ಬಹರೈನ್: ಇಲ್ಲಿನ ರಾಜ್ಯಪ್ರಶಸ್ತಿ ಪುರಸ್ಕೃತ ಕನ್ನಡ ಸಂಘದ ವಾರ್ಷಿಕ ಕಾರ್ಯಕ್ರಮವಾದ “ಕನ್ನಡ ವೈಭವ” ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬೃಹತ್ ಸಾಂಸ್ಕ್ರತಿಕ ಕಾರ್ಯಕ್ರಮವು ಡಿಸೆಂಬರ್ 12ರ ಶುಕ್ರವಾರದಂದು ಸಂಜೆ 5ಗಂಟೆಗೆ ಇಲ್ಲಿನ ಮನಾಮದಲ್ಲಿರುವ ಬಹರೈನ್ ಕಲ್ಚರಲ್ ಹಾಲ್ ನ ಸಭಾಂಗಣದಲ್ಲಿ ಜರುಗಲಿದೆ.

ಹಾಡು, ಹಾಸ್ಯ, ನೃತ್ಯಗಳ ಮಹಾ ಸಂಗಮವಾಗಿರುವ ಈ ಬೃಹತ್ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕಲಾವಿದರುಗಳ ಜೊತೆಗೆ ಕನ್ನಡ ಸಂಘದ ಸದಸ್ಯರುಗಳೂ ಕಲಾ ಪ್ರದರ್ಶನ ನೀಡಲಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳ ಸ್ಥಾನವನ್ನು ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆಯವರು ಅಲಂಕರಿಸಲಿದ್ದು, ವಿಶೇಷ ತಾರಾ ಅತಿಥಿಯಾಗಿ ಕನ್ನಡದ ಖ್ಯಾತ ನಟ ವಿನೋದ್ ಪ್ರಭಾಕರ್ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ನಾಯಕರಾದ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ, ಕರ್ನಾಟಕ ಹಿಂದುಳಿದ ಸಮಿತಿಯ ಸದಸ್ಯೆ ಪ್ರತಿಭಾ ಕುಲಾಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಯುನೀಕೋ ಸಮೂಹ ಸಂಸ್ಥೆಯ ಸಿ.ಒ.ಒ ಆಗಿರುವ ಜಯಶಂಕರ್ ವಿಶ್ವನಾಥನ್, ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕದ ಉಪಾಧ್ಯಕ್ಷರಾದ ಡಾಕ್ಟರ್ ಅಣ್ಣಯ್ಯ ಕುಲಾಲ್, ಅಲ್ ಮಾಹ ಪೆಟ್ರೋಲಿಯಂ ಒಮಾನ್ ಇದರ ಪ್ರಧಾನ ಹಣಕಾಸು ಅಧಿಕಾರಿ ಹಿರಿಯಣ್ಣ ನಾರಾಯಣ ಸ್ವಾಮಿ, ಉದ್ಯಮಿ ಹಾಗು ಸಮಾಜ ಸೇವಕ ಸತ್ಯೇ೦ದ್ರ ಪೈ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ನಾಡಿನ ಖ್ಯಾತ ನೃತ್ಯ ವಿದುಷಿ ಡಾಕ್ಟರ್ ಸಹನಾ ಭಟ್ ನಿರ್ದೇಶನದಲ್ಲಿ 40 ನಿಮಿಷಗಳ “ಕರ್ನಾಟಕ ವೈಭವ” ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಸಹನಾ ಭಟ್ ಅವರು ಈಗಾಗಲೇ ಆಗಮಿಸಿದ್ದು, ಸಂಘದ ಸುಮಾರು 50 ಪ್ರತಿಭಾವಂತ ಕಲಾವಿದರುಗಳು ಈ ನೃತ್ಯ ರೂಪಕದಲ್ಲಿ ತಮ್ಮ ಪ್ರತಿಭೆಯನ್ನು ತೋರಲಿದ್ದಾರೆ. ನಾಡಿನ ಖ್ಯಾತ ಗಾಯಕಿ ಕಲಾವತಿ ದಯಾನಂದ್ ಹಾಗು ಗಾಯಕ ಹೊಂಬೇಗೌಡರವರು ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ. ಝೀ ಟಿವಿ ಖ್ಯಾತಿಯ ಹಾಸ್ಯ ಕಲಾವಿದ ರಾಘವೇಂದ್ರ ಆಚಾರ್ಯ ತಮ್ಮ ಹಾಸ್ಯದಿಂದ ದ್ವೀಪದ ಕನ್ನಡಿಗರಿಗೆ ಕಚಗುಳಿ ಮಾಡಲಿದ್ದಾರೆ. ಈ ಒಟ್ಟು ಕಾರ್ಯಕ್ರಮವನ್ನು ನಾಡಿನ ಖ್ಯಾತ ನಿರೂಪಕಿ ಸವಿ ಪ್ರಕಾಶ್ ರವರು ನಿರೂಪಿಸಲಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ವಾರ್ಷಿಕ ಸ್ಮರಣಿಕೆ “ಕಾವೇರಿ” ಯನ್ನು ಬಿಡುಗಡೆಗೊಳಿಸಿ ಲೋಕಾರ್ಪಣೆ ಮಾಡಲಾಗುವುದು. ಅಲ್ಲದೆ ನಾಡಿನ ಸಾಧಕರುಗಳನ್ನು, ಗಣ್ಯರನ್ನು ಸಮ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ದ್ವೀಪದ ಕನ್ನಡಿಗರಿಗೆ ಮುಕ್ತ ಪ್ರವೇಶವಿದ್ದು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಘದ ಅಧ್ಯಕ್ಷರಾದ ಅಜಿತ್ ಬಂಗೇರ ಮನವಿ ಮಾಡಿದ್ದಾರೆ. ಈ ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಅಜಿತ್ ಬಂಗೇರ ಅವರನ್ನು ದೂರವಾಣಿ ಸಂಖ್ಯೆ 00973-36721660 ಮೂಲಕ ಸಂಪರ್ಕಿಸಬಹುದು.
ವರದಿ: ಕಮಲಾಕ್ಷ ಅಮೀನ್


