ಸಲಾಲ/ ಒಮಾನ್: ಸಲಾಲದಲ್ಲಿರುವ ಇಂಡಿಯನ್ ಸೋಶಿಯಲ್ ಕ್ಲಬ್ ವತಿಯಿಂದ ಇತ್ತೀಚೆಗೆ ಒಮಾನ್’ನ ಸಲಾಲದ ಇಂಡಿಯನ್ ಸೋಶಿಯಲ್ ಕ್ಲಬ್ ಆವರಣದಲ್ಲಿ ‘ಸಲಾಲಾ ಫುಡ್ ಫೆಸ್ಟಿವಲ್’ ನಡೆಯಿತು.
ಬಹುತೇಕ ಎಂಟು ವರ್ಷಗಳ ಬಳಿಕ ನಡೆದ ಆಹಾರ ಮೇಳದಲ್ಲಿ ಭಾರತದ 12 ರಾಜ್ಯಗಳ ಸಾಂಪ್ರದಾಯಿಕ ಆಹಾರ, ಖಾದ್ಯಗಳು ಪ್ರದರ್ಶನಗೊಂಡವು.





ಈ ಹಿಂದೆ ಇಂಡಿಯನ್ ಸೋಷಿಯಲ್ ಕ್ಲಬ್‌ನಲ್ಲಿದ್ದ ಮನ್‌ಪ್ರೀತ್ ಸಿಂಗ್ ಮತ್ತು ಎಂಪಿ ಮಂದಣ್ಣ ಅವರು ಭಾರತೀಯರನ್ನು ಆಹಾರ, ಸಂಗೀತದ ಮೂಲಕ ಒಟ್ಟು ಗೂಡಿಸುವ ಸಲುವಾಗಿ ‘ಸಲಾಲಾ ಫುಡ್ ಫೆಸ್ಟಿವಲ್’ ಆರಂಭಿಸಿದ್ದರು. ಆದರೆ ಇತ್ತೀಚೆಗೆ ಈ ಆಹಾರ ಮೇಳ ಆಯೋಜನೆ ನಿಂತುಹೋಗಿತ್ತು. ಇದೀಗ ಇಂಡಿಯನ್ ಸೋಷಿಯಲ್ ಕ್ಲಬ್‌ನ ಅಧ್ಯಕ್ಷರಾಗಿರುವ ರಾಕೇಶ್ ಝಾ ಮುತುವರ್ಜಿಯಲ್ಲಿ ಆಹಾರ ಮೇಳ ಆಯೋಜಿಸಲಾಗಿತ್ತು.




ಭಾರತದ 12 ಭಾಷಿಕರು ಈ ಆಹಾರ ಮೇಳದಲ್ಲಿ ಒಟ್ಟು ಸೇರಿದ್ದರು. ಅವರವರ ಊರಿನ, ಅವರಿಗಿಷ್ಟದ ಖಾದ್ಯಗಳನ್ನು ಪ್ರಸ್ತುತ ಪಡಿಸಿದರು. ಜೊತೆಗೆ ಲೇಡಿಸ್ ಫೋರಂ ಮತ್ತು ಕರೋಕೆ ಫಾರಂನ ಸದಸ್ಯರು ಆಸಕ್ತಿಯಿಂದ ಭಾಗವಹಿಸಿದ್ದರು. ನೆರೆದವರೆಲ್ಲಾ ಒಂದು ಕಡೆ ಆಹಾರ ಖಾದ್ಯಗಳ ರುಚಿಯನ್ನು ಸವಿಯುತ್ತಿದ್ದರೆ ಇನ್ನೊಂದೆಡೆ ಕರೋಕೆ ಫೋರಂನ ಸದಸ್ಯರು ಹಾಡುಗಳನ್ನು ಹಾಡುತ್ತಿದ್ದರು. ನೃತ್ಯ ಕಾರ್ಯಕ್ರಮಗಳೂ ಜರುಗಿದವು.



ಗಮನ ಸೆಳೆದ ಕರ್ನಾಟಕದ ಖಾದ್ಯಗಳು: ಆಹಾರ ಮೇಳದಲ್ಲಿ ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಗುಜರಾತಿ, ಪಂಜಾಬಿ, ರಾಜಸ್ಥಾನಿ ಶೈಲಿಯ ಆಹಾರ ಖಾದ್ಯಗಳು ಇದ್ದವು. ಆದರೆ ಅಲ್ಲಿ ಗಮನ ಸೆಳೆದಿದ್ದು ಕರ್ನಾಟಕದ ಖಾದ್ಯಗಳು. ಕರ್ನಾಟಕದ ಬೇರೆ ಬೇರೆ ಭಾಗದ ಹಿನ್ನೆಲೆಯುಳ್ಳ ಸದಸ್ಯರು ತಮ್ಮ ಸಾಂಪ್ರದಾಯಿಕ ಆಹಾರ ಖಾದ್ಯಗಳನ್ನು ಪ್ರಸ್ತುತ ಪಡಿಸಿದರು.



