲರಿಗೂ ಮಾದರಿಯಾಗಿದ್ದರು. ಜನಸೇವೆಯ ಮೂಲಕ ದೇವರನ್ನು ತಲುಪುವ ಪ್ರಯತ್ನ ಮಾಡಿರುವ ಅವರು ಸರ್ವಧರ್ಮ ಪ್ರಿಯರು.
-ಡಾ.ಡಿ.ವೀರೇಂದ್ರ ಹೆಗ್ಗಡೆ
ರಾಜ್ಯಸಭಾ ಸದಸ್ಯರು, ಧರ್ಮಾಧಿಕಾರಿ, ಶ್ರೀಕ್ಷೇತ್ರ ಧರ್ಮಸ್ಥಳ
*
ಡಾ.ರೊನಾಲ್ಡ್ ಕೊಲಾಸೊ ಸಾಧನೆ ಅಮೋಘ
ದ.ಕ. ಜಿಲ್ಲೆಯ ಹಲವಾರು ಪ್ರಮುಖರು ದೇಶ-ವಿದೇಶಗಳಲ್ಲಿ ಹೆಸರುವಾಸಿಯಾದರೂ ಡಾ.ರೊನಾಲ್ಡ್ ಕೊಲಾಸೊ ಅವರ ಸಾಧನೆ ಅಮೋಘವಾಗಿದೆ. ಕೈಗಾರಿಕೋದ್ಯಮಿಯಾಗಿದ್ದರೂ ಅವರು ಮಾನವತವಾದಿಯಾಗಿದ್ದಾರೆ. ನಿರಂತರವಾಗಿ ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ವಧರ್ಮೀಯರನ್ನೂ ಅವರು ಸಮಾನವಾಗಿ ಕಂಡಿದ್ದಾರೆ. ಅವರ ಈ ಸೇವೆ ಸದಾ ಮುಂದುವರಿಯಲಿ.
-ಯು.ಟಿ.ಖಾದರ್
ಸ್ಪೀಕರ್, ರಾಜ್ಯ ವಿಧಾನಸಭೆ
*
ರೋಲ್ ಮಾಡೆಲ್ ರೊನಾಲ್ಡ್ ಕೊಲಾಸೊ
ಡಾ.ರೊನಾಲ್ಡ್ ಕೊಲಾಸೊ ನಮಗೆ ರೋಲ್ ಮಾಡೆಲ್ ಆಗಿದ್ದಾರೆ. ಅವರು ಜಾತಿ, ಮತ, ಧರ್ಮ ಯಾವುದನ್ನು ನೋಡದೆ ಎಲ್ಲರನ್ನು ಸಮಾನ ರೀತಿಯಲ್ಲಿ ನೋಡುವ ಮತ್ತು ಎಲ್ಲರಿಗೂ ಸಹಾಯ ಮಾಡುವ ಧೀಮಂತ ವ್ಯಕ್ತಿ.
