ಲಂಡನ್: ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ನ ಕಿಂಗ್ ಚಾರ್ಲ್ಸ್ III ಬುಧವಾರ ಫೋನ್ ಕರೆಯ ಮೂಲಕ ಪರಸ್ಪರ ಮಾತನಾಡಿದ್ದು, ಭಾರತ ಮತ್ತು ಬ್ರಿಟನ್ ನಡುವಿನ ಪಾಲುದಾರಿಕೆಯ ಕುರಿತು ಮಾತನಾಡಿದ್ದಾರೆ ಮತ್ತು ಕ್ರಿಸ್ಮಸ್ ಶುಭಾಶಯ ವಿನಿಮಯ ಮಾಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
“ಎರಡೂ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳನ್ನು ನೆನಪಿಸಿಕೊಳ್ಳುತ್ತಾ, ಭಾರತ ಮತ್ತು ಯುನೈಟೆಡ್ ಕಿಂಗ್ಡಂ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಅವರಿಬ್ಬರೂ ಪುನರುಚ್ಚರಿಸಿದ್ದಾರೆ” ಎಂದು ಸರ್ಕಾರವು ತಿಳಿಸಿದ್ದಾಗಿ the hindu ವರದಿ ಮಾಡಿದೆ.
ಅಕ್ಟೋಬರ್‌ನಲ್ಲಿ ಸಮೋವಾದಲ್ಲಿ ನಡೆದ ಕಾಮನ್‌ವೆಲ್ತ್ ಮತ್ತು ಕಾಮನ್‌ವೆಲ್ತ್ ಮುಖ್ಯಸ್ಥರ ಸಭೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕಿಂಗ್ ಚಾರ್ಲ್ಸ್ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಮೋದಿಯವರು ಈ ಸಭೆಗೆ ಹಾಜರಾಗಿರಲಿಲ್ಲ.
ಬುಧವಾರದ ಕರೆಯಲ್ಲಿ ಪ್ರಧಾನಿ ಮೋದಿ ಹಾಗೂ ಕಿಂಗ್ ಚಾರ್ಲ್ಸ್ ಅವರು ಹವಾಮಾನದ ಕುರಿತಾದ ಕ್ರಮ ಹಾಗೂ ಸುಸ್ಥಿರತೆಯ ಕುರಿತು ಚರ್ಚೆ ಮಾಡಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಿಂಗ್ ಚಾರ್ಲ್ಸ್ ಕೈಗೊಂಡಿದ್ದ ಕ್ರಮಗಳ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಸರಕಾರದ ಮೂಲಗಳ ತಿಳಿಸಿವೆ.
2024ರ ಆರಂಭದಲ್ಲಿ ಕಿಂಗ್ ಚಾರ್ಲ್ಸ್ ರವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಸದ್ಯ ಅವರು ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು ಎಂದು ಸರ್ಕಾರ ತಿಳಿಸಿದೆ.