ಕರ್ನಾಟಕ ತಂಡದ ಸುಮನ್ ಸುಬ್ರಹ್ಮಣ್ಯ ಅವರು ನೀರ್‌ದೋಸೆ ಮತ್ತು ಕ್ಯಾರೆಟ್ ಹಲ್ವಾ, ರಾಧಿಕಾ ಕಾಮತ್ ಅವರು ವೆಜ್ ಫ್ರೈಡ್ ರೈಸ್, ಗೌರಿ ಕುಲಕರ್ಣಿ ಹಾಗೂ ಜ್ಯೋತಿ ಗಿಡವಿರ್ ಅವರು ಪಾವ್ ಭಾಜಿ, ಸುನೀತಾ ಮನೋಳಿ ಅವರು ಮಿಕ್ಸ್ ಭಾಜಿ, ಸಮೀನ್ ಶಕೀಲ್ ಅವರು ಮಟನ್ ಕುರ್ಮಾ, ಆಶಾ ಕಿಶೋರ್ ಹಾಗೂ ರೇಷ್ಮಾ ಪ್ರೀತಂ ಅವರು ಕರಾವಳಿ ಭಾಗದ ಚಿಕನ್ ಸುಕ್ಕಾ, ಪ್ರತಿಮಾ ಸುಧೀರ್ ಅವರು ನೀರ್‌ದೋಸೆ ಮತ್ತು ಚಟ್ನಿ, ರೂಪ ಪಲಾರಿಮಠ್ ಮತ್ತು ಸುವರ್ಣ ಕುಂಬಾರ್ ಹಾಗೂ ಶೈಲಾ ಶೈಲೇಶ್ ಇಡ್ಲಿ, ಫ್ರಾನ್ಸಿಸ್ ಹಾಗೂ ಆಂಟನಿ ಅವರು ನೀರ್ ದೋಸೆ, ವಿಲ್ಮಾ ರೋಹನ್ ಅವರು ಇಡ್ಲಿ ಮತ್ತು ನೀರ್ ದೋಸೆ, ಅರ್ಪಿತಾ ಗೌಡ ಹಾಗೂ ರೀನು ಮಹೇಶ್ ಅವರು ಗುಲಾಬ್ ಜಾಮೂನ್, ಪ್ರೀತಿ ಕುಲಕರ್ಣಿ ಅವರು ವಿಶೇಷ ಖಾದ್ಯ ತಯಾರಿಸಿ ಗಮನ ಸೆಳೆದರು.
ಕನ್ನಡ ಮಾತನಾಡುವ ತೆಲುಗು ಭಾಷಿಕರು
ಈ ಮೇಳದಲ್ಲಿ ಗಿರೀಶ್ ಪೆದ್ದಿನೇನಿ ಮುಂದಾಳತ್ವದಲ್ಲಿ ತೆಲುಗು ಭಾಷಿಕರು ತಮ್ಮ ಆಹಾರ ಖಾದ್ಯಗಳನ್ನು ಸಿದ್ಧಗೊಳಿಸಿದ್ದರು. ಆ ತಂಡದಲ್ಲಿದ್ದ ಬಹುತೇಕರು ಕನ್ನಡ ಮಾತನಾಡುತ್ತಿದ್ದದ್ದು ವಿಶೇಷವಾಗಿತ್ತು. ಅಲ್ಲದೇ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯವಾಗಿರುವ ಮಿರ್ಚಿ ಬಜ್ಜಿಯನ್ನು ಕೂಡ ಸಿದ್ಧ ಪಡಿಸಿದ್ದರು.
ಸಲಾಲಾದಲ್ಲಿ ಕಾರ್ಯ ನಿರ್ವಹಿಸುವ ಅನಿವಾಸಿ ಭಾರತೀಯರ ಸಂಘಟನೆಯಾದ ಇಂಡಿಯನ್ ಸೋಷಿಯಲ್ ಕ್ಲಬ್ ಬಹಳ ವರ್ಷಗಳಿಂದ ಭಾರತೀಯರನ್ನು ಒಟ್ಟುಗೂಡಿಸಿ ಮುನ್ನಡೆಸುವ ಕೆಲಸ ಮಾಡುತ್ತಿದೆ. ವಿವಿಧ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅನಿವಾಸಿ ಭಾರತೀಯರನ್ನು ಒಟ್ಟುಗೂಡಿಸುತ್ತಿದೆ.
‘ಆಹಾರ ಮೇಳ ತುಂಬಾ ಚೆನ್ನಾಗಿ ಇತ್ತು’
ಭಾರತದ ವಿವಿಧ ಪ್ರಾಂತ್ಯದ ಆಹಾರ ಸವಿಯುವ ಅವಕಾಶ ದೊರೆಯುತು. ಖಾದ್ಯಗಳು ಒಂದಕ್ಕಿಂತ ಒಂದು ರುಚಿಯಾಗಿತ್ತು. ಭಾರತದ ವಿವಿಧ ಭಾಗಗಳ ಖಾದ್ಯ ಗಳನ್ನು ಸವಿಯುವಾಗ ನಾವು ವಿದೇಶದಲ್ಲಿ ಇರುವುದೇ ಮರೆತು ಹೋಗಿತ್ತು. –ರಾಧಿಕಾ ಕಾಮತ್, ಕರ್ನಾಟಕ ವಿಂಗ್ ಸದಸ್ಯರು, ಐಸಿಎಸ್ ಸಲಾಲ

ವರದಿ/ ಫೋಟೊ: ರೂಪಲ್ ಶೆಟ್ಟಿ