-ಡಾ.ಯೆನೆಪೊಯ ಅಬ್ದುಲ್ಲ ಕುಂಞಿ
ಕುಲಾಧಿಪತಿ, ಯೆನೆಪೊಯ ವಿಶ್ವವಿದ್ಯಾನಿಲಯ, ಮಂಗಳೂರು
*
ಮದರ್ ತೆರೆಸಾರ ಸೇವಾ ಮನೋಭಾವ ಮೈಗೂಡಿಸಿಕೊಂಡಿರುವ ಡಾ.ಕೊಲಾಸೊ
ಡಾ.ರೊನಾಲ್ಡ್ ಕೊಲಾಸೊ ನಮಗೆಲ್ಲಾ ಮಾದರಿಯಾಗುವಂತಹ ಕೆಲಸಗಳನ್ನು ಮಾಡಿದ್ದಾರೆ. ಅವರೊಬ್ಬ ಸಂಸಾರಸ್ಥರು. ಆದರೆ ಅವರೆಂದೂ ತನ್ನ ಪತ್ನಿ, ಮಕ್ಕಳ ಹಿತವನ್ನು ಮಾತ್ರ ಬಯಸಲಿಲ್ಲ. ಇಡೀ ವಿಶ್ವವನ್ನೇ ತನ್ನ ಕುಟುಂಬವನ್ನಾಗಿಸಿದ್ದಾರೆ. ಸಮುದಾಯದ ಜೊತೆಗೆ ಸಮಾಜದ ಸರ್ವರತ್ತಲೂ ತನ್ನ ಸೇವೆಯನ್ನು ವಿಸ್ತರಿಸಿ ಔದಾರ್ಯ ಮೆರೆದಿದ್ದಾರೆ. ಆ ಮೂಲಕ ಡಾ.ರೊನಾಲ್ಡ್ ಕೊಲಾಸೊ ನಿಜ ಅರ್ಥದಲ್ಲೂ ವಿಶ್ವ ಮಾನವರಾಗಿದ್ದಾರೆ. ಮದರ್ ತೆರೆಸಾ ಅವರ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡಿದ್ದಾರೆ. ಯಾರಿಗೂ ತಿಳಿಸದೆ ದಾನ ಮಾಡುವ ಅವರ ಬಗ್ಗೆ ನಮಗೆ ಹೆಮ್ಮೆಯಿದೆ.
-ಅತಿ ವಂ.ಡಾ.ಪೀಟರ್ ಮಚಾದೋ
ಆರ್ಚ್ ಬಿಷಪ್, ಬೆಂಗಳೂರು ಕ್ರೈಸ್ತ ಧರ್ಮಪ್ರಾಂತ
*
ಪ್ರಪಂಚವನ್ನೇ ತನ್ನ ಕುಟುಂಬವನ್ನಾಗಿಸಿರುವ ಡಾ.ಕೊಲಾಸೊ
ಹೃದಯ ಮತ್ತು ಮನಸ್ಸು ವಿಶಾಲವಾದರೆ ಪ್ರಪ್ರಂಚವೇ ಕುಟುಂಬವಾಗಲು ಸಾಧ್ಯವಿದೆ. ಡಾ.ರೊನಾಲ್ಡ್ ಕೊಲಾಸೊ ಅವರ ಹೃದಯ ವಿಶಾಲವಾಗಿದೆ. ಮನಸ್ಸೂ ವಿಶಾಲವಾಗಿದೆ. ಹಾಗಾಗಿ ಅವರು ಇಡೀ ಪ್ರಪಂಚವನ್ನೇ ತನ್ನ ಕುಟುಂಬವನ್ನಾಗಿಸಿದ್ದಾರೆ. ಅವರು ಕೇವಲ ಭಾರತ ಪ್ರೇಮಿಯಲ್ಲ, ವಿಶ್ವ ಪ್ರೇಮಿಯಾಗಿದ್ದಾರೆ. ವಿಶ್ವವನ್ನೇ ಆವರಿಸಿಕೊಂಡಿರುವ ಅವರು ವಿಶ್ವಮಾನವರೂ ಆಗಿದ್ದಾರೆ.
