ಕನ್ನಡ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯನ್ನು ಸಂರಕ್ಷಿಸಲು ಹಾಗೂ ಉತ್ತೇಜಿಸುವ ಸಲುವಾಗಿ ಮೆಲ್ಬರ್ನ್ ಕನ್ನಡ ಸಂಘವು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ 1986 ರ ಏಪ್ರಿಲ್ ನಲ್ಲಿ ಸ್ಥಾಪನೆಯಾಯಿತು. ಕನ್ನಡ ಸಮುದಾಯದ ಕಲ್ಯಾಣ, ಕನ್ನಡ ಭಾಷೆಯ ಸೌಂದರ್ಯವನ್ನು ಪ್ರಪಂಚದಾದ್ಯಂತ ಹರಡುವುದು ಮತ್ತು ವಿವಿಧ ಉಪಕ್ರಮಗಳ ಮೂಲಕ ಕರ್ನಾಟಕದ ಸಂಸ್ಕೃತಿಯನ್ನು ಆಚರಿಸುವುದು ಈ ಸಂಘದ ಧ್ಯೇಯವಾಗಿದೆ.
ಸಂಘವು, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಮೆಲ್ಬರ್ನ್’ನ 20,000 ಕ್ಕೂ ಹೆಚ್ಚು ಕನ್ನಡಿಗರಿಗೆ ಸೇವೆಯನ್ನು ನೀಡುತ್ತಾ ಬಂದಿದೆ.
‘ಸ್ನೇಹ ಕೂಟ’ ಎಂಬ ಕುಟುಂಬ ಕಾರ್ಯಕ್ರಮವೊಂದರಲ್ಲಿ ಕನ್ನಡ ವೈದ್ಯರ ಗುಂಪೊಂದು ಒಟ್ಟುಗೂಡಿ ಕನ್ನಡ ಸಂಘವನ್ನು ರಚಿಸಲು ನಿರ್ಧರಿಸಿದ್ದು, ಅಲ್ಲಿ ಸಂಘವನ್ನು ರಚಿಸುವ ಕಲ್ಪನೆ ಹುಟ್ಟಿಕೊಂಡಿತು. ನಂತರ, ಮೆಲ್ಬರ್ನ್ ಕನ್ನಡ ಸಂಘವನ್ನು ಏಪ್ರಿಲ್ 1986 ರಲ್ಲಿ ಸ್ಥಾಪಿಸಲಾಯಿತು. ಸಂಘದ 10 ನೇ ವಾರ್ಷಿಕೋತ್ಸವವನ್ನು ಪ್ರಸಿದ್ಧ ಗಾಯಕರು ಮತ್ತು ನಾಟಕಕಾರರನ್ನು ಮೆಲ್ಬರ್ನ್‌ಗೆ ಆಹ್ವಾನಿಸಿ ಆಚರಿಸಲಾಗಿದೆ. ಆ ವರ್ಷ, ಅಕ್ಟೋಬರ್‌ನಲ್ಲಿ ದಸರಾ ಹಬ್ಬದ ಅದ್ಧೂರಿ ಆಚರಣೆಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ನೃತ್ಯ, ಸಂಗೀತ ಮತ್ತು ಇತರ ಮನರಂಜನೆಗಳು ಹಾಗೂ ಮಕ್ಕಳ ಪ್ರದರ್ಶನಗಳು ಇದ್ದವು.

2004 ರಲ್ಲಿ, ಕನ್ನಡ ಸಂಘವನ್ನು ಆಗಿನ ಕರ್ನಾಟಕ ಸರ್ಕಾರದ ಗೃಹ ಸಚಿವರು ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭೇಟಿ ನೀಡಿ ಗೌರವಿಸಿದರು. ಮೆಲ್ಬರ್ನ್‌ನಲ್ಲಿ ಸಂಘದ ಪ್ರಯತ್ನಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಗೃಹಸಚಿವರು, ಅಲ್ಲಿ ಕನ್ನಡ ಗ್ರಂಥಾಲಯದ ಅಗತ್ಯವನ್ನು ಗುರುತಿಸಿ, ಮೆಲ್ಬರ್ನ್ ಕನ್ನಡ ಸಂಘಕ್ಕೆ 500 ಪುಸ್ತಕಗಳು, ವಾರಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ದೇಣಿಗೆಯಾಗಿ ನೀಡಿದರು.
ಗ್ರಂಥಾಲಯದ ನೇತೃತ್ವ ವಹಿಸಿಕೊಂಡಿರುವ ಸತೀಶ್ ಸವಣೂರು ಅವರು, ಕಳೆದ 20 ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಭಾನುವಾರದಂದು ಜೆಲ್ಸ್ ಪಾರ್ಕ್ ಮತ್ತು ಡ್ಯಾಂಡೆನಾಂಗ್ ಪಾರ್ಕ್‌ನಲ್ಲಿ ಗ್ರಂಥಾಲಯ ಸೇವೆಗಳನ್ನು ನೀಡುವ ಮೂಲಕ ಪ್ರಾರಂಭಿಸಲಾಯಿತು. ನಂತರ ಮೊನಾಶ್ ನಗರ ಮಂಡಳಿಯು ಕ್ಲೇಟನ್ ಹಾಲ್ ಅನ್ನು ಪೂರ್ಣ ಪ್ರಮಾಣದ ಗ್ರಂಥಾಲಯಕ್ಕಾಗಿ ಉಚಿತವಾಗಿ ಒದಗಿಸಿತು.
ಇಂದು, ಮೆಲ್ಬರ್ನ್ ಕನ್ನಡ ಸಂಘದ ಗ್ರಂಥಾಲಯವು 2000 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಹೊಂದಿದ್ದು, ಮಾಸಿಕ ಕನ್ನಡ ವಾರಪತ್ರಿಕೆಗಳು ಮತ್ತು ಪತ್ರಿಕೆಗಳು ಕೂಡಾ ಲಭ್ಯವಿದೆ.

