ಸುಮಾರು 18 ಲಕ್ಷ ಕನ್ನಡಿಗರು ವಿಶ್ವಾದ್ಯಂತ ನೆಲೆಸಿದ್ದು, ಈ ಅನಿವಾಸಿ ಕನ್ನಡಿಗರಿಗಾಗಿ ರಾಜ್ಯ ಸರ್ಕಾರದಡಿಯಲ್ಲಿ ಪ್ರತ್ಯೇಕ ಸಚಿವಾಲಯ ಬೇಕೆಂಬ ಕೂಗು ಇಂದು ನಿನ್ನೆಯದ್ದಲ್ಲ. ಕಳೆದ ಹಲವಾರು ವರ್ಷಗಳಿಂದ, ಈ ಬೇಡಿಕೆಯನ್ನು ಅನಿವಾಸಿ ಕನ್ನಡಿಗರು ಸರ್ಕಾರದ ಮುಂದಿಡುತ್ತಲೇ ಬಂದಿದ್ದಾರೆ. ಆದರೆ, ಇದುವರೆಗೂ ಅನಿವಾಸಿ ಕನ್ನಡಿಗರ ಬೇಡಿಕೆ ಈಡೇರಿಲ್ಲ.
ಕರ್ನಾಟಕಕ್ಕೆ ಹೋಲಿಸಿದರೆ ಗಾತ್ರದಲ್ಲೂ, ಜನಸಂಖ್ಯೆಯಲ್ಲೂ ಚಿಕ್ಕದಾಗಿರುವ ಕೇರಳದಲ್ಲಿ ಅನಿವಾಸಿ ಕೇರಳಿಗಾಗಿಯೇ ಪ್ರತ್ಯೇಕ ಸಚಿವಾಲಯ ಇದೆ. ಸುಮಾರು ಮೂರು ದಶಕಗಳಿಂದ ಅನಿವಾಸಿ ಕೇರಳಿಗರ ವ್ಯವಹಾರಗಳ (NORKA) ಸಚಿವಾಲಯವು ಕೇರಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೇರಳದ ಲಕ್ಷಾಂತರ ಅನಿವಾಸಿಗಳು ಸಚಿವಾಲಯದ ಲಾಭ ಪಡೆಯುತ್ತಿದ್ದಾರೆ.
ಕೇರಳ ಮಾತ್ರವಲ್ಲದೆ ಪಂಜಾಬಿನಲ್ಲೂ ಇಂತಹ ಸಚಿವಾಲಯವಿದ್ದು, ತಮಿಳುನಾಡು, ತೆಲಂಗಾಣದಲ್ಲೂ ಅನಿವಾಸಿಗಳಿಗಾಗಿಯೇ ಪ್ರತ್ಯೇಕ ಸಚಿವಾಲಯ ನಡೆಸುವ ಪ್ರಸ್ತಾಪ ಇದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಅನಿವಾಸಿ ಸಚಿವಾಲಯದ ಬಗ್ಗೆ ನಾಯಕರು ಭರವಸೆ ನೀಡುತ್ತಿದ್ದಾರೆ, ಆದರೆ ಫಲಿತಾಂಶ ಮಾತ್ರ ಶೂನ್ಯ!
ರಾಜ್ಯದ ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿ ಅನಿವಾಸಿಗಳದ್ದೂ ಮಹತ್ವದ ಪಾಲಿರುವುದರಿಂದ, ಅವರ ಶ್ರೇಯೋಭಿವೃದ್ಧಿ ಕುರಿತಂತೆ ಕಾಳಜಿ ವಹಿಸುವುದು ಸರ್ಕಾರದ್ದೂ ಕರ್ತವ್ಯ. ಸದ್ಯ, ಕೇರಳ ಸರ್ಕಾರ ಆ ನಿಟ್ಟಿನಲ್ಲಿ ದೇಶದಲ್ಲೇ ಅತ್ಯುತ್ತಮವಾದ ವ್ಯವಸ್ಥೆಯನ್ನು ಹೊಂದಿದ್ದು, ಅನಿವಾಸಿಗಳ ಕಷ್ಟ-ತಾಪತ್ರಯಗಳಿಗೆ ಅಗತ್ಯವಾದ ನೆರವನ್ನು ನೀಡುತ್ತಿದೆ. ಆ ಮೂಲಕ, ತನ್ನ ಆರ್ಥಿಕತೆಯ ಬೆಳವಣಿಗೆಗೆ ಮಹತ್ತರ ಕೊಡುಗೆಗಳನ್ನು ನೀಡಿದವರ ಕೈ ಹಿಡಿಯುತ್ತಿದೆ.
