ಅರಬ್ ಸಂಯುಕ್ತ ಸಂಸ್ಥಾನದ ವಿಶ್ವ ವಾಣಿಜ್ಯ ನಗರಿ ದುಬಾಯಿ. ಗಿನ್ನೆಸ್ ದಾಖಲೆಗಳ ಸರಮಾಲೆಯನ್ನು ಧರಿಸಿರುವ ದುಬಾಯಿ ವೈವಿಧ್ಯಮಯ ವಿಸ್ಮಯಗಳಿಗೆ ಸಾಕ್ಷಿಯಾಗಿದೆ.
ಕಳೆದ ಒಂದುವರೆ ದಶಕಗಳ ಹಿಂದೆ 2008 ಮೇ ತಿಂಗಳಿನಲ್ಲಿ ದುಬಾಯಿಯ ಚಿಲ್ಡ್ರನ್ ಸಿಟಿ ಎಂದೇ ಪ್ರಖ್ಯಾತವಾಗಿರುವ ಕ್ರೀಕ್ ಪಾರ್ಕ್ನಲ್ಲಿ ಹವಾನಿಯಂತ್ರಿತ ಒಳಾಂಗಣದಲ್ಲಿ “ಡಾಲ್ಫಿನರಿಯಂ” ಸ್ಥಾಪಿಸಲಾಗಿದ್ದು, ದುಬಾಯಿ ಮುನಿಸಿಪಾಲಿಟಿಯ ಅಧೀನಲ್ಲಿ ಕಾರ್ಯನಿರ್ವಹಿಸುತ್ತಿದೆ.



1 ಸಾವಿರದ 250 ಮಂದಿ ಪ್ರೇಕ್ಷಕರು ಆಸೀನರಾಗಿ ಡಾಲ್ಫಿನ್ ಶೋ ವನ್ನು ವೀಕ್ಷಿಸಬಹುದಾಗಿದೆ. ಡಾಲ್ಫಿನ್ ಶೋಗಾಗಿ ನಿರ್ಮಿಸಲಾದ ಕೊಳ 600 ಕ್ಯೂಬಿಕ್ ಮೀಟರ್ ನಲ್ಲಿದ್ದು 1 ಲಕ್ಷ 60 ಸಾವಿರ ಯು.ಎಸ್. ಗ್ಯಾಲನ್ ಸಮುದ್ರ ನೀರಿನ ಕೊಳದಲ್ಲಿ ಡಾಲ್ಫಿನ್ ಗಳ ಆಕರ್ಷಕ ಪ್ರದರ್ಶನ ನಡೆಯುತ್ತದೆ.
ಡಾಲ್ಫಿನ್ ಶೋ ವೀಕ್ಷಿಸಲು ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ, ವಿವಿಧ ನಿಗಧಿತ ಸಮಯಗಳಲ್ಲಿ ಪ್ರದರ್ಶನ ನಡೆಯುತ್ತದೆ. ನುರಿತ ತರಬೇತುದಾರರು ಅತ್ಯಂತ ಪ್ರೀತಿಯಿಂದ ಸೂಚನೆಗಳನ್ನು ನೀಡುತ್ತಾ ಡಾಲ್ಫಿನ್‌ಗಳನ್ನು ಸಂಗೀತದ ತಾಳಕ್ಕೆ ತಕ್ಕಂತೆ ನೃತ್ಯ ಮಾಡಿಸುತ್ತಾ, ಎತ್ತರಕ್ಕೆ ಜಿಗಿಸುತ್ತಾ, ಚೆಂಡುಗಳೊಂದಿಗೆ ಆಟವಾಡಿಸುತ್ತಾರೆ. ಕ್ಯಾನವಾಸಿನ ಮೇಲೆ ಡಾಲ್ಫಿನ್ ಗಳು ಚಿತ್ರ ಬಿಡಿಸುತ್ತದೆ, ಡಾಲ್ಫಿನಗಳಂತೆ ಸೀಲ್ (ನೀರುನಾಯಿ) ಸಹ ಪ್ರದರ್ಶನ ನೀಡುತ್ತದೆ.
ಅತೀ ಎತ್ತರಕ್ಕೆ ಜಿಗಿದು ನಿಶಾನೆಯನ್ನು ಮುಟ್ಟಿ ಗುರಿ ತಲುಪುವ ಡಾಲ್ಫಿನ್‌ಗಳು ರಿಂಗಿನೊಳಗೆ ಜಿಗಿದು ಜಿಗಿದು ಪ್ರೇಕ್ಷಕರ ಚಪ್ಪಾಳಯನ್ನು ಗಿಟ್ಟಿಸಿಕೊಳ್ಳುತ್ತದೆ. ಶೃಂಗಾರಮಯವಾಗಿ ಕುಣಿದು ಕುಪ್ಪಳಿಸುತ್ತಾ ಬಂದು ಕೊಳದ ಬದಿಯಲ್ಲಿ ನಿಂತಿರುವ ಸುಂದರ ತರುಣಿಗೆ ಚುಂಬನ ನೀಡಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ.







