ದುಬೈ: ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಆಶ್ರಯದಲ್ಲಿ ಡಿಸೆಂಬರ್ 7ರಂದು ಶಾರ್ಜಾದ ಅಲ್ ಬತಾಯಿ ಬಿಸಿಸಿ ಕ್ರೀಡಾಂಗಣದಲ್ಲಿ(BCC Ground al batayih- Sharjha) ‘ಬದ್ರಿಯಾ ಪ್ರೀಮಿಯರ್ ಲೀಗ್(BPL)-ಸೀಸನ್ 8’ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ರಕ್ತದಾನ, ಅಶಕ್ತರಿಗೆ ಸಹಾಯ, ಹಲವು ಕ್ರೀಡಾಕೂಟ ಸೇರಿದಂತೆ ಯುಎಇಯಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತ ಬಂದಿರುವ ಪ್ರತಿಷ್ಠಿತ ‘ಬದ್ರಿಯಾ ಫ್ರೆಂಡ್ಸ್ ಯುಎಇ’, ತನ್ನ 8ನೇ ಸೀಸನ್’ನ ‘ಬದ್ರಿಯಾ ಪ್ರೀಮಿಯರ್ ಲೀಗ್’ನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಅಧ್ಯಕ್ಷ ಮೊಹಮ್ಮದ್ ಆಶಿಕ್, ಈ ಬಾರಿಯ ‘ಬದ್ರಿಯಾ ಪ್ರೀಮಿಯರ್ ಲೀಗ್-ಸೀಸನ್ 8’ರ ಟ್ರೋಫಿಯನ್ನು ಈಗಾಗಲೇ ಅನಾವರಣಗೊಳಿಸಲಾಗಿದೆ. ಈ ಬಾರಿ ವಿಶೇಷವಾಗಿ ‘ಸೀಸನ್ 8’ ನಡೆಯಲಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಡಿಸೆಂಬರ್ 7ರ ರವಿವಾರದಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯ ವರಗೆ ಈ ಪಂದ್ಯಾಕೂಟ ನಡೆಯಲಿದ್ದು, ಯುಎಇಯ ಒಟ್ಟು ಐದು ಆಹ್ವಾನಿತ ಬಲಿಷ್ಠ ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಲಿದೆ ಎಂದಿದ್ದಾರೆ.
ಭಾಗವಹಿಸುವ ತಂಡಗಳು
ಜಹ್ನಾಝ್ ಹಾಗು ರಮೀಝ್ ಮಾಲಕತ್ವದ ‘ಡೈಮಂಡ್ XI ಬ್ರಿಗೇಡ್’, ಲತೀಫ್ BL, ಅರ್ಫಾ, ಝಹೀರ್ ಮಾಲಕತ್ವದ ‘ರಾಯಲ್ ಥಂಡರ್ಸ್ ಕುಡ್ಲ’, ಇಕ್ಬಾಲ್ ಮಾಲಕತ್ವದ ‘ಲಾಝ್ ಬ್ರದರ್ಸ್’, ಹನೀಫ್ ಮಾಲಕತ್ವದ ‘ಡಿಜಿಫೀಟ್ ಡೇರ್ ಡೆವಿಲ್ಸ್’ ಹಾಗು ಸೌದ್ ಮಾಲಕತ್ವದ ‘ಅಲ್ ದನಹ್ XI’ ತಂಡಗಳು ಪಂದ್ಯಾಟದಲ್ಲಿ ಸೆಣಸಾಡಲಿವೆ.
‘ಬದ್ರಿಯಾ ಫ್ರೆಂಡ್ಸ್ ಯುಎಇ’ ಬಗ್ಗೆ…
ಕಳೆದ 12 ವರ್ಷಗಳ ಹಿಂದೆ ಆರಂಭಗೊಂಡಿರುವ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಸಂಸ್ಥೆಯು ರಕ್ತದಾನ, ಅಶಕ್ತರಿಗೆ ರೇಷನ್, ಮಂಗಳೂರು ಸುತ್ತಮುತ್ತ ಮಸೀದಿ, ಮದ್ರಸ ನಿರ್ಮಾಣಕ್ಕೆ ಸಹಾಯ-ಸಹಕಾರ ನೀಡುತ್ತಲೇ ಬಂದಿದೆ. ಯುಎಇಯಲ್ಲಿ ಫುಟ್ಬಾಲ್, ಕ್ರಿಕೆಟ್ ಸೇರಿದಂತೆ ಹಲವಾರು ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಜೊತೆಗೆ ಈ ಕ್ರೀಡೆಯಿಂದಾಗಿ ನಮ್ಮ ಸ್ನೇಹಿತರು, ಬಂಧುಗಳು ನಾವೆಲ್ಲರೂ ಜೊತೆಯಾಗಿದ್ದು, ಸೀಸನ್ 7ನ್ನು ಬಹಳ ಯಶಸ್ವಿಯಾಗಿ ಮುಗಿಸಿದ್ದೇವೆ. ಈಗ ಸೀಸನ್ 8ಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಆಶಿಕ್ ಅವರು ತಿಳಿಸಿದ್ದಾರೆ.
ಈ ಪಂದ್ಯಾಟವನ್ನು ನಡೆಸಲು ಆಶಿಕ್ ಅವರೊಂದಿಗೆ SK ಶಮೀರ್, ನವಾಝ್, ಅಲ್ತಾಫ್ ಬಿಕರ್ನಕಟ್ಟೆ, ಅಬ್ದುಲ್ ರೆಹ್ಮಾನ್, ಅಕ್ಬರ್, ಅನ್ವರ್ ಸೇರಿದಂತೆ ಇತರರು ಸಹಕರಿಸುತ್ತಿದ್ದಾರೆ.