ವಿದೇಶಗಳಲ್ಲಿ ದುಡಿಯುವ ಕನ್ನಡಿಗ ಅನಿವಾಸಿಗಳಲ್ಲೂ ವೃತ್ತಿಪರವಲ್ಲದ, ಸಣ್ಣಪುಟ್ಟ ಕೆಲಸ ನಿರ್ವಹಿಸಿ ತಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಿರುವ ದೊಡ್ಡ ವಿಭಾಗವಿದೆ. ಇಂತಹ ಅನಿವಾಸಿಗಳ ಬದುಕು ಅತಂತ್ರವಾಗಿದ್ದು, ಕೆಲಸ ಕಳೆದುಕೊಂಡರೆ ಮತ್ತೆ ವಿದೇಶಗಳಲ್ಲೇ ತಮಗೊಗ್ಗುವ ಸಣ್ಣಪುಟ್ಟ ಕೆಲಸಗಳನ್ನು ನೋಡಬೇಕಾಗುತ್ತದೆ. ಕೆಲಸ ಕಳೆದುಕೊಂಡು ಅವರು ಊರಿಗೆ ಮರಳಿದರೆ, ಜೀವನೋಪಾಯಕ್ಕೂ ಪರದಾಡುವಂತಹ ವಾತಾವರಣವಿದೆ. ಇಂತಹ ಅನಿವಾಸಿಗಳನ್ನು ಗುರಿಯಾಗಿಸಿ ಕೇರಳ ಸರ್ಕಾರವು ತನ್ನ ʼಸಾಂತ್ವನʼ ಯೋಜನೆಯಡಿಯಲ್ಲಿ ನೆರವು ನೀಡುತ್ತಿದೆ. ಸಾಂತ್ವನ ಯೋಜನೆಯು ಕೇರಳ ಅನಿವಾಸಿ ಸಚಿವಾಲಯ ತಾಯ್ನಾಡಿಗೆ ಮರಳಿದ ಪ್ರವಾಸಿಗಳಿಗೆ ಕಾಲಮಿತಿಯೊಳಗೆ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿರುವ ಸಂಕಷ್ಟ ಪರಿಹಾರ ಯೋಜನೆಯಾಗಿದ್ದು, ಇದರಡಿಯಲ್ಲಿ ವೈದ್ಯಕೀಯ ಚಿಕಿತ್ಸೆಗಳು, ಮರಣ, ವಿವಾಹ ಸಹಾಯ, ಅಂಗವೈಕಲ್ಯವನ್ನು ಎದುರಿಸಲು ಬೇಕಾದ ಸಲಕರಣೆಗಳ ಖರೀದಿ ಸೇರಿದಂತೆ ಹಲವು ಅನುಕೂಲಗಳನ್ನು ಕೇರಳದ ಅನಿವಾಸಿಗಳು ಪಡೆಯಬಹುದು.
ಇದು ಮಾತ್ರವಲ್ಲದೆ, ಪ್ರವಾಸಿ ಗುರುತಿನ ಚೀಟಿ, ಪ್ರವಾಸಿ ವಿಮೆ, ಕೌಶಲ್ಯ ಮತ್ತು ತರಬೇತಿ ಹಾಗೂ ಪ್ರಮಾಣಪತ್ರ ಧೃಡೀಕರಣ ಮೊದಲಾದ ಸೇವೆಗಳೂ ಕೇರಳದ ಈ ಸಚಿವಾಲಯ (NORKA) ತನ್ನ ನಾಗರಿಕರಿಗೆ ಒದಗಿಸುತ್ತಿದೆ. ಪ್ರಮಾಣಪತ್ರ ಧೃಡೀಕರಣ ಸೇವೇಯಡಿಯಲ್ಲಿ ವಿದೇಶದಲ್ಲಿ ಸುರಕ್ಷಿತ ಗೌರವಾನ್ವಿತ ವೃತ್ತಿ ಅಥವಾ ಉನ್ನತ ಶಿಕ್ಷಣವನ್ನು ಬಯಸುವ ವ್ಯಕ್ತಿಗಳಿಗೆ, ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ಈ ಸೇವೆಯಡಿಯಲ್ಲಿ ಧೃಡೀಕರಿಸಬಹುದಾಗಿದೆ. ವಿದೇಶದಲ್ಲಿ ವೃತ್ತಿಜೀವನದ ಕನಸು ಕಾಣುವ ಯುವ ಜನಾಂಗಕ್ಕೆ ಉದ್ಯೋಗ ಸಂಬಂಧಿತ ತರಬೇತಿಯನ್ನು ನೀಡುವ ಉದ್ದೇಶವನ್ನು ಕೇರಳದ NORKA ಕೌಶಲ್ಯ ಉನ್ನತೀಕರಣ ತರಬೇತಿ ಕಾರ್ಯಕ್ರಮ ಹೊಂದಿದೆ.