ದುಬಾಯಿಗೆ ಬರುವ ಪ್ರವಾಸಿಗರಿಗೆ “ಡಾಲ್ಫಿನರಿಯಮ್” ಅತ್ಯಂತ ಮನ ಮೋಹಕ ಪ್ರವಾಸಿ ತಾಣವಾಗಿದೆ. ದುಬಾಯಿ “ಡಾಲ್ಫಿನರಿಯಮ್” ನಲ್ಲಿ ಪ್ರದರ್ಶನ ನೀಡುವ ಅತ್ಯಂತ ಸುಂದರವಾಗಿರುವ ಡಾಲ್ಫಿನ್ ಗಳನ್ನು ಸೋವಿಯತ್ ರಿಪಪಬ್ಲಿಕ್ ಕಾಮನ್ ವೆಲ್ತ್ ಸ್ಟೇಟ್ಸ್ ನಿಂದ ತರಲಾಗಿದೆ. ಡಾಲ್ಫಿನ್‌ಗಳಾದ ಸೇನಿಯಾ, ಕ್ಷಯುಷ್, ಫೇಕ್ಲಾ ಮತ್ತು ಜರ‍್ರಿ ಎಂಬ ಹೆಸರಿನಲ್ಲಿದ್ದರೆ, 4 ಸೀಲ್ ಗಳಾದ ಘೋಷಾ, ಮ್ಯಾಕ್ಶ್, ಫಿಲಾ, ಮತ್ತು ಲೂಸಾ ಹೆಸರಿನಲ್ಲಿ ಗುರುತಿಸಲ್ಪಡುತ್ತಿದೆ. ಡಾಲ್ಫಿನ್ ಗಳ ಆಕರ್ಷಕ ನೀರಿನ ಮೇಲಾಟ, ನೀರಿನ ಒಳಗೆ ಮಾಯಾವಾಗಿ ತಕ್ಷಣ ಅತೀ ಎತ್ತರಕ್ಕೆ ಚಿಮ್ಮಿ ಜಿಗಿಯುವ ದೃಶ್ಯ ಸೊಬಗನ್ನು ಮನೆ ಮಂದಿ ಮಕ್ಕಳೊಂದಿಗೆ ವೀಕ್ಷಿಸಿ ಸಂಭ್ರಮಿಸುತ್ತಾರೆ.
ದುಬಾಯಿ ಸರ್ಕಾರದ ಕಾನೂನು ಚೌಕಟ್ಟಿನ ಒಳಗೆ ಹಾಗೂ ವಿಶ್ವ ಪ್ರಾಣಿದಯಾ ಸಂರಕ್ಷಣೆ ನಿಯಮಾನುಸಾರವಾಗಿ ಎಲ್ಲಾ ರೀತಿ ನೀತಿ ನಿಯಮಗಳನ್ನು ಪಾಲಿಸಲಾಗುತ್ತಿದೆ.
ಪ್ರೇಕ್ಷಕರು ಖರೀದಿಸಿರುವ ಚೆಂಡನ್ನು ಕೊಳದ ಸುತ್ತಲು ನಿಂತು ಕೊಳದ ಮದ್ಯಭಾಗಕ್ಕೆ ತರಬೇತುದಾರನ ಸೂಚನೆಯಂತೆ ಎಸೆಯುತ್ತಾರೆ. ಆ ಸಂದರ್ಭದಲ್ಲಿ ಯಾವ ಚೆಂಡು ಡಾಲ್ಫಿನ್ ತೆಗೆದು ಕೊಂಡು ತರಬೇತುದಾರನ ಕೈಗೆ ನೀಡುತ್ತದೆ. ಆ ಚೆಂಡು ಸಂಖ್ಯೆಯ ವ್ಯಕ್ತಿತನ್ನ ಕುಟುಂಬದ ಸದಸ್ಯರೊಂದಿಗೆ ಡಾಲ್ಫಿನ್ ಜೊತೆ ಫೋಟೊವನ್ನು ತೆಗೆದುಕೊಳ್ಳಬಹುದು.
ಡಾಲ್ಫಿನ್ ಪ್ರೇಕ್ಷಕರ ಗ್ಯಾಲರಿಯ ಮುಂದೆ ವಿಶಾಲ ನೀರಿನ ಕೊಳದಲ್ಲಿ ಪ್ರದರ್ಶನ ನೀಡಿದ ನಂತರ ಡಾಲ್ಫಿನ್ ಗಳು ವೇದಿಕೆಯ ಹಿಂಭಾಗದಲ್ಲಿ ಖಾಸಗಿ ನೀರಿನ ಕೊಳದಲ್ಲಿ ವಿಶ್ರಾಂತಿ ಪಡೆಯುತಿರುತ್ತದೆ. ತರಬೇತುದಾರರ ಸೂಚನೆಯಂತೆ ಪ್ರೇಕ್ಷಕರ ಮುಂದೆ ಬಂದು ಪ್ರದರ್ಶನ ನೀಡುವ ಡಾಲ್ಫಿನ್‌ಗಳು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿಯುವ ಅವಿಸ್ಮರಣೀಯ ಕ್ಷಣಗಳು ವರ್ಣಿಸಲಸಾಧ್ಯವಾಗಿದೆ.

ಬಿ.ಕೆ.ಗಣೇಶ್ ರೈ
ದುಬಾಯಿ