ಮೆಲ್ಬರ್ನ್ ಕನ್ನಡ ಸಂಘದ ಸದಸ್ಯರು ಮತ್ತು ಪ್ರಾಯೋಜಕರ ಉದಾರ ಬೆಂಬಲದೊಂದಿಗೆ ಕರ್ನಾಟಕದ 150 ಹಳ್ಳಿ ಶಾಲೆಗಳಿಗೆ 200 ಸಣ್ಣ ಪುಸ್ತಕಗಳ ಸಂಗ್ರಹವನ್ನು ಕೂಡಾ ಒದಗಿಸಲಾಗಿದೆ. 2011 ರಲ್ಲಿ, ಸಂಘವು ವಿದೇಶದಲ್ಲಿ ಮೊದಲ ಕನ್ನಡ ಶಾಲೆಯನ್ನು ಸ್ಥಾಪಿಸಿತು. ಕೇವಲ 6 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಶಾಲೆಯು ಇಂದು, ನಾಲ್ಕು ಕೇಂದ್ರಗಳಲ್ಲಿ 300 ವಿದ್ಯಾರ್ಥಿಗಳಿಗೆ ವಿಸ್ತರಿಸಿದೆ, ಇದಕ್ಕೆ 12 ಸ್ವಯಂಸೇವಕ ಶಿಕ್ಷಕರು ಬೆಂಬಲ ನೀಡುತ್ತಿದ್ದಾರೆ.


ಮೆಲ್ಬರ್ನ್ ಕನ್ನಡ ಸಂಘದ 25 ನೇ ವಾರ್ಷಿಕೋತ್ಸವದ ಆಚರಣೆ ವೇಳೆ, ಎಸ್.ಎಲ್. ಭೈರಪ್ಪ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಟ ಪ್ರಣಯರಾಜ ಶ್ರೀನಾಥ್, ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಮೊದಲಾದ ಗಣ್ಯರನ್ನು ಆಹ್ವಾನಿಸಲಾಗಿತ್ತು. ನವೆಂಬರ್ 10, 2018 ರಂದು, ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ಸಂಘವು ಕನ್ನಡ ಭವನ ನಿರ್ಮಾಣಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಿದ್ದು, ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಡಾ. ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.


2019 ರಲ್ಲಿ, ಮೆಲ್ಬರ್ನ್ ಕನ್ನಡ ಸಂಘವು ಕನ್ನಡ ರಾಜ್ಯೋತ್ಸವವನ್ನು ಖ್ಯಾತ ಕನ್ನಡ ನಟ ಮತ್ತು ಚಲನಚಿತ್ರ ನಿರ್ಮಾಪಕ ಉಪೇಂದ್ರ ಹಾಗೂ ಅವರ ಪತ್ನಿ ನಟಿ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ಆಚರಿಸಿತು. ನವೆಂಬರ್ 19, 2022 ರಂದು ನಡೆದ ಆ ವರ್ಷದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಖ್ಯಾತ ಕನ್ನಡ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಪ್ರಮುಖ ಅತಿಥಿಗಳಾಗಿದ್ದರು.

ಜುಲೈ 8, 2023 ರಂದು, ಮೆಲ್ಬರ್ನ್ ಕನ್ನಡ ಭವನವನ್ನು ಮೆಲ್ಬರ್ನ್’ನ 1175 ಹೀದರ್ಟನ್ ರಸ್ತೆಯಲ್ಲಿ ಉದ್ಘಾಟಿಸಲಾಯಿತು. ಕನ್ನಡ ಭವನವನ್ನು ಬಹುಸಂಸ್ಕೃತಿ ವ್ಯವಹಾರಗಳ ಸಚಿವ ಮತ್ತು ವಸತಿ ಸಚಿವರಾದ ಸಂಸದ ಕಾಲಿನ್ ಬ್ರೂಕ್ಸ್ ಉದ್ಘಾಟಿಸಿದರು, ಅವರ ಜೊತೆಯಲ್ಲಿ ಸಂಸದ ಕ್ಯಾಸಂಡ್ರಾ ಫರ್ನಾಂಡೊ, ಸಂಸದ ಜೇಸನ್ ವುಡ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಮತ್ತು ಕನ್ನಡ ಸಂಘದ ಅಧ್ಯಕ್ಷ ಚಂದ್ರ ಬೆಂಗಳೂರು, ಮೆಲ್ಬೋರ್ನ್ ಕನ್ನಡ ಸಂಘದ ಸದಸ್ಯರು ಮತ್ತು ಕಾರ್ಯಕರ್ತರು ಇದ್ದರು.