ಅನಿವಾಸಿಗಳಿಗೆ ಸಚಿವಾಲಯದ ಗ್ಯಾರಂಟಿ ನೀಡಿದ್ದ ʼಕಾಂಗ್ರೆಸ್ʼ
ಇಂತಹ ಸೌಲಭ್ಯಗಳನ್ನು ಕನ್ನಡಿಗ ಅನಿವಾಸಿಗಳಿಗೆ ಮಾಡಿಕೊಡುವುದು ಕರ್ನಾಟಕ ಸರ್ಕಾರದ ಜವಾಬ್ದಾರಿ. ಆಗಿದ್ದರೂ, ಕರ್ನಾಟಕದ ನಾಯಕರು ಭರವಸೆಯನ್ನು ನೀಡುವಲ್ಲಿ ಮಾತ್ರ ನಿರತರಾಗಿದ್ದಾರೆ.
“ವಿದೇಶಗಳಲ್ಲಿ ಕನ್ನಡ ಸಂಘಗಳು ನಡೆಸುವ ಕಾರ್ಯಕ್ರಮಗಳಿದ್ದರೆ, ಅಥವಾ ಎನ್‌ಆರ್‌ಐಗಳು ರಾಜ್ಯದಲ್ಲಿ ನಡೆಸುವ ಕಾರ್ಯಕ್ರಮಗಳಿದ್ದರೆ, ಅತಿಥಿಗಳಾಗಿ ಬರುವ ರಾಜಕೀಯ ನಾಯಕರುಗಳಿಗೆ ಸಚಿವಾಲಯ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಇಡುವುದು, ಸಚಿವಾಲಯ ಶುರು ಮಾಡುತ್ತೇವೆ ಎಂದು ರಾಜಕಾರಣಿಗಳು ಭರವಸೆ ನೀಡುವುದು ನಡೆಯುತ್ತಲೇ ಬಂದಿದೆ. ವೇದಿಕೆ ಅಲಂಕಾರಕ್ಕಾಗಿ ಕಾರ್ಯಕ್ರಮದಲ್ಲಿ ಭರವಸೆ ನೀಡುವ ರಾಜಕಾರಣಿಗಳು, ನಂತರ ಆ ಕಡೆಗೆ ತಲೆ ಹಾಕಿಯೂ ಮಲಗುವುದಿಲ್ಲ. ಎನ್‌ಆರ್‌ಐಗಳ ಹೂಡಿಕೆ, ಅವರ ಕುಟುಂಬಸ್ಥರ ಮತಗಳ ಲೆಕ್ಕಾಚಾರದಲ್ಲಿ ತೊಡಗುವ ನಾಯಕರು ಅವರ ಸಮಸ್ಯೆ ಪರಿಹಾರಕ್ಕೆ ಇಚ್ಛಾಶಕ್ತಿ ತೋರುತ್ತಿಲ್ಲ” ಎಂದು ವಿದೇಶಗಳಲ್ಲಿ ಕನ್ನಡ ಕಾರ್ಯಕ್ರಮ ನಡೆಸುತ್ತ ಬಂದಿರುವ, ಹೆಸರು ಹೇಳಲಿಚ್ಛಿಸದ ಎನ್‌ಆರ್‌ಐಯೊಬ್ಬರು ಹೇಳಿದ್ದಾರೆ.
