ಕೆ.ಆರ್.ಶ್ರೀನಾಥ್, ಅಟ್ಲಾಂಟ
ಅಮೆರಿಕದ ಫ್ಲೋರಿಡಾ ರಾಜ್ಯದ ಟ್ಯಾಂಪಾ ನಗರದಲ್ಲಿ ನಡೆಯುತ್ತಿರುವ ‘8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025’ರಲ್ಲಿ ಅಟ್ಲಾಂಟದ ನೃಪತುಂಗ ಕನ್ನಡ ಕೂಟದ ಸದಸ್ಯರು ಶನಿವಾರದಂದು “ಶಂಭೋ, ಶಿವ ಶಂಭೋ” ನಾಟಕ ಪ್ರದರ್ಶನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕಿಕ್ಕಿರಿದು ನೆರೆದಿದ್ದ ಸಭಾಂಗಣದಲ್ಲಿ ಅಟ್ಲಾಂಟ ಕನ್ನಡಿಗರ ಈ ಹಾಸ್ಯ ನಾಟಕವು ಬೃಹತ್ ಕರತಾಡನದೊಂದಿಗೆ ಸಭಿಕರಿಂದ ಬಹಳ ಮೆಚ್ಚುಗೆ ಪಡೆಯಿತು.
ಕಾರ್ಲೊ ಗೋಲ್ಡೊನಿಯವರ ಇಟಾಲಿಯನ್ ನಾಟಕ “ದಿ ಸರ್ವೆಂಟ್ ಆಫ್ ಟು ಮಾಸ್ಟರ್ಸ್” ಮೂಲವನ್ನು ಆಧರಿಸಿದ ಈ ನಾಟಕವನ್ನು ಖ್ಯಾತ ರಂಗಕರ್ಮಿ, ಚಲನಚಿತ್ರ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಬಿ.ಸುರೇಶ್ ಅವರು ನಿರ್ದೇಶಿಸಿದ್ದರು.

ಅಟ್ಲಾಂಟ ಕನ್ನಡಿಗರ ಪ್ರೀತಿ, ಸ್ನೇಹದ ಒತ್ತಾಸೆಗೆ ಮಣಿದು ಕೆಲವು ದಿನ ಇಲ್ಲಿಯೇ ಉಳಿದು ಈ ನಾಟಕವನ್ನು ಬಿ. ಸುರೇಶ್ ಅವರು ನಿರ್ದೇಶಿಸಿದ್ದರು. ಒಂದು ದಿನ ಬಿಡುವು ಮಾಡಿಕೊಂಡು ಅಟ್ಲಾಂಟ ಕನ್ನಡಿಗರಿಗೆ ಚಲನಚಿತ್ರದ ಕಥಾ ರಚನೆಯಿಂದ ಇತರ ವಿವಿಧ ಆಯಾಮಗಳನ್ನು ಒಂದು ಶಿಬಿರದಲ್ಲಿ ವಿವರಿಸಿದರು.
ಕನ್ನಡ ಚಿತ್ರ ನಟ ಶ್ರೀನಾಥ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ರಮ್ಯಾ, ಸಿಹಿ ಕಹಿ ಚಂದ್ರು ಹಾಗೂ ಇನ್ನಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಂದಿನ ನಾವಿಕ-2027 ವಿಶ್ವ ಕನ್ನಡ ಸಮಾವೇಶವನ್ನು ಅಟ್ಲಾಂಟ ನಗರದಲ್ಲಿ 2027ರಲ್ಲಿ ವಿಜೃಂಭಣೆಯಿಂದ ಆಯೋಜಿಸಲು ತೀರ್ಮಾನಿಸಲಾಗಿದೆ. ನೃಪತುಂಗ ಕನ್ನಡ ಕೂಟವು ಈ ಸಮ್ಮೇಳನಕ್ಕೆ ಈಗಾಗಲೆ ಬೃಹತ್ ಸಭಾಂಗಣವನ್ನು ಬುಕ್ ಮಾಡಿ ತಯಾರಿ ನಡೆಸಿದೆ.