-ಸ್ವಾಮಿ ಜಿತಕಾಮಾನಂದಜಿ ಮಹಾರಾಜ್
ಅಧ್ಯಕ್ಷರು, ರಾಮಕೃಷ್ಣ ಮಠ ಮಂಗಳೂರು
*
ವೈದ್ಯರಂತೆ ಎಲ್ಲರಿಗೂ ಸೇವೆ ಸಲ್ಲಿಸುವ ಹೃದಯವಂತ
ಡಾ.ರೊನಾಲ್ಡ್ ಕೊಲಾಸೊ ಅರ್ಹರಿಗೆ ಸಹಾಯ ಮಾಡುವಾಗ ಯಾವತ್ತೂ ಕೂಡ ಗಡಿ, ಭಾಷೆ, ಜಾತಿ, ಧರ್ಮ ನೋಡಿದವರಲ್ಲ. ಖ್ಯಾತ ವೈದ್ಯರು ಯಾವುದೇ ಪ್ರತಿಫಲವಿಲ್ಲದೆ ಬಡದೇಶಗಳ ರೋಗಿಗಳ ಸೇವೆಗೆ ಹೇಗೆ ಮುಂದಾಗುತ್ತಾರೋ ಅದೇರೀತಿ ರೊನಾಲ್ಡ್ ಕೊಲಾಸೊ ಕೂಡ ಯಾವುದೇ ನಿರೀಕ್ಷೆಗಳಿಲ್ಲದೆ ಎಲ್ಲರಿಗೂ ನೆರವು ನೀಡುವ ಮನೋಭಾವ ಹೊಂದಿರುವರು. ಡಾ.ರೊನಾಲ್ಡ್ ಕೊಲಾಸೊ ನಮ್ಮ ಮಣ್ಣಿನ ಮಗ ಎನ್ನಲು ನಮಗೆ ತುಂಬಾ ಹೆಮ್ಮೆ ಇದೆ.
ಅತಿ ವಂ.ಡಾ.ಪೀಟರ್ ಪೌಲ್ ಸಲ್ಡಾನ
ಬಿಷಪ್, ಮಂಗಳೂರು
*
ನನ್ನೆಲ್ಲಾ ಸೇವೆಗೆ ಪತ್ನಿ ಜೀನ್ ಪ್ರೇರಣೆ: ಡಾ.ರೊನಾಲ್ಡ್ ಕೊಲಾಸೊ
ನಾನು ಯಾವತ್ತೂ ಪ್ರಶಸ್ತಿ, ಸನ್ಮಾನದ ಹಿಂದೆ ಬಿದ್ದವನಲ್ಲ. ಹೆಸರಿಗಾಗಿ, ಪ್ರತಿಷ್ಠೆಗಾಗಿಯೂ ಮಾಡಿಲ್ಲ. ನಮ್ಮಲ್ಲಿ ಮದುವೆಯ ಸಂದರ್ಭ ದೇವರ ಮುಂದೆ ಹರಕೆ ಹೊರುವ ಕ್ರಮವಿದೆ. 1983ರಲ್ಲಿ ನಾನು ಜೀನ್ ಅವರನ್ನು ಮದುವೆಯಾದೆ. ನವದಂಪತಿಯಾದ ನಾವು ಆ ವೇಳೆ ಒಂದು ಹರಕೆ ಹೊತ್ತಿದ್ದೆವು. ಅಂದರೆ ನಮ್ಮ ಸಂಪತ್ತಿನ ಒಂದು ಭಾಗವನ್ನು ಬಡವರಿಗಾಗಿ, ಅಗತ್ಯವುಳ್ಳರಿಗೆ ಮೀಸಲಿಡಬೇಕು ಎಂದು ಬಯಸಿದೆವು. ಆ ಬಳಿಕ ನಾವು ಅದನ್ನು ಚಾಚೂತಪ್ಪದೆ ಪಾಲಿಸುತ್ತಾ ಬಂದಿದ್ದೇವೆ. ಇದರಿಂದ ನಮ್ಮ ಸಂಪತ್ತು ಕೂಡಿಕೊಂಡಿದೆಯೇ ವಿನಃ ಕಳೆದುಕೊಳ್ಳುವ ಪ್ರಮೇಯವೇ ಬರಲಿಲ್ಲ. ನನ್ನೆಲ್ಲಾ ಸೇವೆಗೆ ಜೀನ್ ಅವರೇ ಪ್ರೇರಣೆ, ಸ್ಫೂರ್ತಿ.
-ಡಾ.ರೊನಾಲ್ಡ್ ಕೊಲಾಸೊ