ದುಬೈ: ಕಳೆದ ಸುಮಾರು 25 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಮಾಡುತ್ತಿರುವ ಅನಿವಾಸಿ ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯ ಸಮಾಜ ಸೇವಾ ಸಂಸ್ಥೆ ‘ಬ್ಯಾರೀಸ್ ಕಲ್ಚರಲ್ ಫೋರಮ್’ (ಬಿಸಿಎಫ್) ವತಿಯಿಂದ ಪ್ರತೀ ವರ್ಷ ನಡೆಯುವಂತೆ ಈ ವರ್ಷವೂ ‘BCF ಇಫ್ತಾರ್ ಮೀಟ್-2025’ ಇಫ್ತಾರ್ ಕೂಟವು ಮುಂದಿನ ತಿಂಗಳ ಮಾರ್ಚ್ 8ರ ಶನಿವಾರ ( 08 / 03 / 2025 ) ದುಬೈ ದೇರಾದ ಅಬು ಹೈಲ್ ನ ಅಲ್ ಜಾಹಿಯ ಬಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ ಎಂದು ಬ್ಯಾರೀಸ್ ಕಲ್ಚರಲ್ ಫೋರಮ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

UAEಯ ಎಲ್ಲ ಕಡೆಯಿಂದ, ಇತರ ಕೊಲ್ಲಿ ನಾಡುಗಳಿಂದ ಮತ್ತು ಕರ್ನಾಟಕದಿಂದ ನೂರಾರು ಸಂಖ್ಯೆಯಲ್ಲಿ ಕನ್ನಡಿಗರು, ಕನ್ನಡೇತರರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಈ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ದೊಡ್ಡ ಸಂಖ್ಯೆಯಲ್ಲಿ ವಿಶೇಷ ಆಹ್ವಾನಿತರು, ಉಲೇಮಾ ಸದಾತುಗಳು, ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ನೇತಾರರು, ಉದ್ಯಮಿಗಳು ಮತ್ತು ಹಲವಾರು ಕನ್ನಡ ಪರ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಕ್ಕಳಿಗೆ ಇಸ್ಲಾಮಿಕ್ ರಸ ಪ್ರಶ್ನೆಗಳು, ಕುರಾನ್ ಪಾರಾಯಣ ಮೊದಲಾದ ಸ್ಪರ್ಧೆಗಳೊಂದಿಗೆ ಪ್ರಖ್ಯಾತ ಧಾರ್ಮಿಕ ನಾಯಕರುಗಳ ಧಾರ್ಮಿಕ-ನೈತಿಕ ಪ್ರಭಾಷಣ ನಡೆಯಲಿದೆ. ಅಂದು ವಿಶೇಷ ವಾಗಿ BCFನ ಇನ್ನೊಂದು ವಿಶೇಷ ಸೇವಾ ಕಾರ್ಯವಾದ BCF ಸ್ಕಾಲರ್ ಶಿಪ್ ಬಗ್ಗೆ ಪ್ರಸ್ತಾವನೆ ನೀಡಲಾಗುವುದು. ಸಾಮುದಾಯಿಕ ರಂಗದಲ್ಲಿ ವಿಶೇಷ ಸೇವೆ ಗೈದ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು.
BCF ಅಧ್ಯಕ್ಷರಾದ ಡಾ.ಬಿ.ಕೆ.ಯೂಸುಫ್ ಮತ್ತು ಇತರ ನಾಯಕರ ಮುಂದಾಳುತನದಲ್ಲಿ ನಡೆಯುವ ಈ ಇಫ್ತಾರ್ ಕಾರ್ಯಕ್ರಮದಲ್ಲಿ UAE ಯಲ್ಲಿರುವ ಎಲ್ಲ ಕನ್ನಡಿಗರು ತಮ್ಮ ಕುಟುಂಬ ಸ್ನೇಹಿತರ ಸಮೇತ ಭಾಗವಹಿಸಬೇಕಾಗಿ BCF Ifthar Committee Chairman ಅಬ್ದುಲ್ ಲತೀಫ್ ಮುಲ್ಕಿ, Vice Chairman ಅಫೀಕ್ ಹುಸೈನ್ ಮತ್ತು ಅವರ ಸಹವರ್ತಿಗಳು ಬಿಸಿಎಫ್ ಪರವಾಗಿ ಆಹ್ವಾನಿಸಿದ್ದಾರೆ.