ಸದ್ಯ, ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಅನಿವಾಸಿಗಳಿಗೆ ಪ್ರತ್ಯೇಕ ಸಚಿವಾಲಯದ ʼಗ್ಯಾರಂಟಿʼಯನ್ನು ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿತ್ತು. ಆದರೆ, ಪಕ್ಷ ಅಧಿಕಾರಕ್ಕೆ ಬಂದು 18 ತಿಂಗಳು ಕಳೆಯುತ್ತಿದ್ದರೂ ಈ ಗ್ಯಾರಂಟಿಯನ್ನು ಈಡೇರಿಸುವಲ್ಲಿ ಉತ್ಸಾಹ ತೋರಿದಂತೆ ಕಂಡು ಬಂದಿಲ್ಲ.
ಈ ಹಿಂದೆ, ಅನಿವಾಸಿಗಳ ಬೇಡಿಕೆಯನ್ನು ವಿಧಾನ ಪರಿಷತ್ ನಲ್ಲಿ ಪ್ರಸ್ತಾಪಿಸಿದ್ದ ಎಂಎಲ್‌ಸಿ ಬಿಎಂ ಫಾರೂಕ್, ಅನಿವಾಸಿಗಳ ಪ್ರತ್ಯೇಕ ಇಲಾಖೆ ಸಂಬಂಧಪಟ್ಟಂತೆ, ʼಕೇರಳ, ತೆಲಂಗಾಣದಲ್ಲಿರುವಂತೆ ಕರ್ನಾಟಕದಲ್ಲೂ ಅನಿವಾಸಿಗಳಿಗೆ ಪ್ರತ್ಯೇಕ ಇಲಾಖೆʼ ಬೇಕೆಂದು ಕೋರಿದ್ದರು.
ರಾಜ್ಯದಲ್ಲಿ ಈಗಾಗಲೇ ಆರತಿ ಕೃಷ್ಣ ನೇತೃತ್ವದ ಅನಿವಾಸಿ ಭಾರತೀಯ ವೇದಿಕೆ ಇದೆ, ಇದು ಸೀಮಿತ ಅಧಿಕಾರವನ್ನು ಹೊಂದಿದೆ. ಆದರೆ ಕೇರಳವು ಕಾನೂನು ವಿಭಾಗವನ್ನು ಹೊಂದಿರುವ ಮತ್ತು ಅನಿವಾಸಿ ಭಾರತೀಯರಿಗೆ ಸಹಾಯ ಮಾಡಲು ಅಧಿಕಾರ ಹೊಂದಿರುವ ಪೂರ್ಣ ಪ್ರಮಾಣದ ಇಲಾಖೆಯನ್ನು ಹೊಂದಿದೆ. ಗಲ್ಫ್‌ನಿಂದ ಹಿಂದಿರುಗಿದವರಿಗೆ ಆರ್ಥಿಕ ನೆರವು ನೀಡುವ ಮೂಲಕ, ಅವರ ಸಂಪನ್ಮೂಲಗಳು ಮತ್ತು ಪರಿಣತಿಯನ್ನು ಬಳಸಿಕೊಂಡು, ಕರ್ನಾಟಕದಲ್ಲಿ ಯೋಜನೆಗಳು ಮತ್ತು ಉದ್ಯಮಗಳನ್ನು ಸ್ಥಾಪಿಸಬಹುದು ಎಂದು ವಿಧಾನಪರಿಷತ್ ನಲ್ಲಿ ಅವರು ಹೇಳಿದ್ದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುತ್ತೇವೆ ಎಂದು 2024 ರ ಫೆಬ್ರವರಿಯಲ್ಲಿ ಗೃಹಸಚಿವ ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ಹೇಳಿದ್ದರು. ಅದು ಕೂಡಾ, ಸ್ಪೀಕರ್ ಯುಟಿ ಖಾದರ್ ಅವರ ಆಹ್ವಾನದ ಮೇರೆಗೆ ವಿಧಾನಸಭೆ ಕಲಾಪಕ್ಕೆ ಬಂದಿದ್ದ ʼಎನ್‌ಆರ್‌ಐʼಗಳ ಎದುರಲ್ಲಿ ಹೇಳಿದ್ದ ಮಾತುಗಳು ಎಂಬುದು ಉಲ್ಲೇಖಾರ್ಹ. ನಂತರ, ಇದುವರೆಗೂ ಆ ಬಗ್ಗೆ ಸರ್ಕಾರದ ಮಟ್ಟದಿಂದ ಯಾವುದೇ ಗಮನಾರ್ಹ ಬೆಳವಣಿಗೆಗಳಾಗಲಿ ನಡೆದಿಲ್ಲ.