ಉದ್ಯೋಗ ಅರಸಿ ದುಬೈಗೆ ತೆರಳಿ ರಿಯಲ್ ಎಸ್ಟೇಟ್, ಹೊಟೇಲ್ ಅಪಾರ್ಟ್‌ಮೆಂಟ್ಸ್ ಉದ್ಯಮಿಯಾಗಿ ದುಬೈ ಮತ್ತು ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಭಾರೀ ಯಶಸ್ಸು ಸಾಧಿಸಿದ ಅನಿವಾಸಿ ಉದ್ಯಮಿ, ಸಮಾಜ ಸೇವಕ ಮೈಕಲ್ ಡಿಸೋಜ. ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಮೈಕಲ್ ಡಿಸೋಜರದ್ದು ಸಮಾಜಸೇವೆಯಲ್ಲೂ ಎತ್ತಿದ ಕೈ. ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಅರ್ಹರ ವೈದ್ಯಕೀಯ ಚಿಕಿತ್ಸೆಗೆ ನೆರವು, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ, ಮನೆ ದುರಸ್ತಿಗೆ ಸಹಾಯಧನ ಹೀಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಮೈಕಲ್ ಡಿಸೋಜ ಅವರು ಆರಂಭದಲ್ಲಿ ಪುತ್ತೂರು, ಮಂಗಳೂರಿನಲ್ಲಿ ಮೆಟಲ್ ಮಾರ್ಟ್, ಇಲೆಕ್ಟ್ರಾನಿಕ್ಸ್ ಅಂಗಡಿ ಮುಂತಾದ ವ್ಯಾಪಾರ ನಡೆಸುತ್ತಿದ್ದರು. ಬಳಿಕ ಉಜ್ವಲ ಭವಿಷ್ಯಕ್ಕಾಗಿ ದುಬೈಗೆ ತೆರಳಿದ ಮೈಕಲ್ ಡಿಸೋಜ ಅವರು ದುಬೈ ಮತ್ತು ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಉದ್ಯಮಿಯಾಗಿ (ಹೊಟೇಲ್ ಅಪಾರ್ಟ್‌ಮೆಂಟ್ಸ್ ಮತ್ತು ರಿಯಲ್ ಎಸ್ಟೇಟ್ ) ಬೆಳೆದರು.
ಈ ನಡುವೆ ಸಮಾಜಸೇವೆಗಾಗಿ ಅವರು ಅರಿಸಿಕೊಂಡಿದ್ದು ಕರಾವಳಿಯ ಸಮಾಜ ಬಾಂಧವರನ್ನು. ಮುಖ್ಯವಾಗಿ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ, ಆರ್ಥಿಕವಾಗಿ ದುರ್ಬಲ ವರ್ಗದ ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯ, ವಾಸಕ್ಕೆ ಮನೆಯಿಲ್ಲದವರಿಗೆ ಮನೆ ನಿರ್ಮಾಣ, ದುರಸ್ತಿಗೆ ಸಹಾಯ ಹಾಗೂ ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಸಂಗೀತ ಮತ್ತು ಸಿನೆಮಾ ನಿರ್ಮಾಣಕ್ಕೆ ದೊಡ್ಡ ಮಟ್ಟದಲ್ಲಿ ಅವರು ಸಹಾಯ ಮಾಡುತ್ತಾರೆ.

ಕೊಂಕಣಿ ಲೇಖಕರಿಗೆ 100 ಪುಸ್ತಕ ಪ್ರಕಟಿಸಲು ಐದು ವರ್ಷದ ಅವಧಿಗೆ 40 ಲಕ್ಷ ರೂ. ಕೊಡುಗೆ ನೀಡಿರುವ ಮೈಕಲ್ ಡಿಸೋಜ, ವಿಶನ್ ಕೊಂಕಣಿ ಪುಸ್ತಕ ಪ್ರಾಧಿಕಾರ ಸ್ಥಾಪನೆಯ ಜೊತೆಗೆ 25 ಹಾಡುಗಳ ನಿರ್ಮಾಣಕ್ಕಾಗಿ 25 ಲಕ್ಷ ರೂ. ಸಹಾಯಧನ, ಕೊಂಕಣಿ ಸಿನೆಮಾ ನಿರ್ಮಾಣಕ್ಕಾಗಿ 25 ಲಕ್ಷ ರೂ. ನೀಡಿರುತ್ತಾರೆ. ಅದೇರೀತಿ ಮಂಗಳೂರು ಮತ್ತು ಉಡುಪಿ ಕ್ರೈಸ್ತ ಧರ್ಮಪ್ರಾಂತ ವ್ಯಾಪ್ತಿಯಲ್ಲಿ 25 ಕೋಟಿ ರೂ. ನಿಧಿಯ ಜೊತೆಗೆ ‘ಎಜುಕೇರ್ ಎಂಡೋಮೆಂಟ್ ಫಂಡ್’ ಎಂಬ ಕಾರ್ಯಕ್ರಮವನ್ನು ಆರಂಭಿಸಿ ಈ ವರೆಗೆ 4,000 ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ.
ಸ್ವಸಹಾಯ ಗುಂಪುಗಳಿಗೆ ಚಾಲನೆ ನೀಡಿ 10,000 ಕುಟುಂಬಗಳಿಗೆ ಜೀವನಾಧಾರ ಒದಗಿಸಿದ್ದಾರೆ. ಜೊತೆಗೆ ಸ್ವ ಉದ್ಯಮ ಆರಂಭಿಸುವ ಯುವಜನರಿಗೆ ಸಹಾಯಹಸ್ತ – ಮಾರ್ಗದರ್ಶನ ನೀಡುವಲ್ಲೂ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಉಡುಪಿ, ಮಂಗಳೂರು ಮತ್ತು ಕರ್ನಾಟಕದ ಬಹುತೇಕ ವಿಶೇಷ ಶಾಲೆಗಳಿಗೆ ಅವರು ಮುಂಚೂಣಿಯ ಪೋಷಕರಾಗಿದ್ದಾರೆ.
ಪ್ರಸಕ್ತ 72ರ ಹರೆಯದ ಮೈಕಲ್ ಡಿಸೋಜರ ಸಮಾಜ ಸೇವೆ ಮುಖ್ಯವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ, ವಸತಿ ರಹಿತರಿಗೆ ಸೂಕ್ತ ವಸತಿ ಕಲ್ಪಿಸುವುದು, ಅಶಕ್ತ ವರ್ಗದ ಕುಟುಂಬಗಳಿಗೆ ವೈದ್ಯಕೀಯ ಸಹಾಯ ನೀಡುವುದು ಮತ್ತು ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಪೋಷಣೆ ಇದರ ಮೇಲೆ ಕೇಂದ್ರೀಕೃತವಾಗಿವೆ.

ಈ ಎಲ್ಲಾ ಸಮಾಜ ಸೇವೆಯನ್ನು ಎಲೆಮರೆಕಾಯಿಯಂತೆ ಕಳೆದ ಸುಮಾರು ಒಂದೂವರೆ ದಶಕದಿಂದ ಅವರು ಮಾಡುತ್ತಾ ಬಂದಿದ್ದು, ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಅವರನ್ನು ಗಲ್ಫ್ ಸಂಘಟನೆಗಳು ಗುರುತಿಸಿ ಪುರಸ್ಕರಿಸಿವೆ.